ಮುರುಡೇಶ್ವರ ಬೀಚ್‌ ದುರಂತ; ರಿಪ್ ಪ್ರವಾಹ ಎಂದರೇನು, ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ, ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ ವಿವರಣೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮುರುಡೇಶ್ವರ ಬೀಚ್‌ ದುರಂತ; ರಿಪ್ ಪ್ರವಾಹ ಎಂದರೇನು, ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ, ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ ವಿವರಣೆ

ಮುರುಡೇಶ್ವರ ಬೀಚ್‌ ದುರಂತ; ರಿಪ್ ಪ್ರವಾಹ ಎಂದರೇನು, ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ, ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ ವಿವರಣೆ

Murudeshwar Beach incident: ಮುರುಡೇಶ್ವರ ಬೀಚ್ ದುರಂತ ಎಲ್ಲರ ಮನಕಲುಕಿದ ವಿಚಾರ. ನಾಲ್ವರು ಶಾಲಾ ಬಾಲಕಿಯರನ್ನು ಸಮುದ್ರದಲೆಗಳು ಹೊತ್ತೊಯ್ದ ಘಟನೆಗೆ ರಿಪ್‌ ಪ್ರವಾಹಗಳು ಕಾರಣ ಎಂಬುದನ್ನು ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ ವಿವರಿಸಿದ್ದಾರೆ. ಈ ಲೇಖನವನ್ನು ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿವರ ಇಲ್ಲಿದೆ.

ಮುರುಡೇಶ್ವರ ಬೀಚ್‌ ದುರಂತ; ರಿಪ್ ಪ್ರವಾಹ ಎಂದರೇನು, ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ವಿವರಣೆ ನೀಡಿದ್ದಾರೆ ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ. (ಮೆಟಾ ಎಐ ರಚಿತ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
ಮುರುಡೇಶ್ವರ ಬೀಚ್‌ ದುರಂತ; ರಿಪ್ ಪ್ರವಾಹ ಎಂದರೇನು, ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದರ ವಿವರಣೆ ನೀಡಿದ್ದಾರೆ ನಿವೃತ್ತ ಪ್ರವಾಚಕ ದಿವಾಕರ ಶೆಟ್ಟಿ. (ಮೆಟಾ ಎಐ ರಚಿತ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ) (Meta AI Image)

Murudeshwar Beach incident: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ಕೋಲಾರದ ನಾಲ್ವರು ಶಾಲಾ ಬಾಲಕಿಯರು ಸಮುದ್ರ ಪಾಲಾಗಿ ಮೃತಪಟ್ಟ ದುರಂತ ನಾಡಿನ ಜನರ ಮನಕಲಕಿದೆ. ಇಂತಹ ದುರಂತಗಳಾಗದಂತೆ ತಡೆಯುವುದು ಹೇಗೆ ಎಂಬ ಆಲೋಚನೆಗಳು ಹರಿದಾಡುತ್ತಿವೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಲೇಖನ ಈಗ ಎಲ್ಲರ ಗಮನಸೆಳೆದಿದೆ. ಅದರಲ್ಲಿ ಸುರೇಶ್ ಕುಮಾರ್‌ ಅವರು, “ಶಿಕ್ಷಣ ಇಲಾಖೆಯ ಒಂದು ಭಾಗವಾದ ಡಯಟ್ ನ ಮಂಗಳೂರು ಜಿಲ್ಲೆಯ ನಿವೃತ್ತ ಪ್ರವಾಚಕರಾದ (Reader ) ಶ್ರೀ ದಿವಾಕರ್ ಶೆಟ್ಟಿ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಮಹತ್ವದ ಮಾಹಿತಿ ಇದು. ಕರ್ನಾಟಕದ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಈ ಮಾಹಿತಿಯನ್ನು ಕಳಿಸಿ ಎಲ್ಲರಿಗೂ ಈ ಕುರಿತು ತಿಳಿವಳಿಕೆ ಕೊಡುವುದು ಅತ್ಯಗತ್ಯ. (ನಾನು ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಜೊತೆಯೂ ಹಂಚಿಕೊಂಡಿದ್ದೇನೆ)” ಎಂಬ ಟಿಪ್ಪಣಿ ಸೇರಿಸಿದ್ದಾರೆ

