Namma Metro: ಸಹಜ ಸ್ಥಿತಿಯತ್ತ ನಮ್ಮ ಮೆಟ್ರೋ ಹಸಿರು ಮಾರ್ಗ, 12 ಗಂಟೆ ಬಳಿಕ ಕ್ರೇನ್ ಮೂಲಕ ರೀ ರೈಲು ತೆರವು
ಬೆಂಗಳೂರಿನ ನಮ್ಮ ಮೆಟ್ರೋ ಯಶವಂತಪುರ ಮಾರ್ಗದಲ್ಲಿ ನಿರ್ವಹಣಾ ವಾಹನ ಹಳಿತಪ್ಪಿದ್ದರ ಪರಿಣಾಮ ಬಹಳ ಹೊತ್ತು ಮೆಟ್ರೋ ಪ್ರಯಾಣಿಕರು ಸಂಚಾರದ ವಿಚಾರದಲ್ಲಿ ತೊಂದರೆ ಅನುಭವಿಸಬೇಕಾಗಿ ಬಂತು. ಕೊನೆಗೆ ಅಪರಾಹ್ನ 3.40ಕ್ಕೆ ನಿರ್ವಹಣಾ ವಾಹನವನ್ನು ಹಳಿಯಿಂದ ತೆರವುಗೊಳಿಸಿ ಮೆಟ್ರೋ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಬೆಂಗಳೂರು: ಹಳಿ ತಪ್ಪಿದ್ದ ನಿರ್ವಹಣಾ ವಾಹನ ರೀರೈಲನ್ನು ಕ್ರೇನ್ ಮೂಲಕ ಮೇಲೆತ್ತಿ ಸರಿಪಡಿಸಿದ ಬಳಿಕ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಂಚಾರ ಇಂದು (ಅ.3) ಅಪರಾಹ್ನ 3.40ಕ್ಕೆ ಮತ್ತೆ ಶುರುವಾಗಿದೆ.
ಮೆಟ್ರೋ ಪ್ರಯಾಣಿಕರ ಅನನುಕೂಲತೆಯನ್ನು ಕಡಿಮೆ ಮಾಡಲು ಮೊದಲು ಯಶವಂತಪುರ, ಬಳಿಕ ರಾಜಾಜಿನಗರದಿಂದ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ವರೆಗೆ ಎಲ್ಲ ಕಾರ್ಯಾಚರಣೆ ವಿಧಾನವನ್ನು ಅನುಸರಿಸಿ ಇಂದು ಬೆಳಗ್ಗೆ 6.30ರಿಂದ ಅಪರಾಹ್ನ 2 ಗಂಟೆ ತನಕ ಏಕಮುಖ ಸಂಚಾರ ನಡೆಸಲಾಗಿತ್ತು ಎಂದು ನಮ್ಮ ಮೆಟ್ರೋ ತಿಳಿಸಿದೆ.
ಯಶವಂತಪುರದಿಂದ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣ ತನಕದ ಕಾರ್ಯಾಚರಣೆಯನ್ನು ಅಪರಾಹ್ನ 2 ಗಂಟೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರೀ ರೈಲು ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ನಮ್ಮ ಮೆಟ್ರೋ ತಿಳಿಸಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ 12 ಗಂಟೆ ಕಾಲ ಅಡಚಣೆ
ರೀ ರೈಲನ್ನು ಕೊನೆಗೂ ಮೇಲೆತ್ತಲಾಗಿದೆ. ಸತತ 12 ಗಂಟೆಗಳ ಕಾರ್ಯಾಚರಣೆ ಫಲ ನೀಡದೆ, ಕೊನೆಗೆ ಕ್ರೇನ್ ಮೂಲಕ ನಿರ್ವಹಣಾ ವಾಹನವನ್ನು ಮೇಲಕ್ಕೆ ಎತ್ತಲಾಗಿದೆ.
ರಾಜಾಜಿನಗರದ ಮೆಟ್ರೋ ಟ್ರ್ಯಾಕ್ ಮೇಲೆ 17 ಟನ್ ತೂಕದ ಮೇಂಟೆನೆನ್ಸ್ ವಾಹನ ಹಳಿತಪ್ಪಿ ನಿಂತಿತ್ತು. ಈ ರೀ ರೈಲಿನ ಚಕ್ರಗಳು ಜಾಮ್ ಆದ ಕಾರಣ ವಾಪಸ್ ಹಳಿ ಮೇಲೆ ಕೂರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, 200 ಟನ್ ಅನ್ನು ಮೇಲೆತ್ತೆವ ಕ್ರೇನ್ ಬಳಸಿ ರೀ ರೈಲನ್ನು ಟ್ರ್ಯಾಕ್ ನಿಂದ ಹೊರ ತರಲಾಯಿತು.
ಇದನ್ನೂ ಓದಿ| ಹಸಿರು ಮಾರ್ಗದ ಮೆಟ್ರೋ ಸೇವೆ ವ್ಯತ್ಯಯ: ಬೆಂಗಳೂರಲ್ಲಿ ಪ್ರಯಾಣಿಕರ ಪರದಾಟ
ರೀ ರೈಲನ್ನು ಅದರ ನಾಲ್ಕು ಕಡೆಗೂ ಬೆಲ್ಟ್ ಹಾಕಿ ಕ್ರೇನ್ ಮೂಲಕ ನಿಧಾನವಾಗಿ ಮೇಲೆತ್ತಿ ನಂತರ ಕೆಳಗೆ ಹಳಿಯಲ್ಲಿ ಸರಿಯಾಗಿ ಕೂರಿಸಲಾಯಿತು ಎಂದು ಆಪರೇಷನ್ ಆ್ಯಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ನಮ್ಮ ಮೆಟ್ರೋ ನೆಟ್ ವರ್ಕ್ ವಿಸ್ತರಣೆ ಆಗುತ್ತಿದೆ. ಪ್ರತಿ ಡಿಪೋದಲ್ಲಿ ರೋಡ್ ಕಂ ರೈಲ್ವೆ ವೆಹಿಕಲ್ ಇರುತ್ತದೆ. ಮೆಟ್ರೋ ರೈಲು ಕೆಟ್ಟು ನಿಂತರೆ ಅದನ್ನು ಈ ರೈಲ್ವೆ ವೆಹಿಕಲ್ ಹಳಿಯಲ್ಲಿ ಹೋಗಿ ಸರಿ ಪಡಿಸುತ್ತದೆ. ಈ ರೋಡ್ ಕಂ ರೈಲಿನಲ್ಲಿ ಮೆಟ್ರೋ ಸರಿಪಡಿಸುವ ಗ್ಯಾಜೇಟ್ಸ್ ಗಳಿರುತ್ತದೆ. ಸೋಮವಾರ ರಾತ್ರಿ ಈ ವೆಹಿಕಲ್ ಕಾರ್ಯಾಚರಣೆಗೆ ಹೋದಾಗ ಕೆಟ್ಟು ಹೋಗಿದ್ಯಾ ಅಥವಾ ಹಳಿ ತಪ್ಪಿದ್ಯಾ ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದರು.