Maha Shivaratri: ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್‌ ಟೂರ್ ; ವಿವರ ಹೀಗಿದೆ-bengaluru news bmtc 1 day package tour to isha foundation chikkaballapur weekend public holiday from maha shivaratri uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Maha Shivaratri: ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್‌ ಟೂರ್ ; ವಿವರ ಹೀಗಿದೆ

Maha Shivaratri: ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್‌ ಟೂರ್ ; ವಿವರ ಹೀಗಿದೆ

ಪ್ರವಾಸಿಗರ ಅನುಕೂಲಕ್ಕಾಗಿ ಸಾರ್ವಜನಿಕ ರಜೆ ಮತ್ತು ವಾರಾಂತ್ಯದ ರಜಾದಿನಗಳಲ್ಲಿ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್‌ಗೆ ಒಂದು ದಿನದ ಪ್ಯಾಕೇಜ್ ಟೂರ್ ಅನ್ನು ಬಿಎಂಟಿಸಿ ಘೋಷಿಸಿದೆ. ಈ ಪ್ಯಾಕೇಜ್ ಟೂರ್ ಇದೇ ಮಹಾ ಶಿವರಾತ್ರಿ (Maha Shivaratri) ದಿನದಿಂದ ಶುರುವಾಗುತ್ತಿದೆ. ಪ್ಯಾಕೇಜ್ ಟೂರ್‌ನ ವಿವರ ಇಲ್ಲಿದೆ.

ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್ ಟೂರ್ ಶುರುವಾಗಲಿದೆ.
ಮಹಾ ಶಿವರಾತ್ರಿ ದಿನದಿಂದ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬಿಎಂಟಿಸಿ 1 ದಿನದ ಪ್ಯಾಕೇಜ್ ಟೂರ್ ಶುರುವಾಗಲಿದೆ.

ಬೆಂಗಳೂರು: ಮಹಾ ಶಿವರಾತ್ರಿ (Maha Shivaratri) ದಿನ (ಮಾರ್ಚ್‌ 8) ದಿಂದ ಸಾರ್ವಜನಿಕ ರಜಾದಿನ ಮತ್ತು ವಾರಾಂತ್ಯದ ರಜೆ ದಿನಗಳಲ್ಲಿ ಚಿಕ್ಕಬಳ್ಳಾಪುರ ಈಶಾ ಕೇಂದ್ರಕ್ಕೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಒಂದು ದಿನದ ಟೂರ್ ಪ್ಯಾಕೇಜ್ ಘೋಷಿಸಿದೆ. ಇದೇ ವೇಳೆ, ಮಹಾ ಶಿವರಾತ್ರಿ ಮತ್ತು ನಂದಿ ಜಾತ್ರೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ 100 ಬಸ್‌ಗಳ ಸಂಚಾರವನ್ನು ಪ್ರಕಟಿಸಿದೆ.

ಸಾರ್ವಜನಿಕ ರಜಾದಿನ ಮತ್ತು ವಾರಾಂತ್ಯದ ರಜಾದಿನಗಳಲ್ಲಿ ಪ್ರವಾಸಿಗರು, ಧಾರ್ಮಿಕ ಶ್ರದ್ಧಾಳುಗಳು ಈಶಾ ಕೇಂದ್ರಕ್ಕೆ ತೆರಳುವ ನಿರೀಕ್ಷೆ ಇರುವ ಕಾರಣ ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರವಾಸಿಗರ ಅನುಕೂಲಕ್ಕಾಗಿ ಅಗ್ಗದ ದರದಲ್ಲಿ ಹವಾ ನಿಯಂತ್ರಿತ ಬಸ್ಸುಗಳ ಸಂಚಾರ ಶುರುಮಾಡುವುದಾಗಿ ಘೋಷಿಸಿದೆ.

ಚಿಕ್ಕಬಳ್ಳಾಪುರ ಈಶಾ ಫೌಂಡೇಶನ್‌ಗೆ ಬಿಎಂಟಿಸಿ ಒಂದು ದಿನದ ಟೂರ್‌ ಪ್ಯಾಕೇಜ್‌ ವಿವರ ಹೀಗಿದೆ -

ಬಿಎಂಟಿಸಿ ಬಸ್ಸು ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ಬಸ್‌ನಿಲ್ಧಾಣದಿಂದ ಹೊರಟು ಈಶಾ ಫೌಂಡೇಶನ್‌ಗೆ ಹೋಗಲಿದೆ. ಈ ಪ್ರವಾಸದ ನಡುವೆ ಪ್ರವಾಸಿಗರಿಗೆ ಈಶಾ ಫೌಂಡೇಶನ್ ಸೇರಿ 5 ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಲಿದೆ. ಇದರಂತೆ, ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಭೇಟಿ ಆದ ಬಳಿಕ ಈಶಾ ಫೌಂಡೇಶನ್‌ಗೆ ತಲುಪಲಿದೆ.ನಂತರ ಅಲ್ಲಿಂದ ಹೊರಟು ರಾತ್ರಿ 9.30ಕ್ಕೆ ಪುನಃ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬರಲಿದೆ. ಪ್ರಯಾಣ ಶುಲ್ಕ 500 ರೂಪಾಯಿ ನಿಗದಿ ಮಾಡಿದೆ.

