ಮಹಿಳೆಗೆ ಅಂಟಿಕೊಂಡಂತೆ ಕೂತ ಕಂಡಕ್ಟರ್; ನಿರ್ವಾಹಕನ ಜತೆಗೆ ವಿಡಿಯೋ ತೆಗೆದವನಿಗೂ ಬೆಂಡೆತ್ತಿದ ನೆಟ್ಟಿಗರು, ಕಾರಣ ಇಷ್ಟೆ!
BMTC Conductor behaviour: ಎಂಟಿಸಿ ಕಂಟಕ್ಟರ್ವೊಬ್ಬರು ಮಹಿಳೆಯೊಬ್ಬರು ಸೀಟ್ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನಸ್ನೇಹಿ ಸೇವೆ ಸಲ್ಲಿಸುತ್ತದೆ ಎನ್ನುತ್ತಾರೆ. ಆದರೆ ಇಷ್ಟೊಂದು ಜನಸ್ನೇಹಿ ಆಗಬಾರದು ಎನ್ನುವಂತಿದೆ ಇಲ್ಲೊಂದು ವೈರಲ್ ಆದ ವಿಡಿಯೋ. ಬಿಎಂಟಿಸಿ ಕಂಟಕ್ಟರ್ವೊಬ್ಬರು (BMTC Conductor behaviour) ಮಹಿಳೆಯೊಬ್ಬರು ಸೀಟ್ಗೆ ಅಂಟಿಕೊಂಡಂತೆ ಕೂತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ಕಂಡಕ್ಟರ್ಗೆ ಮಾತ್ರವಲ್ಲ, ಮಹಿಳೆ ವಿರುದ್ಧವೂ ಗರಂ ಆಗಿದ್ದಾರೆ.
ದಿನವಿಡೀ ಸೇವೆ ಸಲ್ಲಿಸುವ ಕಾರಣಕ್ಕಾಗಿ ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ಗೆಂದೇ ಒಂದು ಸೀಟ್ ಮೀಸಲಿರುತ್ತದೆ. ಅಲ್ಲಿ ಯಾರು ಕೂರುವಂತಿಲ್ಲ, ಕೂತರೂ ಎಬ್ಬಿಸುತ್ತಾರೆ. ಹೀಗಿದ್ದರೂ ಇಲ್ಲೊಬ್ಬ ಕಂಡಕ್ಟರ್, ಅದನ್ನೆಲ್ಲಾ ಬಿಟ್ಟು ಮಹಿಳೆ ಕೂತಿರುವ ಸೀಟ್ಗೆ ಒರಗಿ ಕುಳಿತುಕೊಂಡಿದ್ದಾನೆ. ಈ ವಿಡಿಯೋವನ್ನು @nammabengaluroo ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಕಂಡಕ್ಟರ್ರ ಈ ವರ್ತನೆಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ.
ಈ ಪೋಸ್ಟ್ ಹಂಚಿಕೊಂಡ @nammabengaluroo ಖಾತೆಯಲ್ಲಿ ಈ ಹೀಗೆ ಬರೆಯಲಾಗಿದೆ. ಕಂಡಕ್ಟರ್‌ಗಳ ಸೀಟು ಮುಂಭಾಗದಲ್ಲಿರಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಹೀಗೆ ಕುಳಿತಿರುವುದನ್ನು ಒಮ್ಮೆ ನೋಡಿ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ. ತುಂಬಾ ಅಭದ್ರತೆ ಕಾಡುವಂತಿದೆ. ಈ ರೀತಿಯ ಕ್ರಮದಿಂದ ಹುಡುಗಿಯರಿಗೆ ಗೌರವ ಸಿಗುತ್ತಿಲ್ಲ. ದಯವಿಟ್ಟು ಸ್ವಲ್ಪ ಕ್ರಮ ತೆಗೆದುಕೊಳ್ಳಿ ಎಂದು ಬಸ್ ಸಂಖ್ಯೆ KA41D2500 ಯನ್ನು ಬರೆದು ಬಿಎಂಟಿಸಿಗೆ (@bmtc_official) ಟ್ಯಾಗ್ ಮಾಡಿದ್ದಾರೆ.
ಆಕ್ಷೇಪ ವ್ಯಕ್ತಪಡಿಸದ ಪ್ರಯಾಣಿಕರು
ಈ ಪೋಸ್ಟ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರೂ ಬಸ್ನಲ್ಲಿದ್ದ ಯಾರೊಬ್ಬರೂ ಸಹ ಇದಕ್ಕೆ ವಿರುದ್ಧವಾಗಿ ಮಾತನಾಡಿಲ್ಲ. ಇಂಟರ್ನೆಟ್ನಲ್ಲಿ ಎಲ್ಲೋ ಕೂತು ಹೆಣ್ಣುಮಕ್ಕಳ ರಕ್ಷಣೆ, ಗೌರವ, ಅಭದ್ರತೆ ಕುರಿತು ಹಾಗೇ ಹೀಗೆ ಎಂದು ಹೇಳುವವರು ಕಣ್ಣಾರೆ ಕಂಡರೂ ಏಕೆ ಮಾತನಾಡಲಿಲ್ಲ ಎನ್ನುವುದು ಕೂಡ ದೊಡ್ಡ ಪ್ರಶ್ನೆಯೇ ಆಗಿದೆ. ಬಸ್ನಲ್ಲಿ ಕಂಡಕ್ಟರ್, ಯುವತಿಗೆ ಅಂಟಿಕೊಂಡಂತೆ ಕೂತರೂ ಸಹ ಯಾರೂ ಈ ಯಾಕೆ ಧ್ವನಿ ಎತ್ತಿಲ್ಲ?
