ದಕ್ಷಿಣ ಕನ್ನಡ: ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಧರ್ಮಸ್ಥಳದಲ್ಲಿ ನೀವು ನೋಡಬಹುದಾದ 5 ಪ್ರಮುಖ ಸ್ಥಳಗಳು ಇವು
Dharmasthala Laksha Deepotsava 2024: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 26 ರಿಂದ 30 ವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಮಂಜುನಾಥನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ನೋಡಲು ಬಹಳ ಸ್ಥಳಗಳಿದ್ದು ಮಾಹಿತಿ ಇಲ್ಲಿದೆ.
ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳ ವಿಶ್ವದ ಎಲ್ಲೆಡೆಯಿಂದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಮಂದಿ ಆಗಮಿಸುತ್ತಾರೆ. ನೇತ್ರಾವತಿ ನದಿಯಲ್ಲಿ ಮಿಂದು ದೇವರ ದರ್ಶನ ಮಾಡಿಕೊಂಡು, ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾ ಬಳಿಕ, ಅನ್ನ ಪ್ರಸಾದ ಸೇವಿಸಿ ಸಂತೃಪ್ತರಾಗಿ ಊರಿಗೆ ಮರಳುತ್ತಾರೆ. ಇದೀಗ ಇಲ್ಲಿ ಲಕ್ಷದೀಪೋತ್ಸವ ಸಂಭ್ರಮ ಮನೆ ಮಾಡಿದೆ. ನೀವೂ ಧರ್ಮಸ್ಥಳಕ್ಕೆ ಬರುವ ಪ್ಲಾನ್ ಮಾಡಿದ್ದರೆ ಇಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳ ಬಗ್ಗೆ ಒಂದಿಷ್ಟು ಮಾಹಿತಿ.
1. ಮಂಜುನಾಥ ಸ್ವಾಮಿ ದೇವಸ್ಥಾನ
ಧರ್ಮಸ್ಥಳಕ್ಕೆ ಬಂದ ಮೇಲೆ ಮಂಜುನಾಥನ ದರ್ಶನ ಮಾಡಲೇಬೇಕು. ಸುಮಾರು 800ರಷ್ಟು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರಕ್ಕೆ ದೊಡ್ಡ ಇತಿಹಾಸವೂ ಉಂಟು. ಹಿಂದೆ ಈ ಪ್ರದೇಶವನ್ನು ಕುಡುಮ ಎಂದು ಕರೆಯುತ್ತಿದ್ದರು. ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ದಂಪತಿ ವಾಸವಾಗಿದ್ದರು. ಒಮ್ಮೆ ಇವರ ಮನೆಗೆ ನಾಲ್ಕು ಅತಿಥಿಗಳು ಬಂದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರಿಗೆ ಬಿಟ್ಟುಕೊಟ್ಟರು.
ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆ ನಿಂತರು. ಆ ದೈವಗಳ ಆಜ್ಞೆಯಂತೆ ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಲಾಯಿತು. ಬಳಿಕ ಶಿವಯೋಗಿಗಳು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರಂತೆ. ಧರ್ಮದೇವತೆಗಳೂ ಇದನ್ನೇ ಹೇಳಿದರು. ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಗ ಪ್ರಸಿದ್ಧವಾದುಗಿದೆ. ಇಲ್ಲಿ ನೆಲೆಯಾದ ಮಂಜುನಾಥ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬ ಪ್ರತೀತಿ ಇದೆ.
2. ಗೊಮ್ಮಟೇಶ್ವರ ವಿಗ್ರಹ
ಧರ್ಮಸ್ಥಳದಲ್ಲಿ ಬೃಹದಾಕಾರದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹವಿದೆ. ಇದರ ನಿರ್ಮಾಣ ಕಾರ್ಯವನ್ನು ರಂಜಾಳ ಗೋಪಾಲಕೃಷ್ಣ ಶೆಣೈ ನೇತೃತ್ವದಲ್ಲಿ ಮಾಡಲಾಯಿತು. 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಪೂರ್ಣಗೊಂಡಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39 ಅಡಿ ಎತ್ತರದ ಈ ವಿಗ್ರಹ, ಗ್ರಾನೈಟ್ ಶಿಲೆಯಿಂದ ನಿರ್ಮಾಣವಾಗಿದೆ. ಇದರ ತೂಕ 175 ಟನ್ ಇದೆ. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹವಾಗಿದೆ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ.
3. ಅನ್ನಪೂರ್ಣ ಭೋಜನಶಾಲೆ
ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಮಂದಿಗೆ ನಿತ್ಯ ಅನ್ನ ದಾಸೋಹವಿದೆ. ಮಂಜುನಾಥನ ಆಶೀರ್ವಾದ ಪಡೆಯಲು ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಜಾತಿ, ಧರ್ಮ, ಸಂಸ್ಕೃತಿ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಉಚಿತ ಅನ್ನದಾನ ಮಾಡಲಾಗುತ್ತಿದೆ. 30,000 ರಿಂದ 70,000 ಯಾತ್ರಾರ್ಥಿಗಳಿಗೆ ಏಕಕಾಲದಲ್ಲಿ ಆಹಾರವನ್ನು ನೀಡಲು ವಿನ್ಯಾಸಗೊಳಿಸಲಾದ ಆಧುನಿಕ, ನೈರ್ಮಲ್ಯ ಭರಿತ, ಸ್ವಯಂಚಾಲಿತ ಅಡುಗೆಮನೆಯನ್ನು ಹೊಂದಿದೆ. ಅನ್ನಪೂರ್ಣ ಛತ್ರವನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನವಿದೆ. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ನ ಮೆಗಾ-ಕಿಚನ್‌ಗಳಲ್ಲಿ ಭಾರತದ ಅತ್ಯಂತ ಪರಿಣಾಮಕಾರಿ ಮತ್ತು ಸಂಪನ್ಮೂಲ ಹೊಂದಿರುವ ಸಾಮೂಹಿಕ ಅಡುಗೆಮನೆಗಳಲ್ಲಿ ಒಂದು ಎಂದು ಈ ಭೋಜನಶಾಲೆ ಗುರುತಿಸಲ್ಪಟ್ಟಿದೆ. ಇಲ್ಲಿ ಯಾತ್ರಾರ್ಥಿಗಳಿಗೆ ಮೂರು ಹೊತ್ತು ಊಟ ನೀಡಲಾಗುತ್ತದೆ.
4. ಮಂಜೂಷಾ ವಸ್ತುಸಂಗ್ರಹಾಲಯ
ಧರ್ಮಸ್ಥಳಕ್ಕೆ ಬಂದ ಮೇಲೆ ಮಂಜೂಷಾ ನೋಡಿಯೇ ಹೋಗಬೇಕು. 7500 ತಾಳೆಗರಿ ಹಸ್ತಪ್ರತಿಗಳು, 21,000 ಕಲಾತ್ಮಕ ವಸ್ತುಗಳು, 25,000 ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ 100ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ವಸ್ತುಸಂಗ್ರಹಾಲಯದಲ್ಲಿದೆ. ಡಾ. ಡಿ.ವೀರೇಂದ್ರ ಹೆಗ್ಗಡೆಯವರು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು. ವಸ್ತು ಸಂಗ್ರಹಾಲಯದ ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯದ್ದು ಮಂಜೂಷಾ ಕಾರ್ ಮ್ಯೂಸಿಯಂ ಇನ್ನೊಂದು ಮಂಜುಷಾ ವಸ್ತು ಸಂಗ್ರಹಾಲಯ. ಇದರಲ್ಲಿ ವಿಶ್ವಕೋಶ ಸಂಗ್ರಹದ ಹೊಸದಾಗಿ ತೆರೆದಿರುವ ವಿಶಾಲ ವೈವಿಧ್ಯ ಇವೆ.
ವಸ್ತುಸಂಗ್ರಹಾಲಯವು ಮೌರ್ಯರ ಕಾಲದ ಟೆರಾಕೋಟಾ ನಾಣ್ಯಗಳನ್ನು ಸಂರಕ್ಷಿಸುತ್ತಿದೆ. ಮಂಜುನಾಥ ಸ್ವಾಮಿ ದೇವಸ್ಥಾನದ ಖಾತೆಗಳನ್ನು ಒಳಗೊಂಡಿರುವ ಪುರಾತನ ಪುಸ್ತಕ, 300 ವರ್ಷಗಳ ಹಳೆಯ ವೀಣೆ, ವಿದ್ವಾನ್ ವೀಣೆ ಶೇಷಣ್ಣನ ಸಂಗೀತ ವಾದ್ಯ . ಇದು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಗಳು, ವರ್ಣಚಿತ್ರಗಳು, ಆಭರಣಗಳ ವಸ್ತುಗಳು, ಪೂಜಾ ವಸ್ತುಗಳು ಮತ್ತು ಉಪಯುಕ್ತ ವಸ್ತುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ . ವಿವಿಧ ಗಾತ್ರದ ಕ್ಯಾಮೆರಾಗಳನ್ನು ಹೊಂದಿದೆ.
5. ಅಣ್ಣಪ್ಪ ಸ್ವಾಮಿ ಬೆಟ್ಟ
ಅಣ್ಣಪ್ಪ ಸ್ವಾಮಿ ಬೆಟ್ಟ, ಧರ್ಮಸ್ಥಳದ ಹೊಸ ಬಸ್ ನಿಲ್ದಾಣದ ಪಶ್ಚಿಮಕ್ಕೆ 1.5 ಕಿಮೀ ಮತ್ತು ಶ್ರೀ ಮಂಜುನಾಥ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ , ಧರ್ಮಸ್ಥಳದ ದೇವರನ್ನು ಲಿಂಗರೂಪವಾಗಿ ಅಣ್ಣಪ್ಪಸ್ವಾಮಿ ತಂದ ಬಳಿಕ ಅಲ್ಲೇ ನೆಲೆಸಿದ ಎಂಬ ಐತಿಹ್ಯವಿದೆ. ಆಗ್ನೇಯ ದಿಕ್ಕಿನಲ್ಲಿ ಅಣ್ಣಪ್ಪ ಬೆಟ್ಟವಿದೆ, ಇದನ್ನು ಬದಿನೆಡೆ ಬೆಟ್ಟ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಮುಖ್ಯ ದೇವಾಲಯಕ್ಕೆ ಭೇಟಿ ನೀಡಿದ ನಂತರ ಬೆಟ್ಟಕ್ಕೆ ಭೇಟಿ ನೀಡಲಾಗುತ್ತದೆ. ದೇವಾಲಯದ ಐತಿಹ್ಯ ಮತ್ತು ಪುರಾಣದ ಕಾರಣದಿಂದ ಈ ಬೆಟ್ಟಕ್ಕೆ ಮಕ್ಕಳು ಮತ್ತು ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಧರ್ಮಸ್ಥಳ ಹೋಗಲು ಪ್ಲಾನ್ ಮಾಡಿದ್ದರೆ ಮರೆಯದೆ ಈ ಸ್ಥಳಗಳಿಗೆ ಹೋಗಿ ಬನ್ನಿ.
್ನ