ಬಿಗ್‌ಬಾಸ್ ಕನ್ನಡ ಆಂಗ್ಲಮಯ, ರೂಪೇಶ್ ರಾಜಣ್ಣ ಹೇಳಿದ್ಮೇಲೆ ಪರಿಸ್ಥಿತಿ ಬದಲಾಯ್ತ; ಕನ್ನಡ ರಾಜ್ಯೋತ್ಸವ ನವೆಂಬರ್ 1ಕ್ಕೆ ಸೀಮಿತವೇ?
ಕನ್ನಡ ರಾಜ್ಯೋತ್ಸವ ಹತ್ತಿರದಲ್ಲಿದೆ. ನವೆಂಬರ್ 1ರಂದು ಎಲ್ಲೆಲ್ಲೂ ಕನ್ನಡದ ಕಹಳೆ ಮೊಳಗಲಿದೆ. ಕನ್ನಡ ಹಬ್ಬ ಹತ್ತಿರದಲ್ಲಿರುವಾಗಲೇ ಕನ್ನಡದ ಪ್ರಮುಖ ರಿಯಾಲಿಟಿ ಶೋ ಬಿಗ್‌ಬಾಸ್ ಹೊಸ ಅಧ್ಯಾಯ ಮಾತ್ರ ಇಂಗ್ಲಿಷ್‌ಮಯವಾಗಿರುವುದು ಕನ್ನಡಪ್ರಿಯರಿಗೆ ಬೇಸರತರಿಸಿದೆ. ಇತ್ತೀಚೆಗೆ ರೂಪೇಶ್ ರಾಜಣ್ಣ ಈ ಕುರಿತು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ 11 ಹೊಸ ಅಧ್ಯಾಯದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಇಂಗ್ಲಿಷ್ ಮಾತನಾಡುತ್ತಿದ್ದಾರೆ. ಲಾಯರ್ ಜಗದೀಶ್ ಅಂತು ಲಾ ಪಾಯಿಂಟ್‌ಗಳೊಂದಿಗೆ ಅಚ್ಚ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದಾರೆ. ಉಳಿದವರೂ ಸ್ಪರ್ಧೆಗೆ ಬಿದ್ದಂತೆ ಇಂಗ್ಲಿಷ್ ಮಾತನಾಡುತ್ತಿದ್ದಾರೆ. ಇರೋದ್ರಲ್ಲಿ ಚೈತ್ರಾ ಕುಂದಾಪುರ, ಮಾನಸ, ಗೋಲ್ಡ್ ಸುರೇಶ್, ಧನರಾಜ್ ಆಚಾರ್ ಸೇರಿದಂತೆ ಕೆಲವರು ಮಾತ್ರ ಕನ್ನಡದಲ್ಲಿ ಹೆಚ್ಚು ಸಮಯ ಮಾತನಾಡುತ್ತಾರೆ. ಇತ್ತೀಚೆಗೆ ರೂಪೇಶ್ ರಾಜಣ್ಣ ಇದೇ ವಿಚಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಬೇಸರ ವ್ಯಕ್ತಪಡಿಸಿದದ್ದರು. ನವೆಂಬರ್ 1 ಕನ್ನಡ ರಾಜ್ಯೋತ್ಸವ ಹತ್ತಿರದಲ್ಲಿರುವಾಗಲೇ ಬಿಗ್‌ಬಾಸ್ ಕನ್ನಡ ಇಂಗ್ಲಿಷ್‌ಮಯವಾಗಿದೆ. ಬಿಗ್‌ಬಾಸ್ ಕನ್ನಡ ಹೊಸ ಅಧ್ಯಾಯ ಎನ್ನುವ ಬದಲು ಬಿಬಿಕೆ ಚಾಪ್ಟರ್ 1 ಎಂದು ಹೆಸರಿಡಬಹುದಿತ್ತು (ಈಗ ಬಹುತೇಕ ಸಿನಿಮಾಗಳು ಚಾಪ್ಟರ್ 1, ಚಾಪ್ಟರ್ 2 ಎಂದೇ ಬರುತ್ತಿವೆ).
ಕನ್ನಡದಲ್ಲಿ ಮಾತನಾಡದೆ ಇದ್ದರೆ ಏನು ತೊಂದರೆ?
