ಕನ್ನಡ ಸುದ್ದಿ  /  Karnataka  /  Election Opinion Will Jds Play A Kingmaker Again Karnataka Assembly Elections Hd Kumaraswamy Congress Bjp Politics Uks

Election Opinion: ಮತ್ತೊಂದಾವೃತಿ ನಡೆಯಲಿದೆಯೇ 2018ರ ಆಟ, ಸಿಎಂ ಆಗ್ತಾರಾ ಕುಮಾರಣ್ಣ; ಎಕ್ಸಿಟ್‌ ಪೋಲ್‌ ನಂತರದ ರಾಜಕೀಯ ಲೆಕ್ಕಾಚಾರ

Election Opinion: ಮತದಾನೋತ್ತರ ಸಮೀಕ್ಷೆಗಳು ಪ್ರಕಟ ಆಗಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ಜನಾದೇಶವನ್ನು ತೋರಿಸಿದರೆ, ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತದ ಸಾಮೀಪ್ಯವನ್ನೂ, ಇನ್ನೊಂದೆರಡು ಸಮೀಕ್ಷೆ ಬಿಜೆಪಿಗೆ ಬಹುಮತದ ಸಾಮೀಪ್ಯವನ್ನೂ ಬಿಂಬಿಸಿವೆ. ಈ ಹಂತದಲ್ಲಿ ಹೀಗೊಂದು ರಾಜಕೀಯ ಲೆಕ್ಕಾಚಾರ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಕಡತ ಚಿತ್ರ)
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (ಕಡತ ಚಿತ್ರ)

ಕರ್ನಾಟಕ ಅಸೆಂಬ್ಲಿ ಚುನಾವಣೆ 2023ರ ಎಕ್ಸಿಟ್‌ ಪೋಲ್‌ ವರದಿ ಪ್ರಕಟವಾಗಿದೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ಜನಾದೇಶವನ್ನು ಬಿಂಬಿಸಿವೆ. ಹಿಂದಿನ ಚುನಾವಣೆಯ ಫಲಿತಾಂಶ ಪುನರಾವರ್ತನೆ ಆಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದಾವೃತಿಗೆ ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಲಕ್ಷಣಗಳು ಗೋಚರಿಸಿವೆ. ಪ್ರಮುಖ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಜೆಡಿಎಸ್‌ 14ರಿಂದ 33 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಗಮನಿಸಿ ನೋಡೋಣ. ಅಲ್ಲೂ ಬಿಜೆಪಿ ಅತಿ ಹೆಚ್ಚು ಅಂದರೆ 104 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿತ್ತು. ಲೆಕ್ಕ ಪ್ರಕಾರ ಬಿಜೆಪಿ ಸರ್ಕಾರ ರಚನೆ ಆಗಬೇಕಾಗಿತ್ತು. ಆದರೆ ರಾಜಕೀಯ ಲೆಕ್ಕಾಚಾರ ಬೇರೆಯದೇ ರೀತಿ ಸಾಗಿತ್ತು. ಜೆಡಿಎಸ್‌ ಜತೆಗೆ ಮೈತ್ರಿ ಮಾಡಲ್ಲ ಎಂದು ಬಿಜೆಪಿ ನಾಯಕರು ಸುಮ್ಮನೆ ಕುಳಿತರು.

ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರ ಸ್ವಾಮಿ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ನಡೆಸಿದರು. ಹಿಂದಿನ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ಮತ್ತೊಮ್ಮೆ ಮೈತ್ರಿ ಸರ್ಕಾರದಲ್ಲೂ ಮುಖ್ಯಮಂತ್ರಿ ಆಗುವ ಆಸೆ ಇದ್ದಿತ್ತು. ಆದರೆ, ಅದು ಈಡೇರಲಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ 80 ಶಾಸಕರಿದ್ದರೂ, 37 ಶಾಸಕರನ್ನು ಹೊಂದಿದ ಜೆಡಿಎಸ್‌ಗೆ ಆಡಳಿತ ಚುಕ್ಕಾಣಿ ಬಿಟ್ಟುಕೊಡಬೇಕಾದ ಪ್ರಸಂಗ ಉಂಟಾಯಿತು.

ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸದೇ ಹೋದರೆ ರಾಷ್ಟ್ರಪತಿ ಆಡಳಿತ ಅಥವಾ ಇನ್ನೇನೋ ಆದೀತು ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕರೆಲ್ಲ ಎಚ್‌ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತರು. ಹಾಗೆ ಅವರು ಮುಖ್ಯಮಂತ್ರಿ ಆದರು. ಕಾಂಗ್ರೆಸ್‌ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾದರು.