ಮುರುಡೇಶ್ವರ ಬೀಚ್‌ ದುರಂತದ ಕಹಿನೆನಪು; ಮಕ್ಕಳ ಪ್ರಾಣ ಕಸಿದದ್ದು ರಿಪ್ ಪ್ರವಾಹ, ಹಾಗಂದರೇನು

ಮೊನ್ನೆ ಒಂದು ಆಘಾತಕಾರಿ ಸುದ್ದಿ ಎಲ್ಲರೂ ಓದಿದ್ದೇವೆ. ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಬಂದ ನಾಲ್ಕು ಮಕ್ಕಳು ಸಮುದ್ರದಲ್ಲಿ ತೇಲಿ ಹೋದರು. ಜನ ಮುಳುಗಿ ಮೃತಪಟ್ಟರು ಎಂದು ಭಾವಿಸಿದ್ದಾರೆ. ಆದರೆ ಅದು ಮುಳುಗಿ ಮೃತಪಟ್ಟದ್ದಲ್ಲ ತೇಲಿ ಹೋದದ್ದು. ಇಂತಹ ಪರಿಸ್ಥಿತಿ ಎದುರಾದಾಗ ನುರಿತ ಈಜುಗಾರರು ಕೂಡಾ ಗಲಿಬಿಲಿಗೊಳ್ಳುತ್ತಾರೆ. ಆ ಗಲಿಬಿಲಿಯಲ್ಲಿ ಏನು ಮಾಡಬೇಕೆಂದು ತಿಳಿಯದೇ ದಡದ ಕಡೆ ಈಜಿ ಸ್ನಾಯು ಸೋಲಿನಿಂದ ಮುಳುಗಿ ಮೃತಪಟ್ಟ ಉದಾಹರಣೆಗಳಿವೆ. ಬಹಳ ವರ್ಷಗಳ ಹಿಂದೆ ಕುಂದಾಪುರ ಸಮೀಪದ ಕೋಡಿ ಬೀಚ್ ನಲ್ಲಿ ನಮ್ಮ ಶಿಕ್ಷಕರೊಬ್ಬರ ಮಗ ಅವರ ಎದುರೇ ತೇಲಿ ಹೋದದ್ದು ನನಗೆ ಇನ್ನೂ ಮರೆಯುವುದು ಸಾಧ್ಯವಾಗಿಲ್ಲ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 2022 ರಲ್ಲಿ 77 ಜನ ಈ ಕಾರಣದಿಂದ ಸತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಹಾಗಾದರೆ ಈ ಮಕ್ಕಳ ಸಾವಿಗೆ ಕಾರಣವಾದ ಅಂಶದ ಬಗ್ಗೆ ಈ ಹಿಂದೆ ಕೂಡಾ ಬರೆದಿದ್ದೆ. ಇವತ್ತು ಮತ್ತೊಮ್ಮೆ ಬರೆಯುತ್ತಿದ್ದೇ‌ನೆ.

ದಯವಿಟ್ಟು ಸಮುದ್ರ ದಂಡೆಗೆ ಭೇಟಿ ನೀಡುವ ಎಲ್ಲರಿಗೂ ಈ ಮಾಹಿತಿ ತಲುಪಿಸುತ್ತೀರಿ ಮತ್ತು ತಲುಪಿಸಬೇಕು ಎಂಬುದೇ ನನ್ನ ಪ್ರಾರ್ಥನೆ. ಮಕ್ಕಳನ್ನು ಬಲಿ ತೆಗೆದುಕೊಂಡ ಈ ವಿದ್ಯಮಾನದ ಹೆಸರು "ರಿಪ್ ಪ್ರವಾಹಗಳು" (Rip currents). ನದಿಗಳಲ್ಲಿ ಇಲ್ಲಿ ಸುಳಿಗಳಿವೆ ಎಂದು ಎಚ್ಚರಿಕೆ ಫಲಕಗಳನ್ನು ಹಾಕಿದ ಹಾಗೆ ಸಮುದ್ರದಲ್ಲಿ ಇಲ್ಲಿ ರಿಪ್ ಪ್ರವಾಹಗಳಿವೆ ಎಂದು ಬೋರ್ಡ್ ಹಾಕಲು ಸಾಧ್ಯವಿಲ್ಲ. ಏಕೆಂದರೆ ರಿಪ್ ಪ್ರವಾಹಗಳು ನಿರೀಕ್ಷಿತವಲ್ಲ. ಇವು ಏಕಾಏಕಿ ರೂಪಗೊಳ್ಳುತ್ತವೆ. ಆದ್ದರಿಂದ ಯಾವುದೇ ಮುನ್ನೆಚ್ಚರಿಕೆ ಸಾಧ್ಯವಿಲ್ಲ.

ಹಾಗಾದರೆ ಈ ಮಾರಕ ಪ್ರವಾಹಗಳು ರೂಪುಗೊಳ್ಳುವುದಾದರೂ ಹೇಗೆ?

ನಾವೆಲ್ಲರೂ ಸಮುದ್ರ ದಂಡೆಗೆ ಹೋಗುವುದಾದರೂ ಏಕೆ? ಅಲೆಗಳ ಮೋಹಕತೆಗೆ ಮನಸೋತು ಅಲ್ಲವೇ? ಮತ್ತೆ ಮತ್ತೆ ಅಲೆಗಳು ದಡಕ್ಕೆ ಬಂದು ಬಡಿಯುತ್ತಲೇ ಇರುತ್ತವೆ. ಆ ದಡ ಸೋಲುವುದಿಲ್ಲ, ಅಲೆಗಳು ದಣಿಯುವುದಿಲ್ಲ. ಆ ಏಕಾತಾನತೆಯಲ್ಲಿಯೇ ಅದು ನಿಮಗೆ ನಿತ್ಯ ಸ್ಪೂರ್ತಿಯ ಸೆಲೆ. ಅಲೆಗಳು ಬಂದು ದಡಕ್ಕೆ ಬಡಿಯುವಂತೆ ಮಾಡುವುದು ಗಾಳಿಯ ಶಕ್ತಿ. ಗಾಳಿ ಈ ನೀರನ್ನು ಮಡಚಿ ಅಲೆಗಳಂತೆ ಮಾಡಿ ದಡಕ್ಕೆ ತಂದು ಸುರಿಯುತ್ತದೆ. ದಡದಲ್ಲಿ ಉಂಟಾಗುವ ಈ ನೀರಿನ ಬೆಟ್ಟ ಒಮ್ಮೆಲೇ ಹಿಂದಕ್ಕೆ ಸರಿಯುವ ನೀರು ಅಡ್ಡ ಬರುವ ಸಣ್ಣ ಪುಟ್ಟ ವಸ್ತುಗಳನ್ನು ತನ್ನ ಜೊತೆಗೆ ಒಯ್ಯುತ್ತದೆ.

ಈ ಹಿಂದಿರುಗುವ ನೀರು ಯಾವಾಗಲೂ ಕಡಿಮೆ ಅಡೆತಡೆ ಇರುವ ಜಾಗವನ್ನು ಹುಡುಕುತ್ತವೆ. ಎಲ್ಲಾ ಜಾಗ ಒಂದೇ ಇದ್ದರೆ ಎಲ್ಲಾ ಕಡೆಯಲ್ಲೂ ಒಂದೇ ರೀತಿ ಹರಡುತ್ತದೆ. ಚಿತ್ರ (ಫೇಸ್‌ಬುಕ್ ಪೋಸ್ಟ್‌ನಲ್ಲಿರುವ ಚಿತ್ರ) ವನ್ನು ನೋಡಿ ದಡದ ಮೇಲೆ ಮರಳು ದಿಬ್ಬಗಳಿರುವ ಹಾಗೆ ಸಮುದ್ರದ ಒಳಗೂ ಇರುತ್ತವೆ. ಈ ದಿಬ್ಬಗಳು ಅಖಂಡವಾಗಿರದೇ ಮಧ್ಯದಲ್ಲಿ ಖಾಲಿ ಜಾಗ ಇರಬಹುದು ಮತ್ತು ಈ ಖಾಲಿ ಜಾಗ ಬದಲಾಗುತ್ತದೆ ಕೂಡಾ. ಈ ಖಾಲಿ ಜಾಗದಲ್ಲಿ ಸಮುದ್ರ ಆಳವಾಗಿರುವುದರಿಂದ ನೀರಿನ ಬೆಟ್ಟ ಆ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಆದ್ದರಿಂದ ಆ ಕಂಡಿಯ ಆಚೆ ಈಚೆ ಇರುವ ನೀರು ಪ್ರವಾಹದ ರೂಪದಲ್ಲಿ ದಂಡೆ ಸಮಾಂತರವಾಗಿ ವಿರುದ್ಧ ನೇರದಲ್ಲಿ ಕಂಡಿ ಇರುವ ಕಡೆಗೆ ನುಗ್ಗುತ್ತವೆ. ಕಂಡಿ ಇರುವ ಕಡೆ ಪರಸ್ಪರ ಢಿಕ್ಕಿಯಾಗುವ ಈ ಪ್ರವಾಹಗಳು ಸಮುದ್ರದ ಒಳಗೆ ನುಗ್ಗುತ್ತವೆ.

