Falling in Love: ಪ್ರೀತಿಯಲ್ಲಿ ಬಿದ್ರೆ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆಯಾಗುತ್ತೆ, ಲವ್ ಮಾಡೋರಷ್ಟೇ ಅಲ್ಲ ಎಲ್ಲರೂ ತಿಳಿಯಬೇಕಾದ ವಿಚಾರವಿದು
ನೀವು ಎಂದಾದ್ರೂ ಪ್ರೀತಿಯಲ್ಲಿ ಬಿದ್ದಿದ್ದೀರಾ? ಪ್ರೀತಿಯಲ್ಲಿ ಬಿದ್ದಾಗ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದರ ಬಗ್ಗೆ ಯೋಚಿಸಿದ್ದೀರಾ. ಹಾಗಾದರೆ ಈ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಯಾರ ಮೇಲಾದ್ರೂ ಪ್ರೀತಿಯಾದ್ರೆ ದೈಹಿಕವಾಗಿ, ಭಾವನಾತ್ಮಕ ಹಾಗೂ ಮಾನಸಿಕವಾಗಿ ನಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಂತೆ. ಪ್ರೀತಿಯಲ್ಲಿ ಬಿದ್ರೆ ಏನೆಲ್ಲಾ ಆಗುತ್ತೆ ನೋಡಿ.
ಪ್ರೀತಿ... ಜಗತ್ತನ್ನ ಸುಂದರ ಲೋಕವನ್ನಾಗಿಸುವ ಒಂದು ಸುಮಧುರ ಭಾವನೆ. ಪ್ರೀತಿಯಲ್ಲಿ ಬಿದ್ದ ಮೇಲೆ ಲೋಕವನ್ನೇ ಮರೆಯುತ್ತಾರೆ ಎಂದು ಹೇಳುತ್ತಾರೆ. ನಮ್ಮ ಹೃದಯದಲ್ಲಿ ಪ್ರೀತಿಯ ಹೂ ಅರಳಿದಾಗ ಕೇವಲ ಮನಸ್ಸು ಮಾತ್ರ ಬದಲಾಗುವುದಲ್ಲ. ಪ್ರೀತಿಯಲ್ಲಿ ಬಿದ್ದ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಲವು ಅಂಶಗಳು ಬದಲಾಗುತ್ತವೆ. ಹೃದಯ ಬಡಿತ ಹೆಚ್ಚುವುದರಿಂದ ಉಸಿರಾಟ ಬದಲಾವಣೆವರೆಗೆ ಪ್ರೀತಿಯಲ್ಲಿರುವಾಗ ಜೈವಿಕ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳಾಗುತ್ತವೆ.
ದಟ್ ಕಲ್ಚರ್ ಥಿಂಗ್‌ನ ಸಾಂಸ್ಥಿಕ ಮನಶ್ಶಾಸ್ತ್ರಜ್ಞ ಗುರ್ಲೀನ್ ಬರೂಹ್ ಅವರ ಪ್ರಕಾರ ʼಪ್ರೀತಿ ಹೃದಯದಿಂದ ಅರಳುತ್ತದೆ, ಸಾಮಾನ್ಯವಾಗಿ ಹೃದಯವು ಪ್ರೀತಿಯೊಂದಿಗೆ ಸಂಬಂಧ ಹೊಂದಿದ್ದರೂ, ಪ್ರೀತಿ ವಿಚಾರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವುದು ಮೆದುಳು. ನಮ್ಮ ಮೆದುಳು ಡೋಪಮೈನ್ ಮತ್ತು ಆಕ್ಸಿಟೋಸಿನ್ ಸೇರಿದಂತೆ ರಾಸಾಯನಿಕಗಳ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಪ್ರೀತಿಗೆ ನಮ್ಮ ಭಾವನಾತ್ಮಕ ಮತ್ತು ದೈಹಿಕ ಪ್ರತಿಕ್ರಿಯೆಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಸಂತೋಷ ಹಾಗೂ ಉನ್ಮಾದದ ಭಾವನೆಗಳನ್ನು ಉಂಟು ಮಾಡುತ್ತದೆʼ ಎಂದು ಅವರು ಹೇಳುತ್ತಾರೆ.
