Bengaluru News: ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಗೆ ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್; ಏನಿದು ಮತ್ತು ಇತರೆ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಗೆ ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್; ಏನಿದು ಮತ್ತು ಇತರೆ ವಿವರ ಹೀಗಿದೆ

Bengaluru News: ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆಗೆ ಭಾರತದ ಮೊದಲ ಭೂಗತ ಟ್ರಾನ್ಸ್‌ಫಾರ್ಮರ್; ಏನಿದು ಮತ್ತು ಇತರೆ ವಿವರ ಹೀಗಿದೆ

Bengaluru News: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭೂಮಿಯೊಳಗೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಯಶಸ್ವಿಯಾಗಿದೆ. 500 ಕೆವಿಎ ಸಾಮರ್ಥ್ಯದ ಭೂಗತ ಪರಿವರ್ತಕ ಅಳವಡಿಕೆ ಆಗಿದ್ದು, ಇಂದು (ಸೆ.5) ಕಾರ್ಯಾರಂಭ ಮಾಡಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ ಎಂಬ ಕೀರ್ತಿಗೆ ಭಾಜನವಾಗಿದೆ. ಇದರ ವಿವರ ನೀಡಿದ್ದಾರೆ ಎಚ್. ಮಾರುತಿ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭೂಗತ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಘಟಕವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಇಂದು ಉದ್ಘಾಟಿಸಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭೂಗತ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಘಟಕವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್‌ ಇಂದು ಉದ್ಘಾಟಿಸಿದರು.

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲದಡಿಯಲ್ಲಿ 500 ಕೆವಿಎ ವಿದ್ಯುತ್‌ ಪರಿವರ್ತಕ ಕೇಂದ್ರವನ್ನು ನಿರ್ಮಿಸಲಾಗಿದೆ. ಬೆಸ್ಕಾಂ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ ಈ ಭೂಗತ ವಿದ್ಯುತ್ ಪರಿವರ್ತಕವನ್ನು ಲೋಕಾರ್ಪಣೆ ಮಾಡಿದರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಭಾಗಿಯಾಗಿದ್ದರು.

ಬೆಂಗಳೂರಿನಲ್ಲಿ ಮೇಲ್ಮಾರ್ಗದಲ್ಲಿ ಎಚ್‌ಟಿ ವಿದ್ಯುತ್‌ ತಂತಿಗಳನ್ನು ಭೂಗತವಾಗಿ ಪರಿವರ್ತಿಸುವ ಯೋಜನೆಯನ್ನು ಬೆಸ್ಕಾಂ ಈಗಾಗಲೇ ಚಾಲನೆ ನೀಡಿದೆ. ನೆಲದಡಿಯಲ್ಲಿ ಕೇಬಲ್‌ ಹಾಗೂ ವಿದ್ಯುತ್‌ ಪರಿವರ್ತಕ ವ್ಯವಸ್ಥೆಯು ಸುರಕ್ಷತೆ ಹಾಗೂ ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಸಹಕಾರಿಯಾಗಲಿದೆ.

ಭೂಗತ ವಿದ್ಯುತ್ ಪರಿವರ್ತಕ ಎಲ್ಲಿದೆ

ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದ 15ನೇ ಅಡ್ಡರಸ್ತೆ ಬಳಿ ನಿರ್ಮಿಸಿರುವ ನೆಲದಡಿಯಲ್ಲಿ ಪರಿವರ್ತಕದ ಟ್ರಾನ್ಸ್‌ಫಾರ್ಮರ್‌ ಉದ್ದ 14 ಮೀಟರ್‌, ಅಗಲ 5 ಮೀಟರ್‌ ಹಾಗೂ ಆಳ 4 ಮೀಟರ್‌ಗಳಷ್ಟಿದೆ.

