ಬರೋಬ್ಬರಿ 17ಗೆ ಆ್ಯಪ್‌ ಉತ್ತರ ಕೊಡಬೇಕು; ಅತಿಯಾದ ನಿರ್ವಹಣೆ ಒತ್ತಡದಿಂದ ಹೈರಾಣಾಗಿರುವ ಗ್ರಾಮಾಡಳಿತಾಧಿಕಾರಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬರೋಬ್ಬರಿ 17ಗೆ ಆ್ಯಪ್‌ ಉತ್ತರ ಕೊಡಬೇಕು; ಅತಿಯಾದ ನಿರ್ವಹಣೆ ಒತ್ತಡದಿಂದ ಹೈರಾಣಾಗಿರುವ ಗ್ರಾಮಾಡಳಿತಾಧಿಕಾರಿಗಳು

ಬರೋಬ್ಬರಿ 17ಗೆ ಆ್ಯಪ್‌ ಉತ್ತರ ಕೊಡಬೇಕು; ಅತಿಯಾದ ನಿರ್ವಹಣೆ ಒತ್ತಡದಿಂದ ಹೈರಾಣಾಗಿರುವ ಗ್ರಾಮಾಡಳಿತಾಧಿಕಾರಿಗಳು

ಕರ್ನಾಟಕದಲ್ಲಿ ಆಡಳಿತ ಚುರುಕಿಗೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಸೃಷ್ಟಿಸಲಾಯಿತು. ಆದರೆ ಅದಕ್ಕೆ ಬೇಕಾದ ವ್ಯವಸ್ಥೆಗಳೇ ಇಲ್ಲ. ಒತ್ತಡದಲ್ಲೇ ಈ ಅಧಿಕಾರಿಗಳು ಕೆಲಸ ಮಾಡುವ ಸನ್ನಿವೇಶವಿದೆ.(ವರದಿ: ಹರೀಶ ಮಾಂಬಾಡಿ, ಮಂಗಳೂರು)

ಕರ್ನಾಟಕದಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಒತ್ತಡದ ಕೇಂದ್ರವಾಗಿ ಮಾರ್ಪಟ್ಟಿದೆ.
ಕರ್ನಾಟಕದಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಒತ್ತಡದ ಕೇಂದ್ರವಾಗಿ ಮಾರ್ಪಟ್ಟಿದೆ.

ಮಂಗಳೂರು: ಒಬ್ಬ ಮನುಷ್ಯ ದಿನಕ್ಕೆ ಎಷ್ಟು ಕೆಲಸ ಮಾಡಬಹುದು. ಅದಕ್ಕೂ ಮಿತಿ ಇದೆ. ಆದರೆ ಗ್ರಾಮ ಆಡಳಿತಾಧಿಕಾರಿಗೆ ಕೆಲಸದ ಹೊರೆಯನ್ನು ಏರಿಸುತ್ತಲೇ ಹೋಗಲಾಗುತ್ತಿದೆ.ಸರಕಾರ ಹೊಸ ಆ್ಯಪ್‌ ಗಳನ್ನು ಆಗಾಗ್ಗೆ ಬಿಡುಗಡೆ ಮಾಡುತ್ತದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಇದರ ಕುರಿತು ತೀರ್ಮಾನ ಅಖೈರುಗೊಳ್ಳುತ್ತದೆ. ಆದರೆ ಫೀಲ್ಡಿನಲ್ಲಿ ಸರಕಾರದ ಯೋಜನೆಯನ್ನು ಅಕ್ಷರಶಃ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಗ್ರಾಮ ಆಡಳಿತ ಅಧಿಕಾರಿ (ವಿಎಒ)ಗಳದ್ದಾಗಿದೆ. ಒಬ್ಬರೇ ಐದಾರು ಗ್ರಾಮಗಳ ಹೊಣೆ ಹೊತ್ತರೆ, ಇಂಥದ್ದನ್ನೆಲ್ಲ ಮಾಡಲು ಸಮಯವಾದರೂ ಎಲ್ಲಿ ಸಿಗುತ್ತದೆ? ಹೀಗಾಗಿ ಗ್ರಾಮಕರಣಿಕ (ವಿಎ) ಬದಲಾಗಿ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಎಂಬ ಹೆಸರು ಬದಲಾಗಿದ್ದರೂ ಕೆಲಸ ನಾಲ್ಕು ಪಟ್ಟಾಗಿದೆ. ಅದನ್ನು ಮಾಡಲು ಸಿದ್ಧರಿದ್ದರೂ ಪೂರಕವಾದ ಯಾವುದೇ ವ್ಯವಸ್ಥೆಯನ್ನು ಸರಕಾರ ಒದಗಿಸಿಲ್ಲ. ಅತ್ಯಂತ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿಒಎಗಳು ಇದರಿಂದ ಬೇಸತ್ತು ಲೇಖನಿ ಸ್ಥಗಿತ ಮುಷ್ಕರಕ್ಕೆ ಮುಂದಡಿ ಇಟ್ಟಿದ್ದಾರೆ.