ಈ ಹಾರ್ಮೋನ್‌ಗಳ ಬಿಡುಗಡೆಯು ಹಲವು ರೀತಿಯ ದೈಹಿಕ ಹಾಗೂ ಮಾನಸಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಆನಂದದ ಉತ್ತುಂಗದ ಭಾವನೆಗಳು, ನೋವಿನ ಗ್ರಹಿಕೆ ಕಡಿಮೆಯಾಗುವುದು ಮತ್ತು ತಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆಯ ಬಯಕೆಯನ್ನು ಹೆಚ್ಚಿಸುವುದು ಇಂತಹ ಭಾವನೆಗಳಿಗೆ ಕಾರಣವಾಗುತ್ತದೆ. ಈ ರಾಸಾಯನಿಕ ಬದಲಾವಣೆಗಳ ಜೊತೆಗೆ, ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗುವುದು, ದೇಹ ಗಾಳಿಯಲ್ಲಿ ಹಾರಿದ ಭಾವನೆ ಮತ್ತು ಒಟ್ಟಾರೆಯಾಗಿ ಉತ್ಸಾಹದ ಭಾವನೆಯಂತಹ ದೈಹಿಕ ಸಂವೇದನೆಗಳಲ್ಲಿ ಪ್ರೀತಿಯು ಪ್ರಕಟವಾಗುತ್ತದೆ.
ಇದಲ್ಲದೆ, ಮುದ್ದಾಡುವುದು, ತಬ್ಬಿಕೊಳ್ಳುವುದು ಮತ್ತು ಚುಂಬಿಸುವಂತಹ ದೈಹಿಕ ಅನ್ಯೋನ್ಯತೆಯ ಕ್ರಿಯೆಗಳು ಆಕ್ಸಿಟೋಸಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಇದನ್ನು 'ಪ್ರೀತಿಯ ಹಾರ್ಮೋನ್' ಎಂದು ಕರೆಯಲಾಗುತ್ತದೆ, ಇದು ನಂಬಿಕೆ, ಮಾನಸಿಕ ಶಾಂತಿ ಮತ್ತು ಭದ್ರತೆಯ ಭಾವನೆಗಳನ್ನು ಉತ್ತೇಜಿಸುತ್ತದೆ.
ಪ್ರೀತಿಯಲ್ಲಿ ಬಿದ್ದಾಗ ನರಪ್ರೇಕ್ಷಕಗಳು ಮತ್ತು ಹಾರ್ಮೋನುಗಳು ನಮ್ಮ ನಡವಳಿಕೆ, ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ನಾವು ಪ್ರೀತಿಯಲ್ಲಿದ್ದಾಗ, ಡೋಪಮೈನ್, ಆಕ್ಸಿಟೋಸಿನ್ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನುಗಳು ನಮ್ಮ ಭಾವನೆಗಳು ಮತ್ತು ನಡವಳಿಕೆಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಬರೂಹ್ ಹೇಳುತ್ತಾರೆ. ಡೋಪಮೈನ್ ಅನ್ನು ಸಾಮಾನ್ಯವಾಗಿ 'ಫೀಲ್-ಗುಡ್' ಹಾರ್ಮೋನ್ ಎಂದು ಕರೆಯಲಾಗುತ್ತದೆ, ಇದು ನಮ್ಮ ಮೆದುಳಿನ ಪ್ರತಿಫಲ ಕೇಂದ್ರವನ್ನು ತುಂಬಿಸುತ್ತದೆ, ಇದು ಒಟ್ಟಾರೆ ನಮ್ಮ ಮನಸ್ಥಿತಿಯ ಸುಧಾರಣೆ ಮತ್ತು ಸಂತೋಷದ ಪ್ರಜ್ಞೆಗೆ ಕಾರಣವಾಗುತ್ತದೆ. ಡೋಪಮೈನ್‌ನ ಹಾರ್ಮೋನ್ ಮಟ್ಟ ಏರಿಕೆಯಾದಾಗ ಜೀವನದಲ್ಲಿ ಉತ್ಸಾಹ ಹೆಚ್ಚುತ್ತದೆ. ಪ್ರೀತಿಯಲ್ಲಿ ಬಿದ್ದ ಸಮಯದಲ್ಲಿ ಬದುಕಿನಲ್ಲಿ ಎಲ್ಲವೂ ಸುಂದರ ಎನ್ನಿಸಲು ಇದೂ ಕಾರಣ. ಈ ಸಮಯದಲ್ಲಿ ಕಣ್ಣಿಗೆ ಕಂಡಿದ್ದೆಲ್ಲವೂ ರೋಮಾಂಚಕವಾಗಿಯೇ ಕಾಣಿಸುತ್ತದೆ. ಮನಸ್ಸಿಗೆ ಗೋಚರವಾಗಿದ್ದೆಲ್ಲಾ ವಿಸ್ಮಯವಾಗಿಯೇ ಕಾಣುತ್ತದೆ.