ಬಿಎಂಟಿಸಿ ಒಂದು ದಿನದ ಟೂರ್ ಪ್ಯಾಕೇಜ್ ವಿವರದ ಪ್ರಕಟಣೆ
ಬಿಎಂಟಿಸಿ ಒಂದು ದಿನದ ಟೂರ್ ಪ್ಯಾಕೇಜ್ ವಿವರದ ಪ್ರಕಟಣೆ

ಬಿಎಂಟಿಸಿ ಟೂರ್ ಪ್ಯಾಕೇಜ್‌ನಲ್ಲಿರುವ 5 ಪ್ರವಾಸಿ ಸ್ಥಳಗಳು

ಭೋಗ ನಂದೀಶ್ವರ ದೇವಾಲಯ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಲ್ಲಿ ಇರುವ ಅತ್ಯಂತ ಪುರಾತನ ದೇವಾಲಯ. ಒಂಭತ್ತನೇ ಶತಮಾನದ ಆರಂಭಕಾಲ ಘಟ್ಟದ್ದು ಎನ್ನುತ್ತಿದೆ ಇತಿಹಾಸ. ಭಾರತದ ಪುರಾತತ್ತ್ವ ಇಲಾಖೆಯ ಪ್ರಕಾರ ಹಳೆಯ ಶಾಸನಗಳಲ್ಲಿ ಈ ಶಿವ ದೇವಾಲಯದ ನಿರ್ಮಾಣದ ಉಲ್ಲೇಖವು ನೊಳಂಬ ರಾಜವಂಶದ ದೊರೆ ನೊಳಂಬಾಧಿರಾಜ ಮತ್ತು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದನ ಕ್ರಿ.ಶ. 806 ರ ಶಾಸನಗಳಲ್ಲಿ, ಮತ್ತು ಸುಮಾರು ಕ್ರಿ.ಶ. 810ರ ಬಾಣ ರಾಜವಂಶದ ಜಯತೇಜ ಮತ್ತು ದತ್ತಿಯನ ತಾಮ್ರದ ಫಲಕಗಳಲ್ಲಿ ಇದೆ. ಈ ದೇವಾಲಯವು ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ.

ಕಣಿವೆ ಬಸವಣ್ಣ ದೇವಸ್ಥಾನ: ನಂದಿ ಬೆಟ್ಟದ ವ್ಯಾಪ್ತಿಯಲ್ಲೇ ಇರುವ ದೇಗುಲ ಇದು. ಚಿಕ್ಕಬಳ್ಳಾಪುರದ ರೈತ ಜನ ಕಣಿವೆ ಬಸವಣ್ಣನ ಮೇಲೆ ಅಪಾರ ಭಕ್ತಿ ಮತ್ತು ನಿಷ್ಠೆ ಹೊಂದಿದ್ದಾರೆ. ಸುಗ್ಗಿಯ ಸಮಯದಲ್ಲಿ ತಾವು ಬೆಳೆದ ಫಸಲಿನ ಒಂದು ಭಾಗವನ್ನು ಬಸವಣ್ಣನ ಸನ್ನಿಧಿಗೆ ಸಮರ್ಪಿಸುತ್ತಾರೆ. ಇದು ಕೂಡ ಪುರಾತನ ದೇಗುಲವಾಗಿದ್ದು, ನಂದಿಯ ಗಾತ್ರ ಬಹಳ ದೊಡ್ಡದು. ಅದುವೇ ಆಕರ್ಷಣೆ. ಭಕ್ತಿ ಶ್ರದ್ಧೆಯ ಕೇಂದ್ರ ಬಿಂದು.

ವಿಶ್ವೇಶರಯ್ಯನವರ ಸಮಾಧಿ ಮತ್ತು ಮ್ಯೂಸಿಯಂ: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯನವರು ಹುಟ್ಟಿ ಬೆಳೆದ ಊರು, ಮನೆ. ಇಲ್ಲಿಯೇ ಅವರ ಸಮಾಧಿ ಮತ್ತು ಮ್ಯೂಸಿಯಂ ಇರುವಂಥದ್ದು. ಇದು ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರ.

ರಂಗನಾಥಸ್ವಾಮಿ ದೇವಸ್ಥಾನ, ರಂಗಸ್ಥಳ- ಇದು ಕೂಡ 9ನೇ ಶತಮಾನದಷ್ಟು ಪುರಾತನ ದೇಗುಲ. ದಕ್ಷಿಣ ಭಾರತದ ಮೂರು ಪ್ರಮುಖ ರಂಗನಾಥ ಸ್ವಾಮಿ ದೇಗುಲಗಳ ಪೈಕಿ ಇದೂ ಒಂದು. ಮಕರ ಸಂಕ್ರಾಂತಿಯ ದಿನ ಇಲ್ಲಿ ದೇವರ ಪಾದಗಳಿಗೆ ನೇರವಾಗಿ ಸೂರ್ಯಕಿರಣ ಬೀಳುವುದು ವಿಶೇಷ.

ಈಶಾ ಫೌಂಡೇಶನ್: ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ ಆಕರ್ಷಣೆಯೇ ಬೃಹತ್ ಆದಿಯೋಗಿ. ಯೋಗ ಸೆಂಟರ್ ಇದಾಗಿದ್ದು, ಅನೇಕ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point