ರಾಜ್ಯದಲ್ಲೆಷ್ಟು ಹುದ್ದೆ ಖಾಲಿ

ರಾಜ್ಯದಲ್ಲಿ 9839 ಹುದ್ದೆಗಳ ಪೈಕಿ, 1887 ಹುದ್ದೆ ಖಾಲಿ ಇದೆ. 1 ಸಾವಿರ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭಗೊಂಡಿದೆ. ಕೊಡಗಿಗೆ 6, ಉಡುಪಿಗೆ 22, ದಕ್ಷಿಣ ಕನ್ನಡ ಜಿಲ್ಲೆಗೆ 50 ಹುದ್ದೆಗಳ ಭರ್ತಿಯಾಗುವ ನಿರೀಕ್ಷೆ ಇದೆ. ಆದರೆ ಆ ಪ್ರಕ್ರಿಯೆಗಳು ಮುಗಿಯಲು ಕೆಲ ತಿಂಗಳುಗಳಿವೆ. ಸದ್ಯಕ್ಕೆ ಸಮಾಧಾನ ತರುವ ಅಂಶ ಇದೊಂದೇ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗಿದೆ ಸ್ಥಿತಿ?

ದಕ್ಷಿಣ ಕನ್ನಡ ಜಿಲ್ಲೆಯನ್ನೇ ತೆಗೆದುಕೊಂಡರೆ, 286 ಗ್ರಾಮವೃತ್ತಗಳಿಗೆ 205 ವಿಒಎಗಳಿದ್ದಾರೆ, ಇವರಲ್ಲಿ 66 ಮಂದಿ ಕಂದಾಯ ಇಲಾಖೆ ಕಚೇರಿಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ 422 ಗ್ರಾಮಗಳನ್ನು 138 ವಿಒಎಗಳು ನೋಡಿಕೊಳ್ಳಬೇಕು.

ಮಂಗಳೂರು ತಾಲೂಕಿನಲ್ಲಿ 9, ಉಳ್ಳಾಲದಲ್ಲಿ 6, ಮೂಲ್ಕಿಯಲ್ಲಿ 1, ಮೂಡುಬಿದಿರೆಯಲ್ಲಿ 13, ಬಂಟ್ವಾಳದಲ್ಲಿ 19, ಬೆಳ್ತಂಗಡಿಯಲ್ಲಿ 14, ಪುತ್ತೂರಲ್ಲಿ 14, ಕಡಬದಲ್ಲಿ 10, ಸುಳ್ಯದಲ್ಲಿ 5 ಗ್ರಾಮಗಳಲ್ಲಿ ಹುದ್ದೆ ಖಾಲಿ ಇವೆ.