'ಪ್ರೀತಿಯ ಹಾರ್ಮೋನ್' ಎಂದು ಕರೆಯಲ್ಪಡುವ ಆಕ್ಸಿಟೋಸಿನ್, ಪ್ರೇಮಿಗಳು ಅಥವಾ ಸಂಗಾತಿಗಳ ನಡುವೆ ನಂಬಿಕೆ, ಬಂಧ ಮತ್ತು ಅನ್ಯೋನ್ಯತೆಯ ಭಾವನೆಗಳನ್ನು ಬೆಳೆಸುತ್ತದೆ. ಇದು ನಮ್ಮ ಪ್ರೀತಿಪಾತ್ರರ ಕಡೆಗೆ ನಮ್ಮ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸುತ್ತದೆ, ಭದ್ರತೆ ಮತ್ತು ಯೋಗಕ್ಷೇಮದ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಆಕ್ಸಿಟೋಸಿನ್ ಸಹ ಮುದ್ದಾಡುವುದು, ಅಪ್ಪಿಕೊಳ್ಳುವುದು ಮತ್ತು ದೈಹಿಕ ನಿಕಟತೆಯಂತಹ ಪೋಷಣೆಯ ನಡವಳಿಕೆಗಳನ್ನು ಪ್ರೋತ್ಸಾಹಿಸುತ್ತದೆ, ಇದು ಪಾಲುದಾರರ ನಡುವಿನ ಬಂಧವನ್ನು ಇನ್ನಷ್ಟು ಗಾಢಗೊಳಿಸುತ್ತದೆ.
ಮನಃಶಾಸ್ತ್ರಜ್ಞರ ಪ್ರಕಾರ ʼಸಿರೊಟೋನಿನ್, ಮನಃಸ್ಥಿತಿ ನಿಯಂತ್ರಣಕ್ಕೆ ಸಂಬಂಧಿಸಿದ ಮತ್ತೊಂದು ಹಾರ್ಮೋನ್. ನಾವು ಪ್ರೀತಿಯಲ್ಲಿರುವಾಗ ಸಂತೋಷ, ತೃಪ್ತಿ ಮತ್ತು ಭಾವನಾತ್ಮಕ ಸ್ಥಿರತೆಯ ಭಾವನೆಗಳಿಗೆ ಕೊಡುಗೆ ನೀಡುತ್ತದೆ. ಇದು ಆತಂಕ ಮತ್ತು ಒತ್ತಡದ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶಾಂತಿ ಹಾಗೂ ವಿಶ್ರಾಂತಿಯ ಅರ್ಥವನ್ನು ವಿವರಿಸುತ್ತದೆ. ಪರಿಣಾಮವಾಗಿ, ನಾವು ನಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಒಟ್ಟಾರೆ ಸುಧಾರಣೆಯನ್ನು ಅನುಭವಿಸಬಹುದು.
