Kannada News  /  Entertainment  /  Sandalwood News Shiva Rajkumar Starrer Narthan Directs Bhairathi Ranagal Movie Launched With A Pooja Ceremony Mnk
ಭೈರತಿ ರಣಗಲ್‌ನಲ್ಲಿ 26 ವರ್ಷದ ಯುವಕನಾಗಿ ಶಿವಣ್ಣ; ಮಫ್ತಿ ಪ್ರಿಕ್ವೇಲ್‌ ಕಥೆ ಹೇಳ್ತಾರೆ ನರ್ತನ್
ಭೈರತಿ ರಣಗಲ್‌ನಲ್ಲಿ 26 ವರ್ಷದ ಯುವಕನಾಗಿ ಶಿವಣ್ಣ; ಮಫ್ತಿ ಪ್ರಿಕ್ವೇಲ್‌ ಕಥೆ ಹೇಳ್ತಾರೆ ನರ್ತನ್

Bhairathi Ranagal: ಭೈರತಿ ರಣಗಲ್‌ನಲ್ಲಿ 26 ವರ್ಷದ ಯುವಕನಾಗಿ ಶಿವಣ್ಣ; ಮಫ್ತಿ ಪ್ರಿಕ್ವೇಲ್‌ ಕಥೆ ಹೇಳ್ತಾರೆ ನರ್ತನ್

26 May 2023, 13:30 ISTManjunath B Kotagunasi
26 May 2023, 13:30 IST

ಮಫ್ತಿ ಚಿತ್ರದಲ್ಲಿನ ಭೈರತಿ ರಣಗಲ್ ಯಾರು?‌ ಆತನ ಹಿನ್ನೆಲೆ ಏನು? ಈ ವಿಚಾರಗಳನ್ನೇ ಸಿನಿಮಾ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ನರ್ತನ್.‌

Bhairathi Ranagal Launch: 'ಮಫ್ತಿ' ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅವರ ಭೈರತಿ ರಣಗಲ್‌ ಪಾತ್ರ ನೋಡುಗರಿಂದ ಮೆಚ್ಚುಗೆ ಪಡೆದಿತ್ತು. ಸಿನಿಮಾ ಬಿಡುಗಡೆ ಆಗಿ ಸೂಪರ್‌ ಹಿಟ್‌ ಪಟ್ಟಿ ಸೇರಿದರೂ ಆ ಸಿನಿಮಾದಲ್ಲಿನ ಶಿವಣ್ಣನ ಪಾತ್ರದ ಹೆಸರೇ ಒಂದು ಟ್ರೆಂಡ್‌ ಸೆಟ್‌ ಮಾಡಿತ್ತು. ಹೀಗಿರುವಾಗಲೇ ಕೆಲ ತಿಂಗಳ ಹಿಂದಷ್ಟೇ ಶಿವರಾತ್ರಿ ದಿನದಂದು ಭೈರತಿ ರಣಗಲ್‌ ಹೆಸರಿನಲ್ಲಿಯೇ ಸಿನಿಮಾ ಘೋಷಣೆ ಮಾಡಿದ್ದರು ನಿರ್ದೇಶಕ ನರ್ತನ್‌. ಇದೀಗ ಅದೇ ಚಿತ್ರದ ಮುಹೂರ್ತವೂ ನೆರವೇರಿದೆ.

2017 ಡಿಸೆಂಬರ್‌ನಲ್ಲಿ ತೆರೆಕಂಡ 'ಮಫ್ತಿ' ಚಿತ್ರವನ್ನು ಜಯಣ್ಣ ಕಂಬೈನ್ಸ್‌ ನಿರ್ಮಿಸಿ ನರ್ತನ್‌ ಕಥೆ ಬರೆದು ನಿರ್ದೇಶಿಸಿದ್ದರು. ಇದೀಗ ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲು ಸಿದ್ಧತೆಗಳು ನಡೆದಿವೆ. ಈ ಸಲ ಸ್ವತಃ ಶಿವಣ್ಣ ಅವರೇ ತಮ್ಮ ಹೋಮ್‌ ಬ್ಯಾನರ್‌ ಗೀತಾ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿ ಮುಹೂರ್ತವನ್ನು ನೆರವೇರಿಸಿಕೊಂಡಿರುವ ಈ ಸಿನಿಮಾ ಜೂನ್‌ನಿಂದ ಶೂಟಿಂಗ್‌ ಆರಂಭಿಸಲಿದೆ.

