Bangalore News: ಬೆಂಗಳೂರಿನ ಮಾಲ್‌, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ, ಹೋಟೆಲ್‌ಗಳಲ್ಲಿ ಏರಿಯೇಟರ್ ಕಡ್ಡಾಯ, ಇಲ್ಲದೇ ಇದ್ದರೆ ದಂಡ-bangalore news water aerator must in bangalore apartments hotels mals commercial complex before march 31st mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿನ ಮಾಲ್‌, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ, ಹೋಟೆಲ್‌ಗಳಲ್ಲಿ ಏರಿಯೇಟರ್ ಕಡ್ಡಾಯ, ಇಲ್ಲದೇ ಇದ್ದರೆ ದಂಡ

Bangalore News: ಬೆಂಗಳೂರಿನ ಮಾಲ್‌, ಅಪಾರ್ಟ್‌ಮೆಂಟ್‌, ವಾಣಿಜ್ಯ ಸಂಕೀರ್ಣ, ಹೋಟೆಲ್‌ಗಳಲ್ಲಿ ಏರಿಯೇಟರ್ ಕಡ್ಡಾಯ, ಇಲ್ಲದೇ ಇದ್ದರೆ ದಂಡ

ನೀರು ಉಳಿತಾಯಕ್ಕೆ ಬೆಂಗಳೂರು ಜಲ ಮಂಡಳಿ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಇದರಲ್ಲಿ ಏರಿಯೇಟರ್‌ ಕೂಡ ಒಂದು. ಇದು ಕಡ್ಡಾಯ ಏಕೆ. ಇಲ್ಲಿದೆ ವಿವರ.ವರದಿ: ಎಚ್‌.ಮಾರುತಿ ಬೆಂಗಳೂರು

ಬೆಂಗಳೂರಿನ ವಾಣಿಜ್ಯ ಸ್ಥಳಗಳಲ್ಲಿ ಏರಿಯೇಟರ್‌ ಬಳಕೆ ಕಡ್ಡಾಯ
ಬೆಂಗಳೂರಿನ ವಾಣಿಜ್ಯ ಸ್ಥಳಗಳಲ್ಲಿ ಏರಿಯೇಟರ್‌ ಬಳಕೆ ಕಡ್ಡಾಯ (news minute)

ಬೆಂಗಳೂರು: ಬೆಂಗಳೂರಿನ ಮಾಲ್‌, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌, ಸರ್ಕಾರಿ ಕಟ್ಟಡಗಳು, ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಧಾರ್ಮಿಕ ಸ್ಥಳಗಳೂ ಸೇರಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ವೇಗ ನಿಯಂತ್ರಕ ಅಥವಾ ಏರಿಯೇಟರ್ ಗಳನ್ನು ಮಾರ್ಚ್ 31 ರೊಳಗೆ ಅಳವಡಿಸಿಕೊಳ್ಳದಿದ್ದರೆ ದಂಡ ವಿಧಿಸುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಬಹುತೇಕ

ಕೊಳವೆ ಬಾವಿಗಳು ಬತ್ತಿ ಹೋಗಿವೆ. ಸಾರ್ವಜನಿಕರು ಸಹಕಾರ ನೀಡಿ ಕೈ ಜೋಡಿಸಿದರೆ ಮಾತ್ರ ಉಲ್ಬಣವಾಗಿರುವ ಈ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ ಎನ್ನುವುದನ್ನು ಜಲ ಮಂಡಳಿ ಮನಗಂಡಿದ್ದು ಈ ನಿರ್ಧಾರ ಕೈಗೊಂಡಿದೆ.

ಈ ತಿಂಗಳ ಅಂತ್ಯದೊಳಗೆ ಅಳವಡಿಸಿಕೊಳ್ಳುವಂತೆ ಮಾರ್ಚ್ 21 ರಂದು ಆದೇಶ ಹೊರಡಿಸಲಾಗಿತ್ತು. ದಿ. 31.03.2024 ರೊಳಗಾಗಿ ಏರಿಯೇಟರ್ ಗಳನ್ನು ಅಳವಡಿಸಿಕೊಳ್ಳುವ ಗ್ರಾಹಕರಿಗೆ "ಪರಿಸರ ಸ್ನೇಹಿ ಹಸಿರು ಸ್ಟಾರ್ ಬಳಕೆದಾರ" ಎಂಬ ಪ್ರಮಾಣ ಪತ್ರವನ್ನು ಬೆಂಗಳೂರು ಜಲಮಂಡಳಿ ನೀಡಲಿದೆ.

