ಮೂರು ದಿನದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಬಿಎಂಟಿಸಿ ಬಸ್‌ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿ, ಜೈಲು ಸೇರಿದ ಯುವಕ
ಕನ್ನಡ ಸುದ್ದಿ  /  ಕರ್ನಾಟಕ  /  ಮೂರು ದಿನದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಬಿಎಂಟಿಸಿ ಬಸ್‌ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿ, ಜೈಲು ಸೇರಿದ ಯುವಕ

ಮೂರು ದಿನದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಬಿಎಂಟಿಸಿ ಬಸ್‌ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿ, ಜೈಲು ಸೇರಿದ ಯುವಕ

ಮೂರು ದಿನ ಹಿಂದೆ ನಡೆದ ಜಗಳದಲ್ಲಿ ಕಂಡಕ್ಟರ್ ಹೇಳಿದ ಮಾತು ಅರಗಿಸಿಕೊಳ್ಳಲಾಗದ ಯುವಕ, ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿ ಹಲ್ಲೆಗೆ ಯತ್ನಿಸಿದ. ಇದೇ ಕಾರಣಕ್ಕೆ ಈಗ ಪೊಲೀಸ್ ಕೇಸ್ ಎದುರಿಸುತ್ತಿದ್ದು, ಕಸ್ಟಡಿಯಲ್ಲಿದ್ದಾನೆ.

ಮೂರು ದಿನದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಬಿಎಂಟಿಸಿ ಬಸ್‌ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿದ ಯುವಕ ಜೈಲು ಸೇರಿದ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ)
ಮೂರು ದಿನದ ಹಿಂದಿನ ದ್ವೇಷ ತೀರಿಸಿಕೊಳ್ಳಲು ಬಿಎಂಟಿಸಿ ಬಸ್‌ ಕಂಡಕ್ಟರ್ ಮೇಲೆ ಕಲ್ಲು ಹೊತ್ತು ಹಾಕಿದ ಯುವಕ ಜೈಲು ಸೇರಿದ ಘಟನೆ ನಡೆದಿದೆ. (ಸಾಂಕೇತಿಕ ಚಿತ್ರ) (HT News )

ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕನೊಬ್ಬ ಕಲ್ಲು ಹೊತ್ತು ಹಾಕಿ ಹಲ್ಲೆ ನಡೆಸಿದ ಮನಸ್ಸಿಗೆ ಕಸಿವಿಸಿ ಉಂಟುಮಾಡುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ಊಟದ ವಿರಾಮದ ವೇಳೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ. ಮಾಸಿಕ ಪಾಸ್ ಬಳಕೆಗೆ ಸಂಬಂಧಿಸಿ ಮೂರು ದಿನಗಳ ಹಿಂದೆ ಅದೇ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ವಾಕ್ಸಮರ ಆಗಿತ್ತು, ಅದಾಗಿ ಈ ದಾಳಿ ನಡೆದಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಏನಿದು ದಾಳಿ ಘಟನೆ

ಈ ಘಟನೆಯ ಬಳಿಕ ಬಿಎಂಟಿಸಿ ಹೊರಡಿಸಿದ ಪ್ರಕಟಣೆಯ ಪ್ರಕಾರ, ಅಪರಿಚಿತ ದುಷ್ಕರ್ಮಿ ಬಸ್ಸಿನೊಳಗೆ ನುಗ್ಗಿ ಕಂಡಕ್ಟರ್ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಕಂಡಕ್ಟರ್, ಬಸ್ ಚಾಲಕನೊಂದಿಗೆ, ದಾಳಿಕೋರನನ್ನು ಶೀಘ್ರವಾಗಿ ಹಿಂಬಾಲಿಸಿದರು. ಇತರೆ ಬಿಎಂಟಿಸಿ ಸಿಬ್ಬಂದಿಯ ಸಹಾಯದಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಯಶಸ್ವಿಯಾಗಿ ಸೆರೆಹಿಡಿದು ಬಸ್ಸಿಗೆ ಕರೆತಂದರು. ತೀವ್ರ ವಿಚಾರಣೆಯ ನಂತರ, ದಾಳಿಕೋರ ತಾನು ದಾಳಿ ನಡೆಸಿದ್ದು ಯಾಕೆ ಎಂಬುದನ್ನು ವಿವರಿಸಿದ್ದಾನೆ.