ಮೈತ್ರಿ ಮಾಡಿಕೊಳ್ಳಬೇಕಾದ ಪ್ರಸಂಗ ಬಂದರೆ ಪಕ್ಷ ವಿಸರ್ಜನೆ ಎಂದಿದ್ದ ಕುಮಾರಣ್ಣ

ರಾಜ್ಯ ವಿಧಾನಸಭಾ ಚುನಾವಣೆಯ ಈ ಸಲದ ಸನ್ನಿವೇಶಗಳು ಕಳೆದ ಸಲಕ್ಕಿಂತ ಸಂಪೂರ್ಣ ಭಿನ್ನ. ಚುನಾವಣೆಗೆ ಮೊದಲೇ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏನಿದ್ದರೂ ಪ್ರಾದೇಶಿಕ ಪಕ್ಷದ್ದೇ ಸರ್ಕಾರ ರಚನೆ ಆಗಬೇಕು. ಸ್ಪಷ್ಟಬಹುಮತದ ಸರ್ಕಾರ ರಚನೆಗೆ ಮತದಾರರು ಸಹಕರಿಸಬೇಕು ಎಂದು ಹೇಳುತ್ತ, ತಾನೇ ಮುಂದಿನ ಮುಖ್ಯಮಂತ್ರಿ ಎಂದು ಒತ್ತಿ ಹೇಳುತ್ತ ಮತಯಾಚಿಸಿದ್ದರು.

ಈ ನಡುವೆ, 2018ರ ಫಲಿತಾಂಶದ ಪುನರಾವರ್ತನೆ ಆದರೆ ಏನು ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಬುಧವಾರ (ಮೇ 10) ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡುತ್ತ ಹೇಳಿದ್ದರು. ವಿವರ ಓದಿಗೆ | DK Shivakumar: ಕರ್ನಾಟಕ ಚುನಾವಣೆ; ಚುನಾವಣೋತ್ತರ ಕೂಡ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಇಲ್ಲ; ಡಿಕೆ ಶಿವಕುಮಾರ್ ಸ್ಪಷ್ಟನೆ

ಇದೇ ರೀತಿ, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ. ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ವಿವರ ಓದಿಗೆ | BS Yediyurappa: ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೆಯೇ ಇಲ್ಲ; ಎಕ್ಸಿಟ್ ಪೋಲ್ ಕುರಿತು ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ

ಕಳೆದ ಚುನಾವಣೆ ಸಂದರ್ಭದಲ್ಲಿ ಬಿಎಸ್‌ ಯಡಿಯೂರಪ್ಪ ಅವರು ಜೆಡಿಎಸ್‌ ಜತೆಗೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಬಹುದು.

