BS Yediyurappa: ಜೆಡಿಎಸ್‌ನೊಂದಿಗೆ ಮೈತ್ರಿ ಪ್ರಶ್ನೆಯೇ ಇಲ್ಲ; ಎಕ್ಸಿಟ್ ಪೋಲ್ ಕುರಿತು ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ
ವಿಧಾನಸಭೆ ಚುನಾವಣೆ ಮುಗಿಯಿತು ಎಂದು ನಾನು ಸುಮ್ಮನೆ ಇರುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆ ನನ್ನ ಗಮನದಲ್ಲಿದೆ. ಪಕ್ಷವನ್ನು ಸಂಘಟಿಸಲು ನಾನು ರಾಜ್ಯವ್ಯಾಪಿ ಓಡಾಡುತ್ತೇನೆ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ. ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಮತಎಣಿಕೆಯ ನಂತರ ಕೇಂದ್ರ ನಾಯಕತ್ವವು ಅಗತ್ಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಸರಿಯಾಗಿ ಪ್ರಚಾರ ಮಾಡಲಿಲ್ಲ ಎನ್ನುವುದು ಸುಳ್ಳು. ನಾನು ರಾಜ್ಯ ಸುತ್ತಿದ್ದೇನೆ, ಪಕ್ಷದ ಪರ ಪ್ರಚಾರ ಮಾಡಿದ್ದೇನೆ. ಲಿಂಗಾಯತ ಸಮುದಾಯ ನಮ್ಮೊಂದಿಗೆ ಇದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಯಾರ ಒತ್ತಡದಿಂದಲೂ ರಾಜೀನಾಮೆ ಕೊಡಲಿಲ್ಲ. ನಾನು ಸ್ವಯಿಚ್ಛೆಯಿಂದ ರಾಜೀನಾಮೆ ಕೊಟ್ಟು, ಬೊಮ್ಮಾಯಿ ಅವರನ್ನು ತಂದೆ. ಪಕ್ಷದ ಬಗ್ಗೆ ನನಗೆ ಯಾವ ಅಸಮಾಧಾನವೂ ಇಲ್ಲ ಎಂದು ಅವರು ಹೇಳಿದರು.
ಶೆಟ್ಟರ್, ಸವದಿ ನಿರ್ಗಮನದಿಂದ ತೊಂದರೆ ಆಗಿಲ್ಲ
ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಪಕ್ಷವು ಎಲ್ಲ ಸ್ಥಾನಮಾನ ಕೊಟ್ಟಿತ್ತು. ಆದರೂ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಅದು ಅವರ ಸ್ವಂತ ತೀರ್ಮಾನ. ಜನರಿಗೆ ಎಲ್ಲವೂ ಗೊತ್ತಿದೆ. ಅವರ ನಿರ್ಗಮನದಿಂದ ಪಕ್ಷಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೂ ಓಡಾಡುತ್ತೇನೆ
ವಿಧಾನಸಭೆ ಚುನಾವಣೆ ಮುಗಿಯಿತು ಎಂದು ನಾನು ಸುಮ್ಮನೆ ಇರುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆ ನನ್ನ ಗಮನದಲ್ಲಿದೆ. ಪಕ್ಷವನ್ನು ಸಂಘಟಿಸಲು ನಾನು ರಾಜ್ಯವ್ಯಾಪಿ ಓಡಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ಕೈ ಬಲಪಡಿಸಲು ನನ್ನ ಕೈಲಾದ ಕೊಡುಗೆ ಕೊಡುತ್ತೇನೆ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ
ಮೋದಿ ಅವರು ನನ್ನ ಕೆಲಸ ಹೊಗಳಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ನಿರ್ಲಕ್ಷಿಸಿದ್ದಾರೆ, ಕೇವಲ ಕೇಂದ್ರ ಸರ್ಕಾರದ ಸಾಧನೆ ಮುಂದಿಟ್ಟು ಮತ ಕೇಳಿದ್ದಾರೆ ಎನ್ನುವುದು ಸರಿಯಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳನ್ನೂ ಮೋದಿ ಅವರ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಪಕ್ಷವು ನನ್ನನ್ನು ನಿರ್ಲಕ್ಷಿಸಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.