ಮುರಿದು ಬಿತ್ತು ಮೊದಲ ಸಲ ಚಿತ್ರನಟಿಯ ನಾಲ್ಕೇ ವರ್ಷದ ದಾಂಪತ್ಯ! ನಾನೀಗ ಸಿಂಗಲ್‌ ಮದರ್‌ ಎಂದ ಭಾಮಾ
ಕನ್ನಡ ಸುದ್ದಿ  /  ಮನರಂಜನೆ  /  ಮುರಿದು ಬಿತ್ತು ಮೊದಲ ಸಲ ಚಿತ್ರನಟಿಯ ನಾಲ್ಕೇ ವರ್ಷದ ದಾಂಪತ್ಯ! ನಾನೀಗ ಸಿಂಗಲ್‌ ಮದರ್‌ ಎಂದ ಭಾಮಾ

ಮುರಿದು ಬಿತ್ತು ಮೊದಲ ಸಲ ಚಿತ್ರನಟಿಯ ನಾಲ್ಕೇ ವರ್ಷದ ದಾಂಪತ್ಯ! ನಾನೀಗ ಸಿಂಗಲ್‌ ಮದರ್‌ ಎಂದ ಭಾಮಾ

ಬಹುಭಾಷಾ ನಟಿ ಭಾಮಾ ಬದುಕಿನಲ್ಲೀಗ ಡಿವೋರ್ಸ್‌ ಬಿರುಗಾಳಿ ಬೀಸಿದೆ. ಕಳೆದೊಂದು ವರ್ಷದಿಂದ ಸತಿ ಪತಿಯ ನಡುವೆ ಯಾವುದೂ ಸರಿಯಿಲ್ಲ ಎಂಬ ಗುಲ್ಲೆದ್ದಿತ್ತು. ಈಗ ಅದು ಬಹುತೇಕ ಖಚಿತವಾಗಿದೆ. ಪತಿ ಇದ್ದರೂ, ನಾನೀಗ ನನ್ನ ಮಗಳಿಗೆ ಸಿಂಗಲ್‌ ಪೇರೆಂಟ್‌ ಎಂದು ಬರೆದುಕೊಂಡು, ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ.

ಮುರಿದು ಬಿತ್ತು ಮೊದಲ ಸಲ ಚಿತ್ರನಟಿಯ ನಾಲ್ಕೇ ವರ್ಷದ ದಾಂಪತ್ಯ! ನಾನೀಗ ಸಿಂಗಲ್‌ ಮದರ್‌ ಎಂದ ಭಾಮಾ
ಮುರಿದು ಬಿತ್ತು ಮೊದಲ ಸಲ ಚಿತ್ರನಟಿಯ ನಾಲ್ಕೇ ವರ್ಷದ ದಾಂಪತ್ಯ! ನಾನೀಗ ಸಿಂಗಲ್‌ ಮದರ್‌ ಎಂದ ಭಾಮಾ

Bhamaa Divorce: ಸಿನಿಮಾರಂಗದಲ್ಲಿ ಕಲಾವಿದರ ಬಣ್ಣದ ಬದುಕು ಎಷ್ಟು ಕಲರ್‌ಫುಲ್‌ ಆಗಿ ಕಾಣತ್ತದೆಯೋ, ಅದರ ಹಿಂದೆ ಅಷ್ಟೇ ಕಹಿ ನೋವುಗಳೂ ಅಡಗಿರುತ್ತವೆ. ಸೆಲೆಬ್ರಿಟಿ ಎಂಬ ಕಾರಣಕ್ಕೋ ಏನೋ ಇವರ ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗುತ್ತವೆ. ಅದರಲ್ಲೂ ಮದುವೆ ವಿಚಾರ, ಡಿವೋರ್ಸ್‌ ಸುದ್ದಿಯಂತೂ ಅಷ್ಟೇ ವೇಗವಾಗಿಯೇ ಸದ್ದು ಸುದ್ದಿಯಾಗುತ್ತದೆ. ಈಗ ಕನ್ನಡದ ಸಿನಿಮಾಗಳಲ್ಲೂ ನಟಿಸಿ, ಕನ್ನಡಿಗರಿಗೂ ಪರಿಚಯವಿರುವ ಮಲಯಾಳಿ ನಟಿ ಭಾಮಾ ಜೀವನದಲ್ಲಿ ಡಿವೋರ್ಸ್‌ ಬಿರುಗಾಳಿ ಬೀಸಿದೆ. ಅದೂ ಮದುವೆಯಾಗಿ ಕೇವಲ ನಾಲ್ಕೇ ವರ್ಷಕ್ಕೆ!

ಕೇರಳದ ನಟಿ ಭಾಮಾ ಮೂಲ ಹೆಸರು ರೇಖಿತಾ ಕುರುಪ್. ಚಿತ್ರರಂಗಕ್ಕೆ ಬಂದಮೇಲೆ ಭಾಮಾ ಎಂದು ಬದಲಿಸಿಕೊಂಡರು. 2007ರಲ್ಲಿ ನಿವೇದ್ಯಮ್‌ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಬಂದ ಭಾಮಾ, ಅದಾದ ಮೇಲೆ ಸಾಕಷ್ಟು ಸಿನಿಮಾ ಅವಕಾಶಗಳನ್ನು ಪಡೆದರು. 2010ರಲ್ಲಿ ನಟ ಯಶ್‌ ಜತೆಗೆ ಮೊದಲ ಸಲ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಅದಾದ ಮೇಲೆ ಶೈಲೂ, ಒಂದು ಕ್ಷಣದಲ್ಲಿ, ಆಟೋ ರಾಜ, ಬರ್ಫಿ, ಅಪ್ಪಯ್ಯ, ಅಂಬರ, ಅರ್ಜುನ, ರಾಗ ಸಿನಿಮಾಗಳ ಮೂಲಕ ಕನ್ನಡದಲ್ಲೂ ಗಮನ ಸೆಳೆದ ನಟಿ. ಈಗ ಇದೇ ನಟಿಯ ದಾಂಪತ್ಯ ಜೀವನ ಎರಡು ಹೋಳಾಗಿದೆ!

