ಏಮ್ಸ್ ಟಾಪರ್ 50 ಕೋಟಿ ರೂ ಡೌರಿ ಕೇಳಿದ ಅಂತ ಗೆಳತಿ ಅಳುತ್ತಿದ್ದಾಳೆ ಎಂದ ಬೆಂಗಳೂರು ಮಹಿಳೆ, ವೈದ್ಯವೃತ್ತಿಯವರ ವಿವಾಹ ವಿಚಾರ ಚರ್ಚೆಗೆ ಗ್ರಾಸ
ವರದಕ್ಷಿಣೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿ ವೈದ್ಯ ವೃತ್ತಿಯವರ ವಿವಾಹ ವಿಚಾರ ಚರ್ಚೆಗೀಡಾಗಿದೆ. ಏಮ್ಸ್ ಟಾಪರ್ 50 ಕೋಟಿ ರೂ ಡೌರಿ ಕೇಳಿದ್ರು ಅಂತ ಗೆಳತಿ ಅಳುತ್ತಿದ್ದಾಳೆ ಎಂದ ಬೆಂಗಳೂರು ಮಹಿಳೆ ಟ್ವೀಟ್ ಮಾಡಿದ್ದು, ಅದು ವೈರಲ್ ಆಗಿದೆ.
ಬೆಂಗಳೂರು: ಡೌರಿ ತಗೊಳ್ಳುವುದು ಮತ್ತು ಕೊಡುವುದು ಶಿಕ್ಷಾರ್ಹ ಅಪರಾಧ. ಆದರೆ, ಸಮಾಜದಲ್ಲಿ ಇದು ಅವ್ಯಾಹತವಾಗಿ ಮುಂದುವರಿದಿದೆ. ಪದೇಪದೆ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗೆ ಗ್ರಾಸವಾಗುತ್ತದೆ. ಈ ಬಾರಿ ಚರ್ಚೆ ಗ್ರಾಸವಾಗಿರುವುದು ವೈದ್ಯ ವೃತ್ತಿಯವರ ವಿವಾಹ ವಿಚಾರ. ಏಮ್ಸ್ ಟಾಪರ್ 50 ಕೋಟಿ ರೂ ಡೌರಿ ಕೇಳಿದ್ರು ಅಂತ ಗೆಳತಿ ಅಳುತ್ತಿದ್ದಾಳೆ ಎಂದು ಬೆಂಗಳೂರು ಮಹಿಳೆಯೊಬ್ಬರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹೇಳಿಕೊಂಡಿರುವುದು ಇದಕ್ಕೆ ಕಾರಣ. ಭಾರತದ ಪ್ರತಿಷ್ಠಿತ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಟಾಪರ್ ಆಗಿದ್ದ ವೈದ್ಯ ಈಗ 50 ಕೋಟಿ ರೂಪಾಯಿ ಡೌರಿ ಕೇಳಿದ್ದಾರೆ ಎಂದು ನನ್ನ ಗೆಳತಿ ಅಳುತ್ತಿದ್ದಾಳೆ. ವರದಕ್ಷಿಣೆಯ ಬೇಡಿಕೆ ಬಗ್ಗೆ ಆಕೆ ಸದಾ ನನ್ನ ಬಳಿ ಹೇಳುತ್ತಲೇ ಇದ್ದಳು. ಅದುವೇ ಈಗ ಆಕೆಯನ್ನು ಕಾಡತೊಡಗಿದೆ ಎಂದು ಎಕ್ಸ್‌ನಲ್ಲಿ ಡಾ. ಫೋನಿಕ್ಸ್ (@inbetweenOTs) ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆದ ಬೆನ್ನಿಗೆ ಈ ಖಾತೆ ಪ್ರೈವೇಟ್ ಮೋಡ್‌ಗೆ ಹೋಗಿದೆ.
50 ಕೋಟಿ ರೂ ಡೌರಿ; ಏನಿದು ವೈರಲ್ ಪೋಸ್ಟ್
ಡಾ. ಫೋನಿಕ್ಸ್ ಅವರು ಸರಣಿ ಟ್ವೀಟ್ ಮಾಡಿ ಈ ವಿಷಯ ಪ್ರಸ್ತಾಪಿಸಿದ್ದು, ಇದರೊಂದಿಗೆ ವೈದ್ಯ ವೃತ್ತಿಯಲ್ಲಿರುವವರ ವಿವಾಹದ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೂತ್ರಶಾಸ್ತ್ರದಲ್ಲಿ ಎಂಸಿಎಚ್‌ಗಾಗಿ ಏಮ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ ಮೊದಲ ರಾಂಕ್ ಗಳಿಸಿದ್ದ ವ್ಯಕ್ತಿಯೊಂದಿಗೆ ನನ್ನ ವೈದ್ಯ ಸ್ನೇಹಿತೆಯ ಮದುವೆ ಮಾತುಕತೆ ನಡೆದಿದೆ. ಆತ 50 ಕೋಟಿ ರೂಪಾಯಿ ಡೌರಿ ಕೇಳಿದ್ದಾಗಿ ಈಗ ಸ್ನೇಹಿತೆ ಅಳುತ್ತಿದ್ದಾಳೆ ಎಂದು ವಿವರಿಸಿದ್ದಾರೆ.
