Bengaluru Water Issue: ಕೈಗಾರಿಕೆಗಳನ್ನೂ ಕಾಡುತ್ತಿರುವ ನೀರಿನ ಸಮಸ್ಯೆ; ಬಂದ್ ಮಾಡುವ ಸ್ಥಿತಿಯಲ್ಲಿ ನೀರನ್ನೇ ಅವಲಂಬಿಸಿರುವ ಉದ್ದಿಮೆಗಳು-bengaluru news industries facing water problem in capital city of karnataka small medium class textile industry mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Water Issue: ಕೈಗಾರಿಕೆಗಳನ್ನೂ ಕಾಡುತ್ತಿರುವ ನೀರಿನ ಸಮಸ್ಯೆ; ಬಂದ್ ಮಾಡುವ ಸ್ಥಿತಿಯಲ್ಲಿ ನೀರನ್ನೇ ಅವಲಂಬಿಸಿರುವ ಉದ್ದಿಮೆಗಳು

Bengaluru Water Issue: ಕೈಗಾರಿಕೆಗಳನ್ನೂ ಕಾಡುತ್ತಿರುವ ನೀರಿನ ಸಮಸ್ಯೆ; ಬಂದ್ ಮಾಡುವ ಸ್ಥಿತಿಯಲ್ಲಿ ನೀರನ್ನೇ ಅವಲಂಬಿಸಿರುವ ಉದ್ದಿಮೆಗಳು

Bengaluru Water Issue: ಬೆಂಗಳೂರಿನಲ್ಲಿ ಕೈಗಾರಿಕೆಗಳು ಕೂಡಾ ನೀರಿನ ಸಮಸ್ಯೆ ಎದುರಿಸುತ್ತಿದ್ದು ಎಷ್ಟೋ ಉದ್ದಿಮೆಗಳು ಈ ಸಮಸ್ಯೆಯಿಂದಲೇ ಬಂದ್‌ ಮಾಡುವ ಪರಿಸ್ಥಿತಿಯಲ್ಲಿದೆ. ನೀರನ್ನೇ ಅವಲಂಬಿಸಿರುವ ಜವಳಿ, ರಾಸಾಯನಿಕ, ಪೇಪರ್‌ನಂತಹ ಕೈಗಾರಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ.

ನೀರಿನ ಸಮಸ್ಯೆ ಎದುರಿಸುತ್ತಿರುವ ಕೈಗಾರಿಕೆಗಳು ( ಸಾಂದರ್ಭಿಕ ಚಿತ್ರ)
ನೀರಿನ ಸಮಸ್ಯೆ ಎದುರಿಸುತ್ತಿರುವ ಕೈಗಾರಿಕೆಗಳು ( ಸಾಂದರ್ಭಿಕ ಚಿತ್ರ) (PC: Pixabay)

ಬೆಂಗಳೂರು: ನೀರಿನ ಸಮಸ್ಯೆ ಕೇವಲ ಮನುಷ್ಯರು, ಪ್ರಾಣಿ ಪಕ್ಷಿಗಳನ್ನು ಮಾತ್ರ ಕಾಡುತ್ತಿಲ್ಲ. ಈ ಸಮಸ್ಯೆ ಅದೆಷ್ಟು ಬಿಗಡಾಯಿಸಿದೆ ಎಂದರೆ ಕೈಗಾರಿಕೆಗಳನ್ನೂ ಬಿಟ್ಟಿಲ್ಲ. ನೀರಿನ ಕೊರತೆಯ ಕಾರಣಕ್ಕಾಗಿ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಕೈಗಾರಿಕೆಗಳು ಮತ್ತು ಕಾರ್ಮಿಕರ ಮೂಲಭೂತ ಅವಶ್ಯಕತೆಗಳಿಗೂ ನೀರು ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ನೀರಿಗೆ ಬೆಲೆ ಹೆಚ್ಚುತ್ತಿದ್ದು ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೈಗಾರಿಕೆಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಬೃಹತ್ ಕೈಗಾರಿಕೆಗಳೂ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿದ್ದು ಸದ್ಯಕ್ಕೆ ಅಪಾಯದಿಂದ ಪಾರಾಗಿವೆಯಾದರೂ ಭವಿಷ್ಯದಲ್ಲಿ ತೊಂದರೆ ತಪ್ಪಿದ್ದಲ್ಲ.

ಕೈಗಾರಿಕೆಗಳ ನೀರಿಗೆ ದುಪ್ಪಟ್ಟು ಬೆಲೆ

ಫಿನಾಯಿಲ್ ತಯಾರಿಸಲು ನೀರು ಅತ್ಯಾವಶ್ಯಕ. ಇದೀಗ ನೀರಿಗೆ ದುಪ್ಪಟ್ಟು ಬೆಲೆ ತೆರುತ್ತಿದ್ದು ಶೇ.10 ರಷ್ಟು ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ ಎಂದು ಫಿನಾಯಿಲ್ ಕಂಪನಿಯ ಪ್ರವರ್ತಕರೊಬ್ಬರು ಅಭಿಪ್ರಾಯಪಡುತ್ತಾರೆ. ನಮ್ಮ ಉದ್ದಿಮೆಯ ಆವರಣದಲ್ಲಿರುವ ಬೋರ್‌ವೆಲ್ ಬತ್ತಿ ಹೋಗಿದೆ. ಟ್ಯಾಂಕರ್ ನೀರನ್ನು ಅವಲಂಬಿಸಿದ್ದೇವೆ. ಟ್ಯಾಂಕರ್ ನೀರೂ ಸಹ ದುರ್ಲಭವಾಗಿದೆ. ಕಾರ್ಮಿಕರ ಅವಶ್ಯಕತೆಗಳಿಗೂ ನೀರಿನ ಬರ ಉಂಟಾಗಿದೆ ಎಂದು ಹೇಳುತ್ತಾರೆ.

