ಕಾಫಿ ಬೆಳೆಗಾರರ ತೀರದ ಸಂಕಷ್ಟ, ಈ ಬಾರಿ ಇಳುವರಿಯೊಂದಿಗೆ ಬೆಲೆಯೂ ಕುಸಿತ, ಬೆಳೆಗಾರರಲ್ಲಿ ಆತಂಕ
ಕಡಿಮೆಯಾದ ಮಳೆ ಮತ್ತು ಕುಸಿಯುತ್ತಿರುವ ಕಾಫಿ ಬೆಲೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. (ಬರಹ: ಎಚ್.ಮಾರುತಿ)
ಕೋವಿಡ್ ನಂತರದ ಹಣಕಾಸು ವರ್ಷವಾದ 2023-24 ಕಾಫಿ ಉದ್ಯಮಕ್ಕೆ ತುಂಬಾ ಸವಾಲಿನ ವರ್ಷ. ಇದಕ್ಕೆ ಎರಡು ಕಾರಣಗಳು. ಒಂದು ಕಡಿಮೆಯಾದ ಮಳೆ ಮತ್ತು ಕುಸಿಯುತ್ತಿರುವ ಕಾಫಿ ಬೆಲೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಶೇ 20ರಿಂದ 30 ರಷ್ಟು ಮಳೆ ಕಡಿಮೆಯಾಗಿದೆ. ಕಳೆದ ಎರಡು ವರ್ಷಗಳೂ ಕಾಫಿ ಉದ್ಯಮಕ್ಕೆ ಪ್ರಕೃತಿ ಪೂರಕವಾಗಿಲ್ಲ. 2022-23 ರಲ್ಲಿ ಅಕಾಲಿಕ ಮಳೆ ಮತ್ತು ಅದರ ಹಿಂದಿನ ವರ್ಷದಲ್ಲಿ ವಿಪರೀತ ಮಳೆಯಿಂದಾಗಿ ಇಳುವರಿ ಕಡಿಮೆಯಾಯಿತು. 2023-24 ರಲ್ಲಿ ಕಾಫಿ ಮೊಗ್ಗು ಅರಳುವುದಕ್ಕೂ ಮುನ್ನ ಶೇ 6.3ರಷ್ಟು ಅಂದರೆ 3.74 ಲಕ್ಷ ಮೆಟ್ರಿಕ್ ಟನ್ ಇಳುವರಿ ಬರಬಹುದು ಎಂದು ಹೆಚ್ಚಳವಾಗಲಿದೆ ಎಂದು ಕಾಫಿ ಮಂಡಳಿ ನಿರೀಕ್ಷೆ ಮಾಡಿದೆ. ಕಾಫಿ ಎಸ್ಟೇಟ್ ಮಾಲೀಕರು ಶೇ 25-30ರಷ್ಟು ಇಳುವರಿ ಕಡಿಮೆಯಾಗಬಹುದು ಎಂದು ಅಂದಾಜು ಮಾಡಿದ್ದಾರೆ.
ದೇಶದ ಒಟ್ಟು ಕಾಫಿ ಎಸ್ಟೇಟ್‌ಗಳಲ್ಲಿ ಶೇ 70ರಷ್ಟು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಅಕಾಲಿಕ ಮಳೆಯಿಂದಾಗಿ ಕಾಫಿ ಮೊಗ್ಗು ಅರಳುತ್ತಿದ್ದು, ಕಾಫಿ ಬೆಳೆ ಆರೈಕೆ ಆರಂಭವಾಗಿದೆ. ಒಂದು ತಿಂಗಳ ಮೊದಲೇ ಈ ಕೆಲಸ ಆರಂಭವಾಗಿದ್ದರಿಂದ ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ. ಈಗ ಬಿದ್ದಿರುವ ಅಕಾಲಿಕ ಮಳೆಯಿಂದಾಗಿ ಮೊಗ್ಗು ಉದುರಲಿದ್ದು ಇಳುವರಿ ಕಡಿಮೆಯಾಗಲಿದೆ. ಈಗ ಬಿದ್ದಿರುವ ಅಕಾಲಿಕ ಮಳೆಯಿಂದಾಗಿ ಮೊಗ್ಗು ಉದುರಲಿದ್ದು ಇಳುವರಿ ಕಡಿಮೆಯಾಗಲಿದೆ ಎಂದು ಹಾಸನದ ಕಾಫಿ ಬೆಳೆಗಾರ ವಿಶ್ವನಾಥ್ ಹೇಳುತ್ತಾರೆ.
ಇಳಿಕೆಯಾಗುತ್ತಿರುವ ಕಾಫಿ ಬೆಲೆ
ಈ ವರ್ಷದಲ್ಲಿ ಕಾಫಿ ಬೆಲೆ ಇಳಿಮುಖವಾಗುತ್ತಿರುವುದು ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ 15,700 ರೂಪಾಯಿಗೆ ಮಾರಾಟವಾಗುತ್ತಿದ್ದ 50 ಕೆಜಿ ಅರೇಬಿಕಾ ಕಾಫಿ ಚೀಲವು ಇದೀಗ 11,200 ರೂಪಾಯಿಗೆ ಕುಸಿದಿದೆ. ಆರು ತಿಂಗಳ ಅವಧಿಯಲ್ಲಿ ಅರೇಬಿಕಾ ಬೆಲೆ ಶೇ 29ರಷ್ಟು ಕುಸಿತ ಕಂಡಿದೆ. ಭಾರತವು ತನ್ನ ಕಾಫಿ ಉತ್ಪಾದನೆಯ ಶೇ 70ರಷ್ಟು ಅಂದರೆ 9,000 ಕೋಟಿ ರೂಪಾಯಿ ಮೌಲ್ಯದ ಬೆಳೆಯನ್ನು ರಫ್ತು ಮಾಡುತ್ತಿದೆ. ಈ ವರ್ಷ ಬ್ರೆಜಿಲ್ ಅತಿ ಹೆಚ್ಚು ಕಾಫಿ ಉತ್ಪಾದಿಸಿದ್ದು, ಇದರಿಂದಲೂ ದೇಶೀಯವಾಗಿ ಕಾಫಿ ಬೆಲೆ ಕುಸಿಯುವ ಆತಂಕ ಮೂಡಿದೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಶೇ 40 ರಷ್ಟನ್ನು ಬ್ರೆಜಿಲ್ ಉತ್ಪಾದಿಸುತ್ತಿದೆ.
ಬೆಳೆಗಾರರಿಗೆ ಹಲವು ಸವಾಲುಗಳು
ಕಾಫಿ ಬೆಳೆಗಾರರ ಆತಂಕಗಳು ಕಡಿಮೆಯಾಗಿಲ್ಲ. ಕಾಫಿ ಎಸ್ಟೇಟ್‌ಗಳಿಗೆ ನುಗ್ಗುವ ವನ್ಯಮೃಗಗಳು, ವಿದ್ಯುತ್ ಕಳಪೆ ಸರಬರಾಜು, ಕುಸಿಯುತ್ತಿರುವ ಬೆಲೆ ಪ್ರಮುಖವಾಗಿ ಕಾಡುತ್ತಿವೆ. ಕಾಫಿ ಬೆಳೆಗೆ ಸಾಲ ನೀಡುವಾಗ ಕೃಷಿ ಉತ್ಪನ್ನ ಎಂದು ಪರಿಗಣಿಸುವ ಬ್ಯಾಂಕ್‌ಗಳು ವಸೂಲಾತಿ ಸಂದರ್ಭದಲ್ಲಿ ಕೃಷಿಯೇತರ ಉತ್ಪನ್ನ ಎಂದು ಪರಿಗಣಿಸುತ್ತವೆ. ಒಂದು ವೇಳೆ ಸಾಲ ತೀರಿಸಲು ವಿಫಲವಾದರೆ ಸಾಲ ಪಡೆದವರ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ ಎಂದು ಕರ್ನಾಟಕ ಕಾಫಿ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಮಹೇಶ್ ಶಶಿಧರ್ ಹೇಳುತ್ತಾರೆ.
ಈ ಮಧ್ಯೆ ಮಾನವ-ವನ್ಯಜೀವಿಗಳ ಸಂಘರ್ಷವೂ ಹೆಚ್ಚುತ್ತಿದ್ದು ಈ ವರ್ಷದಲ್ಲಿ ದ್ವಿಗುಣವಾಗಿದೆ. ಈ ವರ್ಷದ ಏಪ್ರಿಲ್-ನವೆಂಬರ್ ಅವಧಿಯ ಆರು ತಿಂಗಳಲ್ಲಿ 12 ಸಂಘರ್ಷಗಳೂ ನಡೆದಿರುವುದು ವರದಿಯಾಗಿದೆ. ಸರ್ಕಾರ ಜಾರಿಗೊಳಿಸುತ್ತಿರುವ ನೀರಾವರಿ ಯೋಜನೆಗಳೂ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತಿವೆ. ಈ ಯೋಜನೆಗಳಿಂದಾಗಿ ವನ್ಯಮೃಗಗಳು ಮತ್ತೆ ಅರಣ್ಯ ಪ್ರದೇಶಗಳಿಗೆ ಹಿಂತಿರುಗುವುದಿಲ್ಲ. ಎಸ್ಟೇಟ್‌ಗಳಲ್ಲೇ ಉಳಿದುಕೊಳ್ಳುತ್ತವೆ.
ಆಗ ಅತಿವೃಷ್ಟಿ, ಈಗ ಬರದ ಛಾಯೆ
2015-18 ಮೂರು ವರ್ಷ ಅತಿವೃಷ್ಟಿ ಆವರಿಸಿತ್ತು. ನಂತರ 2018-22ರವರೆಗೆ ಭೀಕರ ಬರಗಾಲ ಕಾಡಿತ್ತು. ಇದೀಗ ಮತ್ತೆ ಬರಗಾಲದ ಛಾಯೆ ಆವರಿಸಿದೆ. ಕಾಫಿ ಬೆಳೆಯುವ ಕೆಲವು ಜಿಲ್ಲೆಗಳಲ್ಲಿ ಅರ್ಧದಷ್ಟೂ ಮಳೆಯಾಗಿಲ್ಲ. ಕಾಫಿ ಬೆಳೆಗಾರರು ವಿದ್ಯುತ್ ಬಿಲ್ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಅಡಿಕೆ, ಭತ್ತ, ಬಾಳೆಯಂತೆಯೇ ಕಾಫಿಯನ್ನೂ ಬೆಳೆಯಲಾಗುತ್ತಿದೆ. ಕಾಫಿ ಹೊರತುಪಡಿಸಿದಂತೆ ಉಳಿದ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ತಾರತಮ್ಯ ನೀತಿ ಬಿಟ್ಟು ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.
ಅಡಿಕೆ, ಭತ್ತ, ಬಾಳೆ ಕೃಷಿಯಂತೆಯೇ ಕಾಫಿಯೂ ಒಂದು ಕೃಷಿ. ಆದರೆ ಕಾಫಿ ಹೊರತುಪಡಿಸಿ ಉಳಿದ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ತಾರತಮ್ಯ ನೀತಿ ಬಿಟ್ಟು ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.