KSRTC BMTC Bus Fare: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಪ್ರಯಾಣ ದರ ಹೆಚ್ಚಳಕ್ಕೆ ಸಿದ್ದತೆ, ಪ್ರಸ್ತಾವನೆ ಸದ್ಯವೇ ಸಲ್ಲಿಕೆ, ಎಷ್ಟು ಹೆಚ್ಚಬಹುದು
bus fare ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸೇರಿ ಇತರೆ ಸಾರಿಗೆ ನಿಗಮಗಳು ಪ್ರಯಾಣ ದರ ಹೆಚ್ಚಳಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿವೆ.ವರದಿ: ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಲೋಕಸಭಾ ಚುನಾವಣೆ ಪೂರ್ಣಗೊಂಡಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಪ್ರಯಾಣ ದರ ಏರಿಸಲು ಸರ್ಕಾರದ ಬಾಗಿಲು ತಟ್ಟಿದೆ. ಕನಿಷ್ಠ ಶೇ.10-15ರಷ್ಟು ಹೆಚ್ಚಳ ಮಾಡುವಂತೆ ಬೇಡಿಕೆ ಸಲ್ಲಿಸುವ ನಿರೀಕ್ಷೆ ಇದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆ ಸೇರಿದಂತೆ ಹಲವಾರು ಕಾರಣಗಳನ್ನು ಮುಂದಿಟ್ಟು ಬೆಲೆ ಏರಿಕೆ ಮಾಡಲು ಸಾರಿಗೆ ನಿಗಮಗಳು ಆಗ್ರಹಪಡಿಸುವ ನಿರೀಕ್ಷೆ ಇದೆ. ಎಷ್ಟು ಪ್ರಯಾಣ ದರ ಹೆಚ್ಚಿಸಬೇಕು ಎಂದು ಕೆ ಎಸ್ ಆರ್ ಟಿಸಿ ಮತ್ತು ಸಾರಿಗೆ ನಿಗಮಗಳು ಪ್ರಸ್ತಾವನೆಗಳನ್ನು ಸಲ್ಲಿಸಿದ ನಂತರ ಸರ್ಕಾರ ಸೂಕ್ತ ನಿರ್ಧಾರಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಲೆ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲು ಸರಕಾರ ನಿಯಂತ್ರಣಾ ಪ್ರಾಧಿಕಾರ ರಚಿಸಲೂ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
2014ರಿಂದ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು 2020 ರಲ್ಲಿ ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದೇ ಕೊನೆ. ನಂತರ ಪ್ರಯಾಣ ದರ ಹೆಚ್ಚಿಸಿಲ್ಲ. ಬಿಎಂಟಿಸಿ ಶೇ.18ರಷ್ಟು ಮತ್ತು ಸಾರಿಗೆ ಸಂಸ್ಥೆ ಶೇ.12ರಷ್ಟು ಹೆಚ್ಚಳ ಮಾಡಿದ್ದವು. ಕೊರೋನಾ ಕಾಡಿದ 2 ವರ್ಷಗಳು, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಮತ್ತು ಈ ವರ್ಷ ನಡೆದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಲು ಆಯಾ ಕಾಲದ ಸರಕಾರಗಳು ಹಿಂದೇಟು ಹಾಕಿದ್ದವು. ಹೆಚ್ಚುತ್ತಿರುವ ಇಂಧನ ದರ, ನಿರ್ವಹಣಾ ವೆಚ್ಚ, ವೇತನ ಮತ್ತಿತರ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.
