Electricity Price Hike: ಮುಂದಿನ ತಿಂಗಳಿಂದ ಕರೆಂಟ್ ಶಾಕ್ ಗ್ಯಾರಂಟಿ; ಜುಲೈ 1ರಿಂದ ವಿದ್ಯುತ್ ದರ ಏರಿಕೆ
ಸದ್ಯ ರಾಜ್ಯದಲ್ಲಿನ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಾದ ಮೆಸ್ಕಾಂ, ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಹಾಗೂ ಗೆಸ್ಕಾಂಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅಂತಿಮವಾಗಿ ವಿದ್ಯುತ್ ದರ ಏರಿಸದೆ ಬೇರೆ ದಾರಿ ಇಲ್ಲ ಎನ್ನುವಂತಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೂ, ಗ್ರಾಹಕರ ತಲೆಗೆ ಹೊಡೆತ ಬೀಳುವುದು ಪಕ್ಕಾ.
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊರೆಯನ್ನು ಹೊರಲಾಗದ ಜನರಿಗೆ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಗಾಯದ ಮೇಲೆ ಬರೆ ಎಳೆದಿತ್ತು. ಇದೀಗ ವಿದ್ಯುತ್ ಸರದಿ. ಮುಂದಿನ ತಿಂಗಳಿನಿಂದ ರಾಜ್ಯದ ಜನರಿಗೆ ಕರೆಂಟ್ ಶಾಕ್ ಹೊಡೆಯಲಿದ್ದು, ವಿದ್ಯುತ್ ದರ ದುಬಾರಿಯಾಗಲಿದೆ.
ದೇಶದಲ್ಲಿ ಈಗಾಗಲೇ ಹಲವು ರಾಜ್ಯಗಳಲ್ಲಿ ವಿದ್ಯುತ್ ದರ ಏರಿಕೆಯಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಬೇಸಿಗೆ ಕಾಲದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿತ್ತು. ಹೀಗಾಗಿ ಬೇಡಿಕೆಗನುಸಾರ ವಿದ್ಯುತ್ ಪೂರೈಸಲು ವಿದ್ಯುತ್ ಉತ್ಪಾದನೆ ಕಡಿಮೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಕಲ್ಲಿದ್ದಲು ಕೊರತೆ. ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಮತ್ತು ಬಾಕಿ ಪಾವತಿ ಆಗದಿರುವುದು ವಿದ್ಯುತ್ ಉತ್ಪಾದನೆ ಕಡಿಮೆಯಗಲು ಮುಖ್ಯ ಕಾರಣ. ಮತ್ತೊಂದೆಡೆ ಬೇಸಿಗೆಯ ಪ್ರಖರತೆಯಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಳವಾಗಿದ್ದು, ಅಗತ್ಯ ಬೇಡಿಕೆಯನ್ನು ಪೂರೈಸಲಾಗದೆ ವಿದ್ಯುತ್ ಸಮಸ್ಯೆ ಸೃಷ್ಟಿಯಾಗಿದೆ. ಕಲ್ಲಿದ್ದಲಿಗೆ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯೂ ಹೆಚ್ಚಾಗಿದೆ. ಇದೆಲ್ಲದರ ಅಂತಿಮ ಪರಿಣಾಮ ನೇರವಾಗಿ ಗ್ರಾಹಕರ ತಲೆ ಮೇಲೆ ಬೀಳುತ್ತಿದೆ.
ಮುಂದಿನ ಜುಲೈ ಒಂದರಿಂದಲೇ ರಾಜ್ಯದಲ್ಲಿ ಪರಿಷ್ಕೃತ ದರ ನಿಗದಿಯಾಗಲಿದೆ. ಈಗಾಗಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಸಂಸ್ಥೆಗಳು ವಿದ್ಯುತ್ ದರ ಹೆಚ್ಚಿಸಲು ಸಲ್ಲಿಸಿದ್ದ ಪ್ರಸ್ತಾನೆಗೆ ಅನುಮೋದನೆ ಸಿಕ್ಕಿದ್ದು, ಈ ಬೆನ್ನಲ್ಲೇ ದರ ಹೆಚ್ಚಾಗಲಿದೆ.
