Karnataka Bandh: ಕಾವೇರಿ ಕರ್ನಾಟಕ ಬಂದ್‌ ನಾಳೆ: ಏನು ಇರುತ್ತೆ, ಏನೇನು ಇರೋಲ್ಲ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bandh: ಕಾವೇರಿ ಕರ್ನಾಟಕ ಬಂದ್‌ ನಾಳೆ: ಏನು ಇರುತ್ತೆ, ಏನೇನು ಇರೋಲ್ಲ, ಇಲ್ಲಿದೆ ವಿವರ

Karnataka Bandh: ಕಾವೇರಿ ಕರ್ನಾಟಕ ಬಂದ್‌ ನಾಳೆ: ಏನು ಇರುತ್ತೆ, ಏನೇನು ಇರೋಲ್ಲ, ಇಲ್ಲಿದೆ ವಿವರ

Karnataka Bandh Updates ಕಾವೇರಿ ನೀರಿನ ವಿಚಾರವಾಗಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಬಂದ್‌ ಇರಲಿದ್ದು, ವಿವರ ಇಲ್ಲಿ ನೀಡಲಾಗಿದೆ.

ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವ ಆದೇಶವನ್ನು ಖಂಡಿಸಿ ಸೆ. 29ರ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಹಲವು ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಸರ್ಕಾರ ಯಾವುದೇ ಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಾನಾ ಸಂಘಟನೆಗಳ ಒಕ್ಕೂಟ ಮೂರು ದಿನದ ಹಿಂದೆ ಕೈಗೊಂಡ ನಿರ್ಣಯದಂತೆ ಸೆ. 29ರಂದು ಬಂದ್‌ಗೆ ಕರೆ ನೀಡಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್‌ ನಡೆಯಲಿದೆ ಎಂದು ವಾಟಾಳ್‌ ನಾಗರಾಜ್‌ ಘೋಷಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು ಗುರುವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಯಾವುದೇ ಮೆರವಣಿಗೆ ಮಾಡದಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ ಕರ್ನಾಟಕ ಬಂದ್‌ ಬೆಂಬಲಿಸಿ ಚಲನಚಿತ್ರ ಮಂಡಳಿ ಸಹಿತ ನಾನಾ ಸಂಘಟನೆಗಳು ಬೆಂಬಲ ನೀಡುವುದಾಗಿ ಘೋಷಿಸಿವೆ. ಡಾ.ಶಿವರಾಜಕುಮಾರ್‌ ನೇತೃತ್ವದಲ್ಲಿ ಸಭೆ ನಡೆಸಿ ಬಂದ್‌ಗೆ ಬೆಂಬಲಿಸುವ ತೀರ್ಮಾನವಾಗಿದೆ. ಇನ್ನೂ ಕೆಲವು ಸಂಘಟನೆ, ಸಂಸ್ಥೆಗಳು ಸಂಜೆ ನಂತರ ನಿರ್ಣಯ ಕೈಗೊಳ್ಳುವುದರಿಂದ ನಂತರವೇ ತೀರ್ಮಾನ ತಿಳಿಯಬಹುದು.

ಕಾವೇರಿ ಕೊಳ್ಳದ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಂದ್‌ಗೆ ಬೆಂಬಲ ದೊರಕುವ ಸಾಧ್ಯತೆ ಅಧಿಕವಾಗಿದೆ. ಆದರೆ ಉತ್ತರ ಕರ್ನಾಟಕ. ಕರಾವಳಿ ಭಾಗದವರೂ ಹೋರಾಟಕ್ಕೆ ನೈತಿಕವಾಗಿ ಬೆಂಬಲ ಸೂಚಿಸಿ ಪ್ರತಿಭಟನೆ ನಡಸಬಹುದು ಎಂಬ ಅಂದಾಜಿದೆ.