ಕಳೆದ ಆರ್ಥಿಕ ವರ್ಷಕ್ಕೆ ಸಾರಿಗೆ ಸಂಸ್ಥೆಗಳ ಸಾಲ 4000 ಕೋಟಿ ರೂ. ಮೀರಿದೆ. ಇದು ಸಾರಿಗೆ ನಿಗಮಗಳ ಕಥೆಯಾದರೆ 2020 ರಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದಾಗ ಕೆ ಎಸ್ ಆರ್ ಟಿಸಿ ನಿರ್ವಹಣಾ ವೆಚ್ಚ 3,950 ಕೋಟಿ ರೂ.ಗಳಷ್ಟಿದ್ದರೆ ಈಗ 4,828 ಕೋಟಿ ರೂ. ಗೆ ಏರಿದೆ. ಈ ಸಾಲದ ಜೊತೆಗೆ ವೇತನ ಹೆಚ್ಚಳದಿಂದ ನೌಕರರಿಗೆ ಕೊಡಬೇಕಾದ ಬಾಕಿ ಮೊತ್ತ ಸುಮಾರು 1900 ಕೋಟಿ ರೂ.ಗಳಷ್ಟಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
20 ಲಕ್ಷ ವಿದ್ಯಾರ್ಥಿಗಳು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದು, ಕಳೆದ 13 ವರ್ಷಗಳಿಂದ ಬಸ್ ಪಾಸ್ ದರವನ್ನು ಹೆಚ್ಚಳ ಮಾಡಿಲ್ಲ. ಇಲಾಖೆಯ ಆರ್ಥಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕಾಲ ಕಾಲಕ್ಕೆ ಪ್ರಯಾಣ ದರವನ್ನು ಹೆಚ್ಚಿಸುವುದು ಉತ್ತಮ ಮಾರ್ಗ. ಆದರೆ ಚುನಾವಣೆಗಳ ಹಿನ್ನೆಲೆಯಲ್ಲಿ ಹೆಚ್ಚಳ ಮಾಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಕೋವಿಡ್ ಕಾರಣದಿಂದಾಗಿ ಸಾರಿಗೆ ನಿಗಮಕ್ಕೆ ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗಿರಲಿಲ್ಲ. ಕಳೆದ ವರ್ಷ ಕೆಲವು ಬಸ್ ಗಳನ್ನು ಕೊಂಡುಕೊಳ್ಳಲಾಗಿದೆ. ಶಕ್ತಿಯೋಜನೆಯನ್ನು ಜಾರಿಗೊಳಿಸಿದ ನಂತರ ಸಾರಿಗೆ ಸಂಸ್ಥೆಗೆ ಹಣದ ಒಳ ಹರಿವು ನಿಂತು ಹೋಗಿದೆ. ಮಹಿಳಾ ಪ್ರಯಾಣಿಕರ ಬಸ್ ಪ್ರಯಾಣ ದರದ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಬೇಕು.
ನಂತರ ಸಾರಿಗೆ ಇಲಾಖೆ ಆಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಹಣಕಾಸು ಇಲಾಖೆ ಆಡಿಟ್ ನಡೆಸಿದ ನಂತರ ಹಣ ಬಿಡುಗಡೆ ಮಾಡುತ್ತದೆ. ಅದುವರೆಗೂ ಸಾರಿಗೆ ನಿಗಮಗಳು ಕಾಯಲೇಬೇಕು. ಹೊಸ ಬಸ್ ಗಳ ಖರೀದಿ ಮತ್ತು ಇತರ ಯೋಜನೆಗಳಿಗೆ ಸರಕಾರದಿಂದ ವಿಶೇಷ ಅನುದಾನದ ನಿರೀಕ್ಷೆಯಲ್ಲಿದೆ.
ಕಳೆದ ವರ್ಷ ಶಕ್ತಿ ಯೋಜನೆ ಆರಂಭವಾದ ಜೂನ್ 11ರಿಂದ 223 ಕೋಟಿ ಟಿಕೆಟ್ ಗಳನ್ನು ವಿತರಿಸಿದೆ. ಸಾರಿಗೆ ನಿಗಮಗಳು ಇದಕ್ಕಾಗಿ 5451 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಉಚಿತ ಭಾಗ್ಯಗಳ ವೆಚ್ಚವನ್ನು ಸರಿದೂಗಿದಸಲು ಒಟ್ಟಾರೆ ಬಸ್ ಪ್ರಯಾಣ ದರ ಏರಿಕೆ ಖಚಿತ ಎಂದು ಸರಕಾರದ ಮೂಲಗಳು ಖಚಿತಪಡಿಸಿವೆ.
ಇದರಿಂದ ಶೇ. 15ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಬಹುದು ಎನ್ನಲಾಗುತ್ತಿದೆ.
(ವರದಿ: ಎಚ್.ಮಾರುತಿ. ಬೆಂಗಳೂರು)
ವಿಭಾಗ