Karnataka PG CET: ಕರ್ನಾಟಕ ಪಿಜಿ ಸಿಇಟಿ 2023, ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Pg Cet: ಕರ್ನಾಟಕ ಪಿಜಿ ಸಿಇಟಿ 2023, ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರು

Karnataka PG CET: ಕರ್ನಾಟಕ ಪಿಜಿ ಸಿಇಟಿ 2023, ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರು

ಕರ್ನಾಟಕ ಪಿಜಿ ಸಿಇಟಿ 2023 ಮುಗಿದು ಮೂರು ತಿಂಗಳ ಬಳಿಕ ಕೊನೆಗೂ ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರುವಾಗಿದೆ. 70 ಸಾವಿರ ವಿದ್ಯಾರ್ಥಿಗಳು ಈ ಕೌನ್ಸೆಲಿಂಗ್‌ಗೆ ಕಾದುಕುಳಿತಿದ್ದು. ಇವರಲ್ಲಿ ಅನೇಕರು ಖಾಸಗಿ ಕೋಟಾದಲ್ಲಿ ಈಗಾಗಲೇ ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯ ವೇಳಾಪಟ್ಟಿ ವಿವರ ಹೀಗಿದೆ

ಕರ್ನಾಟಕ ಪಿಜಿ ಸಿಇಟಿ 2023, ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರುವಾಗಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಪಿಜಿ ಸಿಇಟಿ 2023, ಇಂದಿನಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಶುರುವಾಗಿದೆ. (ಸಾಂಕೇತಿಕ ಚಿತ್ರ) (KEA/ Pixels)

ಬೆಂಗಳೂರು: ಕರ್ನಾಟಕದಲ್ಲಿ ಎಂಬಿಎ, ಎಂಸಿಎ, ಎಂಟೆಕ್, ಎಂಇ ಸೇರಿ ವೃತ್ತಿಪರ ಕೋರ್ಸ್‌ಗಳ ಸ್ನಾತಕೋತ್ತರ ಪದವಿಯ ಪ್ರವೇಶಕ್ಕಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಿಜಿ ಸಿಇಟಿಯ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು (ಜ.13) ಶುರುಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಇಂದು (ಜ. 13) ಪೂರ್ವಾಹ್ನ 11ಕ್ಕೆ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳು ಪ್ರಕಟಗೊಂಡಿವೆ. ಪಿಜಿ ಪ್ರವೇಶಕ್ಕೆ ಇಚ್ಛೆ ಮತ್ತು ವಿಷಯಗಳ ಆಯ್ಕೆಗಳನ್ನು ದಾಖಲಿಸಲು ಶನಿವಾರದಿಂದ (ಜ. 13 ರಿಂದ) ಜ. 17ರ ಪೂರ್ವಾಹ್ನ 11 ರವರೆಗೆ ಸಮಯಾವಕಾಶ ನೀಡಲಾಗಿದೆ. ಅದಾಗಿ, ಜ. 17ರಂದು ರಾತ್ರಿ 8 ಗಂಟೆಯ ಬಳಿಕ ಅಣಕು ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಪ್ರಕ್ರಿಯೆ ಮುಗಿದ ಬಳಿಕ, ಜ. 17ರಂದು ರಾತ್ರಿ 8 ರಿಂದ ಜ. 19ರ ಪೂರ್ವಾಹ್ನ 11ರವರೆಗೆ ಆಯ್ಕೆಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿದೆ. ಜ.19ರ ಸಂಜೆ 6 ಗಂಟೆಗೆ ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಲಿದೆ.

ಜ.20ರ ಪೂರ್ವಾಹ್ನ 11 ರಿಂದ ಜ. 22ರ ಮಧ್ಯ ರಾತ್ರಿ 11.59ರವರೆಗೆ ಸೂಕ್ತವಾದ ಚಾಯ್ಸ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಮಯಾವಕಾಶ ನೀಡಲಾಗಿದೆ. ಜ. 22ರ ಪೂರ್ವಾಹ್ನ 11 ರಿಂದ ಜ. 24ರ ತನಕ ಚಾಯ್ಸ್ ಮತ್ತು ಚಾಯ್ಸ್ 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಬೇಕು. ಜ.25ರ ಸಂಜೆ 5.30 ರೊಳಗೆ ಚಾಯ್ಸ್ 1 ಅಭ್ಯರ್ಥಿಗಳು ಪ್ರವೇಶ ಆದೇಶವನ್ನು ಡೌನ್‌ ಲೋಡ್ ಮಾಡಿ ಕೊಂಡು ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೆ. 23 ಮತ್ತು 24ರಂದು ಪಿಜಿಸಿಇಟಿಯನ್ನು ನಡೆಸಿತ್ತು. ಪರೀಕ್ಷೆಯಲ್ಲಿ 47 ಸಾವಿರ ಮಂದಿ ಎಂಬಿಎ, 15,722 ಮಂದಿ ಎಂಸಿಎ, 6,427 ಮಂದಿ ಎಂಟೆಕ್, 436 ಮಂದಿ ಅರ್ಕಿಟೆಕ್ಚರ್ ವಿಷಯದಲ್ಲಿ ಪಿಜಿಸಿಇಟಿ ಬರೆದಿದ್ದರು. ಪರೀಕ್ಷೆ ಬರೆದು 3 ತಿಂಗಳು ಕಳೆದಿದ್ದರೂ ಕೌನ್ಸೆಲಿಂಗ್‌ನ ದಿನಾಂಕ ಪ್ರಕಟಗೊಂಡಿರಲಿಲ್ಲ.

