HD Kumaraswamy on Assembly Election: ನಾಳೆ ಚುನಾವಣೆ ನಡೆದರೂ ಗೆಲ್ಲುವ ಎಲ್ಲಾ ವಾತಾವರಣ ಇದೆ: ಮಾಜಿ ಸಿಎಂ ಹೆಚ್ಡಿಕೆ
ನಾಳೆ ಚುನಾವಣೆ ನಡೆದರೂ ಜೆಡಿಎಸ್ ಗೆಲ್ಲುವ ಎಲ್ಲಾ ವಾತಾವರಣ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಪಂಚರತ್ನ ರಥಯಾತ್ರೆ ಮಾಡಿದ 45 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇದೆ. ನಾನು ಭೇಟಿ ಕೊಟ್ಟ ಕ್ಷೇತ್ರದಲ್ಲಿ ಜನರ ಶ್ರೀರಕ್ಷೆ ಇದೆ. ನಾಳೆ ಚುನಾವಣೆ ಆದರೂ ಗೆಲ್ಲುವ ಎಲ್ಲಾ ವಾತಾವರಣ ಇದೆ ಎಂದರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂದು (ಜ.14, ಶನಿವಾರ) ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚರತ್ನ ಯೋಜನೆ ಯಾಕೆ ಮಾಡಬೇಕು ಎಂಬ ಚರ್ಚೆ ಬಂದಾಗ, ಜನರ ಬದುಕು ನನಗೆ ಮುಖ್ಯವಾಗಿತ್ತು. ಇಂದೂ ಅನೇಕ ಜನರು ನನ್ನ ಮನೆ ಬಾಗಿಲಿಗೆ ಬರುತ್ತಾರೆ. ಆರೋಗ್ಯ, ಶಿಕ್ಷಣ ಅಂತ ಬಂದು ಹೋಗ್ತಾರೆ. ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಒಂದಿಷ್ಟು ಯೋಜನೆ ಬೇಕೇ ಬೇಕು. ಒಂದು ಕಡೆ ದೇಶ ಬೆಳೆಯುತ್ತಿದೆ. ಮತ್ತೊಂದೆಡೆ ಬಡತನವೂ ಹೆಚ್ಚಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸೋದಕ್ಕೆ ಹಿಂದೆ ಮುಂದೆ ನೋಡ್ತಾರೆ
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸೋದಕ್ಕೆ ಹಿಂದೆ ಮುಂದೆ ನೋಡ್ತಾ ಇದ್ದಾರೆ. ಖಾಸಗಿ ಶಾಲೆಗಳಿಗೆ ಸೇರಿಸುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳ ಭವಿಷ್ಯದಿಂದ ಖಾಸಗಿ ಶಾಲೆಗಳಿಗೇನೋ ಸೇರಿಸ್ತಾರೆ. ಆದರೆ ನಂತರ ಶುಲ್ಕ ಕಟ್ಟಲು ಸಮಸ್ಯೆಯಾಗಿದೆ ಅಂತಾರೆ. ಆರೋಗ್ಯ ಅಥವಾ ಈಗಿನ ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಮಾತಾಡಲ್ಲ. ಪಿಹೆಚ್ ಸಿ ಸೆಂಟರ್ ನಲ್ಲಿ ವೈದ್ಯರು ಒಂದೆರಡು ಗಂಟೆ ಬಂದು ಕೆಲಸ ಮಾಡಿದ್ರೆ ಮುಗೀತು. ಸರ್ಕಾರಗಳು ಕಟ್ಟಡ ಕಟ್ಟಿಸಲು ಆಸಕ್ತಿ ವಹಿಸುತ್ತಾರೆ. ಆದರೆ ಕಟ್ಟಡಕ್ಕೆ ಬೇಕಾದ ಸಿಬ್ಬಂದಿ ನೇಮಕಾತಿಯ ಬಗ್ಗೆ ಆಸಕ್ತಿ ಇರೋದಿಲ್ಲ. ಹೆಚ್ಚು ಹೊರೆ ಬೀಳಲಿದೆ ಅಂತ ಮಂತ್ರಿಗಳು, ಅಧಿಕಾರಿಗಳು ಹೇಳ್ತಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಶೇ. 