ಚಿಕಿತ್ಸೆ ಫಲಿಸದೆ ಯಶ್ ಅಭಿಮಾನಿ ಸಾವು; ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು ಜೀವ ಕಳೆದುಕೊಂಡ ನಿಖಿಲ್
ಯಶ್ ಹುಟ್ಟುಹಬ್ಬದ ದಿನ ವಿದ್ಯುತ್ ಆಘಾತದಿಂದ ಮೂರು ಅಭಿಮಾನಿಗಳು ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ಇನ್ನೊಬ್ಬ ಅಭಿಮಾನಿ ಮೃತಪಟ್ಟಿದ್ದಾರೆ. ನಿನ್ನೆ ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಗದಗದ ಅಭಿಮಾನಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯಶ್ ಹುಟ್ಟುಹಬ್ಬದ ದಿನ ರಾಕಿಂಗ್ ಸ್ಟಾರ್‌ನನ್ನು ನೋಡಲು ಕಾತರದಿಂದ ಸ್ಕೂಟಿಯಲ್ಲಿ ವೇಗವಾಗಿ ಆಗಮಿಸಿ ಪೊಲೀಸ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯಶ್ ಅಭಿಮಾನಿ ನಿಖಿಲ್ ಮೃತಪಟ್ಟಿದ್ದಾನೆ. ಯಶ್‌ಗೆ ಭದ್ರತೆ ನೀಡುವ ವಾಹನಕ್ಕೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ತಕ್ಷಣವೇ ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಖಿಲ್ ಮೃತಪಟ್ಟಿದ್ದಾನೆ.
ಯಶ್ ತನ್ನ ಹುಟ್ಟುಹಬ್ಬದ ದಿನ ಟಾಕ್ಸಿಕ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣದಿಂದ ಹುಟ್ಟುಹಬ್ಬದ ದಿನ ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗದು ಎಂದು ಮೊದಲೇ ಸೂಚನೆ ನೀಡಿದ್ದರು. ಕರ್ನಾಟಕದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಶ್ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಕಟ್ಟಿ ಸಂಭ್ರಮಿಸುತ್ತಿದ್ದರು.
ಗದಗದ ಸೊರಣಗಿಯಲ್ಲಿ ಯಶ್ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಯುವಕರು ಬ್ಯಾನರ್ ಕಟ್ಟುತ್ತಿದ್ದಾಗ ಬ್ಯಾನರ್ ವಿದ್ಯುತ್ ತಂತಿಗೆ ತಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸುದ್ದಿ ತಿಳಿದ ತಕ್ಷಣ ಯಶ್ ಗೋವಾದಿಂದ ವಿಮಾನ ಹತ್ತಿ ಓಡೋಡಿ ಬಂದಿದ್ದರು. ಮೃತಪಟ್ಟ ಅಭಿಮಾನಿಗಳಿಗೆ ಮನೆಗೆ ಭೇಟಿ ನೀಡಿದ್ದರು. ಗದಗ ಲಕ್ಷ್ಮೇಶ್ವರ ಆಸ್ಪತ್ರೆಗೂ ಭೇಟಿ ನೀಡಿ ಗಾಯಗೊಂಡವರನ್ನು ನೋಡಿದ್ದರು.
ಯಶ್ ಗದಗಕ್ಕೆ ಬಂದ ಸುದ್ದಿ ತಿಳಿದು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಯಶ್ ವಾಹನದಲ್ಲಿ ಹೋಗುತ್ತಿರುವಾಗ ವೇಗವಾಗಿ ಬೈಕ್‌ನಲ್ಲಿ ನಿಖಿಲ್ ಎಂಬ ಯುವಕ ಆಗಮಿಸಿದ್ದನು. ಆದರೆ, ಆತನ ಬೈಕ್ ಪೊಲೀಸ್ ಬೆಂಗಾವಲು ವಾಹನಕ್ಕೆ ಡಿಕ್ಕಿಯಾಗಿತ್ತು. ಗಂಭೀರವಾಗಿ ಗಾಯಗೊಂಡ ನಿಖಿಲ್‌ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ, ಆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ಯುವಕರಾದ ನವೀನ್, ಹನುಮಂತ, ಮುರಳಿ ಮೂವರ ಮನೆಗೂ ತೆರಳಿದ ಯಶ್, ಮೂರೂ ಕುಟುಂಬದವರ ಜತೆಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಮನೆ ಮಂದಿಯವರ ಜತೆಗೆ ತಾವೂ ಕಣ್ಣೀರು ಹಾಕಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿತ್ತು. ಈ ಕುರಿತ ವರದಿ ಇಲ್ಲಿದೆ.