ಹಿಂಗಾರು ಹಂಗಾಮು: ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲು
ಕನ್ನಡ ಸುದ್ದಿ  /  ಕರ್ನಾಟಕ  /  ಹಿಂಗಾರು ಹಂಗಾಮು: ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲು

ಹಿಂಗಾರು ಹಂಗಾಮು: ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲು

ಚಳಿಗಾಲದ ಕೃಷಿಗೆ ಅಂದರೆ ಹಿಂಗಾರು ಹಂಗಾಮಿಗೆ ನಾಡು ಸಜ್ಜಾಗಿದೆ. ಕೃಷಿಕರಿಗೆ ಈಗ ಬಿತ್ತನ ಬೀಜ ಖರೀದಿ ಸಮಸ್ಯೆ ಎದುರಾಗಿದೆ. ಕಾರಣ ಬೆಲೆ ಏರಿಕೆ. ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆ, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲಾಗಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ.

ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲಾಗಿದ್ದಾರೆ. (ಸಾಂಕೇತಿಕ ಚಿತ್ರ)
ಗೋಧಿ, ಕಡಲೆ ಬಿತ್ತನೆ ಬೀಜ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಯ ಬಿಸಿಗೆ ಕೃಷಿಕರು ಕಂಗಾಲಾಗಿದ್ದಾರೆ. (ಸಾಂಕೇತಿಕ ಚಿತ್ರ) (Pixabay)

ಬೆಂಗಳೂರು: ಹಿಂಗಾರು ಹಂಗಾಮು ಶುರುವಾಗುತ್ತಿರುವಂತೆ ಬಿತ್ತನೆ ಬೀಜಗಳ ದರ ಏರಿಕೆಯಾಗಿದೆ. ವಿಶೇಷವಾಗಿ ಗೋಧಿ, ಕಡಲೆ, ರಾಗಿ ಬಿತ್ತನೆ ಬೀಜಗಳು ಸ್ವಲ್ಪ ದುಬಾರಿಯಾಗಿವೆ. ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ಬಿತ್ತನೆ ಬೀಜಗಳ ಕೊರತೆ ಉಂಟಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಮತ್ತು ಕರ್ನಾಟಕ ರಾಜ್ಯ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ಬಿತ್ತನೆ ಬೀಜಗಳನ್ನು ರೈತರಿಗೆ ನೀಡುತ್ತವೆ. ಈ ಸಲ ಇವು ರೈತರಿಂದಲೇ ಶೇಕಡ 23ರಷ್ಟು ಹೆಚ್ಚು ದರ ನೀಡಿ ಬಿತ್ತನೆ ಬೀಜಗಳನ್ನು ಖರೀದಿಸಿವೆ. ಅಂಥ ಬೀಜಗಳಿಗೆ ಈಗ ಶೇ 9 ರಿಂದ ಶೇ 13 ರಷ್ಟು ದರ ಹೆಚ್ಚಳವಾಗಿದೆ. ಆದ್ದರಿಂದ ಹಿಂಗಾರು ಹಂಗಾಮು ಶುರುವಾಗುತ್ತಿರುವ ಈ ಹೊತ್ತಿನಲ್ಲಿ ಬಿತ್ತನೆ ಬೀಜ ಖರೀದಿ ದೊಡ್ಡ ಸವಾಲಾಗಿದೆ.