ಮುಹೂರ್ತ ಬಳಿಕ ಮಾತನಾಡಿದ ಶಿವಣ್ಣ, ಎಲ್ಲ ಸಿನಿಮಾಗಳಲ್ಲಿ ನಾನೇ ಸ್ಕೋರ್‌ ಮಾಡಬಾರದು. ಒಳ್ಳೆ ಸಿನಿಮಾದಲ್ಲಿ ನಾನೂ ಒಂದು ಪಾರ್ಟ್‌ ಆದರೆ ಸಾಕು. ಅದು ಮಫ್ತಿ ಸಿನಿಮಾದಲ್ಲಿ ಆಗಿತ್ತು. ಇದೀಗ ಇಲ್ಲಿಯೂ ಅದೇ ರೀತಿ ಇರಲಿದೆ. ನನಗೆ 61 ವರ್ಷ ವಯಸ್ಸಾಗಿದ್ದರೂ ನಿರ್ದೇಶಕರ ಪ್ರಕಾರ ನನಗೆ 30 ವರ್ಷ. ಯುದ್ಧಕ್ಕೆ ಕಳಿಸುತ್ತಿದ್ದಾರೆ. ನೋಡೋಣ ಎಲ್ಲಿಯವರೆಗೂ ಆಗುತ್ತೆ ಅಲ್ಲಿಯವರೆಗೂ ಯುದ್ಧ ಮಾಡೋಣ ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಏನೆಂದರೆ ಭೈರತಿ ರಣಗಲ್‌ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಡಬ್‌ ಆಗಿ ಬಿಡುಗಡೆ ಆಗಲಿದೆ ಎಂಬ ವಿಚಾರವನ್ನು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿದೆ. ಅದರಂತೆ, ಈ ಸಿನಿಮಾದಲ್ಲಿ ಯಾವೆಲ್ಲ ಸ್ಟಾರ್‌ ನಟರು ಇರಲಿದ್ದಾರೆ ಎಂಬ ಬಗ್ಗೆಯೂ ಪ್ರಶ್ನೆ ಎದುರಾದಾಗ ಶಿವಣ್ಣ ಹೀಗೆ ಉತ್ತರಿಸಿದ್ದಾರೆ.

"ಸದ್ಯಕ್ಕೆ ಈಗಲೇ ಅದನ್ನು ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಮಾಹಿತಿ ನೀಡಲಿದ್ದೇವೆ. ಸುಮ್ನೆ ಇಲ್ಲಸಲ್ಲದನ್ನು ಹೇಳುವುದು ಬೇಡ. ಒಂದು ವೇಳೆ ಹಾಗೆ ಹೇಳಿದ್ದು ಈಡೇರದಿದ್ದರೆ ಬೇಸರ ಆಗಬಹುದು. ಈ ಸಿನಿಮಾದಲ್ಲೂ ಒಂದು ವಿಶೇಷತೆ ಇರಲಿದೆ. ಅದು ಅಧಿಕೃತವಾದ ಮೇಲೆ ತಿಳಿಸಲಿದ್ದೇವೆ" ಎಂದರು.

26 ವರ್ಷದ ಯುವಕನಾಗಿ ಶಿವಣ್ಣ

ಇನ್ನು ಮಫ್ತಿ ಚಿತ್ರದಲ್ಲಿ 33 ವರ್ಷದ ವಯಸ್ಕನಾಗಿ ಶಿವಣ್ಣ ಕಾಣಿಸಿಕೊಂಡಿದ್ದರು. ಇದೀಗ ಭೈರತಿ ರಣಗಲ್‌ ಸಿನಿಮಾದಲ್ಲಿ 26 ವರ್ಷದ ಯುವಕನಾಗಿ ಶಿವರಾಜ್‌ಕುಮಾರ್‌ ಎದುರಾಗಲಿದ್ದಾರೆ ಎಂಬ ವಿಚಾರವನ್ನು ಚಿತ್ರತಂಡ ಮುಹೂರ್ತದ ಸಮಯದಲ್ಲಿ ಹೇಳಿಕೊಂಡಿದೆ. ಅಂದರೆ ಇದು ಮಫ್ತಿ ಚಿತ್ರದ ಪ್ರಿಕ್ವೆಲ್‌ ರೀತಿ ಮೂಡಿಬರಲಿದ್ದು, ಭೈರತಿ ರಣಗಲ್‌ ಹಿನ್ನೆಲೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲಿದ್ದಾರೆ ನಿರ್ದೇಶಕರು.