ದೀರ್ಘಕಾಲದ ಪ್ರೀತಿಯು ಆರೋಗ್ಯದ ಮೇಲೆ ಮಾಡುವ ಪರಿಣಾಮಗಳು
ಪ್ರೀತಿಯಲ್ಲಿರುವುದು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳೊಂದಿಗೆ ಆರೋಗ್ಯದ ಮೇಲೆ ಆಳವಾದ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು ಎಂದು ಬರೂಹ್ ತಿಳಿಸುತ್ತಾರೆ. ಸಕಾರಾತ್ಮಕವಾಗಿ, ಪ್ರೀತಿಯಲ್ಲಿರುವುದು ಭಾವನಾತ್ಮಕ ಯೋಗಕ್ಷೇಮ ಮತ್ತು ನೆರವೇರಿಕೆಯ ಪ್ರಜ್ಞೆಯನ್ನು ಬೆಳೆಸುತ್ತದೆ. ನಮ್ಮ ಸಂಗಾತಿಯು ನಮ್ಮನ್ನು ಪ್ರೀತಿಸುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ, ನಮಗೆ ಬೆಲೆ ಕೊಡುತ್ತಾರೆ. ನಮಗಾಗಿ ಒಂದು ಜೀವ ಇದೆ ಎಂದು ಅರಿಯವಾದಾಗ ಅದು ಸಕಾರಾತ್ಮಕ ಭಾವನೆಗಳು ಅರಳಲು ಕಾರಣವಾಗುತ್ತದೆ. ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳಂತಹ ಉತ್ತಮ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗಬಹುದು. ಈ ರೀತಿ ನಮಗೆಂದೇ ಒಂದು ಜೀವ ಇದೆ, ಆ ಜೀವ ಸದಾ ನಮಗಾಗಿ ತುಡಿಯುತ್ತಿರುತ್ತದೆ ಎಂಬ ಭಾವವು ಒತ್ತಡವನ್ನು ಕಡಿಮೆ ಮಾಡುವುದು, ಮಾನಸಿಕ ಆರೋಗ್ಯ ಸುಧಾರಿಸುವುದು ಮತ್ತು ಒಟ್ಟಾರೆ ಸಂತೋಷಕ್ಕೆ ಕಾರಣವಾಗುತ್ತದೆ.
ಪ್ರೀತಿಯ ಸಂಬಂಧದಲ್ಲಿ ನಾವು ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನಮಗೆ ಬೆಂಬಲ ವಾತಾವರಣವನ್ನು ಒದಗಿಸುತ್ತದೆ. ಪ್ರೀತಿಯ ಸಂಗಾತಿಯಿಂದ ಒದಗಿಸಲಾದ ಭಾವನಾತ್ಮಕ ಬೆಂಬಲ ಮತ್ತು ಒಡನಾಟವು ಒಟ್ಟಾರೆ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಪ್ರೀತಿಯಲ್ಲಿ ಬೀಳುವುದು ಕೆಲವು ದುಷ್ಪರಿಣಾಮಗಳನ್ನು ಹೊಂದಿರಬಹುದು ಎಂಬುದನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳುತ್ತಾರೆ. ಬರೂಹ್ ಅವರ ಪ್ರಕಾರ ʼಕೆಲವೊಮ್ಮೆ, ಅತಿಯಾದ ಪ್ರೀತಿಯ ಭಾವನೆಗಳು ಹಾಗೂ ಪ್ರೀತಿಯ ತೀವ್ರತೆಯು ಅನಾಹುತಕ್ಕೂ ಕಾರಣವಾಗಬಹುದು. ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಹಾಗಾಗಿ ಪ್ರೀತಿಯಲ್ಲೂ ಇತಿಮಿತಿ ಇದ್ದರೆ ಉತ್ತಮ. ಪ್ರೀತಿಗಾಗಿ ಜೀವ ಕಳೆದುಕೊಳ್ಳುವ ಅಥವಾ ಜೀವ ತೆಗೆಯುವ ಮಟ್ಟಕ್ಕೆ ಎಂದಿಗೂ ಹೋಗದಿರಿ.