ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಶ್ರಾವಣಿಗೆ ಸಂಭ್ರಮ ವಿಜಯಾಂಬಿಕಾಗೆ ಸಂಕಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ-television news zee kannada shravani subramanya kannada serial today episode 118 august 28th shravani in happy mood rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಶ್ರಾವಣಿಗೆ ಸಂಭ್ರಮ ವಿಜಯಾಂಬಿಕಾಗೆ ಸಂಕಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಶ್ರಾವಣಿಗೆ ಸಂಭ್ರಮ ವಿಜಯಾಂಬಿಕಾಗೆ ಸಂಕಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

Shravani Subramanya Kannada Serial Today Episode August 28th: ಸುಬ್ಬು ಮನೆಯಲ್ಲಿ ವರದನ ಗುಣಗಾನ ಮಾಡುತ್ತಿರುವ ಅಪ್ಪ–ಅಮ್ಮ, ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಸಂಭ್ರಮದಲ್ಲಿ ಶ್ರಾವಣಿ. ವರದನ ಮದುವೆ ವಿಚಾರವಾಗಿ ಅಮ್ಮನ ಮನವೊಲಿಸಲು ಶ್ರೀವಲ್ಲಿ ಶತಪ್ರಯತ್ನ.

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 28ರ ಸಂಚಿಕೆ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಆಗಸ್ಟ್ 28ರ ಸಂಚಿಕೆ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಿನ್ನೆಯ (ಆಗಸ್ಟ್‌ 28ರ) ಸಂಚಿಕೆಯಲ್ಲಿ ವರದನ ದೆಸೆಯಿಂದ ರೌಡಿಗಳಿಂದ ಬಚಾವ್ ಆಗಿ ಆಸ್ಪತ್ರೆ ಸೇರಿದ್ದ ವಿಶಾಲಾಕ್ಷಿ ಡಿಸಾರ್ಜ್ ಆಗಿ ಮನೆ ಸೇರುತ್ತಾಳೆ. ಸುಬ್ಬು ಆಕೆಯ ಪಕ್ಕದಲ್ಲೇ ಇದ್ದು ಸೇವೆ ಮಾಡಲು ನಿಂತಿರುತ್ತಾನೆ. ಎಲ್ಲರೂ ಹಾಲ್‌ನಲ್ಲಿ ಕುಳಿತಿರುವಾಗ ಸುಂದರನ ತಾಯಿ ಕಾಂತಮ್ಮ ಮಗನಿಗೆ ‘ಅಲ್ವೋ ಸುಂದ್ರ ನೀನೇನೋ ದೊಡ್ ರೌಡಿ ಥರ ಅವರ ಮುಂದೆ ಯಾಕೆ ಆಡಬೇಕಿತ್ತು, ಇದ್ರಿಂದ ಹೀಗೆಲ್ಲಾ ಆಯ್ತು ನೋಡು‘ ಎಂದು ಬಯ್ಯುತ್ತಾಳೆ. ಅದಕ್ಕೆ ಸುಂದರ ಮಮ್ಮಿ ನಾನು ಸೋಮವಾರ ಪ್ರಾಣಿಹಿಂಸೆ ಮಾಡಬಾರದು ಎಂದು ಸುಮ್ಮನೆ ಬಿಟ್ಟಿದ್ದೆ, ಇಲ್ಲಾಂದ್ರೆ ಅವರಿಗೆಲ್ಲಾ ಗತಿ ಕಾಣಿಸುತ್ತಿದ್ದೆ ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ. ತಾನು ಜೊತೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸುಬ್ಬು ಬೇಸರ ಮಾಡಿಕೊಳ್ಳುತ್ತಾನೆ.