ವಿಡಿಯೋ ಮಾಡೋ ಬದಲಿಗೆ ಬುದ್ದಿ ಹೇಳಬೇಕಿತ್ತು
ಈ ಪೋಸ್ಟ್ಗೆ ಕಾಮೆಂಟ್ ನೋಡುವುದಾದರೆ, ಬಹುತೇಕ ಮಂದಿ ಕಂಡಕ್ಟರ್ಗೆ ಬೈದಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಕಂಡಕ್ಟರ್ ಕೂತಿದ್ದನ್ನು ವಿಡಿಯೋ ಸೆರೆ ಹಿಡಿದ ವ್ಯಕ್ತಿಯೂ ಸಹ ಈ ಬಗ್ಗೆ ಧ್ವನಿ ಎತ್ತಿಲ್ಲ. ಇದಕ್ಕೆಲ್ಲಾ ಕೇವಲ ವಿಡಿಯೋ ಸೆರೆ ಮಾಡಿ, ಹಂಚಿಕೊಳ್ಳುವುದಕ್ಕೆ ಸೀಮಿತವಾಯಿತಾ? ಇದರಿಂದ ಕೆಲವೊಂದಿಷ್ಟು ಲೈಕ್, ಕಾಮೆಂಟ್ ಪಡೆಯುವುದು ಇದರ ಉದ್ದೇಶವೇ? ವಿಡಿಯೋ ಮಾಡುವುದರ ಬದಲಿಗೆ ಕಂಡಕ್ಟರ್ಗೆ ಬುದ್ದಿವಾದ ಹೇಳಬಹುದಿತ್ತಲ್ಲವೇ? ಎಂಬುದು ಕೆಲವರ ವಾದ.
ಯುವತಿಗೂ ನೆಟ್ಟಿಗರಿಂದ ತರಾಟೆ
ಕೆಲವರು ಆ ಯುವತಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ಕಂಡಕ್ಟರ್ ತನಗೆ ಒತ್ತಿಕೊಂಡಂತೆ ಕೂತಿದ್ದರೂ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲವೇಕೆ? ಬೇರೊಬ್ಬರು ಈ ಬಗ್ಗೆ ಮಾತನಾಡಲಿ ಎಂದು ಕಾಯುತ್ತಿದ್ದರೆ? ಹುಡುಗಿಗೆ ಯಾವುದೇ ಸಮಸ್ಯೆ ಇಲ್ಲದಿದ್ದಾಗ ಅದು ಸಮಸ್ಯೆಯಂತೆ ಕಾಣುವುದಿಲ್ಲ ಬಿಡಿ. ಅಂತಹ ವರ್ತನೆಯಿಂದ ಆಕೆಗೆ ಮನಸ್ಸಿಗೆ ಘಾಸಿ ಎನಿಸಿದ್ದರೆ, ಪ್ರಶ್ನೆ ಮಾಡುತ್ತಿದ್ದಳು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಆತ ಅನುಚಿತವಾಗಿ ವರ್ತಿಸಿದ್ದರೆ ಇದನ್ನು ತಪ್ಪು ಎಂದು ನಾನು ಹೇಳುತ್ತಿದ್ದೆ. ಆದರೆ ಅಲ್ಲಿ ಏನೂ ಇಲ್ಲದಿದ್ದರೂ ಏನೋ ಇರುವಂತೆ ಬಿಂಬಿಸಿ ದೊಡ್ಡದ್ದು ಮಾಡುವುದು ತಪ್ಪು. ಎಲ್ಲೋ ಕುಳಿತು ವಿಡಿಯೋ ಮಾಡುವುದು ಸುಲಭ ಎಂದು ಕೆಲವರು ವಿಡಿಯೋ ತೆಗೆದವರ ಮೇಲೂ ತಿರುಗಿ ಬಿದ್ದಿದ್ದಾರೆ.
ಕೆಲವರು ಕಂಡಕ್ಟರ್ಗೆ ನಿಮಗೆ ನಾಚಿಕೆಯಾಗಬೇಕು ಎಂದು ಬೈದಿದ್ದರೆ, ಕೆಲವರು ಅವರ ಪರವಾಗಿ ಮಾತನಾಡಿದ್ದಾರೆ. ಮತ್ತೊಂದಿಷ್ಟು ಕೆಲವರು ವಿಡಿಯೋ ಸೆರೆ ಹಿಡಿದ ಹಾಗೂ ಪೋಸ್ಟ್ ಮಾಡಿದ ಖಾತೆಗೆ ಬೈದಿದ್ದಾರೆ. ನೀವು ಯಾವಾಗಲೂ ಜನರನ್ನು ದಾರಿ ತಪ್ಪಿಸುವ ಏನನ್ನಾದರೂ ಇಂತಹ ಪೋಸ್ಟ್ಗಳನ್ನೇ ಹಾಕುತ್ತೀರಾ? ಅದರಿಂದ ನಿನಗೇನು ಸಿಗುತ್ತದೆ, ನಿಮಗೆ ಏನಾದರೂ ಮುಖ್ಯವಾದುದನ್ನು ಪೋಸ್ಟ್ ಮಾಡಲು ಸಾಧ್ಯವಾಗದಿದ್ದರೆ ದಯವಿಟ್ಟು ಅರ್ಥವಿಲ್ಲದ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ಒಂದು ವೇಳೆ ಅವರು ಅಪ್ಪ-ಮಗಳು ಆಗಿರಬಹುದೇನೋ ಎಂದು ಪ್ರಶ್ನಿಸಿದ್ದಾರೆ.