ಗೋಧಿ, ಕಡಲೆ ಬಿತ್ತನೆ ಬೀಜ ದರ ಹೆಚ್ಚಳ

ಪ್ರಸಕ್ತ ವರ್ಷ ಅಂದರೆ 2024-25ನೇ ಸಾಲಿನಲ್ಲಿ 2023-24ನೇ ಸಾಲಿಗೆ ಹೋಲಿಸುವುದಾದರೆ, ವಿವಿಧ ಬೆಳೆಗಳ ಎಪಿಎಂಸಿ ಮಾರಾಟ ದರ ಗರಿಷ್ಠ ಶೇ.0.73ರಿಂದ 31.52 ರ ತನಕ ಹೆಚ್ಚಳವಾಗಿದೆ. ಕಳೆದ ವರ್ಷ (2023-24) ಬರಗಾಲದ ಕಾರಣ ಕಡಲೆ ಮತ್ತು ಗೋಧಿ ಬೀಜೋತ್ಪಾದನೆ ಗಣನೀಯ ಪ್ರಮಾಣ ಕಡಿಮೆಯಾಗಿದೆ. ಬೀಜೋತ್ಪಾದಕರಿಂದ ಬಿತ್ತನೆ ಬೀಜ ಖರೀದಿಸುವ ದರ ಕೂಡ ಏರಿಕೆಯಾಗಿದೆ. ಹೀಗಾಗಿ ಗೋಧಿ ಬಿತ್ತನೆ ಬೀಜ ದರ ಶೇಕಡ 22.73 ರಷ್ಟು ಏರಿದೆ. ಅದರೂ, ಮಾರಾಟ ದರವನ್ನು ಶೇ 13.64 ರಿಂದ ಶೇ 15.38 ರಷ್ಟು ಮಾತ್ರ ಏರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು, ಕಡಲೆಯ ಖರೀದಿ ದರ ಶೇ.30.08 ರಷ್ಟು ಹೆಚ್ಚಳವಾಗಿದೆ. ಆದರೂ, ಮಾರಾಟ ದರ ಶೇ.15.88 ರಷ್ಟು ಮಾತ್ರ ಏರಿದೆ. ಉಳಿದ ಬೆಳೆಗಳಾದ ಶೇಂಗಾ, ಹಿಂಗಾರಿ ಜೋಳ ಮತ್ತು ಕುಸುಬೆ ಬಿತ್ತನೆ ಬೀಜಗಳ ಖರೀದಿ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಶೇ.2.41ರಷ್ಟು ಹೆಚ್ಚಳವಾಗಿದೆ. ಮಾರಾಟ ದರ ಗರಿಷ್ಠ ಶೇಕಡ 13.07ರಷ್ಟು ಏರಿದೆ. ಕಳೆದ ವರ್ಷ ಕಡಲೆ ಕೆಜಿಗೆ 75 ರಿಂದ 85 ರೂ.ವರೆಗೆ, ಗೋಧಿ 50 ರಿಂದ 66 ರೂ. ಹಾಗೂ ಜೋಳ 85 ರೂ.ವರೆಗೆ ಮಾರಾಟವಾಗಿತ್ತು. ಸರ್ಕಾರ ಪ್ರತಿ ಕೆ.ಜಿ ಕಡಲೆ ಬೀಜಕ್ಕೆ 25 ರೂ. ಸಹಾಯಧನ ನೀಡುತ್ತಿದೆ. ಅಂದರೆ ಪ್ರತಿ 20 ಕೆ.ಜಿ. ಪ್ಯಾಕೆಟ್‌ಗೆ 1,200 ರೂ. ನಿಗದಿ ಮಾಡಿ ರೈತಸಂಪರ್ಕ ಕೇಂದ್ರಗಳ ಮೂಲಕ ವಿತರಿಸುತ್ತಿದೆ. ಈ ವರ್ಷ 150 ರೂ. ವರೆಗೆ ಹೆಚ್ಚಳವಾಗಿದೆ.

ಹೆಚ್ಚಿದ ಬೇಡಿಕೆ, ದರವೂ ಏರಿಕೆ

ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನ ಕೃಷಿಗಾಗಿ ಜೋಳ, ಕಡಲೆ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಬಂದಿದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಕಡಲೆ ಬಿತ್ತನೆ ಬೀಜದ ಬೇಡಿಕೆ ಇದೆ. ಬೆಳಗಾವಿ, ವಿಜಯಪುರ, ಕೊಪ್ಪಳ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಜೋಳದ ಬೀಜಕ್ಕೆ ಬೇಡಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿ 5,10,15,20 ಕೆಜಿ ತೂಕದ ಬೀಜದ ಪ್ಯಾಕೆಟ್ ಬೆಲೆ 110ರಿಂದ 350 ರೂ. ವರೆಗೆ ಹೆಚ್ಚಳವಾಗಿದೆ. ಸೂರ್ಯಕಾಂತಿ ದರ ಸ್ಥಿರವಾಗಿದೆ. ತುಮಕೂರು, ದಾವಣಗೆರೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಏರುಪೇರು ಆಗಿರುವ ಕಾರಣ ಬಿತ್ತನೆಗೆ ಹಿನ್ನಡೆಯಾಗಿದೆ. ಇನ್ನೊಂದೆಡೆ ಬಿತ್ತನೆ ಬೀಜ ಪೂರೈಕೆ ಕಡಿಮೆಯಾಗಿರುವುದು ಕೂಡ ರೈತ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಈ ನಡುವೆ, ಸರ್ಕಾರದ ಸಬ್ಸಿಡಿ ದರಕ್ಕಿಂತ ಖಾಸಗಿ ಕಂಪನಿಗಳ ಬಿತ್ತನೆ ಬೀಜಗಳ ದರ ದುಪ್ಪಟ್ಟು ಹೆಚ್ಚಾಗಿರುವುದು ಕೂಡ ರೈತರನ್ನು ಕಂಗಾಲಾಗಿಸಿದೆ.

Whats_app_banner