Bangalore News: ಬೆಂಗಳೂರು ಸಂಚಾರ ದಟ್ಟಣೆಯಿಂದ ಆಗುವ ವಾರ್ಷಿಕ ನಷ್ಟ ಎಷ್ಟಿರಬಹುದು, ಕರ್ನಾಟಕ ಐಟಿ ಸಚಿವರು ಬಿಚ್ಚಿಟ್ಟ ಸತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಸಂಚಾರ ದಟ್ಟಣೆಯಿಂದ ಆಗುವ ವಾರ್ಷಿಕ ನಷ್ಟ ಎಷ್ಟಿರಬಹುದು, ಕರ್ನಾಟಕ ಐಟಿ ಸಚಿವರು ಬಿಚ್ಚಿಟ್ಟ ಸತ್ಯ

Bangalore News: ಬೆಂಗಳೂರು ಸಂಚಾರ ದಟ್ಟಣೆಯಿಂದ ಆಗುವ ವಾರ್ಷಿಕ ನಷ್ಟ ಎಷ್ಟಿರಬಹುದು, ಕರ್ನಾಟಕ ಐಟಿ ಸಚಿವರು ಬಿಚ್ಚಿಟ್ಟ ಸತ್ಯ

ಬೆಂಗಳೂರು ಸಂಚಾರ ದಟ್ಟಣೆಯಿಂದ ನಿತ್ಯ ಸಂಚರಿಸುವವರಿಗೆ ಕಿರಿಕಿರಿ ಆಗುವುದು ಒಂದು ಕಡೆಯಾದರೂ ಇದರಿಂದ ಆರ್ಥಿಕವಾಗಿಯೂ ನಷ್ಟವಾಗುತ್ತಿದೆ. ಇದರ ಪ್ರಮಾಣ ಎಷ್ಟು ಎನ್ನುವುದನ್ನು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಬೆಂಗಳೂರು ಸಂಚಾರ ದಟ್ಟಣೆಯಿಂದ ಆಗುತ್ತಿರುವ ನಷ್ಟದ ಕುರಿತು ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆಯಿಂದ ಆಗುತ್ತಿರುವ ನಷ್ಟದ ಕುರಿತು ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಾರೆ.

ಬೆಂಗಳೂರು: ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನದ ನಗರಗಳಲ್ಲಿ ಸ್ಥಾನ ಪಡೆದಿರುವ ಉದ್ಯಾನ ನಗರಿ ಬೆಂಗಳೂರು ಇನ್ನೂ ಹಲವು ಕಾರಣಗಳಿಂದಲೂ ಹೆಸರು ಪಡೆದಿದೆ. ಅದೂ ಮಿತಿ ಮೀರಿದ ಸಂಚಾರ ದಟ್ಟಣೆಯಿಂದ. ಈ ಕಾರಣಕ್ಕೆ ಬೆಂಗಳೂರಿಗೆ ಕುಖ್ಯಾತಿಯೂ ಬಂದಿದೆ. ಎಷ್ಟೇ ವಾಹನ ದಟ್ಟಣೆ ತಡೆಯಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಂಡರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಮಿತಿ ಮೀರಿದ ಸಂಚಾರ ದಟ್ಟಣೆಯಿಂದ ಬೆಂಗಳೂರಿಗೆ ವಾರ್ಷಿಕವಾಗಿ ಭಾರೀ ನಷ್ಟವೂ ಆಗುತ್ತಿದೆ. ಅದೂ 20,000 ಕೋಟಿ ರೂ,ಗಳ ಆರ್ಥಿಕ ನಷ್ಟ.

ಈ ವಿಷಯವನ್ನು ಅಂಕಿ ಸಂಖ್ಯೆ ಸಮೇತ ಬಹಿರಂಗಪಡಿಸಿದವರು ಕರ್ನಾಟಕ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ.

