ಬೆಂಗಳೂರಿನಲ್ಲಿ ಪೊಲೀಸರಂತೆ ನಟಿಸಿ 15 ಲಕ್ಷ ರೂ ಸುಲಿಗೆ ಮಾಡಿದ ದುಷ್ಕರ್ಮಿಗಳು; ಇಂಜಿನಿಯರಿಂಗ ಸೀಟ್ ಬ್ಲಾಕಿಂಗ್ ದಂಧೆಯ ಆರೋಪಿಗಳು ಅರೆಸ್ಟ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ. ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಬಳಿ ಇದ್ದ 15 ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಮತ್ತೊಂದೆಡೆ ಇಂಜಿನಿಯರಿಂಗ್ ಸೀಟು ದಂಧೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಎರಡೂ ಪ್ರಕರಣಗಳ ವಿವರ ಇಲ್ಲಿದೆ.
ಬೆಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಬೆದರಿಸಿ 15 ಲಕ್ಷ ರೂಪಾಯಿ ವಸೂಲಿ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದ ಮಟನೂರಿನ ಕೆ.ಹಾಶೀಮ್ ಎಂಬುವರು ಈ ಸಂಬಂಧ ದೂರು ನೀಡಿದ್ದು, ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಹಾಶೀಮ್ ಅವರು ಕುಟುಂಬದ ಸದಸ್ಯರ ಜತೆ ಮಟನೂರಿನಲ್ಲಿ ನೆಲೆಸಿದ್ದು, ಸಂಬಂಧಿಕರ ಪಾಲುದಾರಿಕೆಯಲ್ಲಿ ಜನತಾ ಬೇಕರಿ ನಡೆಸುತ್ತಿದ್ದಾರೆ. ದೂರುದಾರರ ಪುತ್ರಿ ಫಾತಿಮಾ ಹಸ್ನತ್ ಅವರನ್ನು ಬೆಂಗಳೂರಿನ ಹೆಬ್ಬಾಳದ ನಿವಾಸಿ ಶಮ್ಮಾಸ್ ಅಹ್ಮದ್ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಹಾಶೀಮ್ ಅವರು ಬೆಂಗಳೂರಿನಲ್ಲಿ ಬೇಕರಿ ತೆರೆಯಲು ಸೂಕ್ತ ಅಂಗಡಿ ಹುಡುಕುವಂತೆ ಅಳಿಯನಿಗೆ ತಿಳಿಸಿದ್ದರು. ಶಮ್ಮಾಸ್ ಅಂಗಡಿಯೊಂದನ್ನು ನೋಡಿದ್ದು, ರೂ. 15 ಲಕ್ಷ ಬೇಕಾಗಬಹುದು ಎಂದು ಮಾಹಿತಿ ನೀಡಿದ್ದರು. ಹಾಸೀಮ್ ಅವರು ಮಟನೂರಿನಲ್ಲಿ ವಿವಿಧ ಮೂಲಗಳಿಂದ ಹಣ ಹೊಂದಿಸಿದ್ದರು. ಹೀಗೆ 15 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ನ.28ರಂದು ಕೇರಳದಿಂದ ಬೆಂಗಳೂರಿಗೆ ಬಸ್ನಲ್ಲಿ ಆಗಮಿಸಿದ್ದರು.
ನ.29ರಂದು ಬೆಳಿಗ್ಗೆ 5 ಗಂಟೆಯ ವೇಳೆಗೆ ಸಿಟಿ ಮಾರುಕಟ್ಟೆಯಲ್ಲಿ ಬಸ್ ಇಳಿದು, ಹೆಬ್ಬಾಳದಲ್ಲಿರುವ ಅಳಿಯನ ಮನೆಗೆ ಹೋಗಿದ್ದಾರೆ. ಅಂದೇ ಬೇಕರಿಗಾಗಿ ಅಳಿಯ ನೋಡಿದ್ದ ಭೂಪಸಂದ್ರ ಮತ್ತು ಅಮೃತಹಳ್ಳಿಯಲ್ಲಿ ಅಂಗಡಿಗಳನ್ನು ಪರಿಶೀಲಿಸಿದ್ದಾರೆ. ಎರಡೂ ಸ್ಥಳಗಳೂ ವ್ಯಾಪಾರಕ್ಕೆ ಇಷ್ಟವಾಗದ ಕಾರಣ ಅಂದೇ ರಾತ್ರಿ ಕೇರಳಕ್ಕೆ ವಾಪಸ್ ಹೊರಟಿದ್ದರು.
15 ಲಕ್ಷ ರೂಪಾಯಿ ಹಣವನ್ನೂ ತಮ್ಮ ಜತೆಯಲ್ಲೇ ತೆಗೆದುಕೊಂಡು ಹೊರಟಿದ್ದರು. ಕೇರಳಕ್ಕೆ ತೆರಳಲು ನ.29ರಂದು ರಾತ್ರಿ 7.45ರ ಸುಮಾರಿಗೆ ಸಿಟಿ ಮಾರುಕಟ್ಟೆಗೆ ಬಂದಿದ್ದ ಹಾಶೀಮ್ ಬಸ್ಗಾಗಿ ಕಾಯುತ್ತಿದ್ದರು. ರಾತ್ರಿ 9.3೦ರ ಸುಮಾರಿಗೆ ಸ್ಥಳಕ್ಕೆ ಬಂದ ಮೂವರು ನಾವು ಪೊಲೀಸ್ ಇಲಾಖೆಯವರು. ನಿಮ್ಮ ಬ್ಯಾಗ್ನಲ್ಲಿ ಡ್ರಗ್ಸ್ ಇದೆ ಎಂಬ ಮಾಹಿತಿ ಬಂದಿದ್ದು ಬ್ಯಾಗ್ ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ ಪೊಲೀಸ್ ಠಾಣೆಗೆ ಬರಬೇಕು ಎಂದು ಬಲವಂತವಾಗಿ ಕಾರು ಹತ್ತಿಸಿಕೊಂಡಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಟ್ ಬ್ಲಾಕಿಂಗ್ ದಂಧೆ; ಆರೋಪಿಗಳ ಬಂಧನ
ಎಂಜಿನಿಯರಿಂಗ್ ಕೋರ್ಸ್ಗಳ ಸೀಟ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿಗಳನ್ನು ಮಲ್ಲೇಶ್ವರದ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ(ಸೈಬರ್) ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ನೀಡಿದ ದೂರು ಆಧರಿಸಿ ನವೆಂಬರ್ 13ರಂದು ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಪ್ರಕರಣದ ತನಿಖೆ ನಡೆಸಲಾಗಿತ್ತು. ಕೆಲವು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಸೈಬರ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಲಾಗಿನ್, ಪಾಸ್ವರ್ಡ್, ಗೋಪ್ಯ ಕೀ ಅನ್ನು ಅನಧಿಕೃತವಾಗಿ ಪಡೆದುಕೊಂಡು ಅವರ ಪರವಾಗಿ ಆಯ್ಕೆ ನಮೂದಿಸಿ ಕೆಲವು ಕಾಲೇಜುಗಳಾದ ಬಿಎಂಎಸ್, ಆಕಾಶ್, ನ್ಯೂ ಹೊರೈಜಾನ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಲಾಭ ಮಾಡಿಕೊಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳು ವಂಚಿತರಾಗಿದ್ದಾರೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು.