ಸಮುದ್ರ, ಹಣದ ಬಗ್ಗೆ ಡೈಲಾಗ್ ಹೇಳ್ತಾ ಒಟಿಟಿಗೆ ಬಂದೇ ಬಿಟ್ಟ ಲಕ್ಕಿ ಭಾಸ್ಕರ್;ಕನ್ನಡದಲ್ಲೂ ಸ್ಟ್ರೀಮ್ ಆಗ್ತಿದೆ ದುಲ್ಕರ್ ಸಲ್ಮಾನ್ ಸಿನಿಮಾ
Lucky Bhaskar Ott Update: ದುಲ್ಕರ್ ಸಲ್ಮಾನ್ , ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಲಕ್ಕಿ ಭಾಸ್ಕರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 31 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು.
Lucky Bhaskar Ott Update: ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಭಾಸ್ಕರ್ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಲಕ್ಕಿ ಹೆಸರಿಗೆ ತಕ್ಕಂತೆ ಈ ಸಿನಿಮಾ ನಿರ್ಮಾಪಕರಿಗೆ ಕೂಡಾ ಲಕ್ಕಿ ಎನಿಸಿದೆ. ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಒಳ್ಳೆ ಬೆಳೆ ತೆಗೆದಿದೆ. 100 ಕೋಟಿ ರೂ ಕ್ಲಬ್ ಸೇರಿದೆ. ಮತ್ತೊಂದು ಹಿಟ್‌ಗಾಗಿ ಕಾಯುತ್ತಿದ್ದ ದುಲ್ಕರ್ ಸಲ್ಮಾನ್‌ಗೆ ಸಕ್ಸಸ್ ಸಿಕ್ಕಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗ್ತಿದೆ ಲಕ್ಕಿ ಭಾಸ್ಕರ್ ಸಿನಿಮಾ
ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆಗಿ 30 ದಿನದೊಳಗೆ ಒಟಿಟಿಗೆ ಎಂಟ್ರಿ ಕೊಡುತ್ತದೆ. ಲಕ್ಕಿ ಭಾಸ್ಕರ್ ಸಿನಿಮಾ ಯಾವಾಗ ಒಟಿಟಿಗೆ ಬರಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದರು. ಈ ಸಿನಿಮಾ ಸ್ಟ್ರೀಮಿಂಗ್ ಹಕ್ಕನ್ನು ಒಟಿಟಿ ಖರೀದಿಸಿದೆ ಎನ್ನಲಾದರೂ ಯಾವ ದಿನ ಪ್ರಸಾರವಾಗಬಹುದು ಎಂದು ಸರಿಯಾದ ಮಾಹಿತಿ ಇರಲಿಲ್ಲ. ಆದರೆ 2 ದಿನಗಳ ಹಿಂದೆ ಚಿತ್ರತಂಡ ಹಾಗೂ ನೆಟ್‌ಫ್ಲಿಕ್ಸ್ ಲಕ್ಕಿ ಭಾಸ್ಕರ್ ನವೆಂಬರ್ 28ರಿಂದ ಸ್ಟ್ರೀಮ್ ಆಗ್ತಿದೆ ಎಂದು ಅಧಿಕೃತ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿತ್ತು. ಅದರಂತೆ ಇಂದು ಬೆಳಗ್ಗೆಯಿಂದಲೇ ಲಕ್ಕಿ ಭಾಸ್ಕರ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗ್ತಿದೆ. ದುಲ್ಕರ್ ಸಲ್ಮಾನ್ ಅಭಿಮಾನಿಗಳು ಸಿನಿಮಾ ನೋಡಲು ಎಕ್ಸೈಟ್ ಆಗಿದ್ದಾರೆ. ಲಕ್ಕಿ ಭಾಸ್ಕರ್ ಸಿನಿಮಾ ಮಲಯಾಳಂ ಮಾತ್ರವಲ್ಲದೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗ್ತಿದೆ.
ಲಕ್ಕಿ ಭಾಸ್ಕರ್ ಸಿನಿಮಾವನ್ನು ಸಿತಾರಾ ಎಂಟರ್‌ಟೈನ್ಮೆಂಟ್, ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿ ಸೂರ್ಯದೇವರ ನಾಗವಂಶಿ ಹಾಗೂ ಸಾಯಿ ಸೌಜನ್ಯ ಜೊತೆ ಸೇರಿ ನಿರ್ಮಿಸಿದ್ದಾರೆ. ವೆಂಕಿ ಅಟ್ಲೂರಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆಗೆ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ರಾಮ್ಕಿ, ಸೂರ್ಯ ಶ್ರೀನಿವಾಸ್, ಸಚಿನ್ ಖೇಡೇಕರ್, ಸಾಯಿ ಕುಮಾರ್, ಸುಧಾ, ರಘು ಬಾಬು, ಹೈಪರ್ ಆದಿ ಹಾಗೂ ಇನ್ನಿತರರು ನಟಿಸಿದ್ದಾರೆ.
