Bus Fare Hike: ಗಣೇಶ ಚತುರ್ಥಿಗೆ ಖಾಸಗಿ ಬಸ್ ದರ ಈ ಬಾರಿಯೂ ದುಬಾರಿ, ಹಬ್ಬದ ಮುನ್ನಾ ದಿನ ಪ್ರಯಾಣ ದರ ಮೂರು ಪಟ್ಟು ಹೆಚ್ಚಳ
Ganesha Chaturthi ಈ ಬಾರಿಯ ಗಣೇಶನ ಹಬ್ಬಕ್ಕೆ ಊರಿಗೆ ಹೋಗಬೇಕೆಂದರೆ ಬಸ್ ಪ್ರಯಾಣಕ್ಕೆ ಕೊಂಚ ಹೆಚ್ಚೇ ಹಣ ತೆಗೆದಿಡಬೇಕು. ಏಕೆಂದರೆ ಈಗಾಗಲೇ ಮೂರು ಪಟ್ಟು ದರ ಏರಿಕೆಯಾಗಿರುವುದು ಕಂಡು ಬಂದಿದೆ.
ಬೆಂಗಳೂರು: ಈ ಬಾರಿಯೂ ಗಣೇಶನ ಹಬ್ಬಕ್ಕೆ ನೀವು ಊರಿಗೆ ಹೊರಡಬೇಕೆಂದರೆ ಬಸ್ ಪ್ರಯಾಣಕ್ಕೆ ಹೆಚ್ಚು ದರ ತೆರಲೇಬೇಕು.ಏಕೆಂದರೆ ಸರ್ಕಾರ ಹಾಗೂ ಸಾರಿಗೆ ಸಚಿವರ ಸೂಚನೆ ನಡುವೆಯೂ ಬಹಳಷ್ಟು ಖಾಸಗಿ ಬಸ್‌ಗಳ ದರ ಹಬ್ಬದ ಮುನ್ನಾ ದಿನವಾದ ಸೆಪ್ಟಂಬರ್ 5 ಹಾಗೂ 6 ರ ಗುರುವಾರ ಹಾಗೂ ಶುಕ್ರವಾರದಂದು ಮೂರು ಪಟ್ಟು ಹೆಚ್ಚಳವಾಗಿದೆ. ಯಾವುದೇ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಪರಿಶೀಲಿಸಿದರೆ ಅಂದಿಗೆ ಹಾಗೂ ವಾಪಾಸ್ ಬರುವ ಭಾನುವಾರಕ್ಕೆ ಭಾರೀ ಹೆಚ್ಚಳ ಮಾಡಲಾಗಿದೆ. ಸೆಪ್ಟಂಬರ್ 1ರಿಂದ ನಾಲ್ಕು ದಿನಗಳ ದರವನ್ನು ಪರಿಶೀಲಿಸಿದರೆ ಹಾಗೂ ನಂತರದ ಎರಡು ದಿನ ದರಗಳನ್ನು ಪರಿಶೀಲಿಸಿದರೆ ವ್ಯತ್ಯಾಸ ತಿಳಿಯಲಿದೆ. ಈ ಬಾರಿ ವಾರಾಂತ್ಯದಲ್ಲಿ ಮೂರು ದಿನ ರಜೆ ಬಂದಿರುವ ಕಾರಣದಿಂದ ಬೇಡಿಕೆ ಹೆಚ್ಚಾಗಿದೆ.