ಎರಡು ವರ್ಷದ ಹಿಂದೆ ಬೆಂಗಳೂರಿನ ವ್ಯಾಪಾರಿಗಳು ಸಂಚಾರಿ ದಟ್ಟಣೆಯಿಂದ ಆಗುತ್ತಿರುವ ನಷ್ಟದ ಬಗ್ಗೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿದ್ದರು. ಆದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಈಗ ಅದೇ ವಿಚಾರವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಸ್ತಾಪಿಸಿ ನಷ್ಟದ ಪ್ರಮಾಣವನ್ನೂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಖರ್ಗೆ, ಪದೇ ಪದೇ ಸಂಚಾರ ದಟ್ಟಣೆಯು ನಗರಗಳ ಮೇಲೆ ಗಂಭೀರ ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ. ಸುದೀರ್ಘ ಟ್ರಾಫಿಕ್ ಜಾಮ್‌ನಿಂದಾಗಿ ಬೆಂಗಳೂರಿನಲ್ಲಿ ವಾರ್ಷಿಕ 20,000 ಕೋಟಿ ರೂ. ಗೂ ಹೆಚ್ಚು ನಷ್ಟವನ್ನು ಅಂದಾಜಿಸಲಾಗಿದೆ. ನಷ್ಟವು ಸಮಯದ ಮೌಲ್ಯ, ದಟ್ಟಣೆಯಿಂದ ವ್ಯರ್ಥವಾದ ಇಂಧನ ಮತ್ತು ದೈನಂದಿನ ಕಚೇರಿಗೆ ಹೋಗುವವರ ಕಡಿಮೆ ಉತ್ಪಾದಕತೆಯನ್ನು ಒಳಗೊಂಡಿದೆ ಎನ್ನುವುದು ಅವರು ನೀಡಿರುವ ವಿವರಣೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಿಂದ ವಾರ್ಷಿಕ 20,000 ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗುತ್ತಿದೆ. ಈ ವಿದ್ಯಮಾನವು ಭಾರತದ ಬಹುತೇಕ ನಗರಗಳಲ್ಲಿ ಒಂದೇ ಆಗಿರುತ್ತದೆ. ಆದರೂ ಬೆಂಗಳೂರಿನಲ್ಲಿ ಈಪ್ರಮಾಣ ಕೊಂಚ ಅಧಿಕವಾಗಿಯೇ ಇದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿಯೇ ಮೆಟ್ರೋ ಸೇವೆ ವಿಸ್ತರಣೆ, ಹೊರ ವರ್ತುಲ ರಸ್ತೆ, ಫ್ಲೈ ಓವರ್‌ಗಳು, ಭಾರೀ ವಾಹನಗಳ ನಿಯಂತ್ರಣ, ರಸ್ತೆಗಳ ಸುಧಾರಣೆಯಂತ ಕ್ರಮಗಳು ಆಗಿದ್ದರೂ ಹಿಂದಿನಂತೆಯೇ ಪರಿಸ್ಥಿತಿಯಿದೆ. ಇದಕ್ಕೆ ಇನ್ನಷ್ಟು ಸಮಯ ಬೇಕಾಬಹುದು ಎನ್ನುವುದು ಸಚಿವರ ಹೇಳಿಕೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಈ ಹಿಂದೆ ನಗರದಲ್ಲಿ ಸುರಂಗ ಮಾರ್ಗದ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಇದು ಇಡೀ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಇದಕ್ಕೆ ಕೇಂದ್ರ ಸರ್ಕಾರದ ನೆರವು ಪಡೆಯುವ ಪ್ರಯತ್ನ ನಡೆದಿದೆ. ಇತ್ತೀಚಿನ ರಾಜ್ಯ ಬಜೆಟ್‌ನಲ್ಲಿ ಯೋಜನೆಗೆ ಅನುದಾನವನ್ನು ಸರ್ಕಾರ ಪ್ರಸ್ತಾಪಿಸಿದೆ.

2022 ರಲ್ಲಿ, ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA) ಟ್ರಾಫಿಕ್ ಜಾಮ್‌ನಿಂದ ಉಂಟಾದ ನಷ್ಟದ ಬಗ್ಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿತ್ತು.

