Digital Warrior: ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ, ಸುಳ್ಳು ಸುದ್ದಿ, ಸೈಬರ್‌ ಬೆದರಿಕೆ ತಡೆಗೆ ಡಿಜಿಟಲ್ ವಾರಿಯರ್ಸ್‌, ಸೈಬರ್ ಕ್ಲಬ್‌ಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Digital Warrior: ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ, ಸುಳ್ಳು ಸುದ್ದಿ, ಸೈಬರ್‌ ಬೆದರಿಕೆ ತಡೆಗೆ ಡಿಜಿಟಲ್ ವಾರಿಯರ್ಸ್‌, ಸೈಬರ್ ಕ್ಲಬ್‌ಗಳು

Digital Warrior: ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ, ಸುಳ್ಳು ಸುದ್ದಿ, ಸೈಬರ್‌ ಬೆದರಿಕೆ ತಡೆಗೆ ಡಿಜಿಟಲ್ ವಾರಿಯರ್ಸ್‌, ಸೈಬರ್ ಕ್ಲಬ್‌ಗಳು

UP Digital Warrior: ಉತ್ತರ ಪ್ರದೇಶದಲ್ಲಿ 2025ರ ಜನವರಿ 13 ರಿಂದ ಫೆಬ್ರವರಿ 26 ರ ತನಕ ಮಹಾ ಕುಂಭಮೇಳ ನಡೆಯಲಿದೆ. ಇದಕ್ಕೆ ಭರದ ಸಿದ್ಧತೆ ನಡೆದಿದೆ. ಈ ನಡುವೆ ಎದುರಾಗುತ್ತಿರುವ ಸುಳ್ಳು ಸುದ್ದಿ, ಸೈಬರ್ ಬೆದರಿಕೆಗಳನ್ನು ಎದುರಿಸುವುದಕ್ಕೆ ಪೊಲೀಸ್ ಇಲಾಖೆ ಡಿಜಿಟಲ್ ವಾರಿಯರ್ಸ್‌ ಅನ್ನು ನಿಯೋಜಿಸುತ್ತಿದ್ದು, ಸೈಬರ್ ಕ್ಲಬ್‌ಗಳನ್ನು ಸ್ಥಾಪಿಸುತ್ತಿದೆ.

ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಸುಳ್ಳು ಸುದ್ದಿ, ಸೈಬರ್‌ ಬೆದರಿಕೆ ತಡೆಗೆ ಡಿಜಿಟಲ್ ವಾರಿಯರ್ಸ್‌, ಸೈಬರ್ ಕ್ಲಬ್‌ಗಳನ್ನು ರೂಪಿಸಲಾಗುತ್ತಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಸುಳ್ಳು ಸುದ್ದಿ, ಸೈಬರ್‌ ಬೆದರಿಕೆ ತಡೆಗೆ ಡಿಜಿಟಲ್ ವಾರಿಯರ್ಸ್‌, ಸೈಬರ್ ಕ್ಲಬ್‌ಗಳನ್ನು ರೂಪಿಸಲಾಗುತ್ತಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. (Pexel, Canva, ANI)

UP Digital Warrior: ಉತ್ತರ ಪ್ರದೇಶ 2025ರ ಜನವರಿ 13 ರಿಂದ ಫೆಬ್ರವರಿ 26 ರ ತನಕ ನಡೆಯಲಿರುವ ಮಹಾ ಕುಂಭಮೇಳಕ್ಕೆ (Maha Kumbh Mela 2025) ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸುಳ್ಳು ಸುದ್ದಿ ಮತ್ತು ಸೈಬರ್ ವಂಚನೆಗಳನ್ನು ಎದುರಿಸುವುದಕ್ಕಾಗಿ ಉತ್ತರ ಪ್ರದೇಶ ಪೊಲೀಸರು ವಿಶಿಷ್ಟ ಉಪಕ್ರಮವನ್ನು ಶುರುಮಾಡಿದ್ದಾರೆ. ಈ ಅಭಿಯಾನವು ಸುಳ್ಳು ಸುದ್ದಿ ಮತ್ತು ಸೈಬರ್ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು ಮತ್ತು ಎದುರಿಸಲು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ.

