Kannada Book on MadhuBala: ಹಿಂದಿ ಚಿತ್ರ ತಾರೆ ಮಧುಬಾಲ ಬೆಳ್ಳಿಪರದೆಯ ದಿನಗಳ ಕಥನ ಕುತೂಹಲ; ರಮೇಶ್ ಅರೋಲಿ ಕೃತಿ
New Book ಕನ್ನಡದಲ್ಲಿ ಸಂಗಾತ ಪ್ರಕಾಶನವು( Sangata publications) ಹೊಸ ಕೃತಿಗಳನ್ನು ಹೊರ ತರುತ್ತಿದ್ದು, ಅವುಗಳ ಸಾಲಿಗೆ ರಮೇಶ್ ಅರೋಲಿ( Ramesh Aroli) ಅವರ ಮಧುಬಾಲ( Madhubala) ಕೃತಿ ಸೇರಿದೆ.
ಧಾರವಾಡ: ನಟಿ ಮಧುಬಾಲ ಯಾರಿಗೆ ಗೊತ್ತಿಲ್ಲ. ಕಡಿಮೆ ಸಮಯದಲ್ಲಿಯೇ ಹಿಂದಿ ಸಿನೆಮಾ ರಂಗದಲ್ಲಿ ಗಮನ ಸೆಳೆದ ಈ ನಟಿ ಸಿನೆಮಾಗಳೂ ಅಷ್ಟೇ ಜನಸೂರೆಗೊಂಡಿವೆ. ಆಕೆಯ ಖಾಸಗಿ ಬದುಕಿನ ಕುರಿತಾಗಿ ಹಲವಾರು ಕಥೆಗಳಿವೆ. ಆಕೆ ಅನುಭವಿಸಿದ ಬದುಕಿನ ಕ್ಷಣಗಳು ಕೂಡ ಅಷ್ಟೇ ಕುತೂಹಲಕಾರಿಯೂ ಹೌದು. ಲೇಖಕ ರಮೇಶ್ ಅರೋಲಿ ಅವರು ಸಂಗಾತ ಪ್ರಕಾಶನದ ಮೂಲಕ ಮಧುಬಾಲಾ ಅವರ ಜೀವನಯಾನ ಹೊರಗೆಳೆಯುವ ಪ್ರಯತ್ನ ಮಾಡಿದ್ಧಾರೆ.
ಒಮ್ಮೆ ನನ್ನವರೇ ನನ್ನನ್ನು ಹೊಡೆದರು
ಮತ್ತೊಮ್ಮೆ ಅಲ್ಲದವರು ಹೊಡೆದರು
ಒಮ್ಮೆ ಪರಿಸ್ಥಿತಿ ಹೊಡೆಯಿತು
ಮತ್ತೊಮ್ಮೆ ಹಣೆಬರಹ ಹೊಡೆಯಿತು
ಆದರೆ, ಇಷ್ಟೆಲ್ಲಕ್ಕಿಂತ ಹೆಚ್ಚಾಗಿ
ನನ್ನನ್ನು ನಿಸರ್ಗ ಹೊಡೆದು ಉರುಳಿಸಿತು!
ಹೌದು ಆಕೆಯ ಬದುಕು ಚಿಕ್ಕದಾದರೂ ಕತೆ ದೊಡ್ಡದು! ಯಾಕೆಂದರೆ ಪ್ರಕೃತಿ ಹುಟ್ಟಿನಿಂದಲೇ ಮಧುಬಾಲಳ ಹೃದಯದಲ್ಲಿ ರಂಧ್ರವೊಂದನ್ನು ಕೊರೆದಿತ್ತು. ಅದಕ್ಕೆ ಚಿಕಿತ್ಸೆಯೇ ಇಲ್ಲವಾಗಿತ್ತು. ಯಾವುದೋ ವಿಷಯವಾಗಿ ಸಲಹೆ ಕೇಳಲು ಕರೆಯಿಸಿಕೊಂಡು ತಾನು ಚೇತರಿಸಿಕೊಂಡ ಮೇಲೆ ತನ್ನೊಂದಿಗೆ ಸಿನಿಮಾ ಮಾಡಲು ಇಷ್ಟ ಪಡ್ತಿರಾ... ಅಂತ ಕೇಳಿದ್ದಳು.