ಸ್ನೇಹಿತೆ ಕೂಡ ವೈದ್ಯ ವೃತ್ತಿಯಲ್ಲಿದ್ದು ಪ್ರಸ್ತುತ ಅನಸ್ತೇಷಿಯಾದಲ್ಲಿ ಎಂಡಿ ಮಾಡುತ್ತಿದ್ಧಾರೆ. ಹೈದರಾಬಾದ್‌ನಲ್ಲಿ ಯಕೃತ್ ಕಸಿ ಅನಸ್ತೇಷಿಯಾದಲ್ಲಿ ಫೆಲೋ ಆಗಿರುವ ಆಕೆ ಈಗ ನೊಂದಿದ್ದಾಳೆ. ವರದಕ್ಷಿಣೆ ಕೇಳಿದ ನಿಮಗಾದರೂ ನಾಚಿಕೆ ಬೇಡವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಂತ ಕಾಲುಗಳ ಮೇಲೆ ನಿಲ್ಲುವ ಸಾಮರ್ಥ್ಯ ಒದಗಿಸುವ ವೈದ್ಯ ವೃತ್ತಿಯಂತಹ ಶಿಕ್ಷಣ ಪಡೆದ ಉದ್ದೇಶವೇನು ಹಾಗಾದರೆ ಎಂದೂ ಅವರು ಪ್ರಶ್ನಿಸಿದ್ದಾರೆ.
ಅಪ್ಪ-ಅಮ್ಮನ ಜೀವಮಾನದ ದುಡಿಮೆ ಸಾಲದು
50 ಕೋಟಿ ರೂಪಾಯಿ ವರದಕ್ಷಿಣೆ ಎಂಬುದು ಸಣ್ಣ ಮೊತ್ತವೇನಲ್ಲ. ಅದು ಆಕೆಯ ಅಪ್ಪ ಅಮ್ಮನ ಜೀವಮಾನದ ಉಳಿತಾಯಕ್ಕೂ ದೊಡ್ಡ ಮೊತ್ತ ಎಂದು ಆಕೆ ಕಣ್ಣೀರು ಹಾಕುತ್ತಲೇ ಇದ್ದಾಳೆ. ಇದೇ ವೇಳೆ ಆಕೆಯ ಪಾಲಕರು ಆ ದೊಡ್ಡ ಮೊತ್ತವನ್ನು ಹೊಂದಿಸುವುದಕ್ಕಾಗಿ ಓಡಾಟ ನಡೆಸಿದ್ದಾರೆ. ಅವರ ಸಮುದಾಯದಲ್ಲಿ ಭಾರಿ ಮೊತ್ತದ ಡೌರಿ ಸಾಮಾನ್ಯ ವಿಚಾರ ಎಂದು ಆಕೆ ನೊಂದುಕೊಂಡು ಹೇಳಿದ್ದಾರೆ. ಆಕೆಗೆ ತಂಗಿಯೂ ಇದ್ದು ಆಕೆಯ ಮದುವೆಗೂ ಅಪ್ಪ ಅಮ್ಮ ಮತ್ತೆ ಇದಕ್ಕಿಂತ ದೊಡ್ಡ ಮೊತ್ತದ ಡೌರಿ ಹೊಂದಿಸಬೇಕಾಗುತ್ತದೆ ಎಂದು ಡಾ ಫೋನಿಕ್ಸ್ ವಿವರಿಸಿದ್ದರು.
ಎಕ್ಸ್ ತಾಣದಲ್ಲಿ ವಿಭಿನ್ನ ಪ್ರತಿಕ್ರಿಯೆ
ಇದೆಂಥಾ ಬದುಕು, ವಾಕರಿಕೆ ಬರುತ್ತದೆ ಆ ವ್ಯಕ್ತಿಯ ಬಗ್ಗೆ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಇದು ನಿಜವೇ ಆಗಿದ್ದರೆ, 50 ಕೋಟಿ ‘ವರದಕ್ಷಿಣೆ’ ಬೇಡಿಕೆಯು ಸಮಾಜ ಮತ್ತು ವೈದ್ಯಕೀಯ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಆದರೆ, ಮೂಲ ಗಣಿತ ಮತ್ತು ಅರ್ಥಶಾಸ್ತ್ರದ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಹಣದಿಂದ ಅಂತಸ್ತು ಬರುವುದಿಲ್ಲ ಎಂಬುದು ಅರ್ಥವಾಗದ ಮೂರ್ಖ”ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಇದು ನಿಜವಾ, ಕಟ್ಟುಕಥೆ ಅಲ್ಲವಲ್ಲ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇತರರು ಬೇಡಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.