ವರದನನ್ನು ಹೊಗಳುವ ವಿಶಾಲಾಕ್ಷಿ– ಪದ್ಮನಾಭ

ತನ್ನ ಪ್ರಾಣ, ಮಗಳ ಮಾನ–ಪ್ರಾಣ ಉಳಿಸಿದ್ದು ವರದ, ಇವತ್ತು ವರದ ಇಲ್ಲ ಎಂದಿದ್ರೆ ನಾವು ಜೀವಂತವಾಗಿ ಉಳಿಯುತ್ತಿರಲಿಲ್ಲ ಎಂದು ವಿಶಾಲಾಕ್ಷಿ ಅಳುತ್ತಾಳೆ. ಅಷ್ಟೊತ್ತಿಗೆ ಪದ್ಮನಾಭ ಯಾವ ಗಂಡಸು ತಾನು ಇಷ್ಟಪಡುವವರಿಗಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುತ್ತಾನೋ ಅವನು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಅರ್ಥ ಎಂದು ವರದನನ್ನು ಹೊಗುತ್ತಾರೆ. ಇದನ್ನು ನೋಡಿ ಕಾಂತಮ್ಮ, ಸುಂದರ ಮನಸ್ಸಿನೊಳಗೆ ಬೇರೆ ಲೆಕ್ಕಾಚಾರ ಮಾಡುತ್ತಾರೆ. ಕೊನೆಗೆ ಸುಬ್ಬು ತಾನು ವರದನ ಬಳಿಗೆ ಹೋಗಿ ಅವನಿಗೆ ಥ್ಯಾಂಕ್ಸ್ ಹೇಳಿ ಬರಬೇಕು ಎಂದು ಹೊರಡುತ್ತಾನೆ, ಅದಕ್ಕೆ ಪದ್ಮನಾಭ ಕೂಡ ಥ್ಯಾಂಕ್ ಹೇಳೋದು ನಮ್ಮ ಧರ್ಮ ಎಂದು ಸುಬ್ಬು ಬಳಿ ಅವನ ಮನೆಗೆ ಹೋಗಿ ಥ್ಯಾಂಕ್ಸ್ ಹೇಳಿ ಬಾ ಎಂದು ಕಳುಹಿಸುತ್ತಾರೆ. ಅಷ್ಟೊತ್ತಿಗೆ ವರಲಕ್ಷ್ಮೀ ತಾನು ಬರುವುದಾಗಿ ಹೇಳಿ ಸುಬ್ಬು ಜೊತೆ ವರದನ ಮನೆಗೆ ಹೊರಟು ನಿಲ್ಲುತ್ತಾಳೆ.