ಮಹಾ ಕುಂಭಮೇಳ 2025; ಸುಳ್ಳು ಸುದ್ದಿ, ಸೈಬರ್ ವಂಚನೆ ತಡೆಗೆ ಡಿಜಿಟಲ್‌ ವಾರಿಯರ್ಸ್

ಉತ್ತರ ಪ್ರದೇಶದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರ ತನಕ ನಡೆಯಲಿರುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯಲ್ಲೂ ಸಿದ್ದತೆ ನಡೆಸಿದೆ. ಸುಳ್ಳು ಸುದ್ದಿ ಮತ್ತು ಸೈಬರ್ ವಂಚನೆ ತಡೆಯುವುದಕ್ಕಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಸುಳ್ಳು ಸುದ್ದಿ, ಸೈಬರ್ ಬೆದರಿಕೆಗಳನ್ನು ಗುರುತಿಸುವ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ತರಬೇತಿ ನೀಡುತ್ತಿದೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ. ಈ ತರಬೇತಿ ಪಡೆದವರಿಗೆ ಡಿಜಿಟಲ್ ವಾರಿಯರ್ಸ್ ಸರ್ಟಿಫಿಕೇಟ್ ನೀಡಿ ಅವರನ್ನು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸಹಕಾರಿಗಳನ್ನಾಗಿ ಬಳಸಿಕೊಳ್ಳತೊಡಗಿದೆ.

ಉತ್ತರ ಪ್ರದೇಶದಲ್ಲಿ 2018 ರಿಂದ, ಪೊಲೀಸ್ ಇಲಾಖೆಯು "ಡಿಜಿಟಲ್ ವಾಲಂಟಿಯರ್ಸ್‌" (Digital Volunteers) ಅನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸದಲ್ಲಿ ಬಳಸಿಕೊಳ್ಳುತ್ತಿದೆ. ಈಗ ಈ ಸ್ವಯಂಸೇವಕರ ವ್ಯಾಪ್ತಿ ವಿಸ್ತರಿಸಲ್ಪಟ್ಟಿದ್ದು, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಸ್ವಯಂ ಸೇವಕರಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಸೈಬರ್ ಕ್ಲಬ್‌ಗಳನ್ನೂ ರಚಿಸಲಾಗಿದ್ದು, 2023ರಲ್ಲಿ ವಾಟ್ಸ್ಆಪ್‌ನಲ್ಲಿ ಸಮುದಾಯ ಫೀಚರ್ ಸಿಕ್ಕ ಬಳಿಕ ಎಲ್ಲರನ್ನೂ ಸಮುದಾಯ ಗುಂಪುಗಳನ್ನಾಗಿ ಒಗ್ಗೂಡಿಸಲಾಗಿದೆ. ಇದರಲ್ಲಿ 2 ಲಕ್ಷ ಪೊಲೀಸರೂ ಇದ್ದಾರೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.

ಡಿಜಿಟಲ್ ವಾಲಂಟಿಯರ್ಸ್ ಈಗ ಡಿಜಿಟಲ್ ವಾರಿಯರ್ಸ್‌, ತರಬೇತಿ ಮತ್ತು ಕರ್ತವ್ಯ

ಕಾಲಾನುಕ್ರಮದಲ್ಲಿ ಡಿಜಿಟಲ್ ಬೆದರಿಕೆಗಳ ಸ್ವರೂಪ ಬದಲಾಗಿದೆ. ಸವಾಲುಗಳು ಕೂಡ ಬದಲಾಗುತ್ತಿವೆ. ಹೀಗಾಗಿ, ಈಗ ಇರುವಂತಹ ಡಿಜಿಟಲ್ ವಾಲಂಟಿಯರ್ಸ್ ಅನ್ನು ಡಿಜಿಟಲ್ ವಾರಿಯರ್ಸ್ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಗೂಗಲ್ ಫಾರ್ಮ್‌ ಮೂಲಕ ಮಾಹಿತಿ ಸಂಗ್ರಹಿಸಿ ಡಿಜಿಟಲ್‌ ವಾರಿಯರ್ಸ್‌ ತರಬೇತಿಗೆ ಅರ್ಹರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ಅವರಿಗೆ ಪ್ರಮಾಣ ಪತ್ರವನ್ನೂ ನೀಡಿ, ಕೆಲಸದಲ್ಲಿ ತೊಡಗಿಸಲಾಗುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನೇ ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.

1) ಡಿಜಿಟಲ್ ವಾರಿಯರ್ಸ್‌ ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವರು ತಮ್ಮ ಸುತ್ತಮುತ್ತ ನಡೆಯುವ ಸಣ್ಣ ಪುಟ್ಟ ಘಟನೆಗಳನ್ನು ವಿಶೇಷವಾಗಿ ಡಿಜಿಟಲ್ ವಂಚನೆ ಪ್ರಕರಣಗಳನ್ನು ಸ್ಥಳೀಯ ಪೊಲೀಸರಿಗೆ ತಿಳಿಸುತ್ತಿರುತ್ತಾರೆ.