ಈ ಅಭಿಮುಖ ಪ್ರವಾಹಗಳು ಪೂರಕ ಪ್ರವಾಹಗಳು (feeder currents). ಪೂರಕ ಪ್ರವಾಹಗಳು ಒಂದಾಗಿ ರಭಸವಾಗಿ ಸಮುದ್ರದ ಒಳಗೆ ನುಗ್ಗುವ ಭಾಗವೇ ಪ್ರವಾಹದ ಕತ್ತು (neck). ಇದಕ್ಕೆ ಎದುರಾಗಿ ಈಜಿ ಎಂತಹ ಅನುಭವಿ ಈಜುಗಾರನೂ ಕೂಡಾ ದಡ ಸೇರಿದ ಉದಾಹರಣೆಗಳಿಲ್ಲ. ನಂತರ ಈ ಪ್ರವಾಹ ಚದುರುತ್ತದೆ. ಅದೇ ತಲೆ (head) ತಲೆಯ ಭಾಗದಲ್ಲಿ ಅದು ಹೊರ ಭಾಗಕ್ಕಿದೆ ಮತ್ತು ಅಲ್ಲಿ ದುರ್ಬಲವಾಗುವುದರಿಂದ ಅಲ್ಲಿಂದ ಹೊರಗೆ ಈಜಿ ದಡದ ಕಡೆಗೆ ಈಜಬೇಕು. ಆದರೆ ಈಜೇ ಬಾರದ ಪುಟ್ಟ ಮಕ್ಕಳು, ಅನನುಭವಿಗಳು ಬಲು ಬೇಗನೇ ಮುಳುಗಿ ಸಾಯುತ್ತಾರೆ. ಹಾಗಾದರೆ ಈ ಪ್ರವಾಹವನ್ನು ಮುಂಚಿತವಾಗಿ ಗುರುತಿಸುವುದು ಸಾಧ್ಯವಿಲ್ಲವೇ? ಸಾಧ್ಯ. ಆದರೆ ಹೇಗೆ? ಸಮುದ್ರದ ನೀರು ಸಮುದ್ರದ ಒಳಗೆ ಹೋಗುವ ಬದಲಾಗಿ ಅಡ್ಡಕ್ಕೆ ಚಲಿಸುತ್ತಿದ್ದರೆ ಅದು ನಿಸ್ಸಂಶಯವಾಗಿ ರಿಪ್ ಪ್ರವಾಹ. ಕಸ, ಸಮುದ್ರ ಕಳೆಗಳು ದಡಕ್ಕೆ ಸಮಾಂತರವಾಗಿ ಸಾಗುತ್ತಿದ್ದರೆ ಅದು ರಿಪ್ ಪ್ರವಾಹ. ನೀರು ಚಲನೆಯಲ್ಲಿದ್ದು ಕೆಸರಿನಿಂದ ಕೂಡಿದ್ದರೆ ಅಥವಾ ಕದಡಿದ್ದರೆ ಅದು ರಿಪ್ ಪ್ರವಾಹ ಸರಿ.

ರಿಪ್ ಪ್ರವಾಹದಿಂದ ರಕ್ಷಿಸಿಕೊಳ್ಳುವುದು ಹೇಗೆ?

