ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌; ಪತ್ನಿ ನಿಕಿತಾ ಸಿಂಘಾನಿಯಾ ಪೊಲೀಸ್ ಬಲೆಗೆ ಬೀಳಲು ಇದು ಕಾರಣ, ಸುಶಿಲ್ ಶಿಂಘಾನಿಯಾಗೆ ಜಾಮೀನು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌; ಪತ್ನಿ ನಿಕಿತಾ ಸಿಂಘಾನಿಯಾ ಪೊಲೀಸ್ ಬಲೆಗೆ ಬೀಳಲು ಇದು ಕಾರಣ, ಸುಶಿಲ್ ಶಿಂಘಾನಿಯಾಗೆ ಜಾಮೀನು

ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌; ಪತ್ನಿ ನಿಕಿತಾ ಸಿಂಘಾನಿಯಾ ಪೊಲೀಸ್ ಬಲೆಗೆ ಬೀಳಲು ಇದು ಕಾರಣ, ಸುಶಿಲ್ ಶಿಂಘಾನಿಯಾಗೆ ಜಾಮೀನು

Bengaluru Techie Suicide: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿಗಳ ಪೈಕಿ ಸುಶಿಲ್ ಸಿಂಘಾನಿಯಾಗೆ ಜಾಮೀನು ಸಿಕ್ಕಿದೆ. ಉಳಿದ ಮೂವರು ಜೈಲಲ್ಲಿದ್ದಾರೆ. ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ ಪೊಲೀಸ್ ಬಲೆಗೆ ಬೀಳಲು ಕಾರಣವಾದ ವಿಚಾರ ಮತ್ತು ಇತರೆ ಪ್ರಮುಖ ವಿವರ ಇಲ್ಲಿದೆ.

ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌; ಅತುಲ್‌ ಸುಭಾಷ್ ಅತ್ತೆ ನಿಶಾ, ಪತ್ನಿ ನಿಕಿತಾ ಸಿಂಘಾನಿಯಾ, ಬಾಮೈದ ಅನುರಾಗ್‌ ಪೊಲೀಸ್ ಬಲೆಗೆ ಬೀಳಲು ಕಾರಣವೇನು ಎಂಬುದರ ವಿವರ ಇಲ್ಲಿದೆ. (ಕಡತ ಚಿತ್ರ)
ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್‌; ಅತುಲ್‌ ಸುಭಾಷ್ ಅತ್ತೆ ನಿಶಾ, ಪತ್ನಿ ನಿಕಿತಾ ಸಿಂಘಾನಿಯಾ, ಬಾಮೈದ ಅನುರಾಗ್‌ ಪೊಲೀಸ್ ಬಲೆಗೆ ಬೀಳಲು ಕಾರಣವೇನು ಎಂಬುದರ ವಿವರ ಇಲ್ಲಿದೆ. (ಕಡತ ಚಿತ್ರ)

Bengaluru Techie Suicide: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಆತನ ಪತ್ನಿ ನಿಕಿತಾ ಸಿಂಘಾನಿಯಾ ಸದ್ಯ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ. ಆಕೆಯ ಚಿಕ್ಕಪ್ಪ ಸುಶಿಲ್ ಸಿಂಘಾನಿಯಾಗೆ ಅಲಹಾಬಾದ್ ಹೈಕೋರ್ಟ್ ಸೋಮವಾರ (ಡಿಸೆಂಬರ್ 16) ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಹೆಸರಿಸಲಾದ ನಿಕಿತಾ ಸಿಂಘಾನಿಯಾ ಕುಟುಂಬ ಸದಸ್ಯರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರು ಈ ಆದೇಶ ನೀಡಿದ್ದಾರೆ. ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಮನೀಶ್ ತಿವಾರಿ ಅವರು, ಮೃತರ ಪತ್ನಿ, ಅತ್ತೆ ಮತ್ತು ಬಾಮೈದ ಅವರನ್ನು ಬೆಂಗಳೂರು ನಗರ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈಗ ಸುಶಿಲ್ ಸಿಂಘಾನಿಯಾ ಪರವಾಗಿ ಮಾತ್ರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್; ಗಮನಸೆಳೆದ 5 ಮುಖ್ಯ ಅಂಶಗಳು

1) ನಿಕಿತಾ ಸಿಂಘಾನಿಯಾ ಕುಟುಂಬದ ಸದಸ್ಯರಾದ ಸುಶಿಲ್ ಸಿಂಘಾನಿಯಾ (ನಿಕಿತಾ ಅವರ ಚಿಕ್ಕಪ್ಪ) ಅವರ ಬಂಧನವಾಗಿಲ್ಲ. ಹೀಗಾಗಿ ಅವರ ಪರವಾಗಿ ಹಿರಿಯ ವಕೀಲ ಮನೀಶ್ ತಿವಾರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

2) ನಿಕಿತಾ ಸಿಂಘಾನಿಯಾ (ಅತುಲ್ ಸುಭಾಷ್ ಪತ್ನಿ), ನಿಶಾ ಸಿಂಘಾನಿಯಾ ( ನಿಕಿತಾ ಸಿಂಘಾನಿಯಾ ತಾಯಿ), ಅನುರಾಗ್ ಸಿಂಘಾನಿಯಾ (ನಿಕಿತಾ ಸಹೋದರ) ರನ್ನು ಪೊಲೀಸರು ಬಂಧಿಸಿ ಬೆಂಗಳೂರು ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿ ವಿಚಾರಣೆ ನಡೆಸಿದ್ದಾರೆ.

3) ಅಲಹಾಬಾದ್‌ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ವಕೀಲರು ಹೇಳಿದ್ದಿಷ್ಟು - ಇಂಟರ್‌ನೆಟ್‌ನಲ್ಲಿ ವೈರಲ್ ಆದ ವಿಡಿಯೋ ಮತ್ತು ಮರಣಪತ್ರದ ಆಧಾರದ ಮೇಲೆ ನಿಕಿತಾ ಕುಟುಂಬ ಸದಸ್ಯರನ್ನು ಬಂಧಿಸಲಾಗಿದೆ. ಸುಶಿಲ್ ಸಿಂಘಾನಿಯಾ ವಿರುದ್ಧ ಮಾಧ್ಯಮ ವಿಚಾರಣೆ ತೀವ್ರವಾಗಿದ್ದು, ವರ್ಚುವಲ್‌ ಆಗಿ ನಿರ್ಬಂಧಿಸಲಾಗುತ್ತಿದೆ. ಅವರ ವಯಸ್ಸನ್ನು ಕೂಡ ಪರಿಗಣಿಸಲಾಗುತ್ತಿಲ್ಲ. ಆತ್ಮಹತ್ಯೆಗೆ ಅವರು ಪ್ರೇರಣೆ ನೀಡಿದ್ದಾರೆ ಎಂಬುದರಲ್ಲಿ ಹುರುಳಿಲ್ಲ.

4) ವಾದ ಆಲಿಸಿದ ನ್ಯಾಯಮೂರ್ತಿಗಳು ಸುಶಿಲ್ ಸಿಂಘಾನಿಯಾ ಅವರಿಗೆ ತಲಾ 50,000 ರೂಪಾಯಿಯ ಎರಡು ಬಾಂಡ್‌ ಮತ್ತು ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ್ದಾರೆ. ಸಾಕ್ಷ್ಯ ನಾಶ ಮಾಡಬಾರದು ಮತ್ತು ಭಾರತ ಬಿಟ್ಟು ಹೋಗದಂತೆ ತಾಕೀತು ಮಾಡಿದ್ದಾರೆ.

5) ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್‌ ಡಿಸೆಂಬರ್ 9 ರಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ. ವರದಕ್ಷಿಣೆ ಕಿರುಕುಳಕ್ಕಾಗಿ ಕಾನೂನು ಮೊಕದ್ದಮೆಗಳ ಮೂಲಕ ತನ್ನ ಪತ್ನಿ ಮತ್ತು ಆಕೆಯ ಕುಟುಂಬ ಕಿರುಕುಳ ನೀಡುತ್ತಿದೆ ಎಂದು 24 ಪುಟಗಳ ಮರಣಪತ್ರದಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, 90 ನಿಮಿಷದ ವಿಡಿಯೋದಲ್ಲಿ ತನ್ನ ಪರ ವಾದವನ್ನು ನಿರೂಪಿಸಿದ್ದು, ಅವು ಪೊಲೀಸ್ ವಶದಲ್ಲಿವೆ.