ಎಕ್ಸಿಟ್‌ ಪೋಲ್‌ಗಳ ಕಡೆಗೊಂದು ನೋಟ

  1. ರಿಪಬ್ಲಿಕ್‌ ಟಿವಿ- ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ ಪ್ರಕಾರ, ಕಾಂಗ್ರೆಸ್‌ ಪಕ್ಷಕ್ಕೆ 94ರಿಂದ 108 ಸ್ಥಾನ, ಬಿಜೆಪಿಗೆ 85ರಿಂದ 100, ಜೆಡಿಎಸ್‌ಗೆ 24ರಿಂದ 32 ಸ್ಥಾನ ಎಂದು ಹೇಳಿದೆ. ವಿವರ ಓದಿಗೆ ಮುಂದಿನ ಹೆಡ್‌ಲೈನ್‌ ಕ್ಲಿಕ್‌ ಮಾಡಿ - Republic P-MARQ:‌ ಕರ್ನಾಟಕ ಚುನಾವಣೇಲಿ ಅತಂತ್ರ ಜನಾದೇಶದ ಸುಳಿವು ನೀಡಿದ ರಿಪಬ್ಲಿಕ್‌ ಎಕ್ಸಿಟ್‌ ಪೋಲ್‌ 2023; ವಿವರ ವರದಿ ಇಲ್ಲಿದೆ
  2. ಟಿವಿ9 ಭಾರತವರ್ಷ -ಪೋಲ್‌ಸ್ಟ್ರಾಟ್‌ ಎಕ್ಸಿಟ್‌ ಪೋಲ್‌ ಪ್ರಕಾರ, ಕಾಂಗ್ರೆಸ್‌ ಪಕ್ಷಕ್ಕೆ 99ರಿಂದ 109 ಸ್ಥಾನ, ಬಿಜೆಪಿಗೆ 88 ರಿಂದ 98 ಸ್ಥಾನ ಸಿಗಬಹುದು. ಜೆಡಿಎಸ್‌ಗೆ 21ರಿಂದ 26 ಸ್ಥಾನ ಬರಬಹುದು. ಹಾಗೆ ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಸುಳಿವು ನೀಡಿದೆ.
  3. ಜೀ ನ್ಯೂಸ್‌- ಮಾಟ್ರಿಜ್‌ ಎಕ್ಸಿಟ್‌ ಪೋಲ್ ಪ್ರಕಾರ ಕಾಂಗ್ರೆಸ್‌ಗೆ ಬಹುಮತ ಸಿಗುವ ಸಾಧ್ಯತೆ ಅಲ್ಲಗಳೆಯಲಾಗದು. ಇದರಂತೆ 103ರಿಂದ 118ರ ತನಕ ಸೀಟುಗಳು ಸಿಗಬಹುದು. ಬಿಜೆಪಿಗೆ 79 ರಿಂದ 94 ಸೀಟುಗಳು ಸಿಗಬಹುದು. ಜೆಡಿಎಸ್‌ಗೆ 25 ರಿಂದ 33 ಸ್ಥಾನಗಳು ಸಿಗಬಹುದು. ಆ ಮೂಲಕ ಜೆಡಿಎಸ್‌ ನಿರ್ಣಾಯಕ ಪಾತ್ರವಹಿಸಬಹುದು ಎಂಬುದನ್ನು ಸಮೀಕ್ಷೆ ಉಲ್ಲೇಖಿಸಿದೆ. ವಿವರ ಓದಿಗೆ| Exit Poll Result: ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದ ಜೀ ಮ್ಯಾಟ್ರೀಜ್‌; ರಾಜ್ಯದಲ್ಲಿ ಅತಂತ್ರ ಎಂದ ಇತರೆ ಸಮೀಕ್ಷೆಗಳು
  4. ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ಪ್ರಕಾರ, ಬಿಜೆಪಿಗೆ ಅಧಿಕ ಅಂದರೆ 94ರಿಂದ 117 ಸ್ಥಾನ ಸಿಗಬಹುದು. ಕಾಂಗ್ರೆಸ್‌ ಪಕ್ಷಕ್ಕೆ 91ರಿಂದ 106 ಸಿಕ್ಕರೆ, ಜೆಡಿಎಸ್‌ಗೆ 14ರಿಂದ 24 ಸ್ಥಾನ ನಿರೀಕ್ಷಿಸಬಹುದು. ಇದು ಕೂಡ ಹಂಗ್‌ ಅಸೆಂಬ್ಲಿ ಸೂಚಿಸಿದ್ದು, ಜೆಡಿಎಸ್‌ ನಿರ್ಣಾಯಕವಾಗುವ ಸಾಧ್ಯತೆಯನ್ನು ತೋರಿಸಿದೆ. ವಿವರ ಓದಿಗೆ| Jan Ki Baat Exit Poll: ಕೈ-ಕಮಲ ಪೈಪೋಟಿ, ತೆನೆಹೊತ್ತ ಮಹಿಳೆ ನಿರ್ಣಾಯಕ; ಸುವರ್ಣ‌ ನ್ಯೂಸ್ - ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ವರದಿ
  5. ಎಬಿಸಿ ಸಿ ವೋಟರ್‌ ಎಕ್ಸಿಟ್‌ ಪೋಲ್‌ ಪ್ರಕಾರ ಕಾಂಗ್ರೆಸ್‌ಗೆ ಗರಿಷ್ಠ 100ರಿಂದ 112 ಸೀಟುಗಳು ಬರಲಿವೆ. ಬಿಜೆಪಿಗೆ 85 ರಿಂದ 95, ಜೆಡಿಎಸ್‌ 21ರಿಂದ 29 ಸ್ಥಾನ ಬರಬಹುದು. ಇಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಸಮೀಪ ಇದೆ. ವಿವರ ಓದಿಗೆ| Karnataka Exit Polls: ಜೀ ನ್ಯೂಸ್ ಮ್ಯಾಟ್ರಿಜ್ ಮತದಾನಕ್ಕೂ ಮುನ್ನ, ಮತಗಟ್ಟೆ ಸಮೀಕ್ಷೆಯಲ್ಲಿ ಕೈ ಕಮಲ ಗೆಲ್ಲುವ ಸ್ಥಾನಗಳ ಭಾರಿ ಬದಲಾವಣೆ

ಇಷ್ಟೆಲ್ಲ ಆಗಿಯೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇನ್ನೂ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂಬ ವಿ‍ಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಜೆಡಿಎಸ್‌ ಬರಲಿದೆ ಎಂಬ ನಂಬಿಕೆ ಅವರದ್ದು.

IPL_Entry_Point