kempegowda statue: ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸೇರಿದ ಬೆಂಗಳೂರು ವಿಮಾನ ನಿಲ್ದಾಣದ ನಾಡಪ್ರಭು ಕೆಂಪೇಗೌಡ ಪ್ರತಿಮೆ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯು ಹೊಸ ದಾಖಲೆ ಸೃಷ್ಟಿಸಿದೆ. ಸ್ಟೇಟ್ ಆಫ್ ಪ್ರಾಸ್ಪರೆಟಿ ಹೆಸರಿನಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ನಗರ ಸ್ಥಾಪಕರ ವಿಭಾಗದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ.
ಬೆಂಗಳೂರು: ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯು ಹೊಸ ದಾಖಲೆ ಸೃಷ್ಟಿಸಿದೆ. ಸ್ಟೇಟ್ ಆಫ್ ಪ್ರಾಸ್ಪರೆಟಿ ಹೆಸರಿನಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ನಗರ ಸ್ಥಾಪಕರ ವಿಭಾಗದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ. ಇದು ನಗರ ಸ್ಥಾಪಕರ ವಿಭಾಗದ ಪ್ರಥಮ ಮತ್ತು ಈ ವಿಭಾಗದಲ್ಲಿ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ "ಪ್ರಗತಿಯ ಪ್ರತಿಮೆ"ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬುದು ನಮಗೆ ಹೆಮ್ಮೆಯ ವಿಷಯ.108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನಾಳೆ ಅಂದರೆ ನವೆಂಬರ್ 11(ಶುಕ್ರವಾರ)ರಂದು ಬೆಂಗಳೂರು ನಗರ ಸಂಸ್ಥಾಪಕ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆಗೊಳ್ಳಲಿದೆ. 'ಪ್ರಗತಿಯ ಪ್ರತಿಮೆ' ಎಂದು ಹೆಸರಿಸಲಾಗಿರುವ ಈ ಬೃಹತ್ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಕರ್ನಾಟಕ ಸರಕಾರದಿಂದ ನಿರ್ಮಾಣಗೊಂಡಿರುವ, ಪ್ರಗತಿಯ ಪ್ರತಿಮೆ ಎಂದು ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡ ಪ್ರತಿಮೆಯು 108 ಅಡಿ ಎತ್ತರವಿದ್ದು, 4 ಟನ್ ತೂಕದ ಖಡ್ಗವನ್ನು ನಾಡಪ್ರಭು ಕೆಂಪೇಗೌಡರ ಕೈಗೆ ಅಳವಡಿಸಲಾಗಿದೆ. ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗ 23 ಎಕರೆಯಲ್ಲಿ ಬೃಹತ್ ಪಾರ್ಕ್ ಇದೆ. ಕೆಂಪೇಗೌಡರ ಬದುಕಿನ ಕತೆಗಳನ್ನು ತಿಳಿಸುವ ವಿಶೇಷ ಥೀಮ್ ಪಾರ್ಕ್ ಕೂಡ ಇಲ್ಲಿದೆ.
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಈ ಕೆಂಪೇಗೌಡ ಪ್ರತಿಮೆ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಟರ್ಮಿನಲ್ 2ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯದ ಅನುಭವ ನೀಡಲು, 'ವಾಕ್ ಇನ್ ದಿ ಗಾರ್ಡನ್' ಹೆಸರಿನ ಟರ್ಮಿನಲ್ 2ನ್ನು ನಿರ್ಮಿಸಲಾಗಿದೆ.