ಎಲ್ಲಾ ಕೈಗಾರಿಕೆಗಳಿಗೂ ನೀರಿನ ಬರ ತಟ್ಟಿದೆಯಾದರೂ ನೀರನ್ನೇ ಅವಲಂಬಿಸಿರುವ ಕೈಗಾರಿಕೆಗಳ ಪರಿಸ್ಥಿತಿ ಶೋಚನೀಯವಾಗಿದೆ. ನೀರಿನ ಮೇಲೆ ಅವಲಂಬಿತವಾಗಿರುವ ಜವಳಿ, ರಾಸಾಯನಿಕ, ಪೇಪರ್‌ನಂತಹ ಕೈಗಾರಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಈ ವಲಯದ ಕೆಲವು ಕೈಗಾರಿಕೆಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಅಪಾರ ಬೆಲೆ ತೆತ್ತು ನೀರನ್ನು ತರಿಸಿಕೊಂಡು ಉದ್ದಿಮೆಗಳನ್ನು ನಡೆಸುವುದು ಅಸಾಧ್ಯ. ಆಗ ಕಾರ್ಮಿಕರ ಭವಿಷ್ಯದ ಮೇಲೆ ಹೊಡೆತ ಬೀಳುತ್ತದೆ ಎಂದು ಮತ್ತೊಬ್ಬ ಉದ್ದಿಮೆದಾರರು ಹೇಳುತ್ತಾರೆ. ಕೆಲವು ವಲಯದ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ನಿರ್ವಹಿಸಬಹುದು ಎಂದು ಕೆಲವರು ಹೇಳಬಹುದು. ಆದರೆ ಎಲ್ಲಾ ಉದ್ದಿಮೆದಾರರಿಗೂ ಇದು ಸಾಧ್ಯವಾಗುವುದಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಬೆಲೆಯನ್ನು ಹೆಚ್ಚಿಸಿ ನಿಭಾಯಿಸುವುದು ಸುಲಭ ಅಲ್ಲ. ತಾತ್ಕಾಲಿಕವಾಗಿ ಮುಚ್ಚುವುದೇ ಪರಿಹಾರ ಎಂದೂ ಅಭಿಪ್ರಾಯಪಡುತ್ತಾರೆ.

ಜವಳಿ ಉದ್ಯಮಕ್ಕೆ ದಿನಂಪತ್ರಿ 1 ಲಕ್ಷ ಲೀಟರ್ ನೀರಿನ ಅವಶ್ಯಕತೆ

ಸಣ್ಣ ಮತ್ತು ಮಧ್ಯಮ ವರ್ಗದ ಜವಳಿ ಉದ್ಯಮಕ್ಕೆ ದಿನಂಪತ್ರಿ 1 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಮಾರುಕಟ್ಟೆ ದರವನ್ನು ನೀಡಿ ನೀರನ್ನು ತರಿಸಿಕೊಂಡು ಉದ್ಯಮದಲ್ಲಿ ಉಳಿಯುವುದು ಕಷ್ಟಸಾಧ್ಯ. ಇದೇ ಪರಿಸ್ಥಿತಿ ಮುಂದುವರೆದರೆ ಹೊಸ ಆರ್ಡರ್‌ಗಳನ್ನು ತೆಗೆದುಕೊಳ್ಳುವುದು ಅಸಾಧ್ಯವಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಇನ್ನು ಗಾರ್ಮೆಂಟ್‌ಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುತ್ಥಾರೆ. ಇವರ ಮೂಲಭೂತ ಅವಶ್ಯಕತೆಗಳಿಗೂ ನೀರನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಬೇಸಿಗೆಯ ಆರಂಭದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ ಮುಂದಿನ 3-4 ತಿಂಗಳು ನಿಭಾಯಿಸುವುದಾದರೂ ಹೇಗೆ ಎಂಬ ಪ್ರಶ್ನೆ ಶುರುವಾಗಿದೆ.

ಸಂಸ್ಕರಿತ ನೀರನ್ನು ಬಳಸಲು ನಾವು ಸಿದ್ದ. ಆದರೆ ಅಂತಹ ನೀರನ್ನು ಕೈಗಾರಿಕೆಗಳವರೆಗೆ ತರುವುದಾರೂ ಹೇಗೆ? ಈ ನೀರನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸಬೇಕು. ಒಂದು ವೇಳೆ ಇಂತಹ ನೀರನ್ನು ಒದಗಿಸುವುದಾದರೆ ನಾವು ಆ ನೀರನ್ನು ಪರೀಕ್ಷೆಗೊಳಪಡಿಸಬೇಕು ಮತ್ತು ಬಳಕೆಗೆ ಯೋಜನೆಯೊಂದನ್ನು ರೂಪಿಸಬೇಕಾಗುತ್ತದೆ. ಕೈಗಾರಿಕೆಗಳಿಗೆ ಸಂಸ್ಕರಿತ ನೀರನ್ನು ಒದಗಿಸುವ ಸಂಬಂಧ ಕೈಗಾರಿಕೋದ್ಯಮಿಗಳ ಸಭೆ ಯೋಜಿಸುವುದಾಗಿ ಬೆಂಗಳೂರು ನೀರು ಸರಬರಾಜು ಮತು ಒಳಚರಂಡಿ ಮಂಡಲಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಪೈಪ್‌ಲೈನ್‌ಗಳ ಮೂಲಕ ನೀರನ್ನು ಒದಗಿಸುವ ಸಂಬಂಧ ಚರ್ಚೆ ನಡೆಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.