17 ಆ್ಯಪ್‌ ಗಳು, ಇಂಟರ್ನೆಟ್ ಇಲ್ಲ

ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವ ಕೆಲಸ ವಿಒಎಗಳಿಗಿದೆ. ತಮಾಷೆಯೆಂದರೆ ಇದೆಲ್ಲವನ್ನೂ ಅವರ ಸ್ವಂತ ಮೊಬೈಲ್ ನಿಂದಲೇ ಸ್ವಂತ ಇಂಟರ್ನೆಟ್ ಖರ್ಚು ಮಾಡಿಕೊಂಡು ಬಳಕೆ ಮಾಡಬೇಕುಜ. ಮೊಬೈಲ್ ಸಾಧನ, ಲ್ಯಾಪ್ ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್ನೆಟ್, ಸ್ಕ್ಯಾನರ್ ಅನ್ನು ಸರಕಾರ ಒದಗಿಸಿಲ್ಲ. ಕರ್ತವ್ಯ ಸಲ್ಲಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಗ್ರಾಮಾಡಳಿತ ಅಧಿಕಾರಿಗಳ ಸಾವುನೋವುಗಳು ಆಗುತ್ತಿದ್ದು, ಕೆಲಸ ಆಗುತ್ತಿಲ್ಲ ಎಂದು ಹಲ್ಲೆಗಳೂ ನಡೆದದ್ದಿದೆ ಎಂದು ವಿಒಎಗಳ ಪದಾಧಿಕಾರಿಗಳು ಆರೋಪಿಸಿದ್ದಾರೆ. ಎಲ್ಲ ಮೊಬೈಲ್ ಆಪ್ ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ, ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ.

ಗ್ರಾಮಾಡಳಿತಾಧಿಕಾರಿಗಳು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂಟ್ವಾಳ ತಾಲೂಕೊಂದರಲ್ಲಿ 19 ಹುದ್ದೆಗಳು ಖಾಲಿ ಇವೆ. ಕಚೇರಿಗಳಲ್ಲಿ ಮೂಲಸೌಕರ್ಯದ ಕೊರತೆಯೂ ಇದೆ ಎನ್ನುವುದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿ ಅನಿಲ್ ಕೆ. ಪೂಜಾರಿ ವಿವರಣೆ.

ಸರಿಯಾದ ಕಚೇರಿಗಳೂ ಇಲ್ಲ

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿಒಎಗಳಿಗೆ ಸರಿಯಾದ ಭೌತಿಕ ಕಚೇರಿಯೂ ಇಲ್ಲ. ಹೆಚ್ಚಿನ ಗ್ರಾಪಂಗಳಲ್ಲಿ ಹಳೆಯ ಕಟ್ಟಡಗಳಿದ್ದರೆ, ಅಲ್ಲಿ ವಿಒಎ ಕಚೇರಿ ಇರುತ್ತದೆ. ಮಳೆ ಬಂದರೆ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ, ಕೆಲಸದ ಒತ್ತಡದಿಂದಾಗಿ ವಾರದ ರಜೆಯನ್ನೂ ಸರಿಯಾಗಿ ಪಡೆದುಕೊಳ್ಳಲಾಗದೆ ಸಮಸ್ಯೆ ಅನುಭವಿಸುವವರು ಹಲವರು ಎನ್ನುತ್ತಾರೆ ಜಿಲ್ಲಾಧ್ಯಕ್ಷ ಸಂತೋಷ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕೈದು ಮಂದಿ ಮಾಡುವ ಕೆಲಸವನ್ನು ಒಬ್ಬರು ನಿರ್ವಹಿಸುತ್ತಿದ್ದಾರೆ. ಸರಿಯಾದ ಕಚೇರಿಗಳೂ ಇಲ್ಲ. ನೇರ ನೇಮಕಾತಿಯೂ ಆಗುತ್ತಿಲ್ಲ. ಈ ಬಾರಿ ಹೊಸಬರ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿಗಳ ಪೂರಕ ಸ್ಪಂದನೆಯೂ ಇದೆ. ಸರಕಾರ ಮಟ್ಟದಲ್ಲಿ ಇದು ಸರಿಯಾಗಬೇಕು ಎನ್ನುತ್ತಾರೆ ಸಂತೋಷ್.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner