ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ , ಅಂಕಿತ ಬಸಪ್ಪ ಕೊನ್ನೂರು ರಾಜ್ಯಕ್ಕೆ ಫಸ್ಟ್
Karnataka SSLC Result 2024 Live Updates: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. 625ಕ್ಕೆ 625 ಅಂಕ ಪಡೆದ ಬಾಗಲಕೋಟೆಯ ಅಂಕಿತ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ 2024 ಅನ್ನು ಪ್ರಕಟಿಸಿದೆ. ಈ ಬಾರಿ ಒಟ್ಟಾರೆ ಶೇಕಡ 73.40 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ನಂಬರ್‌ಗೆ ಫಲಿತಾಂಶ ವಿವರ ಕಳುಹಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ.
ಕೃಪಾಂಕ ಪ್ರಮಾಣ ಶೇಕಡ 10ರಷ್ಟು ಹೆಚ್ಚಳ
"ಶೇ 30 ರಷ್ಟು ಫಲಿತಾಂಶ ಕಡಿಮೆಯಾಗಿತ್ತು. ಫಲಿತಾಂಶ ಉತ್ತಮಪಡಿಸಲು ಕೃಪಾಂಕ ಪಡೆಯಲು ಈಗ ಶೇ 25 ಫಲಿತಾಂಶ ಪಡೆದರೆ ಸಾಕು. ಕೃಪಾಂಕದ ಪ್ರಮಾಣವನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ. ಅಪೂರ್ಣ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುವುದು" ಎಂದು ಪರೀಕ್ಷಾ ಮಂಡಳಿ ನಿರ್ದೇಶಕರಾದ ಮಂಜುಳಾ ಹೇಳಿದ್ದಾರೆ.
ಟಾಪರ್ ಅಂಕಿತಾ ಕೊನ್ನೂರ್‌ಗೆ ಐಎಎಸ್ ಅಧಿಕಾರಿಯಾಗುವಾಸೆ
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಂಕಿತಾ ಕೊನ್ನೂರು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬಾಗಲಕೋಟೆ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯಾದ ಈಕೆಗೆ ಐಎಎಸ್ ಅಧಿಕಾರಿಯಾಗುವ ಆಸೆಯಿದೆ. "ಐಎಎಸ್ ಅಧಿಕಾರಿ ಆಗಬೇಕು ಎನ್ನುವ ಆಸೆಯಿದೆ. ನಾನು ಹಾಸ್ಟೆಲ್‌ನಲ್ಲಿದ್ದೆ, ಅಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಿದ್ರೆ ಯುಟ್ಯೂಬ್‌ನಲ್ಲಿ ನೋಡ್ತಿದ್ವಿ. ಓದುವುದರಲ್ಲಿ ಹಾರ್ಡ್‌ವರ್ಕ್ ಮತ್ತು ಸ್ಮಾರ್ಟ್‌ವರ್ಕ್ ಎರಡೂ ಬೇಕು. ಕಾನ್ಸೆಪ್ಟ್ ಅರ್ಥ ಮಾಡಿಕೊಂಡರೆ ಆರಾಮಾಗಿ ಮಾರ್ಕ್ಸ್ ತೆಗೆಯಬಹುದು" ಎಂದು ಹೇಳಿದ್ದಾರೆ.