ಮೇಲೆ ತಿಳಿಸಿದ ಸ್ಥಳಗಳಲ್ಲಿ ಒಂದು ವೇಳೆ ಮಾರ್ಚ್ 31 ರೊಳಗಾಗಿ ಏರಿಯೇಟರ್ ಗಳನ್ನು ಅಳವಡಿಸಿಕೊಳ್ಳದಿದ್ದರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964 ಕಲಂ 53 ರ ಪ್ರಕಾರ ಜಲ ಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 50 ರವರೆಗೆ ಕಡಿತಗೊಳಿಸಲಾಗುವುದು ಹಾಗೂ 5000 ರೂಪಾಯಿಗಳ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಮೊದಲ ಬಾರಿ ದಂಡ ವಿಧಿಸಿದ ನಂತರವೂ ಏರಿಯೇಟರ್ ಗಳನ್ನು ಅಳವಡಿಸಿಕೊಳ್ಳದಿದ್ದರೆ 5000 ರೂಪಾಯಿ ದಂಡದ ಜೊತೆಗೆ ದಿನವೊಂದಕ್ಕೆ ರೂ.500 ರಂತೆ ದಂಡ ಹಾಕಲಾಗುವುದು. ಆಗಲೂ ಅಳವಡಿಸದೆ ಇರುವ ಸ್ಥಳಗಳಲ್ಲಿ ಏರಿಯೇಟರ್ ಗಳನ್ನು ಅಳವಡಿಸಿ ಆ ಮೊತ್ತವನ್ನು ಗ್ರಾಹಕರಿಂದಲೇ ವಸೂಲಿ ಮಾಡಲಾಗುವುದು ಎಂದೂ ಜಲಮಂಡಳಿ ಎಚ್ಚರಿಕೆ ನೀಡಿದೆ.

ಕಾವೇರಿ ಐದನೇ ಹಂತದ ಕಾಮಗಾರಿ, ಜೈಕಾ ಮೆಚ್ಚುಗೆ

ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರನ್ನು ಸರಬರಾಜು ಮಾಡುವ ಕಾವೇರಿ ಐದನೇ ಹಂತದ ಕಾಮಗಾರಿಯ ಪ್ರಗತಿಗೆ ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಶನ್ ಅಸೋಶಿಯೇಶನ್ (ಜೈಕಾ) ಮೆಚ್ಚುಗೆ ವ್ಯಕ್ತಪಡಿಸಿದೆ. ಇದೇ ವೇಗದಲ್ಲಿ ಕಾಮಗಾರಿ ನಡೆದರೆ ನಿರೀಕ್ಷೆಯಂತೆ ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಜೈಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಲಘಟ್ಟಪುರದ ಸಿ. ಪಿ. 8 ಯೋಜನೆ, ತಾತಗುಣಿ, ಎಪಿಎಸ್ ಕಾಲೇಜು ಮುಂಭಾಗ ಹಾಗೂ ನೆಟ್ಟಿಗೆರೆ ಪೈಪ್ ಲೈನ್ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾವೇರಿ ಐದನೇ ಹಂತದ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜೈಕಾ ಇಂಡಿಯಾ ಸಂಸ್ಥೆಯ ಪ್ರತಿನಿಧಿಗಳಾದ ಹಾರುಕಾ ಕೋಯಾಮಾ ಮತ್ತು ಜೈಕಾ ಇಂಡಿಯಾದ ಅಭಿವೃದ್ದಿ ತಜ್ಞರಾದ ಶಿವಾನಿ ಚೌಹಾನ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಜಲ ಮಂಡಳಿ ತಿಳಿಸಿದೆ. ಜೈಕಾ ಸಂಸ್ಥೆಯೂ ಆದಷ್ಟೂ ಬೇಗ ಕಾಮಗಾರಿಯನ್ನು ಕಾರ್ಯಗತಗೊಳಿಸುವಂತೆ ತಿಳಿಸಿದೆ.

ಕೋವಿಡ್ -19 ಮತ್ತು ಅಕಾಲಿಕ ಮಳೆಯಿಂದ ಕಾಮಗಾರಿ ವಿಳಂಬಗೊಂಡಿತ್ತು. ಇದೀಗ ಕಾಮಗಾರಿಯನ್ನು ಚುರುಕುಗೊಳಿಸಿ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿತ್ತು. ಹಾಗಾಗಿ ಈ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಒಂದು ಹತ್ತು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.

ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಸ್ತುತ ಉಂಟಾಗಿರುವ ನೀರಿನ ಸಮಸ್ಯೆಯನ್ನು ನಿವಾರಿಸಲು ಜಲ ಮಂಡಳಿ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಜೈಕಾ ತೃಪ್ತಿ ವ್ಯಕ್ತಪಡಿಸಿದೆ. ಈ ಗ್ರಾಮಗಳಿಗೆ ನೀರು ಒದಗಿಸುವ ಕಾಮಗಾರಿಗಳಲ್ಲಿ ಇದೇ ರೀತಿಯ ವೇಗವನ್ನು ಕಾಯ್ದುಕೊಳ್ಳುವಂತೆಯೂ ಜೈಕಾ ಸೂಚನೆ ನೀಡಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

mysore-dasara_Entry_Point