Kichcha Sudeep Birthday: ಕಿಚ್ಚನ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮ್ಯಾಕ್ಸ್ ಶೀರ್ಷಿಕೆ; ಖಾಕಿ ಖದರ್‌ನಲ್ಲಿ ಸುದೀಪ್
ಕಿಚ್ಚ ಸುದೀಪ್ 50ನೇ ಬರ್ತ್‌ಡೇಗೆ K46 ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ ಆಗಿದೆ. ಮ್ಯಾಕ್ಸ್ ಆಗಿ ಸುದೀಪ್ ಅಬ್ಬರಿಸಲಿದ್ದಾರೆ. ಕನ್ನಡ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.
Kichcha Sudeep Birthday: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಿಗಿಂದು (ಸೆ. 2) 50ನೇ ಬರ್ತ್‌ಡೇ. ಈ ವಿಶೇಷ ದಿನಕ್ಕೆ ಅವರಿಗೆ ಸಿನಿಮಾ ತಂಡಗಳಿಂದ ಹೊಸ ಹೊಸ ಶುಭಾಶಯಗಳ ಜತೆಗೆ ಪೋಸ್ಟರ್, ಟೀಸರ್‌ಗಳನ್ನೂ ರಿಲೀಸ್ ಮಾಡಲಾಗುತ್ತಿದೆ. ಆ ಪೈಕಿ ಕಳೆದ ಕೆಲದಿನಗಳಿಂದ ಭಾರೀ ಸದ್ದು ಮಾಡಿದ್ದ #K46 ಚಿತ್ರಕ್ಕೀಗ ಶೀರ್ಷಿಕೆ ಅಂತಿಮ ಮಾಡಲಾಗಿದೆ. ಈ ಮೊದಲು ಟೀಸರ್ ಝಲಕ್ ರಿಲೀಸ್ ಮಾಡಿ ಕಯತೂಹಲ ಮೂಡಿಸಿದ್ದ K46 ತಂಡ ಇದೀಗ ಟೈಟಲ್ ರಿವೀಲ್ ಮಾಡಿದೆ. ಚಿತ್ರಕ್ಕೆ ಮ್ಯಾಕ್ಸ್ (Max) ಎಂಬ ಶೀರ್ಷಿಕೆ ಫಿಕ್ಸ್ ಆಗಿದೆ.
ಈ ಹಿಂದೆಯೇ ಸುದ್ದಿಯಾದಂತೆ, ಮ್ಯಾಕ್ಸ್ ಒಂದು ಪಕ್ಕಾ ಕಮರ್ಷಿಯಲ್ ಬ್ಯಾಕ್‌ಡ್ರಾಪ್‌ನಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ನಿರ್ಮಾಣವಾಗುತ್ತಿದೆ. ಈಗಾಗಲೇ ಸಿನಿಮಾ ಶೂಟಿಂಗ್ ಸಹ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದೀಗ ಕಿಚ್ಚನ ಬರ್ತ್‌ಡೇ ನಿಮಿತ್ತ ಶೀರ್ಷಿಕೆ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ ಕಿಚ್ಚ ಸುದೀಪ್.
ಸೆ. 2ರ ಬರ್ತ್‌ಡೇ ಪ್ರಯುಕ್ತ ಮಧ್ಯರಾತ್ರಿ 2 ಗಂಟೆಗೆ ಶೀರ್ಷಿಕೆ ರಿವೀಲ್ ಮಾಡಿದೆ ಚಿತ್ರತಂಡ. ಶೀರ್ಷಿಕೆ ಟೀಸರ್‌ನಲ್ಲಿ ನಾಯಕನನ್ನು ವರ್ಣನೆ ಮಾಡುವ, ಅವನೆಷ್ಟು ಡೇಂಜರಸ್ ಎಂಬುದನ್ನು ಪೊಲೀಸರ ಕಡೆಯಿಂದ ಡೈಲಾಗ್ ಹೇಳಿಸಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. "ಬರೋರೆಲ್ಲ ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಬಹುದು, ಭೂಕಂಪದಿಂದ ತಪ್ಪಿಸಿಕೊಳ್ಳಬಹುದು, ಚಂಡಮಾರುತದಿಂದಲೂ ತಪ್ಪಿಸಿಕೊಳ್ಳಬಹುದು, ಸುನಾಮಿಯಿಂದ ಕೂಡ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ತಿರ ತಗ್ಲಾಕ್ಕೊಂಡರೆ, ಸಾವೇ ಇಲ್ಲ ಅಂತ ವರ ತಗೊಂಡು ಹುಟ್ಟಿದವನೂ ಕೂಡ ಸತ್ತ.." ಎಂಬ ಡೈಲಾಗ್ ಮ್ಯಾಕ್ಸ್ ಎಷ್ಟು ಅಪಾಯಕಾರಿ ಎಂದು ತಿಳಿಯುತ್ತದೆ.
ಮತ್ತೆ ಖಾಕಿಯಲ್ಲಿ ಸುದೀಪ್
ಸಿನಿಮಾ ಟೀಸರ್‌ನಲ್ಲಿ ಸುದೀಪ್ ಖಡಕ್ ಪೊಲೀಸ್ ಅಧಿಕಾರಿ ಇರಬಹುದೇ ಎಂಬ ಅನುಮಾನ ಮೂಡಿದೆ. ಕಥಾನಾಯಕನನ್ನು ಪೊಲೀಸರೇ ವರ್ಣನೆ ಮಾಡುವುದು ಮತ್ತು ಲಾಠಿ ಹಿಡಿದು ದುಷ್ಟರ ಹೆಡೆಮುರಿಕಟ್ಟಲು ತೆರಳುವ ಕಿಚ್ಚನ ಭಂಗಿಯೂ ಇದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.
ತಮಿಳು ನಿರ್ಮಾಪಕರ ಸಿನಿಮಾ
ಅಂದಹಾಗೆ, ತಮಿಳಿನಲ್ಲಿ ತುಪಾಕಿ, ಕಬಾಲಿ, ಕರ್ಣನ್, ಅಸುರನ್ ಸೇರಿ ದೊಡ್ಡ ದೊಡ್ಡ ಹಿಟ್ ಮತ್ತು ಹೈ ಬಜೆಟ್ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್ ಬ್ಯಾನರ್‌ನಲ್ಲಿ ಮ್ಯಾಕ್ಸ್ ಸಿನಿಮಾ ನಿರ್ಮಾಣವಾಗುತ್ತಿದೆ. ಕಲೈಪುಲಿ ಎಸ್ ಧಾನು ಈ ಸಿನಿಮಾದ ನಿರ್ಮಾಪಕರು. ವಿಜಯ್ ಕಾರ್ತಿಕೇಯ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಕ್ಯಾಮರಾವರ್ಕ್ ಈ ಸಿನಿಮಾಕ್ಕಿದೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