ಕೃಷ್ಣರಾಜಪುರದಿಂದ ಪ್ರಾರಂಭಿಸಿ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರದೇಶದವರೆಗಿನ ಹೊರ ವರ್ತುಲ ರಸ್ತೆಯಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. 17 ಕಿಮೀ ವ್ಯಾಪ್ತಿಯು ಒಂದು ದಶಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತಿದೆ ಮತ್ತು ರಾಜ್ಯದ ಆರ್ಥಿಕತೆಗೆ ಉತ್ತಮ ಕೊಡುಗೆಯನ್ನು ಹೊಂದಿದೆ. ಈ ನಿರ್ದಿಷ್ಟ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಗಮನಹರಿಸದಿರುವುದು ಆಘಾತಕಾರಿಯಾಗಿದೆ. ಬೆಂಗಳೂರಿನ ಮೂಲಸೌಕರ್ಯಗಳ ಕುಸಿತವು ಈಗ ಜಾಗತಿಕ ಮಟ್ಟದಲ್ಲೂ ಕಳವಳ ಉಂಟು ಮಾಡುತ್ತಿದೆ. ಬೆಂಗಳೂರಿನ ಬೆಳವಣಿಗೆಯನ್ನು ಸಹ ಪ್ರಶ್ನಿಸುವಂತಿದೆ ಎನ್ನುವುದು ಸಂಘದ ಪತ್ರದ ಪ್ರಮುಖ ಒಕ್ಕಣೆಯಾಗಿತ್ತು.

ಒಂದು ದಶಕದಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಈಗಿನ ಹಾಗೂ ಹಿಂದಿನ ಸರ್ಕಾರಗಳು ಪ್ರಯತ್ನಿಸುತ್ತಿವೆ. ಸದ್ಯದ ಜತೆಗೆ ದೀರ್ಘನೆಲೆಯ ಯೋಜನೆಗಳಿಂದ ಮಾತ್ರ ಇದಕ್ಕೆ ಪರಿಹಾರ ಎನ್ನುವುದು ಬೆಂಗಳೂರಿಗೆ ಬಂದು ಹೋಗುವವರ ಸಲಹೆ.

ಟಾಮ್‌ಟಾಮ್ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 10 ಕಿಲೋಮೀಟರ್‌ಗಳನ್ನು ಕ್ರಮಿಸಲು ಬೇಕಾದ ಸರಾಸರಿ ಸಮಯವು ಸರಿಸುಮಾರು 28 ನಿಮಿಷಗಳು ಮತ್ತು 10 ಸೆಕೆಂಡುಗಳು. ಆದಾಗ್ಯೂ, 2022 ರಲ್ಲಿ, ಅದೇ ದೂರವನ್ನು ಕ್ರಮಿಸಲು ಸರಾಸರಿ ಸಮಯವು 29 ನಿಮಿಷಗಳು ಮತ್ತು 9 ಸೆಕೆಂಡುಗಳಿಷ್ಟಿತ್ತು ಎಂದು ವರದಿಯಾಗಿದೆ, ಇದು ಆ ವರ್ಷದಲ್ಲಿ ಬೆಂಗಳೂರನ್ನು ಜಗತ್ತಿನ ಎರಡನೇ ಅತ್ಯಂತ ನಿಧಾನವಾದ ನಗರವನ್ನಾಗಿ ಮಾಡಲೂ ಕಾರಣವಾಗಿತ್ತು.ಈಗಲೂ ಬೆಂಗಳೂರಿನ ಸರಾಸರಿ ವೇಗ ಗಂಟೆಗೆ 18 ಕಿಮೀ, ಇದು ಯಾವುದೇ ಭಾರತೀಯ ನಗರಕ್ಕಿಂತ ಅತೀ ಹೆಚ್ಚು ಸಮಯ ತೆಗೆದುಕೊಳ್ಳುವ ಅವಧಿ ಎನ್ನುವುದೂ ಗಮನಾರ್ಹ.

Whats_app_banner