50 ರಷ್ಟು ಶಿಕ್ಷಕರ ಕೊರತೆ ಇದೆ ಅಂತ ಕೇಂದ್ರವೇ ಮಾಹಿತಿ ಕೊಟ್ಟಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ರೈತರ ಆದಾಯವಲ್ಲ ಖರ್ಚು ದ್ವಿಗುಣ
ಇನ್ನು ರೈತರ ಬದುಕು ಕೇಳಲೇಬೇಡಿ. ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ರೈತರ ಖರ್ಚು ದ್ವಿಗುಣ ಆಗಿದೆ ಅಷ್ಟೆ. ಕಲಬುರಗಿ, ಬೀದರ್ ಮತ್ತಿತರ ಜಿಲ್ಲೆಗಳಲ್ಲಿ ತೊಗರಿ ಬೆಳೆ ಬೆಳೆಯುತ್ತಾರೆ. ಅದಕ್ಕೆ ರೋಗ ಹೆಚ್ಚಾಗಿ ಅವರು ಬೆಳೆದ ಬೆಳೆ ಸರಿಯಾಗಿ ಬರುತ್ತಿಲ್ಲ. ರೈತರು ಮತ್ತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ಮನ್ನಾ ಮಾಡಿದ್ರೆ ಮತ್ತೆ ರೈತ ಸಾಲ ಮಾಡುತ್ತಾನೆ
2006ರಲ್ಲೂ ಸಾಲ ಮನ್ನಾ ಮಾಡಿದ್ದೆ, ಕಳೆದ ಬಾರಿಯೂ ಸಾಲ ಮನ್ನಾ ಮಾಡಿದ್ದೆ. ಹೀಗಾಗಿ ಸಾಲ ಮನ್ನಾ ಮಾಡಿದ್ರೆ ಮತ್ತೆ ರೈತ ಸಾಲ ಮಾಡುತ್ತಾನೆ. ಅದಕ್ಕಾಗಿಯೇ ನಾನು ರೈತರಿಗೆ ಒಂದು ಯೋಜನೆ ನೀಡಲು ಚಿಂತಿಸಿದ್ದೇನೆ ಎಂದು ಅವರು ಹೇಳಿದರು.
ಮನೆ ಕಟ್ಟಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಕಟ್ಟಿಕೊಡಲಿಲ್ಲ. ಸಿದ್ದರಾಮಯ್ಯ ಸಿಎಂ ಆದಾಗ ಮನೆ ಕಟ್ಟಿ ಕೊಡ್ತೀವಿ ಅಂದ್ರು, ಅದು ಆಗಲಿಲ್ಲ. ಬಿಜೆಪಿ ಸರ್ಕಾರ ಬಂದಾಗ ಬಿದ್ದೋದ ಮನೆಗೆ ಹಣ ಕೊಡ್ತೀವಿ ಅಂದರು ಎಲ್ಲಿ ಕೊಟ್ಟರು?. ನಾನು ಸಿಎಂ ಆಗಿದ್ದಾಗ ಮನೆ ಕಟ್ಟಿ ಕೊಟ್ಟೆ, ಕಟ್ಟುವವರಿಗೆ ಸಹಾಯ ಮಾಡಿದೆ. ಮನೆಯ ಅವಶ್ಯಕತೆ ಹಲವಾರು ಜನರಿಗೆ ಇದೆ. ಇದೆಲ್ಲವನ್ನೂ ನೋಡಿಯೇ ಪಂಚರತ್ನ ಯೋಜನೆ ಶುರು ಮಾಡಿರುವುದು. ಪ್ರಾರಂಭದಲ್ಲಿ ಇದರ ಬಗ್ಗೆ ಲಘುವಾಗಿ ಮಾತನಾಡಿದರು. ರೈತರ ಸಾಲಮನ್ನದ ವ್ಯಾಲ್ಯೂ ಏನು ಅಂತ ಈಗ ಹೇಳ್ತಾ ಇದ್ದಾರೆ. ಹಾಗಾಗಿ ಈ ಬಾರಿ ನಾವು ಕೈ ಹಿಡಿತೀವಿ ಅಂತಿದ್ದಾರೆ ಎಂದು ನುಡಿದರು.
ಇದೀಗ ಕಾಂಗ್ರೆಸ್ ನವರು 200 ಯೂನಿಟ್ ವಿದ್ಯುತ್ ಕೊಡುತ್ತೇವೆಂದು ಹೇಳುತ್ತಿದ್ದಾರೆ. ನನ್ನ ಕಾರ್ಯಕ್ರಮ ಸರ್ಕಾರದ ಆಸ್ತಿ ಮೌಲ್ಯ ಹೆಚ್ಚಾಗುವಂತದ್ದು. ಉಚಿತ ಕಾರ್ಯಕ್ರಮ ನಿಲ್ಲಿಸಬೇಕೆಂದು ಒಂದು ಕಡೆ ಮೋದಿಯವರು ಹೇಳ್ತಾರೆ. ಜನರ ದುಡ್ಡು ಸುಮ್ನೆ ನಷ್ಟ ಆಗಬಾರದು. ಇದರಿಂದ ಸರ್ಕಾರಕ್ಕೆ ಯಾವುದೇ ಗಳಿಕೆ ಇಲ್ಲ. ಕುಶಲಕರ್ಮಿಗಳಿಗೆ ಏನೋ 10 ಪರ್ಸೆಂಟ್ ಸಬ್ಸಿಡಿ ಕೊಡ್ತೀವಿ ಅಂತ ಬಿಜೆಪಿಯವರು ಜಾಹೀರಾತು ಕೊಟ್ಟಿದ್ದಾರೆ. ಕುಶಲಕರ್ಮಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ಅದಕ್ಕಾಗಿಯೇ ನಮಗೆ ಒಂದು ಸ್ಪಷ್ಟ ಬಹುಮತದ ಅಧಿಕಾರ ಕೊಡಿ ಅಂತ ಜನರ ಮುಂದೆ ಕೇಳ್ತಾ ಇದ್ದೀನಿ ಎಂದರು.
ನನ್ನ ಗುರಿ ಎಲ್ಲರಿಗೂ ಸರಿಸಮಾನಾದ ಬದುಕು ಕೊಡುವುದು
ನನ್ನ ದೃಷ್ಟಿ ಕೇವಲ ಕಟ್ಟಡ, ಜಲಾಶಯ, ರಸ್ತೆ ಮಾಡುವುದಲ್ಲ. ಯಾವ ಸರ್ಕಾರ ಬಂದರೂ ಇದನ್ನು ಮಾಡುತ್ತದೆ. ಮೀಸಲಾತಿಯಿಂದ ಎಷ್ಟು ಕುಟುಂಬ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಬಡತನದಿಂದ ಇನ್ನು ಎಷ್ಟು ಜನ ಇದ್ದಾರೆ. ನನ್ನ ಗುರಿ ಎಲ್ಲರಿಗೂ ಸರಿಸಮಾನಾದ ಬದುಕು ಕೊಡುವುದು. 75 ವರ್ಷವಾದರೂ ಸರಿಯಾದ ಬದುಕು ಮಾಡಿಕೊಳ್ಳೋದಕ್ಕೆ ಆಗಲಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಟಾಂಗ್
ವಿದೇಶಿ ಹೂಡಿಕೆ ಎಷ್ಟಿದೆ. ಅದು ಸಾಲದ ರೂಪದಲ್ಲಿಯೇ ಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳುತ್ತಿದ್ದಾರೆ. ರಸ್ತೆ, ಚರಂಡಿ ಬೇಡ, ಲವ್ ಜಿಹಾದ್ ಅಂತಾರೆ. ಮುಂದಿನ ಪೀಳಿಗೆಗೆ ಇದನ್ನು ಹೇಳಿದರೆ ಮುಂದೆ ಏನಾಗಲಿದೆ. ಬಿಜೆಪಿ ನಡವಳಿಕೆಯಿಂದ ವಿದೇಶಿ ಹೂಡಿಕೆ ಏನಾಗಿದೆ? ದೇವೇಗೌಡರು ಟೆಕ್ ಪಾರ್ಕ್ ಗೆ ಅಡಿಪಾಯ ಹಾಕಿದ್ದರು. ಜನರ ಬದುಕಿಗೆ ಏನು ಕಾರ್ಯಕ್ರಮ ಕೊಡಬೇಕು ಅಂತ ಜನಪ್ರತಿನಿಧಿಗೆ ಗೊತ್ತಿರಬೇಕು. ಕರ್ನಾಟಕ ಸಂಪದ್ಬರಿತವಾದ ರಾಜ್ಯ. ಕೊರೊನಾ ಅನಾಹುತಗಳು ಅನೇಕ ಆಗಿವೆ. ಸರ್ಕಾರದ ಅನೇಕ ನ್ಯೂನ್ಯತೆಗಳು ಇವೆ. ಯಾವುದೋ ಕಪಿಮುಷ್ಟಿ ಯಲ್ಲಿ ಸರ್ಕಾರ ಇದೆ. ಲವ್ ಜಿಹಾದ್ ಅಂತ ಹೇಳಿ ಎಲ್ಲಿಗೆ ತೆಗೆದುಕೊಂಡು ಹೋಗ್ತಾ ಇದ್ದೀರಾ? ಬಿಹಾರ್, ಉತ್ತರ ಪ್ರದೇಶ ರೀತಿ ಮಾಡುತ್ತಿದ್ದೀರಾ. ನನ್ನ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಅತಂತ್ರ ಸರ್ಕಾರ ಬರಲ್ಲ:
ಇನ್ನೂ ಅಭಿವೃದ್ಧಿ ಮಾಡೋದು ಇಲ್ಲಿ ಸಾಧ್ಯ ಇದೆ. ಉತ್ತರ ಕರ್ನಾಟಕದ ಅನೇಕ ಶಾಸಕರು ಇದ್ದಾರೆ. ಆ ಜನರ ಕಷ್ಟ ಸರ್ಕಾರಕ್ಕೆ ಮುಟ್ಟಲೇ ಇಲ್ಲ. ಜನರ ನಾಡಿ ಮಿಡಿತ ನಾನು ನೋಡ್ತಾನೇ ಇದ್ದೇನೆ. ಸಂಪೂರ್ಣ ಸ್ವತಂತ್ರ ಸರ್ಕಾರ ಬರಲಿದೆ. ನಾವು ಮೂರ್ನಾಲ್ಕು ಜಿಲ್ಲೆಗೆ ಸೀಮಿತ ಆಗಲ್ಲ. ನಮಗೆ ಸಂಪೂರ್ಣ ವಿಶ್ವಾಸ ಇದೆ ಅಧಿಕಾರಕ್ಕೆ ಬರುತ್ತೇವೆ. ಕಳೆದ ಒಂದು ವರ್ಷದ ಹಿಂದೆಯೇ ಅಭ್ಯರ್ಥಿಗಳ ಕಾರ್ಯಗಾರ ಮಾಡಿ ಅವರಿಗೆ ಕೆಲಸ ವಹಿಸಿದ್ದೇನೆ. ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕೆಲಸ ಆರಂಭ ಮಾಡಿದ್ದಾರೆ. ಅವರೆಲ್ಲಾ ಪಾದಯಾತ್ರೆಯಲ್ಲಿ ಹಳ್ಳಿ ಹಳ್ಳಿಗೆ ಹೋಗ್ತಾ ಇದ್ದಾರೆ. ಸಮಯ ತುಂಬಾ ಇದೆ, ಅವರೆಲ್ಲಾ ಜನರಿಗೆ ಕನೆಕ್ಟ್ ಆಗಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅತಂತ್ರ ಸರ್ಕಾರ ಬರಲ್ಲ. ಅದಕ್ಕಾಗಿಯೇ ನಾನು ಈ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.