Greater Bangalore: ಗ್ರೇಟರ್ ಬೆಂಗಳೂರು ಮಸೂದೆ; ಪರಾಮರ್ಶೆಗೆ ಸಮಿತಿ ರಚನೆ; ಶೀಘ್ರ ಚುನಾವಣೆಗೆ ಮಾಜಿ ಪಾಲಿಕೆ ಸದಸ್ಯರಿಂದ ಕಪ್ಪು ದಿನ ಆಚರಣೆ
ಗ್ರೇಟರ್ ಬೆಂಗಳೂರು ರಚನೆ ಕಸರತ್ತು ನಡೆದಿದ್ದರೆ, ಮತ್ತೊಂದು ಕಡೆ ಬಿಬಿಎಂಪಿ ಚುನಾವಣೆಗೆ ಒತ್ತಡ ಹೆಚ್ಚಿದೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಗಳೂರು ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ - 2024 ಕುರಿತು ಪರಾಮರ್ಶೆ ನಡೆಸಲು ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಜಂಟಿ ಸದನ ಸಮಿತಿ ರಚಿಸಿದ್ದಾರೆ. ಈ ಮೂಲಕ ಮತ್ತೆ ಬಿಬಿಎಂಪಿ ಸದಸ್ಯರಾಗಲು ಕಾತರರಾಗಿದ್ದ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಖಾದರ್ ಅವರು ವಿಧಾನ ಮಂಡಲದ ಉಭಯ ಸದನಗಳ ಸರ್ವ ಪಕ್ಷಗಳ 13 ಸದಸ್ಯರ ಜಂಟಿ ಸದನ ಸಮಿತಿ ರಚಿಸಿದ್ದಾರೆ. ಈ ಸಮಿತಿಗೆ 3 ತಿಂಗಳ ಕಾಲಾವಕಾಶ ನೀಡಲಾಗಿದ್ದು, ಬದಲಾವಣೆ, ಸಲಹೆಗಳನ್ನು ನೀಡ ಬಹುದಾಗಿದೆ. ಇಂದು, ಮಂಗಳವಾರ ಸಮಿತಿಯ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಬಲ್ಲ ಮೂಲಗಳ ಪ್ರಕಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷರಾಗುವ ಸಾ ನಿಚ್ಚಳವಾಗಿವೆ. ಈ ಮಸೂದೆಯ ಮಹತ್ವ ನಮಗೆ ಅರ್ಥವಾಗಿದ್ದು, ಬೆಂಗಳೂರಿನ ಆಡಳಿತ ವ್ಯವಸ್ಥೆ ಬದಲಾಗಲಿದೆ. ನಿಗದಿತ ಗಡುವಿನೊಳಗೆ ವರದಿ ಸಲ್ಲಿಸುವುದಾಗಿ ರಿಜ್ವಾನ್ ತಿಳಿಸಿದ್ದಾರೆ.
ಕಳೆದ ಮುಂಗಾರು ಅಧಿವೇಶನದಲ್ಲಿ ಬೆಂಗಳೂರು ಉಸ್ತುವಾರಿ ಹೊಂದಿರುವ ಶಿವಕುಮಾರ್ ಮಸೂದೆ ಮಂಡಿಸಿದ್ದರು. ಈ ಮಸೂದೆ ತುಂಬಾ ಸಂಕೀರ್ಣವಾಗಿದ್ದು, ಜಂಟಿ ಸದನ ಸಮಿತಿಗೆ ಒಪ್ಪಿಸುವಂತೆ ಆಗ್ರಹಪಡಿಸಿದ್ದರು.
ವಿಧಾನಪರಿಷತ್ ಸಭಾಪತಿಗಳು ಮೂವರು ಸದಸ್ಯರನ್ನು ನೇಮಕ ಮಾಡಿದ ನಂತರ ಉಳಿದ ಸದಸ್ಯರನ್ನು ವಿಧಾನಸಭೆಯಿಂದ ನೇಮಕ ಮಾಡಲಾಗುತ್ತದೆ.
ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಮಸೂದೆಯೊಂದರ ಸಾಧಕ ಬಾಧಕಗಳನ್ನು ಕುರಿತು ಪರಾಮರ್ಶೆ ನಡೆಸಲು ಮೂರು ತಿಂಗಳ ಅವಧಿ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜೊತೆಗೆ ಬಿಬಿಎಂಪಿ ಚುನಾವಣೆ ಮತ್ತಷ್ಟು ಮುಂದಕ್ಕೆ ಹೋಗಲಿದೆ ಎಂಬ ಆತಂಕವೂ ಕಾಡುತ್ತಿದೆ. ಒಂದು ವೇಳೆ ಮಸೂದೆ ಅಂಗೀಕಾರವಾದರೂ ವಾರ್ಡ್ ಗಳ ರಚನೆ ಮತ್ತು ಮೀಸಲಾತಿ ನಿಗದಿಯಾಗಬೇಕಿದೆ.
