ಕನ್ನಡ ಸುದ್ದಿ  /  ಮನರಂಜನೆ  /  40 ಸಿನಿಮಾ ಆಫರ್‌ ಬಿಟ್ಟು ‘ಕಲ್ಜಿಗ’ ಚಿತ್ರಕ್ಕೆ ಸಂಗೀತ ನೀಡಿ, ಸಾಹಿತ್ಯ ಬರೆದ ನಾದಬ್ರಹ್ಮ ಹಂಸಲೇಖ

40 ಸಿನಿಮಾ ಆಫರ್‌ ಬಿಟ್ಟು ‘ಕಲ್ಜಿಗ’ ಚಿತ್ರಕ್ಕೆ ಸಂಗೀತ ನೀಡಿ, ಸಾಹಿತ್ಯ ಬರೆದ ನಾದಬ್ರಹ್ಮ ಹಂಸಲೇಖ

ಹಿಮಾನಿ ಫಿಲಂಸ್ ಬ್ಯಾನರಿನಡಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರದ ಶೀರ್ಷಿಕೆ ಪೋಸ್ಟರ್‌ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

40 ಸಿನಿಮಾ ಆಫರ್‌ ಬಿಟ್ಟು ‘ಕಲ್ಜಿಗ’ ಚಿತ್ರಕ್ಕೆ ಸಂಗೀತ ನೀಡಿ, ಸಾಹಿತ್ಯ ಬರೆದ ನಾದಬ್ರಹ್ಮ ಹಂಸಲೇಖ
40 ಸಿನಿಮಾ ಆಫರ್‌ ಬಿಟ್ಟು ‘ಕಲ್ಜಿಗ’ ಚಿತ್ರಕ್ಕೆ ಸಂಗೀತ ನೀಡಿ, ಸಾಹಿತ್ಯ ಬರೆದ ನಾದಬ್ರಹ್ಮ ಹಂಸಲೇಖ

Kaljiga Kannada Movie: ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಒಂದಷ್ಟು ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಇದೀಗ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರು ಮತ್ತು ನಾದಬ್ರಹ್ಮ ಹಂಸಲೇಖ ಸಮ್ಮುಖದಲ್ಲಿ ಕಲ್ಜಿಗದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಸ್ವತಃ ಅವರೇ ಈ ಚಿತ್ರದ ಹಾಡುಗಳಿಗೂ ಸಾಹಿತ್ಯ ಒದಗಿಸಿದ್ದಾರೆ. ಜತೆಗೆ ಈ ಸಿನಿಮಾ ಕಾರ್ಯಕ್ರಮಕ್ಕೆ ಅವರೇ ಅತಿಥಿಯಾಗಿಯೂ ಆಗಮಿಸಿದ್ದರು. ಚಿತ್ರತಂಡದ ಬಗ್ಗೆಯೂ ಮಾತನಾಡಿದ ಅವರು, ಸರಿಸುಮಾರು 40 ಸಿನಿಮಾಗಳ ಆಫರ್‌ ಬಿಟ್ಟು, ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ ಹಿನ್ನೆಲೆಯನ್ನು ವಿವರಿಸಿದರು.

ತುಳು ಸಿನಿಮಾಗಳಾದ ಗಿರ್ ಗಿಟ್, ಸರ್ಕಸ್ ಮತ್ತು ಗಮ್ಜಾಲ್ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಸುಮನ್ ಸುವರ್ಣ ಕಲ್ಜಿಗ ಸಿನಿಮಾ ಮೂಲಕ ಸ್ವತಂತ್ರ ಮತತು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಸುಶ್ಮಿತಾ ಭಟ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶರತ್ ಕುಮಾರ್ ಎ.ಕೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಸದ್ಯದ ಮಟ್ಟಿಗೆ ಕಲ್ಜಿಗ ಸಿನಿಮಾ ಮೂಲಕ ಚಿತ್ರತಂಡ ಹೇಳಹೊರಟಿರುವುದೇನು ಎಂಬುದನ್ನು ಗೌಪ್ಯವಾಗಿಟ್ಟಿದೆ. ಮಂಗಳೂರು, ಉಡುಪಿ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣವಾಗಿದೆ. ಇದೀಗ ಮುಕ್ಕಾಲು ಭಾಗ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಸಮಾಪ್ತಿಗೊಂಡಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ತುಳುವಿಗೆ ಡಬ್ ಮಾಡಲಾಗಿದೆಯಂತೆ. ಧರ್ಮದ ಹಾದಿಯಲ್ಲಿ ಅಧರ್ಮದ ನೆರಳು ಕಂಡ ಬಳಿಕ ಘಟಿಸುವ ಕಥನವೇ ಈ ಸಿನಿಮಾದ ತಿರುಳಂತೆ. ಈ ಪೋಸ್ಟರ್ ಮತ್ತು ಟೈಟಲ್ ಅನಾವರಣದ ವೇದಿಕೆಯಲ್ಲಿ ಚಿತ್ರತಂಡದ ಕಡೆಯಿಂದ ಇವಿಷ್ಟು ಮಾಹಿತಿಗಳು ಜಾಹೀರಾಗಿವೆ.

ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಚಿನ್ ಶೆಟ್ಟಿ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಿರ್ಮಾಪಕ ಸಂತೋಷ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ಮತ್ತು ಚಿತ್ರತಂಡ ಹಾಜರಿತ್ತು. ಹಂಸಲೇಖ ಸಂಗೀತ, ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ.

ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ. ಅಂದಹಾಗೆ ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್‌ ಮಾಡುವುದು ಚಿತ್ರತಂಡದ ಪ್ಲಾನ್.‌

IPL_Entry_Point