ಅಂಡರ್‌ ಗ್ರೌಂಡ್ ಟ್ರಾನ್ಸ್‌ಫಾರ್ಮರ್‌ನ ವೆಚ್ಚ ಎಷ್ಟು

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಭೂಗತ ಟ್ರಾನ್ಸ್‌ಫಾರ್ಮರ್‌ನ ಸ್ಥಾಪನೆಯ ವೆಚ್ಚ ಒಟ್ಟು 1.97 ಕೋಟಿ ರೂಪಾಯಿ. ಈ ಪರಿವರ್ತಕ ಕೇಂದ್ರದ ನಿರ್ಮಾಣದಲ್ಲಿ ಸಿವಿಲ್‌ ಕಾಮಗಾರಿಗೆ 64 ಲಕ್ಷ ರೂಪಾಯಿ ವೆಚ್ಚ ತಗಲಿದ್ದು, ಎಲೆಕ್ಟ್ರಿಕಲ್‌ ಕಾಮಗಾರಿಗೆ 1.33 ಕೋಟಿ ರೂಪಾಯಿ ವೆಚ್ಚವಾಗಿದೆ.

ಭೂಮಿಯ ಅಡಿಯಲ್ಲಿ ಬೆಸ್ಕಾಂ 1.33 ಕೋಟಿ ರೂ. ವೆಚ್ಚದಲ್ಲಿ 500 ಕೆವಿಎ ತೈಲರಹಿತ ಪರಿವರ್ತಕ, 8 ವೇ ಸಾಲಿಡ್ ಸ್ಟೇಟ್ ರಿಂಗ್ ಮೈನ್ ಯುನಿಟ್, 5 ವೇ ಎಲ್.ಟಿ. ವಿತರಣಾ ಪೆಟ್ಟಿಗೆ, 2 ಕೆವಿಎ ಯುಪಿಎಸ್, 1 ಹೆಚ್.ಪಿ ವಾಟರ್ ಪಂಪ್ (ಸ್ವಯಂಚಾಲಿತ), ಹವಾನಿಯಂತ್ರಣ ವ್ಯವಸ್ಥೆ (ಸ್ವಯಂಚಾಲಿತ), ವಿದ್ಯುತ್ ದೀಪಗಳು, ಅಗ್ನಿಶಾಮಕ ಉಪಕರಣಗಳು ಸೇರಿದಂತೆ ಭೂಗತ ಪರಿವರ್ತಕ ಕೇಂದ್ರಕ್ಕೆ ಅವಶ್ಯವಿರುವ ಎಲ್ಲಾ ವಿದ್ಯುತ್ ಉಪಕರಣಗಳನ್ನು ಅಳವಡಿಸಲಾಗಿದೆ. ಈ ಯೋಜನೆಯ ಸಿವಿಲ್‌ ಕಾಮಗಾರಿಗೆ ಬಿಬಿಎಂಪಿ ರೂ. 64 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

ಈ ಕಾಮಗಾರಿ 2022ರ ಮೇ 20ರಂದು ಆರಂಭಗೊಂಡಿತ್ತು. ಈ ಕಾಮಗಾರಿಗೆ ಬಿಬಿಎಂಪಿ ಅನುದಾನ ಒದಗಿಸಿತ್ತು. ಅಲ್ಲದೇ ಈ ಯೋಜನೆಯಡಿ ವಿತರಣ ಪರಿವರ್ತಕಗಳು, ರಿಂಗ್ ಮೇನ್ ಯೂನಿಟ್ ಗಳು, ಫೀಡರ್ ಪಿಲ್ಲರ್ ಬಾಕ್ಸ್ ಗಳು ಸೇರಿದಂತೆ ಸಂಪೂರ್ಣ ವ್ಯವಸ್ಥೆಯನ್ನು ಭೂಗತವಾಗಿ ಪರಿವರ್ತಿಸಲಾಗುತ್ತಿದ್ದು, ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸುವುದರ ಜೊತೆಗೆ ವಿದ್ಯುತ್‌ ಪೂರೈಕೆ ನಷ್ಟವನ್ನು ತಗ್ಗಿಸಬಹುದಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ಕೂಡ ಈ ಯೋಜನೆ ಸಹಕಾರಿಯಾಗಲಿದೆ.

Whats_app_banner