Inamdar Trailer: ಕಪ್ಪು ಸುಂದರಿಯ ಸುತ್ತ ವರ್ಣ ಸಂಘರ್ಷದ ಕಥೆ; ಪಂಚ ಭಾಷೆಗಳಲ್ಲಿ ಇನಾಮ್ದಾರ್ ಚಿತ್ರದ ಟ್ರೇಲರ್
ಇನಾಮ್ದಾರ್ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ಈ ಚಿತ್ರ ರಿಲೀಸ್ ಆಗಲಿದೆ.
Inamdar Trailer: ನಿರಂಜನ್ ಶೆಟ್ಟಿ ತಲ್ಲೂರು ನಿರ್ಮಾಣದ, ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ್ ಚಿತ್ರದ ಟ್ರೇಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಯಿತು. ನಿರಂಜನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉದ್ಯಮಿ ಕರುಣಾಕರ್ ರೆಡ್ಡಿ, ಎಂ.ಕೆ. ಮಠ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ಇದು ಉತ್ತರ ಕರ್ನಾಟಕ ಮೂಲದ ಶಿವಾಜಿ ಮಹಾರಾಜರನ್ನು ಆರಾಧಿಸುವ ಇನಾಮ್ದಾರ್ ಕುಟುಂಬ, ದಕ್ಷಿಣದ ಕರಾವಳಿ ಭಾಗದ ಕಾಡಿನಲ್ಲಿ ವಾಸಿಸುವ ಹಾಗೂ ಶಿವನ ಆರಾಧಕರಾದ ಕಾಡು ಜನರ ನಡುವೆ ನಡೆಯುವ ವರ್ಣಸಂಘರ್ಷದ ಕಥೆಯೇ ಈ ಇನಾಮ್ದಾರ್. ಇನಾಮ್ದಾರ್ ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ಅಡಿಬರಹವಿದೆ. ಬೆಳಗಾವಿ, ಕುಂದಾಪುರ, ಚಾಮರಾಜನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಹಾಡುಗಳು ಜನರ ಮನ ಗೆದ್ದಿದೆ. ಅಕ್ಟೋಬರ್ 27 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಾಯಕ ರಂಜನ್ ಛತ್ರಪತಿ ಮಾತನಾಡಿ, ನಮ್ಮ ಚಿತ್ರ ಆರಂಭವಾದಾಗ ಬೇರೆ ನಿರ್ಮಾಪಕರಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಿಂದ ದೂರ ಸರಿದರು. ಆಗ ನಿರಂಜನ್ ಶೆಟ್ಟಿ ತಲ್ಲೂರು ಅವರು ಮುಂದೆ ಬಂದು ಈ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಧನ್ಯವಾದ. ನಾನು ಈ ಚಿತ್ರದಲ್ಲಿ ಇನಾಮ್ದಾರ್ ಕುಟುಂಬದ ಮಗನಾಗಿ ಕಾಣಿಸಿಕೊಂಡಿದ್ದೇನೆ ಎಂದರು.
ಟ್ರೇಲರ್ ನೋಡಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ ಎಂದು ಮಾತು ಆರಂಭಿಸಿದ ನಟ ಪ್ರಮೋದ್ ಶೆಟ್ಟಿ, ಈ ಚಿತ್ರದಲ್ಲಿ ನನ್ನದು ಕಾಳಿಂಗ ಎಂಬ ಕಾಡಿನ ನಾಯಕನ ಪಾತ್ರ. ತುಂಡು ಉಡುಗೆ, ಮೈ ಪೂರ್ತಿ ಕಪ್ಪು ಬಣ್ಣವಿರುತ್ತದೆ. ಸದ್ಯದಲ್ಲೇ ಇನಾಮ್ದಾರ್ ಚಿತ್ರ ಬಿಡುಗಡೆಯಾಗುತ್ತಿದೆ ನೋಡಿ ಹಾರೈಸಿ ಎಂದರು.
ಎಂ.ಕೆ.ಮಠ, ರಘು ಪಾಂಡೇಶ್ವರ, ಚಿತ್ರಕಲಾ ಮುಂತಾದ ಕಲಾವಿದರು ತಮ್ಮ ಪಾತ್ರದ ಬಗ್ಗೆ ಹೇಳಿದರು. ಚಿತ್ರದಲ್ಲಿ ಬರುವ ಕಪ್ಪು ಸುಂದರಿ ನಾನೇ ಎಂದರು ನಾಯಕಿ ಚಿರಶ್ರೀ ಅಂಚನ್. ಛಾಯಾಗ್ರಾಹಕ ಮುರಳಿ, ಸಂಕಲನಕಾರ ಶಿವರಾಜ್ ಮೇಹು ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಕಾರ್ಯದ ಕುರಿತು ಮಾಹಿತಿ ನೀಡಿದರು. ರಾಕಿ ಸೋನು ಹಾಗೂ ನಕುಲ್ ಅಭಯಂಕರ್ ಈ ಚಿತ್ರದ ಸಂಗೀತ ನಿರ್ದೇಶಕರು.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಯಕನಾಗಿ ರಂಜನ್ ಛತ್ರಪತಿ, ನಾಯಕಿಯರಾಗಿ ಚಿರಶ್ರೀ ಅಂಚನ್, ಎಸ್ತರ್ ನೊರೋನ್ಹಾ, ಸಂದೇಶ್ ಶೆಟ್ಟಿ ಆಜ್ರಿ, ರಂಗಭೂಮಿ ಕಲಾವಿದ ಹಿನ್ನಲೆಯ ಪ್ರಮೋದ್ ಶೆಟ್ಟಿ, ಎಂ.ಕೆ.ಮಠ, ಥ್ರಿಲ್ಲರ್‌ಮಂಜು, ಶರತ್ ಲೋಹಿತಾಶ್ವ, ಅವಿನಾಶ್, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ನಾಗರಾಜ ಬೈಂದೂರು, ಪ್ರಶಾಂತ್ ಸಿದ್ಧಿ, ಸಂಜು ಬಸಯ್ಯ, ಮಾಹಬಲೇಶ್ವರ ಕ್ಯಾದಿಕೆ, ಲಕ್ಷ್ಮೀ ಪ್ರಿಯ, ಚಿತ್ರಕಲಾ ರಾಜೇಶ್, ರಕ್ಷಿತ್ ರಾಮಚಂದ್ರ ಶೆಟ್ಟಿ ಪಾತ್ರವರ್ಗದಲ್ಲಿದ್ದಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