ನಾನೀಗ ಒಂಟಿ ಎಂದ ಭಾಮಾ

2020ರ ಜನವರಿಯಲ್ಲಿ ಉದ್ಯಮಿ ಅರುಣ್‌ ಜಗದೀಶ್‌ ಎಂಬುವವರನ್ನು ಭಾಮಾ ವರಿಸಿದ್ದರು. ಮನೆಯವರೇ ಹುಡುಕಿ ಮಾಡಿದ ಅರೇಂಜ್ಡ್‌ ಮದುವೆ ಅದಾಗಿತ್ತು. ಅರುಣ್‌ ಮತ್ತು ಭಾಮಾ ಜೋಡಿಗೆ ಓರ್ವ ಮಗಳೂ ಇದ್ದಾಳೆ. ಈಗ ಇದೇ ಜೋಡಿ ದೂರ ದೂರವಾಗಿದ್ದಾರೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಭಾಮಾ, ಪರೋಕ್ಷವಾಗಿ ನಾನೀಗ ಒಂಟಿ ಎಂದು ಬರೆದುಕೊಂಡಿದ್ದಾರೆ. ಮಗಳು ಗೌರಿ ಜತೆಗಿನ ಫೋಟೋವನ್ನು ಹಂಚಿಕೊಂಡ ಭಾಮಾ, ನಾನು ‘ಸಿಂಗಲ್ ಮದರ್’ ಆಗಿದ್ದು ಮತ್ತಷ್ಟು ಬಲ ನೀಡಿತು ಎಂದಿದ್ದಾರೆ.

ಕಳೆದ ವರ್ಷದಿಂದಲೇ ಡಿವೋರ್ಸ್‌ ವದಂತಿ

ಕಳೆದ ವರ್ಷವೇ ಭಾಮಾ ಮತ್ತು ಅರುಣ್‌ ನಡುವೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಪತಿ ಅರುಣ್‌ ಜತೆಗಿನ ಫೋಟೋಗಳನ್ನು ಡಿಲಿಟ್‌ ಮಾಡಿ, ತಮ್ಮ ಹೆಸರಿನ ಪಕ್ಕದಲ್ಲಿ ಇದ್ದ ಅರುಣ್‌ ಎಂಬುದನ್ನೂ ಅಳಿಸಿಹಾಕಿದ್ದರು. ಅಷ್ಟೇ ಅಲ್ಲ, ಆ ಸಮಯದಲ್ಲಿ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ದೊಡ್ಡ ಮಟ್ಟದಲ್ಲಿಯೇ ವೈರಲ್‌ ಆಗಿತ್ತು. "ಒಬ್ಬ ಒಳ್ಳೆಯ ಪುರುಷನಿಗೆ ಗೊತ್ತಿರಬೇಕು ತನಗೆ ಒಬ್ಬಳೇ ಮಹಿಳೆ ಸಾಕೆಂದು" ಎಂಬ ಅರ್ಥದಲ್ಲಿ ಬರೆದಿದ್ದರು. ಈ ಪೋಸ್ಟ್‌ ನೋಡಿದ ನೆಟ್ಟಿಗರು ಇಬ್ಬರೂ ಡಿವೋರ್ಸ್‌ ಪಡೆದ್ರಾ ಎಂದೇ ಮಾತನಾಡಿಕೊಂಡಿತ್ತು.

ಇದೀಗ ಅಂದಿನ ವದಂತಿ ನಿಜವಾಗಿದೆ. "ನಾನು ಒಂಟಿ ತಾಯಿಯಾಗುವವರೆಗೂ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಬಲಶಾಲಿಯಾಗುವುದೊಂದೇ ಮುಂದಿನ ದಾರಿಯಾಗಿತ್ತು. ಅದೇ ನನ್ನ ಏಕೈಕ ಆಯ್ಕೆಯಾಗಿದೆ. ನಾನು ಮತ್ತು ನನ್ನ ಮಗಳು" ಎಂದು ಮಗಳ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ನಾಲ್ಕು ವರ್ಷದ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಆದರೆ, ಈ ವಿಚ್ಛೇದನಕ್ಕೆ ಅಸಲಿ ಕಾರಣ ಏನು? ಎಂಬ ವಿಚಾರ ಮಾತ್ರ ಹೊರ ಬಿದ್ದಿಲ್ಲ.

ಸಿನಿಮಾದಿಂದ ದೂರ ದೂರ

2018ರಿಂದಲೇ ಸಿನಿಮಾಗಳ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ನಟಿ ಭಾಮಾ, 2020ರಲ್ಲಿ ಅರುಣ್‌ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಚಿತ್ರೋದ್ಯಮದಿಂದಲೇ ದೂರ ಉಳಿದರು. ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ. ಕನ್ನಡದಲ್ಲಿ ರಾಗ ಚಿತ್ರವೇ ಕೊನೇ. ಇದೀಗ ಡಿವೋರ್ಸ್‌ ಬಳಿಕ ಮತ್ತೆ ಬಣ್ಣದ ಲೋಕದತ್ತ ಹೊರಳುತ್ತಾರಾ ಕಾದು ನೋಡಬೇಕು.

Whats_app_banner