ಒಟಿಟಿಗೆ ಬರ್ತಿದೆ 4 ಕಥೆಗಳ ಆಂಥಾಲಜಿ ಚಿತ್ರ ರೂಪಾಂತರ; ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಎಂದಿನಿಂದ ಪ್ರಸಾರ? ಇಲ್ಲಿದೆ ಮಾಹಿತಿ
ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 4 ಪ್ರತ್ಯೇಕ ಕಥೆಗಳುಳ್ಳ ರೂಪಾಂತರ ಸಿನಿಮಾ ಸೆಪ್ಟೆಂಬರ್ 13 ರಿಂದ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾವನ್ನು ಮಿಥಿಲೇಶ್ ನಿರ್ದೇಶನ ಮಾಡಿದ್ದಾರೆ. ಸುಹಾನ್ ಪ್ರಸಾದ್, ಪಾರ್ಥ್ ಜಾನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾಗಳಿಗೆ ಈಗ ಕರ್ನಾಟಕದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಉತ್ತರ ಭಾರತ ಪ್ರೇಕ್ಷಕರಿಂದ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಮುಖ ನಟರ ಸಿನಿಮಾಗಳು ಮಾತ್ರವಲ್ಲದೆ, ಇತರ ಕನ್ನಡ ಸಿನಿಮಾಗಳನ್ನು ಕೂಡಾ ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಅದರಲ್ಲೂ ಒಟಿಟಿ ಬಳಕೆದಾರರಿಗೆ ಈಗ ಇತರ ಭಾಷೆಗಳ ಸಿನಿಮಾಗಳು ಬಹಳ ಚಿರಪರಿಚಿತ ಎನಿಸಿವೆ.
ಜುಲೈ 26 ರಂದು ತೆರೆ ಕಂಡಿದ್ದ ರೂಪಾಂತರ
ಕೆಲವೊಂದು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ತೆರೆ ಕಂಡರೆ, ಕೆಲವು ಚಿತ್ರಮಂದಿರದಲ್ಲಿ ತೆರೆ ಕಂಡು ಕೆಲವು ದಿನಗಳು, ಕೆಲವು ವರ್ಷಗಳ ನಂತರ ಒಟಿಟಿಯಲ್ಲಿ ಪ್ರಸಾರವಾಗುತ್ತಿವೆ. ಇದೀಗ ಮತ್ತೊಂದು ಹೊಸ ಕನ್ನಡ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಈ ಸಿನಿಮಾ ಜುಲೈ 26 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡ ಚಿತ್ರರಂದಲ್ಲಿ ಇಂತಹ ಸಿನಿಮಾಗಳು ಹೆಚ್ಚೆಚ್ಚು ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಈ ಚಿತ್ರ ಒಟಿಟಿಗೆ ಬರುತ್ತಿದೆ. ಥಿಯೇಟರ್‌ನಲ್ಲಿ ನೋಡಲಾಗದವರು ಈಗ ಒಟಿಟಿಯಲ್ಲಿ ನೋಡಬಹುದು.