ಏನೆಲ್ಲಾ ಇರಲಿವೆ

ತುರ್ತು ಹಾಗೂ ಅಗತ್ಯ ಸೇವೆಗಳಾದ ಔಷಧಿ ಅಂಗಡಿ, ಆಸ್ಪತ್ರೆಗಳ ಸೇವೆಗಳು ಅಬಾಧಿತ. ಅಂಬುಲೆನ್ಸ್‌ ಕೂಡ ಅಗತ್ಯ ಸೇವೆ ವ್ಯಾಪ್ತಿಗೆ ಬರುವುದರಿಂದ ಅವುಗಳ ಸೇವೆ ಯಥಾರೀತಿ ಇರಲಿದೆ. ಬ್ಯಾಂಕ್‌ಗಳ ಸೇವೆಯಲ್ಲೂ ವ್ಯತ್ಯಯ ಆಗುವ ಸಾಧ್ಯತೆ ಕಡಿಮೆ. ಪೆಟ್ರೋಲ್‌ ಬಂಕ್‌ ಸಹಿತ ಇತರೆ ಸೇವೆಗಳೂ ಪರಿಸ್ಥಿತಿ ನೋಡಿಕೊಂಡು ಸೇವೆ ನೀಡುವ ಸಾಧ್ಯತೆಯಿದೆ.

ಬಸ್‌ ಸಂಚಾರ ಯಥಾಸ್ಥಿತಿ

ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲುಕೆಆರ್‌ಟಿಸಿ ಕೂಡ ಸೇವೆಯನ್ನು ನೀಡಲಿವೆ. ಈಗಾಗಲೇ ಎಲ್ಲಾ ಸಾರಿಗೆ ನೌಕರರು ಕಡ್ಡಾಯವಾಗಿ ಹಾಜರಾಗಬೇಕು. ಸೇವೆಗೆ ಬಾರದೇ ಇರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಂಸ್ಥೆಗಳು ಸೂಚನೆ ನೀಡುವುದರಿಂದ ಸಾರಿಗೆ ಸೇವೆ ಸಂಪೂರ್ಣವಾಗಿ ಇರಲಿವೆ.

ಈಗಾಗಲೇ ನಮಗೆ ಸೇವೆಗೆ ಬರುವಂತೆ ಸ್ಪಷ್ಟ ಸಂದೇಶವನ್ನು ಹಿರಿಯ ಅಧಿಕಾರಿಗಳು ರವಾನಿಸಿದ್ಧಾರೆ. ಇದರಿಂದ ಶುಕ್ರವಾರ ಸೇವೆಗೆ ಹಾಜರಾಗಲಿದ್ದೇವೆ. ಸಾರಿಗೆ ಬಸ್‌ ಸಂಚಾರ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಇರಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಶಾಲೆಗಳಿಗೆ ರಜೆ

ಈಗಾಗಲೇ ಬಂದ್‌ ಜತೆಗೆ ಸಾಲು ಸಾಲು ರಜೆಗಳೂ ಬಂದಿರುವುದರಿಂದ ಬಹುತೇಕ ಶಾಲೆಗಳು ಮಂಗಳವಾರವರೆಗೂ ರಜೆ ಘೋಷಿಸಿವೆ. ಅಲ್ಲದೇ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವೂ ಬಂದ್‌ಗೆ ಬೆಂಬಲ ಸೂಚಿಸಿವೆ. ಶಾಲಾ ವಾಹನಗಳ ಒಕ್ಕೂಟ, ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಹಲವು ಒಕ್ಕೂಟಗಳು ಬಂದ್‌ಗೆ ಬೆಂಬಲಿಸಿ ಆಯಾ ಜಿಲ್ಲೆಯಲ್ಲಿ ಸೂಕ್ತ ಪರಿಸ್ಥಿತಿ ನೋಡಿಕೊಂಡು ಶಾಲೆ ರಜೆ ಕೊಡುವ ಬಗ್ಗೆ ತೀರ್ಮಾನಿಸುವಂತೆ ಸೂಚಿಸಿವೆ. ಆದರೆ ಶಾಲಾ, ಕಾಲೇಜು ಬಹುತೇಕ ಬಂದ್‌ ಅಗುವ ಸಾಧ್ಯತೆಯಿದೆ.

ಆಟೋ ರಿಕ್ಷಾ ಸಂಘಟನೆಗಳು, ಮ್ಯಾಕ್ಸಿ ಕ್ಯಾಬ್‌ಗಳು,. ಉಬರ್‌, ಓಲಾ, ಖಾಸಗಿ ಬಸ್‌ಗಳು, ಗೂಡ್ಸ್‌ ವಾಹನಗಳು ಕೂಡ ಈಗಾಗಲೇ ಬಂದ್‌ಗೆ ಬೆಂಬಲ ನೀಡಿವೆ. ಇದರಿಂದ ಖಾಸಗಿ ಸಾರಿಗೆ ಸೇವೆ ಬಹುತೇಕ ವ್ಯತ್ಯಯವಾಗಲಿದೆ.