ಅದಕ್ಕೆ ಉತ್ತರಿಸಿದ ದಿಲೀಪ್‌ಕುಮಾರ್, 'ನಿನಗೇನು ಆಗಿಲ್ಲ, ನೀನು ಹುಷಾರ್ ಅಗ್ತಿಯ, ಖಂಡಿತಾ ಮತ್ತೆ ನಾವು ಒಂದು ಸಿನಿಮಾ ಮಾಡೋಣ' ಅಂತ ಭರವಸೆ ನೀಡಿದ್ದರು. ಆಕೆಯ ಆ ಸ್ಥಿತಿಯನ್ನು ಕಣ್ಣಾರೆ ಕಂಡ ದಿಲೀಪ್ ಕುಮಾರ್, ತಾನು ಜೀವಂತ ಇರುವವರೆಗೂ ಆಕೆಯನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದು ಸಾರ್ವಜನಿಕವಾಗಿ ಕೋರ್ಟಿನಲ್ಲಿ ಘೋಷಿಸಿದ ಆಕೆಯ ಗೆಳೆಯ, ಪ್ರಿಯತಮನ ದುಃಖವನ್ನು ಗಮನಿಸಿದ ಅನೇಕರು, ಅವರಿಬ್ಬರು ಒಂದಾಗಿದ್ದರೆ, ಆಕೆಗೆ ಒಂದಷ್ಟು ಆಯುಷ್ಯವನ್ನಾದರೂ ಆತ ಕೊಡಬಹುದಿತ್ತು ಅಂದುಕೊಂಡರು. ವೈದ್ಯಕೀಯ ಲೋಕದಲ್ಲಿ ಹೃದಯದ ರಂಧ್ರಕ್ಕೆ ಸಮರ್ಪಕ ಚಿಕಿತ್ಸೆ ಇನ್ನು ಕಂಡುಹಿಡಿಯದ ಆ ದಿನಗಳಲ್ಲಿ 'ಮುಝೇ ನಹೀ ಮರ್ನಾ ಹೈ, ಮುಝೆ ಜೀನಾ ಹೈ...' ಅಂತ ತಾನು ಇನ್ನು ಬದುಕಬೇಕು, ತನಗೆ ಸಾಯಲು ಇಷ್ಟವಿಲ್ಲ ಅಂತ ಅತ್ತು ಅತ್ತು ಅಂಗಲಾಚುತಿದ್ದ ಆಕೆಯ ಮಾತಿಗೆ ಉತ್ತರವಾದರು ಯಾರಲ್ಲಿತ್ತು? ಮನುಷ್ಯ ಜಗತ್ತಿನ ಎಷ್ಟೋ ಸಂಬಂಧಗಳು ತಾವಾಗೇ ಮುದುಡಿ ಹೋಗುವುದಿಲ್ಲ.
ಘಾಸಿಗೊಂಡ ಎರಡು ಮನಸುಗಳ ನಡುವೆ ಆದ ಒಪ್ಪಂದ, ಮುಚ್ಚಳಿಕೆ ಕೇವಲ ಒಂದೇ ಒಂದು 'ಕ್ಷಮಿಸು' ಅಥವಾ 'ಪರವಾಗಿಲ್ಲ ಬಿಡು' ಎಂಬೆರಡು ಪದಗಳಿಂದಲೂ ಸಲ ಹೋಗಬಹುದು. ಆದರೆ ನಮ್ಮ ಅಹಂನ ಕಾರಣ ಅದೆಂದೂ ಅಪೇರಿ ಆಗದ ಸೈಕಲ್‌ಟ್ಯೂಬ್‌ನಂತೆ ಬೊಕ್ಕೆಗಳಾಗಿ, ನೀರುಣಿಸದ ಸಸಿಗಳಂತೆ ಒಣಗಿ ಬಿಡುತ್ತದೆ. ಮಧುಬಾಲ ಮತ್ತು ದಿಲೀಪ್ ಕುಮಾರ್‌ರ ನಡುವೆ ಆಗಿದ್ದೂ ಇದೇ.
ಸಂಗಾತ ಪುಸ್ತಕದ ಮೂಲಕ ನಾಲ್ಕೈದು ವರ್ಷದಿಂದ ಪುಸ್ತಕ ಪ್ರಕಟಣೆ ಕಾರ್ಯ ಮುಂದುವರಿದಿದೆ. ಇದರಲ್ಲಿ ಹಲವಾರು ಬಗೆಯ ಲೇಖಕರ ವಿಭಿನ್ನ ಕೃತಿಗಳು ಹೊರ ಬಂದಿವೆ. ಈ ಸಾಲಿಗೆ ಮಧುಬಾಲ ಸೇರ್ಪಡೆಯಗಿದೆ. ಲೇಖಕ ರಮೇಶ್ ಅರೋಲಿ ಅವರು ಈ ಕೃತಿಗಳನ್ನು ಪ್ರಕಟಿಸಿದ್ದಾರೆ ಎನ್ನುವುದು ಪ್ರಕಾಶಕ ಹಾಗೂ ಪತ್ರಕರ್ತ ಟಿ.ಎಸ್.ಗೊರವರ ಅವರ ಪ್ರಕಟಣೆ
ಮಧುಬಾಲ ಕೃತಿ
(ಬೆಳ್ಳಿಪರದೆಗೆ ಕಾಲ ಬರೆದ ಕಾಗದ)
ಲೇ: ರಮೇಶ ಅರೋಲಿ
ಪ್ರಕಾಶನ: ಸಂಗಾತ ಪುಸ್ತಕ
ಬೆಲೆ: ₹ 170
ಸಂಪರ್ಕ: 8431113501