ಹಲವು ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳು ತಮ್ಮಲ್ಲಿನ ಸರಕಾರಿ ಕೋಟಾದ ಸೀಟುಗಳನ್ನು ತುಂಬದೆ ಬಾಕಿ ಉಳಿಸಿಕೊಂಡು ಉಳಿದ ಸೀಟುಗಳ ದಾಖಲಾತಿಯನ್ನು ಕಳೆದ ತಿಂಗಳೇ ಮಾಡಿದ್ದವು. ಆ ವಿವಿಗಳಲ್ಲಿ ಶೀಘ್ರದಲ್ಲೇ ತರಗತಿ ಪ್ರಾರಂಭಗೊಳ್ಳಲಿದೆ. ಆದರೆ ಸರಕಾರಿ ಕೋಟಾದಡಿ ಸೀಟು ಹಂಚಿಕೆ ಮುಗಿದು ದಾಖಲಾತಿ ಪೂರ್ಣಗೊಳ್ಳಲು ಇನ್ನು ಕನಿಷ್ಠ ಒಂದು ತಿಂಗಳ ಅಗತ್ಯವಿದೆ ಎಂದು ಕೆಇಎಯ ಮೂಲಗಳು ಹೇಳಿದ್ದವು.

ಇನ್ನೊಂದೆಡೆ, ವರ್ಷದಿಂದ ವರ್ಷಕ್ಕೆ ಪಿಜಿಸಿಇಟಿ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಅದೇ ರೀತಿ ಉನ್ನತ ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಕಾರಣ, ಪ್ರತಿ ಪಿಜಿ ಸೀಟಿಗೂ ಪೈಪೋಟಿ ಹೆಚ್ಚಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಈಗಾಗಲೇ ಖಾಸಗಿ ವಿವಿ, ಸ್ವಾಯತ್ತ ವಿವಿಗಳಲ್ಲಿ ಎಂಬಿಎ, ಎಂಸಿಎ, ಎಂಟೆಕ್‌ ಕೋರ್ಸ್‌ಗಳಿಗೆ ಸೇರಿಕೊಂಡಿದ್ದಾರೆ.

ಕೌನ್ಸೆಲಿಂಗ್ ವಿಳಂಬಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಸೀಟ್ ಮ್ಯಾಟ್ರಿಕ್ಸ್ ವಿಳಂಬ ಮಾಡಿರುವುದು ಕಾರಣ ಎಂದು ಕೆಇಎ ಅಧಿಕಾರಿಗಳು ಹೇಳಿದ್ದರು. ಆನಂತರ, ಶುಲ್ಕ ಸಂರಚನೆ ಇನ್ನೂ ತಲುಪಿಲ್ಲ ಎನ್ನಲಾಗಿತ್ತು. ಇಷ್ಟೆಲ್ಲ ಆಗಿ ಇಂದಿನಿಂದ (ಜ.13) ಕರ್ನಾಟಕ ಪಿಜಿ ಸಿಇಟಿ ಮೊದಲ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ಶುರುವಾಗಿದೆ.

ಕಳೆದ ವರ್ಷ ಸರಕಾರಿ ಶಿಕ್ಷಣ ಸಂಸ್ಥೆಗಳು, ವಿವಿ ಮತ್ತು ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ ಮತ್ತು ಎಂಇ, ಎಂಟೆಕ್‌ಗೆ ವಾರ್ಷಿಕ ತಲಾ 20 ಸಾವಿರ ರೂ. ಬೋಧನಾ ಶುಲ್ಕವಿತ್ತು. ಅದೇ ರೀತಿ, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್ಗೆ ವಾರ್ಷಿ ಕ ತಲಾ 55 ಸಾವಿರ ರೂ. ಬೋಧನ ಶುಲ್ಕ ನಿಗದಿಪಡಿಸಲಾಗಿತ್ತು.

ಹೆಚ್ಚಿನ ಮಾಹಿತಿಗೆ -https://cetonline.karnataka.gov.in/kea/pgcet2023

Whats_app_banner