ವಿದ್ಯುತ್ ದರವು 19 ರೂಪಾಯಿಯಿಂದ 31 ರೂಪಾಯಿಗಳಿಗೆ ಹೆಚ್ಚಳವಾಗಲಿದೆ. ಪ್ರತಿ ತಿಂಗಳೂ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. ಈ ಹಿಂದೆ ಪಾವತಿಸುತ್ತಿದ್ದ 19 ರೂಪಾಯಿ ಬದಲಾಗಿ 31 ರೂಪಾಯಿ ಪಾವತಿಸಬೇಕಾಗುತ್ತದೆ.
ದೇಶದ 70%ರಷ್ಟು ವಿದ್ಯುತ್ ಉತ್ಪಾದಿಸುವ ಕಲ್ಲಿದ್ದಲು ಶಾಖೋತ್ಪನ್ನ ಸ್ಥಾವರಗಳು ಇಂಧನ ಕೊರತೆ ಎದುರಿಸುತ್ತಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವಾರು ಗಣಿಗಳಿಗೆ ನೀರು ನುಗ್ಗಿ, ವಿದ್ಯುತ್ ಬಿಕ್ಕಟ್ಟನ್ನು ಎದುರಿಸುವಂತಾಗಿತ್ತು. ಮುಂಗಾರು ಹಂಗಾಮಿನ ಬಳಿಕ ಕಲ್ಲಿದ್ದಲು ಕೊರತೆ ಸಾಮಾನ್ಯ. ಆದರೆ ಈ ವರ್ಷ ಹೆಚ್ಚಾದ ಬಿಸಿ ಗಾಳಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿದೆ. ಇದು ಈಗಾಗಲೇ ಹಲವು ರಾಜ್ಯಗಳ ಜನತೆ ಮೇಲೆ ಪ್ರಭಾವ ಬೀರಿದೆ. ಕರ್ನಾಟಕದಲ್ಲಿ ಮುಂದಿನ ತಿಂಗಳಿನಿಂದ ಸಮಸ್ಯೆ ಶುರುವಾಗಲಿದೆ.
ಅನೇಕ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಪೂರೈಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದಾಗಿ ಹಲವಾರು ರಾಜ್ಯಗಳಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಸಂಭವಿಸುತ್ತಿದೆ. ವಿದ್ಯುಚ್ಛಕ್ತಿ ಉತ್ಪಾದನೆಗೆ ಭಾರತವು ದೀರ್ಘಕಾಲದಿಂದ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗುತ್ತಿರುವುದನ್ನು ಈ ಕೊರತೆ ಸ್ಪಷ್ಟಪಡಿಸುತ್ತಿದೆ.
ಸದ್ಯ ರಾಜ್ಯದಲ್ಲಿನ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಾದ ಮೆಸ್ಕಾಂ, ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ ಹಾಗೂ ಗೆಸ್ಕಾಂಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅಂತಿಮವಾಗಿ ವಿದ್ಯುತ್ ದರ ಏರಿಸದೆ ಬೇರೆ ದಾರಿ ಇಲ್ಲ ಎನ್ನುವಂತಾಗಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೂ, ಗ್ರಾಹಕರ ತಲೆಗೆ ಹೊಡೆತ ಬೀಳುವುದು ಪಕ್ಕಾ.
ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರತಿ ಯುನಿಟ್‌ಗೆ 38 ರೂಪಾಯಿಗೂ ಹೆಚ್ಚು ದರ ಏರಿಸುವಂತೆ ಮಾಡಿದ್ದವು. ಆದರೆ ಕೋವಿಡ್‌ನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಮತ್ತಷ್ಟು ಹೊರೆಯಾಗಬಾರದು ಎಂಬ ಉದ್ದೇಶದಿಂದ, 31 ರೂಪಾಯಿಯವರೆಗೆ ದರ ಏರಿಕೆ ಮಾಡಲಾಗುತ್ತಿದೆ. ಇದು ತಾತ್ಕಾಲಿಕವಾಗಿದ್ದು, ವಸೂಲಿ ಸಂಪೂರ್ಣವಾದಂತೆ ಈ ಹಿಂದಿನ ದರವನ್ನೇ ಮತ್ತೆ ಜಾರಿಗೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