1. ಯಾವುದೇ ಕಾರಣಕ್ಕೂ ಮೊಣಕಾಲು ಮಟ್ಟದ ನೀರಿಗಿಂತ ಹೆಚ್ಚಿನ ಆಳಕ್ಕೆ ಮಕ್ಕಳನ್ನು ಹೋಗಲು ಬಿಡಬೇಡಿ.

2. ಜೀವ ರಕ್ಷಕರಿಲ್ಲದ (life guards) ಸಮುದ್ರ ದಂಡೆಗಳಲ್ಲಿ ನೀರಿಗೆ ಇಳಿಯಬೇಡಿ.

3. ಕೆಲವು ಕಡೆ ಹಳದಿ ಮತ್ತು ಕೆಂಪು ಪತಾಕೆಗಳನ್ನು ಹಾಕಿರುತ್ತಾರೆ. ಅಂತಹ ಜಾಗಗಳು ಸುರಕ್ಷಿತ ಮತ್ತು ಅಲ್ಲಿ ತೇಲಿ ಹೋಗುವವರನ್ನು ಗುರುತಿಸುವುದು ಸುಲಭ.

4. ನೀವು ರಿಪ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದೀರಿ ಎಂದು ತಿಳಿದ ಕೂಡಲೆ ಪ್ರವಾಹಕ್ಕೆ ಲಂಬವಾಗಿ ಅಂದರೆ ದಂಡೆಗೆ ಸಮಾಂತರವಾಗಿ ಈಜಿ. ಪ್ರವಾಹದಿಂದ ಹೊರ ಬಂದಿದ್ದೀರಿ ಎಂದು ಅರಿವಾದಾಗ ದಂಡೆಯ ಕಡೆಗೆ ಈಜಿ. ಮೊದಲು ಯಾವುದೇ ಕಾರಣಕ್ಕೆ ದಡದ ಕಡೆಗೆ ಈಜಬೇಡಿ. ನ್ಯೂಜಿಲೆಂಡ್ ನ ಮುರಿವಾಲ್ ಬೀಚ್ ನಲ್ಲಿ ರಿಪ್ ಪ್ರವಾಹದಿಂದ ತಪ್ಪಿಸಿಕೊಳ್ಳುವ ಒಂದು ಪದವಿ ನೀಡುವ ಕಾಲೇಜು ಇದೆ ಎಂದು ನಿಮಗೆ ಗೊತ್ತೇ? ಅಲ್ಲಿನ ತಜ್ಞರ ಪ್ರಕಾರ ನುರಿತ ಈಜುಗಾರ ಕೂಡಾ ಸರಿಯಾಗಿ ಈಜಿದರೆ 300 ಮೀಟರ್‌ನಷ್ಟು ಕಡಲೊಳಗೆ ಒಯ್ಯಲ್ಪಡುತ್ತಾನೆ ಮತ್ತು ದಡವನ್ನು ತಲುಪಲು ಮತ್ತೆ 400 ಮೀಟರ್ ಈಜಬೇಕಾಗುತ್ತದೆ ಎನ್ನುತ್ತಾರೆ. ಅಂದರೆ ನೀವು ಧೈರ್ಯ ಕಳೆದುಕೊಂಡಿರೋ ನೀವು ಸತ್ತ ಹಾಗೆ.

5. ಸಮುದ್ರ ದಂಡೆಗೆ ಪ್ರವಾಸ ಹೋಗುವುದಾದರೆ ಮಕ್ಕಳಿಗೆ ಈ ಬಗ್ಗೆ ವಿವರವಾದ ಮಾಹತಿ ನೀಡಿ.

ಲೇಖಕ: ದಿವಾಕರ ಶೆಟ್ಟಿ, ನಿವೃತ್ತ ಪ್ರವಾಚಕರು, ಡಯಟ್ ಮಂಗಳೂರು

ಲೇಖಕ ದಿವಾಕರ ಶೆಟ್ಟಿ, ನಿವೃತ್ತ ಪ್ರವಾಚಕರು, ಡಯಟ್ ಮಂಗಳೂರು
ಲೇಖಕ ದಿವಾಕರ ಶೆಟ್ಟಿ, ನಿವೃತ್ತ ಪ್ರವಾಚಕರು, ಡಯಟ್ ಮಂಗಳೂರು (Divakara Shetty H)
Whats_app_banner