ಡಾಕ್ಟರ್ ಅರುಣ ಸೋಮಣ್ಣ ವಿರುದ್ಧ ಎಫ್‌ಐಆರ್; ವಂಚನೆ, ಜೀವಬೆದರಿಕೆ ಆರೋಪ, ಕೇಂದ್ರ ಸಚಿವ ವಿ ಸೋಮಣ್ಣ ಪುತ್ರನಿಗೆ ಬಂಧನದ ಭೀತಿ
ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರ ಅರುಣ ಸೋಮಣ್ಣ ವಿರುದ್ಧ ಕೋರ್ಟ್ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ವಂಚನೆ, ಜೀವ ಬೆದರಿಕೆ ಆರೋಪ ಎದುರಿಸುತ್ತಿರುವ ಸಚಿವರ ಪುತ್ರನಿಗೆ ಬಂಧನ ಭೀತಿ ಎದುರಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಕಿದಕ್ಕೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಆರಂಭದಲ್ಲಿ ಪ್ರಭಾವಿ ಎಂಬ ಕಾರಣಕ್ಕೆ ಸಂಜಯ ನಗರ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ದೂರುದಾರರು ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದಿದ್ದಕ್ಕೆ ದೂರು ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ನೋಡಿದರೆ ಯಾವುದೇ ಕ್ಷಣದಲ್ಲಿ ಅರುಣ್ ಅವರನ್ನು ಬಂಧಿಸುವ ಸಾಧ್ಯತೆಗಳಿವೆ.
ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ಸಂಜಯನಗರದ ನಿವಾಸಿಗಳಾಗಿರುವ ದಂಪತಿಗೆ ಅರುಣ್ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಇದಾಗಿದೆ. ಸಂಜಯನಗರದ ಎಇಸಿಎಸ್ ಲೇಔಟ್ ನಿವಾಸಿ ತೃಪ್ತಿ ಹೆಗಡೆ ಮತ್ತು ಮಧ್ವರಾಜ್ ದಂಪತಿ ಈ ದೂರು ಸಲ್ಲಿಸಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಅರುಣ್ ಸೋಮ್ಣ ವಿರುದ್ಧ ಎಫ್‌ಐಆರ್
ಆರಂಭದಲ್ಲಿ ಪೊಲೀಸರು ಅರುಣ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆಗ ತೃಪ್ತಿ ಹೆಗಡೆ ದಂಪತಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ 37ನೇ ಚೀಫ್ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೂರು ದಾಖಲಿಸಿಕೊಳ್ಳಲು ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಪೊಲೀಸರು ಅರುಣ್ ಸೋಮಣ್ಣ, ಪ್ರಮೋದ್ ರಾವ್ ಮತ್ತು ಜೀವನ್ ಎಂಬುವರ ವಿರುದ್ಧ ಎಫ ಐ ಆರ್ ದಾಖಲಿಸಿಕೊಂಡಿದ್ದಾರೆ.
ದೂರು ಸಲ್ಲಿಸಿರುವ ತೃಪ್ತಿ ಹೆಗಡೆ ಮತ್ತು ಮಧ್ವರಾಜ್ ದಂಪತಿ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ನಡೆಸುತ್ತಿದ್ದಾರೆ. ಇವರು ಸುಮಾರು ಎರಡು ದಶಕಗಳಿಂದ ಮಾರ್ಕೆಟಿಂಗ್ ಮತ್ತು ಈವೆಂಟ್ ಮ್ಯಾನೇಜ್ ಮೆಂಟ್ ಮತ್ತು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
2013ರಲ್ಲಿ ಮಧ್ವರಾಜ್ ಅವರು ಸರ್ಕಾರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಇವರಿಗೆ ಅರುಣ್ ಅವರ ಪರಿಚಯವಾಗಿತ್ತು. ಅಂದಿನಿಂದ ಇಬ್ಬರ ಬಾಂಧವ್ಯ ಮುಂದುವರದಿತ್ತು. 2017ರಲ್ಲಿ ಅರುಣ್ ಅವರ ಪುತ್ರಿಯ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮಧ್ವರಾಜ್ ಅವರೇ ಆಯೋಜಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು. ಇದರಿಂದ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿತ್ತು.