ಒಂದೇ ಒಂದು ಫೋನ್‌ ಕರೆ ಮಾಡಿ ಸಿಕ್ಕಿ ಬಿದ್ದ ನಿಕಿತಾ ಸಿಂಘಾನಿಯಾ

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಮಾರತ್ತಹಳ್ಳಿ ಪೊಲೀಸರು, ಆತನ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಲು ರಹಸ್ಯ ಕಾರ್ಯಾಚರಣೆ ನಡೆಸಿದ್ದರು. ತನಿಖೆಯ ಯೋಜನೆಗಳು ಮಾಧ್ಯಮ ವರದಿಗಳ ಮೂಲಕ ಸೋರಿಕೆಯಾಗದಂತೆ ಗಮನವಹಿಸಿದ್ದ ಮಾರತ್ತಹಳ್ಳಿ ಪೊಲೀಸರು, ಈ ಕಾರ್ಯಾಚರಣೆಗಾಗಿ ಇನ್ಸ್‌ಪೆಕ್ಟರ್ ಪಿ.ಎನ್. ಅನಿಲ್‌ ಕುಮಾರ್ ಉಸ್ತುವಾರಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಗಳಾದ ರಂಜಿತ್, ಚೇತನ್, ಜ್ಞಾನದೇವ ಹಾಗೂ ವಿದ್ಯಾ ಅವರ ಸಾರಥ್ಯದಲ್ಲಿ ಪ್ರತ್ಯೇಕ 4 ತಂಡಗಳನ್ನು ರಚಿಸಿದ್ದರು. ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಶೋಧ ನಡೆಸಿದ್ದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಜೌನ್‌ಪುರದಲ್ಲಿರುವ ಅತುಲ್ ಪತ್ನಿ ನಿಕಿತಾ ತವರು ಮನೆಗೆ ಪಿಎಸ್‌ಐ ರಂಜಿತ್ ನೇತೃತ್ವದಲ್ಲಿ ಐವರು ಪೊಲೀಸರ ತಂಡ ಹೋಗಿರುವುದು ಮಾಧ್ಯಮಗಳಲ್ಲಿ ವರದಿಯಾಯಿತು. ಇನ್ನೊಂದೆಡೆ, ಇನ್‌ಸ್ಪೆಕ್ಟರ್‌ ಅನಿಲ್ ಕುಮಾರ್, ಇನ್ನುಳಿದ ಪಿಎಸ್‌ಐಗಳಾದ ಜ್ಞಾನದೇವ್, ವಿದ್ಯಾ ಹಾಗೂ ಚೇತನ್ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ಹರಿಯಾಣದ ಗುರುಗ್ರಾಮ, ದೆಹಲಿ ಹಾಗೂ ಉತ್ತರಪ್ರದೇಶದ ಅಲಹಬಾದ್‌ನಗರಗಳಲ್ಲಿ ಶೋಧ ನಡೆಸಿದವು. ನಿಖಿತಾ ಹಾಗೂ ಪೋಷಕರು ಮೊಬೈಲ್‌ಗಳನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದರು. ಆರೋಪಿಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದು ಗೊತ್ತಾಯಿತು ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿ ವಿವರಿಸಿದೆ.

ಇದೇ ಸಂದರ್ಭದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಸಂಬಂಧ ನಿಕಿತಾ ಹಾಗೂ ಆಕೆಯ ತಾಯಿ ನಿಶಾರನ್ನು ಸಂಬಂಧಿಕರು ಫೋನ್‌ ಮೂಲಕ ಸಂಪರ್ಕಿಸುತ್ತಾರೆ ಎಂದು ಗ್ರಹಿಸಿದ ಪೊಲೀಸರು, ಕೂಡಲೇ ಆ ಇಬ್ಬರ ಮೊಬೈಲ್ ಫೋನ್‌ ಕರೆಗಳ ಮೇಲೆ ನಿಗಾವಹಿಸಿದರು. ನಿಕಿತಾ ಸಿಂಘಾನಿಯಾ ಶುಕ್ರವಾರ ರಾತ್ರಿ ತನ್ನ ಸಂಬಂಧಿಗೆ ಕರೆ ಮಾಡಿ ಮಾತನಾಡಿದ್ದಳು. ಈ ಕರೆ ನೀಡಿದ ಸುಳಿವು ಆಧರಿಸಿ ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಗುರುಗ್ರಾಮದ ಪಿಜಿಯಲ್ಲಿ ನಿಕಿತಾ ಸಿಂಘಾನಿಯಾ, ಅಲಹಾಬಾದ್ ರಾಮೇಶ್ವರ ಇನ್ ಹೋಟೆಲ್‌ನಲ್ಲಿ ನಿಶಾ ಸಿಂಘಾನಿಯಾ ಹಾಗೂ ಅನುರಾಗ್ ಸಿಂಘಾನಿಯಾ ಸಿಕ್ಕಿದ್ದಾರೆ ಎಂದು ವರದಿ ಹೇಳಿದೆ.

Whats_app_banner