ಸಾಲಿಗ್ರಾಮ ಹೋಗೋದು ನಾಳೆನೇ ಎಂದ ವೀರೇಂದ್ರ

ಮಿನಿಸ್ಟರ್ ವೀರೇಂದ್ರ ಮನೆಯಲ್ಲಿ ರಾತ್ರಿ ಊಟ ಮಾಡುತ್ತಿರುವಾಗ ಒಂದು ವಿಚಾರ ಹೇಳುತ್ತಾರೆ ಇದರಿಂದ ಶ್ರಾವಣಿ ಸಂಭ್ರಮದಲ್ಲಿ ತೇಲಾಡಿದ್ರೆ, ವಿಜಯಾಂಬಿಕಾ ಅಸಮಾಧಾನದಲ್ಲಿ ಕುದಿಯುತ್ತಿರುತ್ತಾಳೆ. ಅದೇನಪ್ಪಾ ವಿಷ್ಯಾ ಅಂದ್ರೆ ಸಾಲಿಗ್ರಾಮಕ್ಕೆ ನಾಳೆನೇ ಹೋಗೋದು ಎಂಬುದು. ‘ನರಸಯ್ಯನವರು ಕಾಲ್ ಮಾಡಿದ್ರು, ನಾಡಿದ್ದೇ ಪುಷ್ಕರಣಿ ಉತ್ಸವ ಅಂತೆ, ನಾಳೆನೇ ನಾವೆಲ್ಲ ಹೊರಡಬೇಕಾಗುತ್ತದೆ. ನಿಮಗೆಲ್ಲಾ ತಡವಾಗಿ ಹೇಳ್ತಾ ಇರೋದಕ್ಕೆ ಕ್ಷಮೆ ಇರಲಿ. ನಾನು ಕೆಲಸದ ಗಡಿಬಿಡಿಯಲ್ಲಿ ಎಲ್ಲವನ್ನು ಹೇಳೋದು ಮರೆತಿದ್ದೆ. ಎಲ್ಲರೂ ಬೆಳಿಗ್ಗೆ ಬೇಗ ರೆಡಿ ಆಗಿ‘ ಎಂದು ಸಲಹೆ ನೀಡುತ್ತಾರೆ. ಆಗ ಸುರೇಂದ್ರ ನಾಳೆನೆ ಅಂದ್ರೆ ಹೇಗೆ ಅಣ್ಣ, ಕೆಲಸಗಳ ಕಥೆ ಏನು ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ವೀರೇಂದ್ರ ‘ನನ್ನ ಮನಸ್ಸಿಗೆ ಯಾಕೋ ಈ ವಾರದಲ್ಲಿ ನಾವು ಸಾಲಿಗ್ರಾಮಕ್ಕೆ ಹೋಗಬೇಕು ಎಂದು ಅನ್ನಿಸ್ತಾ ಇತ್ತು, ಆ ಕಾರಣಕ್ಕೆ ಎಲ್ಲಾ ಕೆಲಸವನ್ನು ಮುಗಿಸಿದ್ದೇನೆ, ಉಳಿದ ಕೆಲಸಗಳು ಸುಬ್ಬು ಮುಗಿಸಿರುತ್ತಾನೆ. ನಾವು ಸಾಲಿಗ್ರಾಮಕ್ಕೆ ಹೋಗಲು ಯಾವುದೇ ತೊಂದರೆ ಇಲ್ಲ‘ ಎಂದು ಹೇಳಿ ತಮ್ಮನ ಮನಸ್ಸಿಗೆ ನೆಮ್ಮದಿಯಾಗುವಂತೆ ಮಾಡುತ್ತಾರೆ. ಜೊತೆಗೆ ನಾವು ಸಾಲಿಗ್ರಾಮದಲ್ಲಿ ಹೀಗೆ ಇರುವುದು ಬೇಡ, ಸರ್ಕಾರಿ ಗಾಡಿ ಬಳಕೆ ಬೇಡ, ಎಸ್ಕಾರ್ಟ್ ಕೂಡ ಹೆಚ್ಚಿನ ಅಗತ್ಯವಿಲ್ಲ ಎಂದು ಹೇಳಿ ತನ್ನ ಎಂದಿನ ಸರಳತೆ ಪ್ರದರ್ಶಿಸುತ್ತಾರೆ ಮಿನಿಸ್ಟರ್ ವೀರೇಂದ್ರ. ಸಾಲಿಗ್ರಾಮಕ್ಕೆ ಹೋಗುವ ವಿಚಾರ ಹೇಳಿ ಶ್ರಾವಣಿ ಮನಸ್ಸು ಸಂಭ್ರಮದಲ್ಲಿ ಕುಣಿಯುತ್ತದೆ. ಮಾತ್ರವಲ್ಲ ತನ್ನ ಮನಸ್ಸಿನಲ್ಲಿರುವ ಹತ್ತಾರು ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರ ಸಿಗುತ್ತೆ ಅಂತ ಶ್ರಾವಣಿ ಅಂದುಕೊಳ್ಳುತ್ತಿದ್ದರೆ, ವಿಜಯಾಂಬಿಕಾ ಮಾತ್ರ ಕೋಪ ಅಸಮಾಧಾನದಲ್ಲಿ ಕುದಿಯುತ್ತಿರುತ್ತಾಳೆ.