ಮೊದಲು ಬಿಬಿಎಂಪಿಗೆ ಚುನಾವನೆ ನಡೆಸಿ ನಂತರ ಗ್ರೇಟರ್ ಬೆಂಗಳೂರು ರಚನೆ ಕುರಿತು ಹಿಂತನೆ ನಡೆಸಲಿ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಸೆಪ್ಟೆಂಬರ್ 2020 ರಲ್ಲಿ ಬಿಬಿಎಂಪಿ ಅವಧಿ ಮುಕ್ತಾಯಗೊಂಡಿದ್ದು ನಂತರ ಚುನಾವಣೆ ನಡೆದಿಲ್ಲ. ಆಗ ಕೋವಿಡ್ ಕಾರಣಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆಗ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ 245 ಕ್ಕೇ ಹೆಚ್ಚಿಸಿ ಬಿಬಿಎಂಪಿ ಕಾಯಿದೆ 2020 ಮಂಡನೆ ಮಾಡಿದ್ದರಿಂದ ಮತ್ತಷ್ಟು ವಿಳಂಬವಾಯಿತು. ಈ ಮಧ್ಯೆ 2022 ರಿಂದ ಪಾಲಿಕೆ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಬಾಕಿ ಉಳಿದಿದೆ. 2023 ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಗ್ರೇಟರ್ ಬೆಂಗಳೂರು ರಚಿಸಲು ಮುಂದಾಗಿದೆ.
ಒಟ್ಟಾರೆ ಮೂರೂ ಪಕ್ಷಗಳ ಶಾಸಕರಿಗೆ ಪಾಲಿಕೆಗೆ ಚುನಾವಣೆ ನಡೆಯುವುದು ಬೇಕಿಲ್ಲ ಮತ್ತು ಮುಂದೂಡಲು ಒಂದಿಲ್ಲೊಂದು ಕಾರಣ ಹುಡುಕಿ ಕೊಳ್ಳುತ್ತಿದ್ದಾರೆ. ಬಿಬಿಎಂಪಿ ಮಾಜಿ ಸದಸ್ಯರು ಸೆಪ್ಟೆಂಬರ್ 10ರಂದು ತ್ವರಿತವಾಗಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಸೆಪ್ಟೆಂಬರ್ 10ರಂದು ಕಪ್ಪು ದಿನ ಆಚರಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದಾರೆ.
ಎಲ್ಲ 10 ಪಾಲಿಕೆಗಳ ಶಿಪಾರಸ್ಸುಗಳ ಅನ್ವಯ ಪ್ರಾಧಿಕಾರವು ತೆರಿಗೆ ದರ, ಸೆಸ್, ಶುಲ್ಕ ಮತ್ತು ಬಳಕೆದಾರರ ಶುಲ್ಕವನ್ನು ಪ್ರತಿ ವರ್ಷ ನಿಗದಿಪಡಿಸಲಿದೆ. ಪ್ರಮುಖ ಯೋಜನೆಗಳರಚನೆ ಮತ್ತು ಕಾರ್ಯಗತಗೊಳಿಸುವ ಜವಬ್ಧಾರಿ ಪ್ರಾಧಿಕಾರದ ಹೊಣೆಯಾಗಿದ್ದು, ಅನುದಾನದ ಹಂಚಿಕೆಯ ಅಧಿಕಾರವನ್ನೂ ಪ್ರಾಧಿಕಾರವೇ ಉಳಿಸಿಕೊಂಡಿದೆ.
ಬಿಬಿಎಂಪಿ, ಬಿಎಂಆರ್ ಡಿಎ ವ್ಯಾಪ್ತಿಯ ಹೊಸಕೋಟೆ, ನೆಲಮಂಗಲ, ಆನೇಕಲ್ ದೇವನಹಳ್ಳಿ, ದೊಡ್ಡಬಳ್ಳಾಪುರ, ಬಿಡದಿ, ಎಲೆಕ್ಟ್ರಾನಿಕ್ಸ್ ಸಿಟಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಲಿವೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿ 708 ಚ.ಕಿಮೀ ವಿಸ್ತೀರ್ಣವಿದ್ದು, ಪ್ರಾಧಿಕಾರದ ವ್ಯಾಪ್ತಿ 1400 ಚ.ಕಿಮೀ.ಗೆ ವಿಸ್ತರಿಸಲಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)