ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ಮುಂದುವರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ಮುಂದುವರಿಕೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ; ಜನಪ್ರತಿನಿಧಿನಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ ಮುಂದುವರಿಕೆ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಡಿಸೆಂಬರ್ 18ರ ಬುಧವಾರ ನಡೆಯಿತು. ವಾದ, ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 19ರ ಗುರುವಾರಕ್ಕೆ ಮುಂದೂಡಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣದ ವಿಚಾರಣೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಮುಂದುವರಿದಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣದ ವಿಚಾರಣೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಮುಂದುವರಿದಿದೆ.

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದಿಗೆ (ಡಿಸೆಂಬರ್ 19, ಗುರುವಾರ) ಮುಂದೂಡಲಾಗಿದೆ. ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ (ಡಿಸೆಂಬರ್ 18) ವಿಚಾರಣೆ ನಡೆಸಿದರು.

ವಿಚಾರಣೆಯ ಹಂತದಲ್ಲಿ ಬಾಲಕಿಯ ಉಡುಪಿನ ಒಳಗೆ ಏಕೆ ಕೈ ಹಾಕಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಲು ಕೈ ಹಾಕಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅವರ ಈ ವರ್ತನೆಯೇ ಲೈಂಕಿಕ ಕಿರುಕುಳ ನಡೆದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿರುವ ಈ ಅಂಶವನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರವಿವರ್ಮ ಕುಮಾರ್‌ ಪ್ರಸ್ತಾಪಿಸಿದ್ದಾರೆ. ಅದೂ ಕೂಡ ತೆರೆದ ನ್ಯಾಯಾಲಯದಲ್ಲಿಯೇ ಈ ಅಂಶವನ್ನು ಅವರು ಓದಿ ಹೇಳಿದ್ದಾರೆ.

ಅತ್ಯಾಚಾರ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಉಡುಪಿನ ಒಳಗೆ ಕೈ ಹಾಕಿದ್ದೆ ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ ಎಂದು ಪ್ರಶ್ನಿಸಿದ ರವಿವರ್ಮಕುಮಾರ್ ಲೈಂಗಿಕ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಪ್ರಕರಣ ರದ್ದುಪಡಿಸುವಂತೆ ಕೋರಿರುವ ಯಡಿಯೂರಪ್ಪನವರ ಅರ್ಜಿ ವಜಾಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಾಸಿಕ್ಯೂಟರ್‌ ಅವರ ಈ ವಾದವನ್ನು ಅಲ್ಲಗಳೆದ ಅರ್ಜಿದಾರ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ ನಾಗೇಶ್, ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಆದರೆ ಅವರು ಈಗ ಬದುಕಿಲ್ಲ. ಘಟನೆ ನಡೆದ ಒಂದೂವರೆ ತಿಂಗಳ ನಂತರ ಪ್ರಕರಣ ದಾಖಲಿಸಿದ್ದಾರೆ. ಯಡಿಯೂರಪ್ಪ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಿವಾಸದಲ್ಲಿ ಹಲವು ಮಂದಿ ಇದ್ದರು. ಅವರೆಲ್ಲರ ಎದುರು ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ. ಈಕೆ ಹಲವು ರಾಜಕಾರಣಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನುವುದನ್ನೂ ನ್ಯಾಯಾಲಯದ ಗಮನಕ್ಕೆ ತಂದರು.

ಯಡಿಯೂರಪ್ಪ ಅವರಿಗೆ ಈಗ 82 ವರ್ಷ. ಅವರಿಗೆ ಕೈ ನಡುಗುತ್ತವೆ. ಲೈಟ್‌ ನ ಸ್ವಿಚ್‌ ಹಾಕಲೂ ಅವರು ಮತ್ತೊಬ್ಬರನ್ನು ಆಶ್ರಯಿಸುತ್ತಾರೆ. ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಇಂತಹ ಘಟನೆ ನಡೆದೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದೂ ವಾದಿಸಿದರು. ಬಾಲಕಿಯ ಹೇಳಿಕೆ ಆಧರಿಸಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಹೇಳಿದಾಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ನ್ಯಾಯಾಲಯ ಈ ಹಂತದಲ್ಲಿ ಬಾಲಕಿಯ 164ರ ಹೇಳಿಕೆಯನ್ನು ಪರಿಗಣಿಸಬೇಕಲ್ಲವೇ ಎಂದು ಪ್ರಶ್ನಿಸಿದರು. ಆಗ ನಾಗೇಶ್ ಅವರು, ಯಡಿಯೂರಪ್ಪ ಅವರ ಕೊಠಡಿಗೆ ಬಾಲಕಿ ಹೋಗಿರಲಿಲ್ಲ ಎಂಬ ಸಾಕ್ಷಿಯ ಹೇಳಿಕೆ ಇದೆ. ಯಡಿಯೂರಪ್ಪನವರ ಜತೆ ಸದಾ ಭದ್ರತಾ ಸಿಬ್ಬಂದಿ ಇರುತ್ತಾರೆ. ಅಲ್ಲಿದ್ದ ಎಲ್ಲ ಸಾಕ್ಷಿಗಳೂ ಇಂತಹ ಘಟನೆ ನಡೆದಿಲ್ಲ, ಯಡಿಯೂರಪ್ಪ ಹಾಲ್ ಬಿಟ್ಟು ಎಲ್ಲೂ ಹೋಗಿರಲಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೂ ತನಿಖಾಧಿಕಾರಿಗಳು ಬಾಲಕಿಯ ಹೇಳಿಕೆಯನ್ನು ಆಧರಿಸಿ ದೋಷಾರೋಪ ಪಟ್ಟಿ ದಾಖಲು ಮಾಡಿದ್ದಾರೆ ಎಂದು ಲೋಪಗಳ ಪಟ್ಟಿ ಮಾಡಿದರು.

ಈ ಬಾಲಕಿಯ ತಾಯಿ ದೂರು ನೀಡುವುದಕ್ಕೂ ಮುನ್ನ ಹಿರಿಯ ರಾಜಕಾರಣಿಯೊಬ್ಬರನ್ನು ಭೇಟಿ ಮಾಡಿ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಆದ್ದರಿಂದ ಇದರ ಹಿಂದೆ ಕಾಣದ ಹಿತಾಸಕ್ತಿ ಅಡಗಿದೆ ಎಂದು ವಾದಿಸಿದರು. ಈ ಸಂದರ್ಭದಲ್ಲಿ ರವಿವರ್ಮ ಕುಮಾರ್‌ ಅವರು ದೋಷಾರೋಪ ಪಟ್ಟಿಯಲ್ಲಿದ್ದ ಮತ್ತಷ್ಟು ಅಂಶಗಳನ್ನು ಓದಲು ಮುಂದಾದಾಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಈಗ ದಿನದ ಕಲಾಪ ಮುಕ್ತಾಯ ಹಂತದಲ್ಲಿದೆ. ಬೇರೆ ಪ್ರಕರಣಗಳ ವಿಚಾರಣೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಪ್ರಕರಣವನ್ನು ಇಂದಿನಗೆ ಅಂದರೆ ಡಿಸೆಂಬರ್ 19ರ ಗುರುವಾರಕ್ಕೆ ಮುಂದೂಡಿದರು.

Whats_app_banner