Bengaluru News; ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈಬಿಟ್ರು ವೈದ್ಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರ ಸುರಕ್ಷೆಗೆ ಶೀಘ್ರವೇ ಮಾರ್ಗಸೂಚಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News; ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈಬಿಟ್ರು ವೈದ್ಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರ ಸುರಕ್ಷೆಗೆ ಶೀಘ್ರವೇ ಮಾರ್ಗಸೂಚಿ

Bengaluru News; ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈಬಿಟ್ರು ವೈದ್ಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರ ಸುರಕ್ಷೆಗೆ ಶೀಘ್ರವೇ ಮಾರ್ಗಸೂಚಿ

Stipend Hike; ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈ ಬಿಟ್ಟಿದ್ದಾರೆ. ಇನ್ನೊಂದೆಡೆ ಸರ್ಕಾರ, ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ ಮಾಡಲು ಸಿದ್ದತೆ ನಡೆಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ಶಿಷ್ಯ ವೇತನ (ಸ್ಟೈ ಫಂಡ್ )ವನ್ನು ರಾಜ್ಯ ಸರ್ಕಾರ ಶೇ.25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸ್ಟೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದರು.

ಪರಿಷ್ಕೃತ ಶಿಷ್ಯ ವೇತನ ಆಗಸ್ಟ್ 1ರಿಂದಲೇ ಪೂರ್ವಾನ್ವಯವಾಇ ಜಾರಿಗೆ ಬಂದಿದ್ದು, ಶೇ.25ರಷ್ಟು ಹೆಚ್ಚಳವಾಗಿದೆ. ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದ ಬೆನ್ನಲ್ಲೇ ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ. ಈ ಮುಷ್ಕರದಿಂದ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ವೈದ್ಯ ವಿದ್ಯಾರ್ಥಿಗಳ ಪರಿಷ್ಕೃತ ಶಿಷ್ಯ ವೇತನದ ವಿವರ

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‌ - ಮಾಸಿಕ ವೇತನ

1ನೇ ವರ್ಷ – ರೂ. 45,000 ದಿಂದ 56,250

2ನೇ ವರ್ಷ- ರೂ. 50,000 ದಿಂದ 62,500

3ನೇ ವರ್ಷ- ರೂ. 55,000 ದಿಂದ 68,750

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‍ಗಳು - ಮಾಸಿಕ ವೇತನ

1ನೇ ವರ್ಷ - ರೂ. 55,000 ದಿಂದ 68,750

2ನೇ ವರ್ಷ- ರೂ. 60,000 ದಿಂದ 75,000

3ನೇ ವರ್ಷ- ರೂ. 65,000 ದಿಂದ 81,250

ಸೀನಿಯರ್ ರೆಸಿಡೆಂಟ್ಸ್ - ರೂ. 60,000 ದಿಂದ 75,000

ಕರ್ನಾಟಕಕ್ಕೆ ಈ ವರ್ಷ ಮಂಜೂರಾದ ಸೀಟುಗಳು: ಸ್ನಾತಕೋತ್ತರ - 3,540, ಸೂಪರ್ ಸ್ಪೆಷಾಲಿಟಿ -445, ಸೀನಿಯರ್ ರೆಸಿಡೆಂಟ್ - 527, ಒಟ್ಟು 4,312 ಸೀಟುಗಳು ಎಂದು ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ

ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರವೂ ಚಿಂತನೆ ನಡೆಸಿದೆ.

ಶುಕ್ರವಾರ ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ಸುಜಾತ ರಾಥೋಡ್ ಅವರಿಗೆ ಸೂಚನೆ ನೀಡಿದ್ದಾರೆ. ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು/ಪಾಲುದಾರರನ್ನು ಸಂಪರ್ಕಿಸಿ ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲಾ ನಿರ್ದೇಶಕರುಗಳು, ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ಡಾ. ಸುಜಾತ ರಾಥೋಡ್ ಅವರಿಗೆ ಸೂಚನೆ ನೀಡಲಾಗಿದೆ.

ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ತಿಳಿಸಿದ್ದಾರೆ. ಈ ಮಾರ್ಗಸೂಚಿಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner