Shiva Rajkumar: ಕೆಎಂಎಫ್ ನಂದಿನಿ ಬ್ರ್ಯಾಂಡ್‌ಗೆ ಶಿವ ರಾಜ್‌ಕುಮಾರ್ ರಾಯಭಾರಿ
Shiva Rajkumar: ಕೆಎಂಎಫ್ ನಂದಿನಿ ಬ್ರಾಂಡ್‌ಗೆ ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಬ್ರಾಂಡ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಬ್ರಾಂಡಿಗೆ ವರನಟ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಮತ್ತೊಬ್ಬ ಸದಸ್ಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಾಯಭಾರಿಯಾಗಿದ್ದಾರೆ.
ಡಾಕ್ಟರ್ ರಾಜಕುಮಾರ್ 1996ರಲ್ಲಿ, ಕರ್ನಾಟಕ ರತ್ನ ದಿವಂಗತ ಪುನೀತ್ ರಾಜಕುಮಾರ್ 2009 ರಲ್ಲಿ, ಡಾ. ಶಿವರಾಜಕುಮಾರ್ ಅವರು 2023ರಲ್ಲಿ ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರಾಂಡಿಗೆ ರಾಯಭಾರಿಯಾಗಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಅವರು ಸ್ವತಃ ನಟ ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಿದ್ದಾರೆ.
ಡಾ. ರಾಜಕುಮಾರ್ ಅವರು ನಂದಿನಿ ಬ್ರಾಂಡಿಂಗ್ ಪ್ರಚಾರ ನೀಡಲು ಯಾವುದೇ ಸಂಭಾವನೆಯನ್ನು ಪಡೆದಿರಲಿಲ್ಲ. ಡಾ. ಪುನೀತ್ ರಾಜಕುಮಾರ್ ಅವರು ಕೂಡ ತಂದೆಯನ್ನೇ ಅನುಸರಿಸಿದ್ದರು. ಇದೀಗ ಶಿವರಾಜಕುಮಾರ್ ಕೂಡ ಒಪ್ಪಿಗೆ ನೀಡಿರುವುದು ಕೆಎಂಎಫ್ ಗೆ ಮತ್ತಷ್ಟು ಬಲಬಂದಂತಾಗಿದೆ.
ಜಾಗತಿಕವಾಗಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಪುನೀತ್ ರಾಜಕುಮಾರ್ ಅವರು ರಾಯಭಾರಿಯಾಗಿದ್ದರು ಈ ಕಾರಣದಿಂದಲೇ ಕೆಎಂಎಫ್ ಉತ್ಪನ್ನಗಳಿಗೆ ಅತಿ ಹೆಚ್ಚು ಬೇಡಿಕೆ ಹಾಗೂ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ಇದನ್ನು ಮನಗಂಡ ಕೆಎಂಎಫ್ ಮತ್ತೆ ರಾಜಕುಮಾರ್ ಅವರ ಕುಟುಂಬವನ್ನೇ ಮುಂದುವರಿಸಬೇಕೆಂದು ನಿರ್ಧರಿಸಿ ಶಿವರಾಜ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತ್ತು.
ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ರಾಯಭಾರಿ ಸೇವೆಯನ್ನು ನೀಡುವ ಮೂಲಕ ರಾಜ್ಯದ ರೈತರ ಹಿತಾಸಕ್ತಿಯನ್ನು ಎತ್ತಿ ಹಿಡಿದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಭೀಮ ನಾಯಕ್, ಶಿವರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳ ಪ್ರಚಾರಕ್ಕಾಗಿ ಯಾವುದೇ ಸಂಭಾವನೆಯನ್ನು ಪಡೆದಿಲ್ಲ ನಮ್ಮ ರಾಜ್ಯದ ರೈತರ ಜೊತೆಯಲ್ಲಿ ಇದ್ದಾರೆ. ಸದ್ಯದಲ್ಲೇ ನಂದಿನಿ ಜಾಹೀರಾತಿನ ಶೂಟಿಂಗ್ ಮಾಡಲಾಗುವುದು ಎಂದರು.
ನಟ ಶಿವರಾಜ್ ಕುಮಾರ್ ಮಾತನಾಡಿ, ನಂದಿನಿ ಎಂಬುವುದು ಇಡೀ ದೇಶದ ಭರವಸೆ ರಾಜ್ಯದ ಹೆಮ್ಮೆ, ಹಾಲಿನ ಗುಣಮಟ್ಟದ ಮುಂದೆ ಬೆಲೆ ಹೆಚ್ಚಳ ಮುಖ್ಯವಾಗುವುದಿಲ್ಲ. ನಮ್ಮ ಉತ್ಪನ್ನ, ನಮ್ಮ ರೈತರಿಗಾಗಿ ಇದು ಕರ್ತವ್ಯ. ಇದಕ್ಕಾಗಿ ನಾವು ಮೊದಲಿಗರಾಗಬೇಕು ಎಂದಿದ್ದಾರೆ.
(ವರದಿ -ಅಕ್ಷರಾ ಎಂ.ಕೆ)