ಬೀದಿ ಬದಿ ವ್ಯಾಪಾರಿಗಳು ಸೇರಿ ವಿವಿಧ ಸಂಘಟನೆಗಳಿಂದ ಬೆಂಬಲ ನೀಡಿವೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿನ ಪ್ರಮುಖ ತರಕಾರಿ ಹಾಗೂ ಇತರೆ ಮಾರುಕಟ್ಟೆಗಳೂ ಬಂದ್‌ಗೆ ಬೆಂಬಲ ನೀಡುವುದರಿಂದ ಸೇವೆ ಇರುವುದಿಲ್ಲ. ಮಾಲ್‌ಗಳೂ ಕೂಡ ಸೇವೆ ನಿಲ್ಲಿಸಲಿವೆ.

ಕೈಗಾರಿಕಾ ಒಕ್ಕೂಟಗಳೂ ಈಗಾಗಲೇ ಬಂದ್‌ಗೆ ಬೆಂಬಲ ನೀಡಿರುವುದರಿಂದ ಕೈಗಾರಿಕಾ ವಲಯಗಳಿಗೆ ರಜೆ ಇರಲಿದೆ. ಇದರಿಂದ ಕೈಗಾರಿಕೆಗಳೂ ಇರುವುದಿಲ್ಲ.

ಚಲನಚಿತ್ರ ವಾಣಿಜ್ಯ ಮಂಡಳಿಯೂ ಕನ್ನಡ ನಾಡು, ನುಡಿ ವಿಚಾರವಾಗಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದೆ. ಇದರಿಂದ ಚಿತ್ರೋದ್ಯಮವೂ ಬಂದ್‌ ಆಗಲಿದೆ. ಎಲ್ಲಾ ಚಿತ್ರಮಂದಿರಗಳು ಪ್ರದರ್ಶನ ನೀಡುವುದಿಲ್ಲ. ಜತೆಗೆ ಚಿತ್ರೀಕರಣವೂ ಇರುವುದಿಲ್ಲ.

ಆಭರಣ ಮಳಿಗೆಗಳು, ದಿನಸಿ ಅಂಗಡಿಗಳು ಕೂಡ ಬಂದ್‌ಗೆ ಬೆಂಬಲ ನೀಡಿವೆ. ಹೊಟೇಲ್‌ ಮಾಲೀಕರ ಸಂಘವೂ ಬೆಂಬಲ ನೀಡಿದೆ. ಇದರಿಂದ ಸಂಜೆವರೆಗೆ ಹೊಟೇಲ್‌ಗಳು ಸೇವೆ ನೀಡುವ ಸಾಧ್ಯತೆ ಕಡಿಮೆ.

ಪರೀಕ್ಷೆ ಮುಂದೂಡಿಕೆ

ಬಂದ್‌ ಹಿನ್ನೆಲೆಯಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯವು ಸೆ. 29ರ ಶುಕ್ರವಾರ ನಡೆಸಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.

ಕೆಲವು ಸಂಘಟನೆಗಳು ಕಾವೇರಿ ನೀರಿನ ಹೋರಾಟದ ನಿಮಿತ್ತ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಸ್ನಾತಕ ವಿಭಾಗದ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದ್ದು. 2, 4 ,6 ಸೆಮೆಸ್ಟರ್‌ ರಿಪೀಟರ್ಸ್‌ ಹಾಗೂ ರೆಗುಲರ್‌ ಪರೀಕ್ಷೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಇದಕ್ಕೆ ಸಿದ್ದೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ರಶ್ನೆ ಪತ್ರಿಕೆ ತೆರೆಯಬಾರದು ಎಂದು ಪರೀಕ್ಷಾಂಗ ಕುಲಸಚಿವರು ಸೂಚಿಸಿದ್ದಾರೆ.