ದರ ಹೆಚ್ಚಳ ಏಕೆ
ಪ್ರತಿ ವರ್ಷ ಯಾವುದೇ ಹಬ್ಬದ ಸೀಸನ್ ನಲ್ಲಿ ಖಾಸಗಿ ಬಸ್‌ಗಳು ಮಾತ್ರವಲ್ಲದೇ ಸರ್ಕಾರಿ ಸಾರಿಗೆ ಬಸ್‌ಗಳ ದರದಲ್ಲಿ ಏರಿಕೆ ಕಾಣುತ್ತದೆ. ಸಾರಿಗೆ ಬಸ್‌ಗಳು ವಾರಾಂತ್ಯ, ರಜೆ ಸಮಯದಲ್ಲಿ ಮೊದಲಿನಿಂದಲೂ ಕೊಂಚ ಏರಿಕೆ ಮಾಡುತ್ತವೆ. ಆದರೆ ಖಾಸಗಿ ಬಸ್‌ಗಳು, ಟ್ರಾವೆಲ್ಸ್ ಸಂಸ್ಥೆಯವರು ಮೂರು ಪಟ್ಟು ದರ ಏರಿಕೆ ಮಾಡುವ ಉದಾಹರಣೆಯಿದೆ. ಕೆಲವೊಂದು ಸೀಟ್‌ಗಳನ್ನು ಕೊನೆ ಕ್ಷಣದಲ್ಲಿ ನೀಡಿ ನಾಲ್ಕು ಪಟ್ಟು ಹಣ ಪಡೆದಿರುವ ಉದಾಹರಣೆಯೂ ಇದೆ.
ಹಬ್ಬಕ್ಕೂ ಮುನ್ನ ಕೆಲವರು ಊರಿಗೆ ಹೊರಟರೇ ಬಹುತೇಕರು ಹಿಂದಿನ ದಿನವೇ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚುತ್ತದೆ. ಸಾರಿಗೆ ಸಂಸ್ಥೆಗಳೂ ಆ ದಿನ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರು, ಬೆಳಗಾವಿ. ಕಲಬುರಗಿ, ಹುಬ್ಬಳ್ಳಿ, ವಿಜಯಪುರ, ಕಾರವಾರ ಸಹಿತ ದೂರ ಊರುಗಳಿಗೆ ಹೆಚ್ಚಿನ ಬಸ್ ಓಡಿಸಲಾಗುತ್ತದೆ. ಅದೇ ರೀತಿ ಕಲಬುರಗಿ, ಮೈಸೂರು, ಹುಬ್ಬಳ್ಳಿ, ಮಂಗಳೂರು,ಬಳ್ಳಾರಿ ಸಹಿತ ಪ್ರಮುಖ ನಗರಗಳಿಂದ ಇತರೆ ಊರುಗಳಿಗೂ ವಿಶೇಷ ಬಸ್ ಇರಲಿವೆ. ಈ ವೇಳೆ ದರದನ್ನೂ ಏರಿಕೆ ಮಾಡಲಾಗುತ್ತದೆ.
ಹೆಚ್ಚಳದ ಪ್ರಮಾಣ
ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರು, ಹುಬ್ಬಳ್ಳಿ., ಬೆಳಗಾವಿ, ಕಲಬುರಗಿ ಟ್ರಾವೆಲ್ಸ್‌ಗಳಲ್ಲಿ ಸಾಮಾನ್ಯ ದಿನಗಳಲ್ಲಿ 500 ರೂ.ಗಳಿಂದ 1000 ರೂ. ರಷ್ಟಿರುವ ದರ ಏಕಾಏಕಿ 1500 ದಿಂದ 3000ಕ್ಕೆ ಏರಿಕೆಯಾಗುತ್ತದೆ. ಇದಲ್ಲದೇ ಹೊರ ರಾಜ್ಯದ ಹೈದ್ರಾಬಾದ್, ಮುಂಬೈ, ಚೆನ್ನೈ,ಕೊಯಮತ್ತೂರು ಸಹಿತ ಪ್ರಮುಖ ನಗರಗಳ ಸಂಚಾರವೂ ಇದೇ ರೀತಿ ಮೂರು ಪಟ್ಟು ಏರಿಕೆಯಾಗಿ ಬಿಡುತ್ತದೆ. ಈಗಾಗಲೇ ಹಲವಾರು ಖಾಸಗಿ ಟ್ರಾವೆಲ್ಸ್‌ಗಳ ವೆಬ್‌ಸೈಟ್ ಗಮನಿಸಿದರೆ ಅಲ್ಲಿ ಗಣೇಶ ಹಬ್ಬದ ಹಿಂದಿನ ದಿನ ಹಾಗೂ ನಂತರದ ದಿನದ ದರ ವ್ಯತ್ಯಾಸ ಗೊತ್ತಾಗಲಿದೆ.