ಜಂಟಿ ಉದ್ಯಮ ಶುರುಮಾಡಿದಲ್ಲಿಂದ ಸಮಸ್ಯೆ ಶುರು
ನಂತರ 2019ರಲ್ಲಿ ಅರುಣ್ ಮತ್ತು ಮಧ್ವರಾಜ್ ಜಂಟಿಯಾಗಿ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಹುಟ್ಟು ಹಾಕುತ್ತಾರೆ. ಆದರೆ ಮಧ್ವರಾಜ್ ಯಾವುದೇ ಬಂಡವಾಳ ಹೂಡಿಕೆ ಮಾಡಿರಲಿಲ್ಲ. ಈ ಕಂಪನಿಗೆ ಬೇಕಾದ ಸಂಪೂರ್ಣ ಬಂಡವಾಳವನ್ನು ಅರುಣ್ ಅವರೇ ನೋಡಿಕೊಂಡಿದ್ದರು. ಆರಂಭದಲ್ಲಿ ಈ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಕಂಪನಿಯ ವ್ಯವಹಾರ ಲಾಭನಷ್ಟ ಕುರಿತು ಮಧ್ವರಾಜ್ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ.
ಮಧ್ವರಾಜ್ ಕೇಳಿದಾಗಲೂ ಅರುಣ್ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಅಲ್ಲಿಂದ ಇಬ್ಬರ ಸಂಬಂಧ ಹಳಸುತ್ತಾ ಬಂದಿತ್ತು. ಕೆಲವು ತಿಂಗಳ ಬಳಿಕ ಅರುಣ್ ಕಂಪನಿಗೆ ರಾಜೀನಾಮೆ ನೀಡುವಂತೆ ಮದ್ವರಾಜ್ ಅವರಿಗೆ ತಾಕೀತು ಮಾಡುತ್ತಾರೆ. ಆದರೆ ಮಧ್ವರಾಜ್ ರಾಜೀನಾಮೆ ನೀಡುವುದಿಲ್ಲ. ಇದರಿಂದ ಕೆರಳಿದ ಅರುಣ್ ಮಧ್ವರಾಜ್ ಗೆ ಕಿರುಕುಳ ನೀಡಲು ಆರಂಭಿಸಿದ್ದರು. ಕಂಪನಿಗೆ ಹೊಸ ಪಾಲುದಾರರನ್ನು ನೇಮಕ ಮಾಡಿಕೊಂಡಿದ್ದರು.
ಲಾಭದ ಪಾಲನ್ನು ಕೇಳಿದಾಗ ಅರುಣ್ ಜೀವ ಬೆದರಿಕೆ ಒಡ್ಡುತ್ತಾರೆ. ಲಾಭದ ಪ್ರಮಾಣವನ್ನು ಶೇ.30ರಿಂದ ಶೇ.10ಕ್ಕೆ ಇಳಿಸುತ್ತಾರೆ. ಕಂಪನಿಯ ಕಚೇರಿ ವಿಳಾಸವನ್ನು ಬದಲಾಯಿಸುತ್ತಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡುತ್ತಾರೆ. ಕೊನೆಗೆ ಗೂಂಡಾಗಳನ್ನು ಬಿಟ್ಟು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂಜಯನಗರ ಪೊಲೀಸರು ಅರುಣ್ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆ, ಅವಮಾನ, ಜೀವಭಯ, ವಂಚನೆ,ಅಪಹರಣ ಮತ್ತಿತರ ಆರೋಪಗಳನ್ನು ಹೊರಿಸಿ ಎಫ್ ಐಆರ್ ದಾಖಲು ಮಾಡಿದ್ದಾರೆ. ಈ ಪ್ರಕರಣಗಳು ಜಾಮೀನು ರಹಿತ ಪ್ರಕರಣಗಳಾಗಿದ್ದು, ಅರುಣ್ ಮತ್ತು ಅವರ ಮತ್ತಿಬ್ಬರು ಸಂಗಡಿಗರು ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.