2) ಸುಳ್ಳು ಸುದ್ದಿಗಳನ್ನು ಗುರುತಿಸಿ, ಸೈಬರ್ ಬೆದರಿಕೆಗಳನ್ನು ಗುರುತಿಸಿ ಸ್ಥಳೀಯ ಠಾಣೆಗಳ ಪೊಲೀಸರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಾರೆ. ಈ ಮಾಹಿತಿಯು ಪೊಲೀಸರ ಕಾರ್ಯಾಚರಣೆಗೆ ವೇಗ ಒದಗಿಸುತ್ತದೆ.

3) ಡಿಜಿಟಲ್ ವಾರಿಯರ್ಸ್ ನೀಡುವ ಮಾಹಿತಿಯು ಪೊಲೀಸರಿಗೆ ನೈಜ ಸಮಯದ ಮಾಹಿತಿಯನ್ನು ಒದಗಿಸುತ್ತದೆ. ಸಮಸ್ಯೆಗಳು ಉಲ್ಬಣಗೊಳ್ಳುವ ಮೊದಲೇ ಅವುಗಳನ್ನು ಪರಿಹರಿಸುವ ಕೆಲಸ ಪೊಲೀಸರು ಮಾಡಲು ನೆರವಾಗುತ್ತಿದೆ.

4) ಶಾಲಾ ಮತ್ತು ಕಾಲೇಜುಗಳಲ್ಲಿ "ಸೈಬರ್ ಕ್ಲಬ್" ಗಳನ್ನು ಸ್ಥಾಪಿಸಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಈ ಕ್ಲಬ್‌ಗಳನ್ನು ಡಿಜಿಟಲ್ ಯೋಧರು ಮುನ್ನಡೆಸುತ್ತಾರೆ. ಅವರು ಪೊಲೀಸರಿಗೆ ಸಹಾಯ ಮಾಡಲು, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಲು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಒಂದು ನೋಡಲ್ ಆಡಳಿತದೊಂದಿಗೆ ಸಮನ್ವಯ ಸಾಧಿಸಲು ಪ್ರತಿ ಶಾಲೆ ಅಥವಾ ಕಾಲೇಜಿನಲ್ಲಿ ಶಿಕ್ಷಕರನ್ನು ನೇಮಿಸಲಾಗುತ್ತದೆ.

5) ಡಿಜಿಟಲ್ ವಾರಿಯರ್ಸ್ ಉಪಕ್ರಮದಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಕಾಲೇಜು/ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನೆಟ್‌ವರ್ಕ್ ಅನ್ನು ರೂಪಿಸುವುದಾಗಿದೆ. ಆ ಮೂಲಕ ನಾಲ್ಕು ಪ್ರಮುಖ ಹೊಣೆಗಾರಿಕೆಗಳು ಅಂದರೆ ಸುಳ್ಳು ಸುದ್ದಿ, ತಪ್ಪು ಮಾಹಿತಿಯ ವಿರುದ್ಧ ಹೋರಾಡುವುದು, ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸುವುದು, ಸಾರ್ವಜನಿಕರಿಗೆ ಶಿಕ್ಷಣ ನೀಡಲು ಸೈಬರ್ ತರಬೇತುದಾರರಾಗಿ ಸೇವೆ ಸಲ್ಲಿಸುವುದು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪೊಲೀಸ್ ಪ್ರಚಾರಗಳು ಮತ್ತು ಸಾಧನೆಗಳನ್ನು ಉತ್ತೇಜಿಸುವುದು ಪೊಲೀಸರ ಹೊಣೆಗಾರಿಕೆಗಳಾಗಿರುತ್ತವೆ.

ಮುಂಬರುವ ಮಹಾ ಕುಂಭಮೇಳದೊಂದಿಗೆ ಈ ಉಪಕ್ರಮಗಳು ಜೋಡಿಸಲ್ಪಟ್ಟಿವೆ. ಮಹಾ ಕುಂಭಮೇಳದಲ್ಲಿ 30 ರಿಂದ 40 ಕೋಟಿ ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರಯಾಗ್‌ ರಾಜ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ಮುಗಿಸಲು ಸರ್ಕಾರ ಪ್ರಯತ್ನಿಸಿದೆ. ಇದರ ಭಾಗವಾಗಿ, ಪೊಲೀಸರು ಡಿಜಿಟಲ್ ವಾರಿಯರ್‌ಗಳ ಸಹಾಯವನ್ನು ವಾಟ್ಸಾಪ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಜಾಗೃತಿ ಮೂಡಿಸಲು ಮತ್ತು ಸೈಬರ್ ಅಪರಾಧಗಳನ್ನು ತಡೆಯಲು ಬಳಸಿಕೊಳ್ಳಲಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.