ಚಿತ್ರರಂಗದಲ್ಲಿ ಬೆಳೆಯುವ ವಿಚಾರವಾಗಿ ಯಶ್ ಖಿನ್ನತೆಗೆ ಒಳಗಾಗಬಹುದು ಎಂಬ ಭಯ ನನಗೆ ಕಾಡುತ್ತಿತ್ತು; ನಿರ್ದೇಶಕಿ ಶ್ರುತಿ ನಾಯ್ಡು
ಯಶ್ಗೆ ಮುಂದೆ ಯಾವ ರೀತಿ ಬೆಳೆಯಬೇಕು ಎಂಬ ಐಡಿಯಾ ಇತ್ತು. ತಾನು ಪ್ಯಾನ್ ಇಂಡಿಯಾ ಲೆವೆಲ್ಗೆ ಬೆಳೆಯುತ್ತೇನೆಂಬ ಭರವಸೆ ಇತ್ತು. ಆದರೆ ಸಿನಿಮಾ ಬಗ್ಗೆ ಆತನಿಗೆ ಇರುವ ಕನಸು ಕಂಡು, ಎಲ್ಲಿ ಅವನು ಖಿನ್ನತೆಗೆ ಜಾರುತ್ತಾನೋ ಎಂಬ ಭಯ ನಮಗೆ ಕಾಡುತ್ತಿತ್ತು ಎಂದು ನಿರ್ದೇಶಕಿ ಶ್ರುತಿ ನಾಯ್ಡು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಸಿನಿಪ್ರಿಯರಿಗೆ ಮಾತ್ರ ಪರಿಚಯವಿದ್ದ ಯಶ್, ಈಗ ನ್ಯಾಷನಲ್ ಸ್ಟಾರ್, ವಿದೇಶದಲ್ಲಿ ಕೂಡಾ ಅವರಿಗೆ ಅಭಿಮಾನಿಗಳಿದ್ದಾರೆ. ಕೆಜಿಎಫ್ ಚಿತ್ರದ ಬಳಿಕ ಅವರ ಸ್ಟಾರ್ ಡಮ್ ಎಷ್ಟು ಬದಲಾಯ್ತು ಅನ್ನೋದು ತಿಳಿದಿರೋ ವಿಚಾರ. ಧಾರಾವಾಹಿಯಲ್ಲಿ ಸಹ ಕಲಾವಿದನಾಗಿ ಬಣ್ಣದ ಬದುಕು ಆರಂಭಿಸಿದ ಯಶ್ ಇಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಯಾರೂ ಊಹೆ ಕೂಡಾ ಮಾಡಿರಲಿಲ್ಲ. ಆದರೆ ಮುಂದೊಂದು ದಿನ ನಾನು ಈ ಹಂತಕ್ಕೆ ಬೆಳೆಯುತ್ತೇನೆಂದು ಯಶ್ಗೆ ಗೊತ್ತಿತ್ತಂತೆ.
ನಂದಗೋಕುಲ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದ ಯಶ್
ಪ್ರತಿಯೊಬ್ಬರಿಗೂ ಕನಸುಗಳಿರುತ್ತದೆ. ಆ ಕನಸನ್ನು ಸಾಕಾರಗೊಳಿಸಿಕೊಳ್ಳಲು ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುತ್ತಾರೆ. ಮೈಸೂರು ಹುಡುಗ ನವೀನ್ ಈಗ ರಾಕಿಂಗ್ ಸ್ಟಾರ್ ಯಶ್ ಆಗಿ ಬೆಳೆದು ನಿಂತಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆಯಿಂದ ಬೆಂಗಳೂರಿಗೆ ಬಂದು, ಅವಕಾಶ ದೊರೆಯದೆ, ಇರಲು ಜಾಗ ಕೂಡಾ ಇಲ್ಲದೆ ಮೆಜೆಸ್ಟಿಕ್ನಲ್ಲಿ ಮಲಗುತ್ತಿದ್ದ ವಿಚಾರವನ್ನು ಯಶ್, ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಯಶ್ ಕನಸುಗಳ ಬಗ್ಗೆ ನಿರ್ದೇಶಕಿ ಶ್ರುತಿ ನಾಯ್ಡು ಕೂಡಾ ಮಾತನಾಡಿದ್ದಾರೆ. ರಾಪಿಡ್ ರಶ್ಮಿ ಶೋನಲ್ಲಿ ಭಾಗವಹಿಸಿದ್ದ ಶ್ರುತಿ ಈ ವಿಚಾರವಾಗಿ ಮಾತನಾಡಿದ್ದಾರೆ. 2004ರಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಧಾರಾವಾಹಿಯಲ್ಲಿ ಯಶ್ ನಟಿಸಿದ್ದರು. ಇದು ಅವರ ಮೊದಲ ಧಾರಾವಾಹಿ. ಶ್ರುತಿ ನಾಯ್ಡು ಕೂಡಾ ಮೈಸೂರಿನವರೇ ಆದ್ದರಿಂದ ಯಶ್ ಹಾಗೂ ಶ್ರುತಿ ಬಹಳ ಆತ್ಮೀಯರಾಗಿದ್ದರು.