100 ಕೋಟಿ ರೂ. ಕ್ಲಬ್ ಸೇರಿರುವ ಸಿನಿಮಾ
ಲಕ್ಕಿ ಭಾಸ್ಕರ್ ಸಿನಿಮಾ ಇದುವರೆಗೂ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಿನಿಮಾ ಕನ್ನಡ ವರ್ಷನ್ ಮೂಲಕ 6.5 ಕೋಟಿ ರೂ. ತೆಲುಗು ಭಾಷೆಯಲ್ಲಿ 15 ಕೋಟಿ ರೂ. ಮಲಯಾಳಂನಲ್ಲಿ 22 ಕೋಟಿ ರೂ. ತಮಿಳಿನಲ್ಲಿ 16 ಕೋಟಿ ರೂ. ಹಾಗೂ ವಿದೇಶದಲ್ಲಿ 15 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಜೊತೆಗೆ ಡಿಜಿಟಲ್, ಸ್ಯಾಟಲೈಟ್ ರೈಟ್ಸ್‌ನಿಂದ ಕೂಡಾ ಭಾರೀ ಲಾಭ ಮಾಡಿದೆ.
ಚಿತ್ರದ ನಾಯಕ ಭಾಸ್ಕರ್ ಕುಮಾರ್ ಒಬ್ಬ ಸಾಮಾನ್ಯ ಬ್ಯಾಂಕ್ ಉದ್ಯೋಗಿ. ಕೌಟುಂಬಿಕ ಸಮಸ್ಯೆಗಳಿಂದಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹಣಕ್ಕಾಗಿ ಆಂಟೋನಿ ಎಂಬ ವ್ಯಕ್ತಿಯೊಂದಿಗೆ ಕೈಜೋಡಿಸಿ ಅಕ್ರಮ ವ್ಯವಹಾರಗಳ ಮೂಲಕ ಕೋಟಿಗಟ್ಟಲೆ ಸಂಪಾದಿಸುತ್ತಾನೆ. ಬ್ಯಾಂಕ್ ಹಗರಣದಲ್ಲಿ ಭಾಗಿಯಾಗುತ್ತಾನೆ. ಭಾಸ್ಕರ್ ಹಗರಣಗಳು ಬಹಿರಂಗವಾಗುವುದಾ? ಭಾಸ್ಕರ್ ಹಣ ಸಂಪಾದನೆಗೆ ಬಿದ್ದು ಕುಟುಂಬವನ್ನು ನಿರ್ಲಕ್ಷಿಸಿದ್ದ ಪರಿಣಾಮ ಏನು? ಎಲ್ಲಾ ಸಮಸ್ಯೆಗಳಿಂದ ಭಾಸ್ಕರ್ ಹೇಗೆ ಹೊರ ಬರುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯಬೇಕೆಂದರೆ ನೀವು ಸಿನಿಮಾ ನೋಡಬೇಕು. ಮಹಾನಟಿ ಮತ್ತು ಸೀತಾರಾಮಂ ಸಿನಿಮಾ ನಂತರ, ದುಲ್ಕರ್ ಸಲ್ಮಾನ್, ಲಕ್ಕಿ ಭಾಸ್ಕರ್ ಮೂಲಕ ತೆಲುಗಿನಲ್ಲಿ ಹ್ಯಾಟ್ರಿಕ್ ಹಿಟ್ ಪಡೆದಿದ್ದಾರೆ. ಪ್ರಸ್ತುತ ದುಲ್ಕರ್ ಸಲ್ಮಾನ್, ತೆಲುಗಿನಲ್ಲಿ 2 ಮಲಯಾಳಂನಲ್ಲಿ 1 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಮಲಯಾಳಂ ಚಿತ್ರಗಳಿಗಿಂತ ಹೆಚ್ಚಾಗಿ ಟಾಲಿವುಡ್‌ನತ್ತ ಗಮನ ಹರಿಸಿದ್ದಾರೆ.