ವರ್ಷವಿಡೀ ನಾವೂ ಬಸ್ ಓಡಿಸುತ್ತೇವೆ. ವರ್ಷದಲ್ಲ ಪ್ರಮುಖ ಎನ್ನುವ ಹತ್ತು ಹಬ್ಬಗಳಿಗೆ ಜನ ಊರಿಗೆ ಹೋಗುವುದುಂಟು. ಈ ಅವಧಿಯಲ್ಲಿ ಕೊಂಚ ದರ ಏರಿಕೆ ಮಾಡುವುದು ಮೊದಲಿನಿಂದಲೂ ನಡೆದಿದೆ. ಆಗ ಬೇಡಿಕೆಯೂ ಹೆಚ್ಚಿರುತ್ತದೆ. ಹಾಗೆಂದು ಉಳಿದ ದಿನಗಳಲ್ಲಿ ಕಡಿಮೆ ಸೀಟುಗಳಲ್ಲಿಯೇ ಹೋಗಿರುತ್ತೇವೆ ಎಂದು ಖಾಸಗಿ ಬಸ್ ಏಜೆಂಟರು ದರ ಏರಿಕೆ ಸಮರ್ಥಿಸಿಕೊಳ್ಳುತ್ತಾರೆ.
ಸಚಿವರ ಸೂಚನೆ
ಖಾಸಗಿ ಬಸ್ ಗಳು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣದರವನ್ನು ಹೆಚ್ಚಳ ಮಾಡಿದರೆ ಬಸ್‌ಗಳ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಬಾರಿಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹಬ್ಬದ ಮುನ್ನಾ ಹಾಗೂ ನಂತರದ ದಿನದ ಖಾಸಗಿ ಬಸ್‌ಗಳ ಪ್ರಯಾಣದರದಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸಾಮಾನ್ಯ ದರಕ್ಕಿಂತಲೂ ಅಸಾಮಾನ್ಯವಾಗಿ ಪ್ರಯಾಣದರ ಹೆಚ್ಚಾಗಿದ್ದಲ್ಲಿ ಅಂತಹ ಖಾಸಗಿ ಬಸ್‌ಗಳ ಮಾಲೀಕರಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಬೇಕು. ದುರುದ್ದೇಶಪೂರಿತವಾಗಿ ಅಥವಾ ನಿಯಮ ಮೀರಿ ಲಾಭದ ಆಸೆಯಿಂದ ಪ್ರಯಾಣ ದರ ಹೆಚ್ಚಳ ಮಾಡಿದರೆ ಅಂತಹ ಬಸ್ ಗಳ ಪರ್ಮಿಟ್ ಅನ್ನು ರದ್ದುಗೊಳಿಸಲು ಕ್ರಮ ಕೈಗೊಳಳುವಂತೆ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.
ಗೌರಿ-ಗಣೇಶ, ಯುಗಾದಿ, ನಾಗರಪಂಚಮಿ, ಆಯುಧಪೂಜೆ, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಖಾಸಗಿ ಬಸ್ ಗಳು ಪ್ರಯಾಣ ದರಗಳನ್ನು ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡುವ ಪರಿಪಾಠ ಬೆಳೆಸಿಕೊಂಡಿವೆ. 15 ದಿನಕ್ಕೂ ಮೊದಲೇ ಟಿಕೆಟ್ ಬುಕ್ಕಿಂಗ್ ದರ ಏಕಾಏಕಿ ಹೆಚ್ಚಳವಾಗಿರುತ್ತದೆ. ಇದರಿಂದ ಈ ಬಾರಿ ಎಚ್ಚೆತ್ತುಕೊಂಡ ರಾಜ್ಯಸರ್ಕಾರ ಹಬ್ಬಕ್ಕೂ ಮೊದಲೇ ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದು ವಿಚಕ್ಷಣೆ ಮಾಡುವಂತೆಯೂ ಸೂಚಿಸಿದೆ.