ಯಶ್ ಸಿನಿಮಾ ಕನಸಿನ ಬಗ್ಗೆ ಶ್ರುತಿ ನಾಯ್ಡು ಹೇಳಿದ್ದೇನು?
ಆ ಸಮಯದಲ್ಲಿ ಯಶ್, ಶ್ರುತಿ ಬಳಿ ತಮ್ಮ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರಂತೆ. ಮುಂದೊಂದು ದಿನ ನಾನು ಹಾಗೆ ಹೆಸರು ಮಾಡ್ತೀನಿ, ಎತ್ತರಕ್ಕೆ ಬೆಳೆಯುತ್ತೀನಿ ಎಂದು ಹೇಳಿಕೊಳ್ಳುತ್ತಿದ್ದರಂತೆ. ಮುಂದೆ ಏನು ಮಾಡಬೇಕು ಎಂಬ ಕ್ಲಾರಿಟಿ ಯಶ್ಗೆ ಮೊದಲೇ ಇತ್ತು. ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯಬೇಕು. ಕನ್ನಡ ಸಿನಿಮಾ ರಂಗಕ್ಕೆ ಒಳ್ಳೊಳ್ಳೆ ಚಿತ್ರಗಳನ್ನು ನೀಡಬೇಕು ಎಂಬ ಆಸೆ ಅವರಲ್ಲಿ ಇತ್ತು. ಯಶ್, ತನಗಿರುವ ಸಿನಿಮಾ ಕ್ರೇಜ್ ಬಗ್ಗೆ ಹೇಳುತ್ತಿದ್ದರೆ, ಆತನ ಆಸೆ ನೆರವೇರದೆ ಅವರು ಎಲ್ಲಿ ಡಿಪ್ರೆಶನ್ಗೆ ಜಾರಿಬಿಡುತ್ತಾರೋ ಎಂಬ ಭಯ ನನಗೆ ಕಾಡುತ್ತಿತ್ತು. ಆದರೆ ಯಶ್, ತಾನು ಅಂದುಕೊಂಡಂತೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಬೆಳವಣಿಗೆ ನೋಡಿ ಬಹಳ ಖುಷಿಯಾಗುತ್ತಿದೆ ಎಂದು ಶ್ರುತಿ ನಾಯ್ಡು ಹೇಳಿದ್ದಾರೆ.
ಟಾಕ್ಸಿಕ್ ಚಿತ್ರದಲ್ಲಿ ಬ್ಯುಸಿ ಇರುವ ರಾಕಿಂಗ್ ಸ್ಟಾರ್
ಯಶ್, ನ್ಯಾಷನಲ್ ಸ್ಟಾರ್ ಅದರೂ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದರೂ ಇನ್ನೂ ಹಳೆಯ ಸ್ನೇಹಿತರನ್ನು ಮರೆತಿಲ್ಲ. ಈಗಲೂ ಬಿಡುವು ದೊರೆತಾಗಲೆಲ್ಲಾ ತಮ್ಮ ಸ್ನೇಹಿತರನ್ನು ಮನೆಗೆ ಕರೆದು ಅವರೊಂದಿಗೆ ಕಾಲ ಕಳೆಯುತ್ತಾರೆ. ನಂದಗೋಕುಲ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಈಗಲೂ ಯಶ್ ಜೊತೆ ಸಂಪರ್ಕದಲ್ಲಿದ್ದಾರೆ. ಯಶ್, ಸದ್ಯಕ್ಕೆ ಟಾಕ್ಸಿಕ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಆಗಸ್ಟ್ 8ಕ್ಕೆ ಸಿನಿಮಾ ಸೆಟ್ಟೇರಿತ್ತು. ಮೊನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ಹೊಸ ಬ್ಯಾನರ್ ಆರಂಭಿಸಿರುವ ಯಶ್ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಜೊತೆ ಸೇರಿ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗೀತು ಮೋಹನ್ದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.