ನಾಳೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ; ಈ ವರ್ಷದ ದೀಪೋತ್ಸವದಲ್ಲಿ ಹತ್ತು ಹಲವು ವಿಶೇಷ
Dharmasthala Laksha Deepotsava 2024: ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನಾಳೆಯಿಂದ (ನ. 26) ಐದು ದಿನಗಳ ಕಾಲ ಆರಂಭಗೊಳ್ಳಲಿದೆ. ಈ ದೀಪೋತ್ಸವದಲ್ಲಿ ಹತ್ತು ಹಲವು ಕಾರ್ಯಕ್ರಮಗಳೂ ನಡೆಯಲಿವೆ. ಹೀಗಿದೆ ಈ ಸಲದ ದೀಪೋತ್ಸವದ ಕಾರ್ಯಕ್ರಮ ಪಟ್ಟಿ.
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನಾಳೆಯಿಂದ (ನ. 26) ಆರಂಭಗೊಳ್ಳಲಿದೆ. ಬೆಳಿಗ್ಗೆ 10.30 ಗಂಟೆಗೆ ಎಸ್ ಪಿ ಯತೀಶ್ ಎನ್. ಧರ್ಮಸ್ಥಳ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಸಂಜೆ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್ ಪೂಂಜ ,ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್, ಮಾಜಿ ಎಂಎಲ್ ಸಿ ಕೆ.ಹರೀಶ್ ಕುಮಾರ್, ಶರತ್ ಕೃಷ್ಣ ಪಡುವೆಟ್ನಾಯ ನೇತೃತ್ವದಲ್ಲಿ 25,000 ಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಪಾದಯಾತ್ರೆಯಲ್ಲಿ ಪ್ರಾರ್ಥನೆ, ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನ. 26ರಂದು ಹೊಸ ಕಟ್ಟೆ ಉತ್ಸವ, 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿ ಮಾರುಕಟ್ಟೆ ಉತ್ಸವ, 30ರಂದು ಗೌರಿ ಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ) ನಡೆಯಲಿದೆ.
ಡಿ.1ರಂದು ಸಂಜೆ 6.30ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ. ನ. 28 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5:30 ರಿಂದ ನಾಗಸ್ವರ ವಾದನ, 7 ಗಂಟೆಯಿಂದ ಸಾತ್ವಿಕ ಸಂಗೀತ, ನೃತ್ಯಾರ್ಚನೆ, ನೃತ್ಯ ರೂಪಕ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ.
ನ. 29 ಸರ್ವಧರ್ಮ ಸಮ್ಮೇಳನ
ಅಮೃತವರ್ಷಿಣಿ ಸಭಾಭವನದಲ್ಲಿ ನ. 29ರಂದು ಸಂಜೆ 5ಗಂಟೆಯಿಂದ ಸರ್ವ ಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಶೋಧಕ ಡಾ. ಜಿ. ಬಿ. ಹರೀಶ, ಡಾಕ್ಟರ್ ಜೋಸೆಫ್ ಎನ್ ಎಂ, ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಬಳಿಕ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ನ. 30 ಸಾಹಿತ್ಯ ಸಮ್ಮೇಳನ
ನ. 30ರಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನಿ ಡಾ.ರಾ. ಗಣೇಶ ಉದ್ಘಾಟಿಸುವರು. ಲೇಖಕ ಸಂಶೋಧಕ ಡಾ. ಪಾದೆಕಲ್ಲು ವಿಷ್ಣುಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ.ಬಿ.ವಿ. ವಸಂತ ಕುಮಾರ್ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30 ರಿಂದ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ. ಪ್ರತಿದಿನ ಸಂಜೆ 6:30 ರಿಂದ ರಾತ್ರಿ 11 ಗಂಟೆವರೆಗೆ ವಸ್ತು ಪ್ರದರ್ಶನ ಮಂಟಪ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ, ಸಂಗೀತ ಹಬ್ಬ ನಡೆಯಲಿದೆ.