ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ತಣ್ಣನೆ ರಾತ್ರಿ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ವಿಪರೀತ ಶೀತ ಗಾಳಿ, ರೆಡ್ ಅಲರ್ಟ್
Weather Forecast: ಬೆಂಗಳೂರು ಹವಾಮಾನ ಪ್ರಕಾರ ಇಂದು ಬೆಂಗಳೂರು ನಗರ ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 17) ಮುಂಜಾನೆ ಮಂಜು, ಚಳಿ ಕಾಡಲಿದೆ. ತಣ್ಣನೆಯ ರಾತ್ರಿಯೂ ಅನುಭವಕ್ಕೆ ಬರಲಿದೆ. ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ವಿಪರೀತ ಶೀತ ಗಾಳಿ ಕಾರಣ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.
Weather Forecast: ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಹಲವೆಡೆ ಇಂದು (ಡಿಸೆಂಬರ್ 17) ಮುಂಜಾನೆ ಮಂಜು, ಚಳಿ ಹಾಗೂ ತಣ್ಣನೆಯ ರಾತ್ರಿ ಅನುಭವಕ್ಕೆ ಬಂದೀತು. ಆದಾಗ್ಯೂ ಕೆಲವು ಕಡೆ ಮೋಡ ಕವಿದ ವಾತಾವರಣ ಇರಲಿದ್ದು, ಇಂದಿನಿಂದ ನಾಲ್ಕು ದಿನ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ. ಇನ್ನು ಕರ್ನಾಟಕದ ಉಳಿದೆಡೆ ಒಣ ಹವೆ ಇರುವುದಾದರೂ, ಬೀದರ್, ಕಲಬುರಗಿ ಸೇರಿ 4 ಜಿಲ್ಲೆಗಳಲ್ಲಿ ವಿಪರೀತ ಶೀತಗಾಳಿ ಕಾರಣ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನೆರಡು ದಿನ ಬಿಟ್ಟು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೈಕ್ಲೋನ್ ಕಾರಣಕ್ಕೆ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಬೆಂಗಳೂರು ಹವಾಮಾನ ಇಂದು; ಮೋಡ ಕವಿದ ವಾತಾವರಣ, ಮುಂಜಾನೆ ಮಂಜು ಚಳಿ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 17) ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು, ಇಬ್ಬನಿ ಬೀಳಲಿದ್ದು, ಗೋಚರ ಪ್ರಮಾಣ ಕಡಿಮೆ ಇರಲಿದೆ. ಇದಲ್ಲದೆ ರಾತ್ರಿ ವೇಳೆ ಚಳಿ ವಿಪರೀತ ಇರಲಿದೆ. ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಬಹುದು. ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ 26.6 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಮತ್ತು 15.5 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ದಾಖಲಾಗುವ ಸಾಧ್ಯತೆ ಇದೆ. ನಿನ್ನೆ 26.2 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಮತ್ತು 14.5 ಡಿಗ್ರಿ ಸೆಲ್ಶಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವಿಜ್ಞಾನಿ ರಾಜವೇಲ್ ಮಣಿಕಮ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ವಿಪರೀತ ಶೀತಗಾಳಿ ಕಾರಣ ರೆಡ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವರದಿ ಪ್ರಕಾರ, ಬೀದರ್, ವಿಜಯಪುರ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವಿಪರೀತ ಶೀತ ಗಾಳಿ ಪರಿಸ್ಥಿತಿ ಇರುವ ಸಾಧ್ಯತೆಯಿದೆ. ಅಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ತಾಪಮಾನವು 6 ರಿಂದ 7 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ, ಇದು ಸಾಮಾನ್ಯಕ್ಕಿಂತ 6-7 ಡಿಗ್ರಿ ಸೆಲ್ಶಿಯಸ್ ಕಡಿಮೆ ಇರುತ್ತದೆ. ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೀತ ಗಾಳಿ ಇರುವ ಸಾಧ್ಯತೆಯಿದೆ. ಅಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲಿ ತಾಪಮಾನವು ಸುಮಾರು 10 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಸಾಮಾನ್ಯಕ್ಕಿಂತ 4 - 5 ಡಿಗ್ರಿ ಸೆಲ್ಶಿಯಸ್ ಕಡಿಮೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು/ದಟ್ಟ ಮಂಜು ಇರುವ ಸಾಧ್ಯತೆಯಿದೆ.
ಕನಿಷ್ಠ ತಾಪಮಾನ ಇಂದು: ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಇಂದು (ಡಿಸೆಂಬರ್ 17) ದಾಖಲಾಗಬಹುದಾದ ಕನಿಷ್ಠ ತಾಪಮಾನ ವಿವರ ಹೀಗಿದೆ
ಬೆಂಗಳೂರು ನಗರ - 15 ಡಿಗ್ರಿ ಸೆಲ್ಶಿಯಸ್ (ನಿನ್ನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ 7.3 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿತ್ತು)
ಗದಗ - 15 ಡಿಗ್ರಿ ಸೆಲ್ಶಿಯಸ್
ಕಲಬುರಗಿ - 14 ಡಿಗ್ರಿ ಸೆಲ್ಶಿಯಸ್ (ರಡ್ಡೆವಾಡ್ಗಿಯಲ್ಲಿ 9.3 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿತ್ತು)
ಬೆಳಗಾವಿ - 13 ಡಿಗ್ರಿ ಸೆಲ್ಶಿಯಸ್
ಚಿತ್ರದುರ್ಗ - 18 ಡಿಗ್ರಿ ಸೆಲ್ಶಿಯಸ್
ಮಂಗಳೂರು - 21 ಡಿಗ್ರಿ ಸೆಲ್ಶಿಯಸ್
ಹೊನ್ನಾವರ - 23 ಡಿಗ್ರಿ ಸೆಲ್ಶಿಯಸ್
ಕರ್ನಾಟಕ ಹವಾಮಾನ ನಾಳೆ (ಡಿಸೆಂಬರ್ 18)
ಕರ್ನಾಟಕದಲ್ಲಿ ಡಿಸೆಂಬರ್ 18 ರಂದು ಒಣ ಹವೆ ಇರುವ ಸಾಧ್ಯತೆಯಿದೆ. ಬೀದರ್, ವಿಜಯಪುರ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಶೀತ ಗಾಳಿ ಪರಿಸ್ಥಿತಿ ಇರುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ತಾಪಮಾನವು 6 ರಿಂದ 7 ಡಿಗ್ರಿ ಸೆಲ್ಸಿಯಸ್ ಆಗಿರಬಹುದಾಗಿದ್ದು, ಇದು ಸಾಮಾನ್ಯಕ್ಕಿಂತ 6- 7 ಡಿಗ್ರಿ ಸೆಲ್ಶಿಯಸ್ ಕಡಿಮೆ. ಹಾಗಾಗಿ ಈ ಜಿಲ್ಲೆಗಳಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಣೆಯಾಗಿದೆ. ಇನ್ನು ಯಾದಗಿರಿ, ರಾಯಚೂರು, ಬಾಗಲಕೋಟೆಗಳಲ್ಲಿ ಕೂಡ ಶೀತ ಗಾಳಿಯ ಅಲೆಗಳು ಇರಲಿದ್ದು, ತಾಪಮಾನ 10 ಡಿಗ್ರಿ ಸೆಲ್ಶಿಯಸ್ ನಿರೀಕ್ಷಿಸಬಹುದು. ಇದು ಸಾಮಾನ್ಯಕ್ಕಿಂತ 4 - 5 ಡಿಗ್ರಿ ಸೆಲ್ಶಿಯಸ್ ಕಡಿಮೆ ಇರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ತಿಳಿಸಿದ್ದಾರೆ.