ಫಲಿತಾಂಶ ಕಡಿಮೆ ಆಗಲು ವೆಬ್‌ಕಾಸ್ಟಿಂಗ್ ಕಾರಣ
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆ ಆಗಲು ವೆಬ್‌ಕಾಸ್ಟಿಂಗ್ ಕಾರಣ. ರಾಜ್ಯದ ಎಲ್ಲೆಡೆ ವೆಬ್‌ಕಾಸ್ಟಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ. ಇದನ್ನು ಎಲ್ಲ ಪೋಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ ಎಂದು ಪರೀಕ್ಷೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ
ಈ ಬಾರಿಯೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಪಡೆದಿದ್ದಾರೆ. ನಗರ ಪ್ರದೇಶ 3.59 ಲಕ್ಷ ಮಂದಿ ಅಂದರೆ ಶೇಕಡ 72.83 ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ 2.71 ಲಕ್ಷ ಅಂದರೆ ಶೇಕಡ 74.17 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಸರ್ಕಾರಿ ಶಾಲೆಯ 2.43 ಲಕ್ಷ ಮಂದಿ ಅಂದರೆ ಶೇಕಡಾ 72.46 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅನುದಾನಿತ 1.50 ಲಕ್ಷ ಮಂದಿ ಅಂದರೆ ಶೇಕಡಾ 72.22 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ 2.23 ಲಕ್ಷ ವಿದ್ಯಾರ್ಥಿಗಳು ಅಂದರೆ ಶೇಕಡಾ 86.46 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಎಸ್‌ಎಸ್‌ಎಲ್‌ಸಿ ರಿಸಲ್ಟ್: ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ
ಈ ಬಾರಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಶಿವಮೊಗ್ಗ ಮೂರನೇ ಸ್ಥಾನದಲ್ಲಿ ಮತ್ತು 4ನೇ ಸ್ಥಾನದಲ್ಲಿ ಕೊಡುಗು ಜಿಲ್ಲೆಯಿದೆ. ದಕ್ಷಿಣ ಕನ್ನಡ ಜಿಲ್ಲೆ 92.12%, ಶಿವಮೊಗ್ಗ ಜಿಲ್ಲೆ 88.67%, ಕೊಡಗು ಜಿಲ್ಲೆ 88.67% ಪರ್ಸಂಟೇಜ್ ಪಡೆದಿದೆ.
ಅಂಕಿತ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ
625ಕ್ಕೆ 625 ಅಂಕ ಪಡೆದ ಬಾಗಲಕೋಟೆಯ ಅಂಕಿತ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮೇದಾ ಪಿ ಶೆಟ್ಟಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾರ್ಕಳ ತಾಲೂಕಿನ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
625ಕ್ಕೆ 624 ಅಂಕವನ್ನು 7 ವಿದ್ಯಾರ್ಥಿಗಳು, 623 ಅಂಕಗಳನ್ನು 14 ವಿದ್ಯಾರ್ಥಿಗಳು, 622 ಅಂಕವನ್ನು 21 ವಿದ್ಯಾರ್ಥಿಗಳು, 621 ಅಂಕವನ್ನು 44 ವಿದ್ಯಾರ್ಥಿಗಳು ಮತ್ತು 620 ಅಂಕವನ್ನು 64 ವಿದ್ಯಾರ್ಥಿಗಳು ಪಡೆದಿದ್ದಾರೆ.
ಕ್ರಾಶ್ ಆದ ಎಸ್‌ಎಸ್‌ಎಲ್‌ಸಿ ರಿಸಲ್ಟ್ ವೆಬ್‌ಸೈಟ್
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ kseab.karnataka.gov.in ವೆಬ್‌ಸೈಟ್‌ಗೆ ಮುಗಿ ಬೀಳುತ್ತಿರುವುದರಿಂದ ಸರ್ವರ್ ಎರರ್ ಬರುತ್ತಿದೆ. ಇನ್ನು ಕೆಲವೇ ಸಮಯದಲ್ಲಿ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್ 25ರಂದು ಆರಂಭವಾಗಿ ಏಪ್ರಿಲ್ 6, 2024ರಂದು ಕೊನೆಗೊಂಡಿತ್ತು. ಜೆಟಿಎಸ್ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆ ಏಪ್ರಿಲ್ 8ರಂದು ನಡೆದಿತ್ತು. ಈ ಬಾರಿ ಅಂದಾಜು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಳೆದ ವರ್ಷ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿತ್ತು, ಮಂಡ್ಯ ಎರಡನೇ ಸ್ಥಾನ ಪಡೆದಿತ್ತು. ಕಳೆದ ವರ್ಷ 4.25 ಲಕ್ಷಕ್ಕೂ ಹೆಚ್ಚು ಬಾಲಕರು ಪರೀಕ್ಷೆ ಬರೆದಿದ್ದರು. ಅವರಲ್ಲಿ 3.41 ಲಕ್ಷಕ್ಕೂ ಹೆಚ್ಚು ಬಾಲಕರು ಪಾಸ್ ಆಗಿದ್ದರು. ಕಳೆದ ವರ್ಷ 4 ಲಕ್ಷಕ್ಕೂ ಹೆಚ್ಚು ಬಾಲಕಿಯರು ಪರೀಕ್ಷೆ ಬರೆದಿದ್ದರು. ಅವರಲ್ಲಿ 3.59 ಲಕ್ಷಕ್ಕೂ ಹೆಚ್ಚು ಬಾಲಕಿಯರು ಉತ್ತೀರ್ಣರಾಗಿದ್ದರು.