ಈಗ ಇಂಗ್ಲಿಷ್ ಬಳಸದೆ ಕನ್ನಡ ಮಾತನಾಡುವುದು ಕಷ್ಟ ಎನ್ನುವುದು ಕೆಲವರ ಅಭಿಪ್ರಾಯ. ಆದರೆ, ಕನ್ನಡದ ನಡುವೆ ಕೆಲವು ಇಂಗ್ಲಿಷ್ ಪದಗಳು ಬಂದರೆ ಸಹಿಸಿಕೊಳ್ಳಬಹುದು. ಆದರೆ, ಇಂಗ್ಲಿಷ್ ಮಾತುಗಳ ನಡುವೆ ಬೆರಳೆಣಿಕೆಯ ಕನ್ನಡ ಪದಗಳು ಬಂದರೆ ನಿಜವಾದ ಕನ್ನಡ ಪ್ರೇಕ್ಷಕರಿಗೆ ಸಹ್ಯವಾಗಬಹುದೇ? ಬಿಬಿಕೆಯನ್ನು ನಗರ, ಹಳ್ಳಿ, ಗ್ರಾಮ, ಕುಗ್ರಾಮದಲ್ಲಿ ಇಂಗ್ಲಿಷ್ ಬಾರದವರೂ ನೋಡುತ್ತಾರೆ ಎನ್ನುವುದನ್ನು ಚಾನೆಲ್ ಮರೆತಂತೆ ಇದೆ.
ಬಿಗ್‌ಬಾಸ್ ಕನ್ನಡದಲ್ಲಿ ಕನ್ನಡದ ಕಡೆಗಣನೆ ಸೀಸನ್ 10ರಲ್ಲಿಯೇ ಆರಂಭವಾಗಿತ್ತು. ಇದಕ್ಕೂ ಹಿಂದಿನ ಸೀಸನ್‌ಗಳಲ್ಲಿ ಹೆಚ್ಚು ಇಂಗ್ಲಿಷ್ ಪದ ಬಳಕೆ ಮಾಡಿದವರಿಗೆ ಎಚ್ಚರಿಕೆ ನೀಡಲಾಗುತ್ತಿತ್ತು. "ಬಿಗ್‌ಬಾಸ್ ಮನೆಯಲ್ಲಿ ಕನ್ನಡ ಹೊರತುಪಡಿಸಿ ಹೆಚ್ಚು ಇಂಗ್ಲಿಷ್ ಮಾತನಾಡುವುದು ಪುನರಾವರ್ತನೆಯಾಗುತ್ತಿದೆ. ಅತಿಯಾಗಿ ಇಂಗ್ಲಿಷ್ ಬಳಕೆ ಮಾಡುವವರನ್ನು ನೇರವಾಗಿ ನಾಮಿನೇಟ್ ಮಾಡಲಾಗುತ್ತದೆ" ಎಂದು ಬಿಗ್‌ಬಾಸ್ ಎಚ್ಚರಿಕೆ ನೀಡಿದ್ದರು. ಇದೇ ಕಾರಣದಿಂದ ಸ್ನೇಹಿತ್ ನೇರವಾಗಿ ನಾಮಿನೇಟ್ ಆಗಿದ್ದರು.
ಕಳೆದ ಸೀಸನ್‌ನಲ್ಲಿ ಇಂಗ್ಲಿಷ್ ಮಾತನಾಡುವುದಿದ್ದರೆ ಮೈಕಲ್ ಮಾತನಾಡಬೇಕಿತ್ತು. ಆದರೆ, ಕನ್ನಡ ಸ್ಪರ್ಧಿಗಳು ನಾಚುವಂತೆ ಅವರು ಕನ್ನಡ ಮಾತನಾಡುತ್ತಿದ್ದರು. ಇದಕ್ಕಾಗಿ ಕಿಚ್ಚನ ಚಪ್ಪಾಳೆಯೂ ಪಡೆದಿದ್ದರು. ಒಳ್ಳೆ ಹುಡುಗ ಪ್ರಥಮ್ ಸೀಸನ್ ನೆನಪಿಸಿಕೊಂಡರೂ ಅಲ್ಲಿ ಕನ್ನಡದ ಕಂಪು ಕಿವಿಗೆ ಇಂಪು ನೀಡುತ್ತಿತ್ತು.
ರೂಪೇಶ್ ರಾಜಣ್ಣ ಎಚ್ಚರಿಕೆ
ಬಿಗ್‌ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿದ್ದ ಕನ್ನಡಪ್ರೇಮಿ ರೂಪೇಶ್ ರಾಜಣ್ಣ ಈ ಕುರಿತಂತೆ ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್‌ಗೆ ಎಚ್ಚರಿಕೆ ನೀಡಿದ್ದರು. "ಬಿಗ್‌ಬಾಸ್‌ನಲ್ಲಿ ಕನ್ನಡದ ಬಳಕೆ ಹೆಚ್ಚು ಆಗುತ್ತಿಲ್ಲ. ಹಿಂದೆ ನಾವು ಇದ್ದ ಸಮಯದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಕನ್ನಡ ಹಾಡು ಹಾಕುತ್ತಿದ್ದರು. ಕಳೆದ ಸೀಸನ್‌ನಿಂದ ಈ ರೀತಿಯ ಸ್ಥಿತಿ ಇಲ್ಲ. ಈ ಬಾರಿಯ ಸ್ಪರ್ಧಿಗಳಿಗೂ ಈ ವಿಚಾರ ಗೊಂದಲವಾಗುತ್ತಿದೆ. ಬಿಗ್‌ಬಾಸ್ ಶೋ ಸರಿಯಾಗಿದೆ. ಆದರೆ, ಅಲ್ಲಿನ ಒಬ್ಬರಿಗೆ ಸಲಹೆ ನೀಡಿದರೂ ಸ್ಪಂದಿಸುತ್ತಿಲ್ಲ. ಇದೇ ಕಾರಣಕ್ಕೆ ಸುದೀಪ್ ಕೂಡ ಬೇಸರದಿಂದ ಟ್ವೀಟ್ ಮಾಡಿದ್ದಾರೆ. ಇನ್ನು ತಪ್ಪಾಗೋಲ್ಲ, ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಬಿಗ್‌ಬಾಸ್ ಒಪ್ಪಿದ್ದಾರೆ" ಎಂದು ರೂಪೇಶ್ ರಾಜಣ್ಣ ಲೈವ್‌ನಲ್ಲಿ ತಿಳಿಸಿದ್ದರು.
ಇದಾದ ಬಳಿಕ ದೊಡ್ಮನೆಯೊಳಗೆ ಕನ್ನಡ ಬಳಕೆ ತುಸು ಹೆಚ್ಚಾಗಿದೆ ಎನ್ನಬಹುದು. ಜಗಳದ ಮನೆಯಾಗಿರುವ ಬಿಗ್‌ಬಾಸ್ ಮನೆಯೊಳಗೆ ಅಚ್ಚಕನ್ನಡದಲ್ಲಿ “ಹೋಗಲೈ, ಬಾರಲೇ” ಎಂಬ ಆರ್ಭಟ ಕೇಳಿಸುತ್ತಿದೆ.
ಮುಂದೆ ಏನಾಗಬಹುದು?
ನವೆಂಬರ್ 1 ಹತ್ತಿರ ಬರುತ್ತಿದ್ದಂತೆ ಕನ್ನಡ ಪ್ರೇಮ ಜಾಗೃತವಾಗಬಹುದು. ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ಆಜ್ಞೆಯೂ ಕೇಳಿಬರಬಹುದು. ನವೆಂಬರ್ ತಿಂಗಳಲ್ಲಿ ಎಲ್ಲೆಲ್ಲೂ ಕನ್ನಡ ಪ್ರೇಮ ಜಾಗೃತವಾಗುವಂತೆ, ಉಳಿದ ಸಮಯದಲ್ಲಿ ಎಲ್ಲರೂ ಮರೆಯುವಂತೆ ಕೆಲವು ದಿನ ಕನ್ನಡ ಪ್ರೇಮ ಕಾಣಿಸಬಹುದು. ಅಂದಹಾಗೆ, ಇಲ್ಲಿ ನಡೆಯುತ್ತಿರುವ ಈ ವಿದ್ಯಮಾನಕ್ಕೆ ಚಾನೆಲ್‌ವೊಂದನ್ನೇ ಹೊಣೆ ಮಾಡುವುದು ತಪ್ಪಾಗುತ್ತದೆ. ಸ್ಪರ್ಧಿಗಳಲ್ಲಿ ಒಬ್ಬರಾದರೂ ಕನ್ನಡಕ್ಕಾಗಿ ಧ್ವನಿ ಎತ್ತಿದ್ದರೆ "ಕನ್ನಡದಲ್ಲಿ ಮಾತನಾಡಿ" ಎಂಬ ವಿಷಯವನ್ನೇ ಹೈಲೈಟ್ ಮಾಡುತ್ತಿದ್ದರೆ ಸಾಕಿತ್ತು. ಬಿಗ್‌ಬಾಸ್ ಮನೆಯೊಳಗೆ ಜಗಳವೇ ಹೈಲೈಟ್ ಆಗುತ್ತಿದೆ. ಇಲ್ಲಿ ಕನ್ನಡಕ್ಕಾಗಿ ಜಗಳವಾಡುವವರು ಒಬ್ಬರಾದರೂ ಇರಬೇಕಿತ್ತು. ಇನ್ನಾದರೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕನ್ನಡ ಪ್ರೇಮಿಗಳಿಗೆ ಪ್ರವೇಶ ನೀಡುವ ಆಯ್ಕೆ ಚಾನೆಲ್‌ಗಿದೆ.
ವಿಭಾಗ