ವರದ–ವರಲಕ್ಷ್ಮೀ ವಿಚಾರವಾಗಿ ಇಂದ್ರಮ್ಮನ ಮನಸ್ಸು ಬದಲಿಸುವ ಯತ್ನದಲ್ಲಿ ಶ್ರೀವಲ್ಲಿ

ಇತ್ತ ವರದನಿಗೆ ಥ್ಯಾಂಕ್ಸ್ ಹೇಳಬೇಕು ಎಂದುಕೊಂಡು ವರಲಕ್ಷ್ಮೀ–ಸುಬ್ಬು ಇಂದ್ರಮ್ಮನ ಮನೆ ಬಳಿ ಅಂದ್ರೆ ಅತ್ತ ಶ್ರೀವಲ್ಲಿ ಅಣ್ಣನ ಪರವಾಗಿ ಅಮ್ಮನ ಜೊತೆ ಮಾತನಾಡುತ್ತಿರುತ್ತಾಳೆ. ವರದನಿಗೆ ಇಂದ್ರಮ್ಮ ತನ್ನ ಊರಿನಿಂದ ಹಳ್ಳಿ ಹುಡುಗಿಯೊಬ್ಬಳನ್ನು ಮದುವೆ ಮಾಡಿಸುವ ವಿಚಾರ ಹೇಳುತ್ತಾಳೆ. ಇದರಿಂದ ಕೋಪಗೊಳ್ಳುವ ವರದ ತಾನು ಮದುವೆ ಅಂತಾದ್ರೆ ಇದು ವರಲಕ್ಷ್ಮೀಯನ್ನು ಮಾತ್ರ, ಅವಳ ಜೊತೆ ಮದುವೆ ಆಗಿಲ್ಲ ಅಂದ್ರೆ ಜೀವನ ಪೂರ್ತಿ ಹೀಗೆ ಇದ್ದು ಬಿಡುತ್ತೇನೆ ಎಂದು ದೃಢನಿರ್ಧಾರದಿಂದ ಹೇಳುತ್ತಾನೆ. ಆದರೆ ಶ್ರೀವಲ್ಲಿ ಮಾತ್ರ ಅಣ್ಣನ ಪರವಾಗಿ ನಿಂತು ವರಲಕ್ಷ್ಮೀನೇ ಈ ಇವನಿಗೆ ಸರಿಯಾದ ಜೋಡಿ. ಯಾಕಂದ್ರೆ ಅವಳು ಓದಿಕೊಂಡಿದ್ದಾಳೆ. ಲೆಕ್ಕಾಚಾರ ಗೊತ್ತು, ನಿನ್ನ ನಂತರ ಈ ಮನೆ ಸಂಭಾಳಿಸಿಕೊಂಡು ಹೋಗಲು ವರಲಕ್ಷ್ಮೀಗಿಂತ ಒಳ್ಳೆ ಹುಡುಗಿ ನಿನಗೆ ಸಿಗೊಲ್ಲ ಅಮ್ಮ ಮನವೊಲಿಸಲು ಪ್ರಯತ್ನ ಮಾಡುತ್ತಾಳೆ. ಮನೆ ಹೊರಗೆ ನಿಂತು ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಸುಬ್ಬು ಹಾಗೂ ವರಲಕ್ಷ್ಮೀ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿರುತ್ತಾರೆ.

ಅಮ್ಮನ ಮನವೊಲಿಸಿ ವರಲಕ್ಷ್ಮೀ–ವರದ ಮದುವೆಗೆ ಒಪ್ಪಿಗೆ ಸಿಗುವಂತೆ ಮಾಡ್ತಾಳಾ ಶ್ರೀವಲ್ಲಿ, ಶ್ರಾವಣಿ ಅಂದುಕೊಂಡಂತೆ ಅವಳ ಮನಸ್ಸಿನ ಎಲ್ಲಾ ಪ್ರಶ್ನೆಗಳಿಗೂ ಸಾಲಿಗ್ರಾಮದಲ್ಲಿ ಉತ್ತರ ಸಿಗುತ್ತಾ, ಸಾಲಿಗ್ರಾಮಕ್ಕೆ ಹೊರಟ ವಿಜಯಾಂಬಿಕಾ ಮುಂದಿನ ಪ್ಲಾನ್ ಏನಿರಬಹುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.