ಮೈಸೂರು ಹೊಟೇಲ್‌ ಮಾಲೀಕರ ಬೆಂಬಲ

ಕಾವೇರಿ ನೀರಿನ ಹೋರಾಟದ ಪ್ರಯುಕ್ತ ಕರ್ನಾಟಕ ಬಂದ್ ಗೆ ವಿವಿದ ಸಂಘಟನೆಗಳು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಹೊಟೇಲ್‌ ಮಾಲೀಕರ ಸಂಘದ ಎಲ್ಲಾ ಸದಸ್ಯರ ತುರ್ತು ಸಭೆ ನಡೆಸಿ ಬಂದ್‌ ಬೆಂಬಲಿಸುವ ಒಮ್ಮತದ ತೀರ್ಮಾನ ಕೈಗೊಂಡಿದೆ.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರಿಗೆ ಬಂದ್ ಗೇ ಸಂಪೂರ್ಣವಾದ ಬೆಂಬಲವನ್ನು ನೀಡಲು ನಮ್ಮ ಮೈಸೂರು ಹೋಟೆಲ್ ಮಾಲೀಕರ ಸಂಘವು ತೀರ್ಮಾನಿಸಿದ್ದು. ಹೋಟಲು, ರೆಸ್ಟೊರೆಂಟ್ ಗಳು (ವೆಜ್/ನಾನ್ ವೆಜ್), ಬೇಕರಿಗಳು, ಸ್ವೀಟ್ ಶಾಪ್ ಗಳು, ಫಾಸ್ಟ್ ಫುಡ್, ಟಿಫಾನೀಸ್, ಟೀ ಕಾಫಿ, ಅಂಗಡಿಗಳು, ಚಾಟ್ಸ್ ಅಂಗಡಿಗಳು,ಮತ್ತು ಐಷಾರಾಮಿ ಹೋಟಲುಗಳು ಸೇರಿದಂತೆ ಎಲ್ಲ ರೀತಿಯ ಆತಿಥ್ಯ ನೀಡುವ ಎಲ್ಲಾ ವ್ಯಾಪಾರಿಗಳು ನಾಳೆಯ ಬಂದ್ ಮಾಡುವ ಮೂಲಕ ಘೋಷಿಸಲಾಗಿದೆ,

ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಅರಮನೆಯ ಆಂಜನೇಯ ದೇವಸ್ಥಾನದ ಹತ್ತಿರ ಬಲರಾಮ ದ್ವಾರದಲ್ಲಿ ಎಲ್ಲಾ ಸದಸ್ಯರು ಸೇರಿ ಮನವಿಯನ್ನು ಸರಕಾರಕ್ಕೆ ಜಿಲ್ಲಾದಿಕಾರಿಗಳ ಮೂಲಕ ಸಲ್ಲಿಸುವ ಕುರಿತು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕಾರ್ಯದರ್ಶಿ ಎ.ಆರ್.ರವೀಂದ್ರಭಟ್ ತಿಳಿಸಿದ್ದಾರೆ.

ವಾಟಾಳ್‌ ಮನವಿ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಪ್ರತಿಯೊಬ್ಬ ಕನ್ನಡಿಗರು ಬೆಂಬಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.

ಗುರುವಾರ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ ಅವರು, ಹಲವು ಸಂಘಟನೆಗಳು ಬಂದ್‌ಗೆ ಈಗಾಗಲೇ ಬೆಂಬಲ ಘೋಷಿಸಿವೆ. ಹೋಟೆಲ್​, ಶಾಪಿಂಗ್ ಮಾಲ್​ಗಳು, ಅಂಗಡಿಗಳು ಬಂದ್​​​ ಮಾಡಬೇಕು. ಬಸ್‌, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿವೆ. ಕನ್ನಡಿಗರು ನಾಡು ನುಡಿ ವಿಚಾರದಲ್ಲಿ ಒಂದು ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.

ಶುಕ್ರವಾರ ಬೆಂಗಳೂರಿನ ಟೌನ್​ಹಾಲ್ ​ನಿಂದ ಫ್ರೀಡಂ ಪಾರ್ಕ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಆನಂತರ ಸರ್ಕಾರಕ್ಕೆ ಒತ್ತಾಯ ಪತ್ರವನ್ನೂ ಸಲ್ಲಿಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಬಂದ್‌ ಕೈ ಬಿಡಿ

ಯಾವುದೇ ಕಾರಣಕ್ಕೂ ಬಂದ್‌ ನಡೆಸಬಾರದು. ಈಗಾಗಲೇ ಒಮ್ಮೆ ಬಂದ್‌ ಆಗಿ ಒಂದೇ ದಿನಕ್ಕೆ 2ಸಾವಿರ ಕೋಟಿ ರೂ. ನಷ್ಟವಾಗಿದೆ. ಕರ್ನಾಟಕದಾದ್ಯಂತ ಬಂದ್‌ ಆದರೆ ಇನ್ನಷ್ಟು ನಷ್ಟವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮನವಿ ಮಾಡಿದರು.

ಬಂದ್ ನಿಂದ ತೊಂದರೆಯಾಗಬಾರದು: ಸಿಎಂ

ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.

Whats_app_banner