ದಾಳಿ ನಡೆಸಿದ ಯುವಕ ಹೇಳಿದ್ದಿಷ್ಟು - ಕೆಲವು ದಿನಗಳ ಹಿಂದೆ ಅದೇ ಬಸ್‌ನಲ್ಲಿ ಪ್ರಯಾಣಿಸಿದ್ದೆ. ಮಾಸಿಕ ಬಸ್ ಪಾಸ್ ಖರೀದಿಸಿದ್ದೆ. ಅದರ ವಿಚಾರವಾಗಿ ಕಂಡಕ್ಟರ್ ಜೊತೆಗೆ ಜಗಳ ಆಗಿತ್ತು. ಅದರಿಂದ ಮಾನಸಿಕವಾಗಿ ಬಹಳ ಹಿಂಸೆ ಅನುಭವಿಸಿದ್ದೆ. ಹಾಗಾಗಿ ಕಲ್ಲು ತಗೊಂಡು ದಾಳಿ ನಡೆಸಿದೆ.

ಘಟನೆ ಬಳಿಕ ಕಂಡಕ್ಟರ್ ಅನ್ನು ಸಿ ವಿ ರಾಮನ್ ಹಾಸ್ಪಿಟಲ್‌ಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಡಿಪೋ ಮ್ಯಾನೇಜರ್ ಮತ್ತು ಟ್ರಾಫಿಕ್ ಕಂಟ್ರೋಲರ್ ಕ್ಷಿಪ್ರವಾಗಿ ಸ್ಪಂದಿಸಿದ್ದರಿಂದಾಗಿ ಹೆಚ್ಚಿನ ಸಮಸ್ಯೆ ಆಗಿಲ್ಲ ಎಂದು ಬಿಎಂಟಿಸಿ ಹೇಳಿದ್ದಾಗಿ ವರದಿ ವಿವರಿಸಿದೆ.

ಬಿಎಂಟಿಸಿ ಅಧಿಕಾರಿಗಳು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಆರೋಪಿಯ ಹೆಸರು ಹೇಮಂತ್ ಎಂದು ಗುರುತಿಸಲಾಗಿದೆ. ಆತ ಈಗ ಪೊಲೀಸ್ ಕಸ್ಟಡಿಯಲ್ಲಿದ್ಧಾನೆ.

ಹಿಂದೆಯೂ ನಡೆದಿದೆ ಬಿಎಂಟಿಸಿ ಸಿಬ್ಬಂದಿ ಮೇಲೆ ದಾಳಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಘಟನೆಗಳು ಬಿಎಂಟಿಸಿ ಸಿಬ್ಬಂದಿಯ ರಕ್ಷಣೆಗೆ ಸಂಬಂಧಿಸಿ ಹೆಚ್ಚಿನ ಕಾಳಜಿ ವಹಿಸಬೇಕಾದ ಅವಶ್ಯಕತೆಯನ್ನು ಎತ್ತಿ ತೋರಿಸಿದೆ. ಈ ಘಟನೆಯು ಬಿಎಂಟಿಸಿ ವ್ಯವಸ್ಥೆಯೊಳಗೆ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಕಳವಳಗೊಳ್ಳುವಂತೆ ಮಾಡಿದೆ.

ಇದಕ್ಕೂ ಮೊದಲು, ವೈಟ್‌ಫೀಲ್ಡ್ ಬಳಿ ನಡೆದ ಮತ್ತೊಂದು ಪ್ರಕರಣದಲ್ಲಿ, 25 ವರ್ಷದ ವ್ಯಕ್ತಿಯೊಬ್ಬರು ಕಿಕ್ಕಿರಿದ ವಾಹನದ ಮೇಲೆ ಬಸ್ ಕಂಡಕ್ಟರ್‌ಗೆ ಚಾಕುವಿನಿಂದ ಇರಿದಿದ್ದ. ಈ ಘಟನೆಯು ವ್ಯಾಪಕ ಭೀತಿಗೆ ಕಾರಣವಾಯಿತು. ದಾಳಿಕೋರ ತನ್ನ ಮಾಜಿ ಉದ್ಯೋಗದಾತನ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.

ಇನ್ನೊಂದು ಒಂದು ಪ್ರತ್ಯೇಕ ಘಟನೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ. ಆ ಕಂಡಕ್ಟರ್‌ 5 ರೂಪಾಯಿ ಬಾಕಿ ಪಾವತಿಸದೇ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಆ ಕಂಡಕ್ಟರ್ ಪ್ರಯಾಣಕರ ಬಳಿ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದ ಅವಾಚ್ಯವಾಗಿ ಬೈದ ದೃಶ್ಯವೂ ಇತ್ತು. ಹೀಗಾಗಿ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಕ್ರಮ ಜರುಗಿಸಿದೆ.

Whats_app_banner