ರೂಪಾಂತರ ಕನ್ನಡದ ಆಂಥಾಲಜಿ ಸಿನಿಮಾ. ಈ ಸಿನಿಮಾ 4 ಕಥೆಗಳ ಸುತ್ತ ಸುತ್ತುತ್ತದೆ. ಇವು ಪ್ರತ್ಯೇಕ ಕಥೆಗಳಾದರೂ ಪ್ರತಿಯೊಂದೂ ಪ್ರೇಕ್ಷಕರಿಗೆ ಭಾರೀ ಇಷ್ಟವಾಗಿದೆ. ಇದೇ ಶುಕ್ರವಾರ, ಅಂದರೆ ಸೆಪ್ಟೆಂಬರ್ 13 ರಿಂದ ರೂಪಾಂತರ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗಲಿದೆ. ರೂಪಾಂತರ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಬಹಳ ದಿನಗಳ ಮುನ್ನವೇ ಅನೌನ್ಸ್ ಮಾಡಲಾಗಿತ್ತು. ಆದರೆ ಅಮೆಜಾನ್ ಪ್ರೈಂ, ನಿಗದಿತ ದಿನಾಂಕದಲ್ಲಿ ಈ ಸಿನಿಮಾ ಪ್ರಸಾರ ಮಾಡಿಲ್ಲ. ಇದಕ್ಕೂ ಮುನ್ನ ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಸೆಪ್ಟೆಂಬರ್ 9 ರಿಂದ ಪ್ರಸಾರ ಮಾಡಲಿದ್ದೇವೆ ಎಂದು ಹೇಳಿತ್ತಾದರೂ ಇದುವರೆಗೂ ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಕಾಣಸಿಕ್ಕಿಲ್ಲ. ಇದೀಗ ರೂಪಾಂತರ ಕೂಡಾ ಹೇಳಿದ ಸಮಯಕ್ಕೆ ಸ್ಟ್ರೀಮ್ ಅಗಲಿದೆಯೋ ಇಲ್ಲವೋ ಕಾದು ನೋಡಬೇಕು.
ಸೆಪ್ಟೆಂಬರ್ 13 ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರ
ಸಾಮಾನ್ಯವಾಗಿ ಬೇರೆ ಬೇರೆ ಕಥೆಗಳು ಸೇರಿದ ಅಂಥಾಲಜಿ ಸೀರೀಸ್ ಒಟಿಟಿಯಲ್ಲಿ ಸಾಕಷ್ಟು ಬಂದಿವೆ. ಈ ರೂಪಾಂತರ ಕೂಡಾ 4 ಕಥೆಗಳ ಸಂಗವಾಗಿದೆ. ಅರಂಭದಲ್ಲಿ ವ್ಯಕ್ತಿಯೊಬ್ಬ ಹೇಳುವ ಕಥೆಯಿಂದ ಸಿನಿಮಾ ಆರಂಭವಾಗುತ್ತದೆ. ಆತ 4 ಕಥೆಗಳನ್ನು ಹೇಳುತ್ತಾನೆ. ವೃದ್ಧ ದಂಪತಿಕ ಕಥೆ, ಭಿಕ್ಷುಕನೊಬ್ಬನ ಕಥೆ, ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ಗೂಂಡಾ ಜೊತೆ ಜಗಳವಾಡುವುದು ಹಾಗೂ ಬಾಲ್ಯದಿಂದ ಬಹಳ ಕಷ್ಟದಿಂದ ಬೆಳೆದ ಯುವಕನೊಬ್ಬ ಕೊನೆಗೆ ಮಾದಕ ವ್ಯಸನಕ್ಕೆ ಹೇಗೆ ಬಲಿಯಾಗುತ್ತಾನೆ ಎಂಬ ಕಥೆಗಳನ್ನು ಆ ವ್ಯಕ್ತಿ ಹೇಳುತ್ತಾನೆ.
ರೂಪಾಂತರ ಚಿತ್ರಕ್ಕೆ ಐಎಂಡಿಬಿಯಲ್ಲಿ 8.6 ರೇಟಿಂಗ್ ಇದೆ. ರೂಪಾಂತರ ಚಿತ್ರವನ್ನು ಮ್ಯಾಂಗೋ ಪಿಕಲ್ಸ್ ಎಂಟರ್‌ಟೈನ್ಮೆಂಟ್, ಜಾನಿ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ಸುಹಾನ್ ಪ್ರಸಾದ್, ಪಾರ್ಥ್ ಜಾನಿ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರವನ್ನು ಮಿಥಿಲೇಶ್ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ, ಸೋಮ್ ಶೇಖರ್, ಲೇಖಾ ನಾಯ್ಡು, ಅಂಜನ್ ಭಾರದ್ವಾಜ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.