ಮೈಸೂರು ಮುಡಾದಲ್ಲೂ ಇನ್ನು ಬಿಡಿಎ ಮಾದರಿ ಆಡಳಿತ; ಐಎಎಸ್ ಅಧಿಕಾರಿಯೇ ಆಯುಕ್ತ, ಸರ್ಕಾರದಿಂದಲೇ ಸದಸ್ಯರ ನೇಮಕ ವಿಧೇಯಕ ಅಂಗೀಕಾರ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ತರಲು ಕರ್ನಾಟಕ ಸರ್ಕಾರವು ಹೊಸ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆದುಕೊಂಡಿದೆ.
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ 14 ಬದಲಿ ನಿವೇಶನ ಹಂಚಿದ ವಿವಾದದ ನಂತರದ ಭಾರೀ ಸುದ್ದಿ ಮಾಡುತ್ತಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಡಳಿತದಲ್ಲಿ ಭಾರೀ ಬದಲಾವಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ತವರು ಜಿಲ್ಲೆಯಲ್ಲಿನ ಪ್ರಾಧಿಕಾರದಲ್ಲಿ ತಮ್ಮ ಕುಟುಂಬದ ಜಮೀನಿಗೆ ಪರ್ಯಾಯವಾಗಿ ನಿವೇಶನ ಪಡೆದ ಆರೋಪದ ವಿವಾದ ಸುತ್ತಿಕೊಳ್ಳುತಲೇ ಖುದ್ದು ಸಿದ್ದರಾಮಯ್ಯ ಅವರೇ ಭಾರೀ ಬದಲಾವಣೆಗೆ ಸೂಚನೆ ನೀಡಿದ್ದರು. ಇದರ ಭಾಗವಾಗಿಯೇ ರೂಪಿಸಿದ್ದ 2024ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಕ್ಕೆ ಕರ್ನಾಟಕ ವಿಧಾನಸಭೆ ಅಂಗೀಕಾರ ನೀಡಿದೆ.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಗುರುವಾರ ವಿಧಾನ ಸಭೆ ಕಲಾಪದಲ್ಲಿ, ಆಮೂಲಾಗ್ರ ಬದಲಾವಣೆಗೆ ಅವಕಾಶ ನೀಡುವ 2024ನೇ ಸಾಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕೆ ಸದನದ ಮುಂದೆ ಮಂಡಿಸಿದರು.
ಬದಲಾವಣೆ ಏನೇನು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ವಿಧೇಯಕವನ್ನು ರಚನೆ ಮಾಡಲಾಗಿದೆ. ಪ್ರಾಧಿಕಾರಕ್ಕೆ ಹಿರಿಯ ಶ್ರೇಣಿ ಐ.ಎ.ಎಸ್ ಅಧಿಕಾರಿಯನ್ನು ಆಯಕ್ತರನ್ನಾಗಿ ನೇಮಿಸಲು ಅವಕಾಶ ನೀಡಲಾಗಿದೆ.
ಪ್ರಾಧಿಕಾರ ಸದಸ್ಯತ್ವದ ನೇಮಕಕ್ಕೂ ತಿದ್ದುಪಡಿ ತಂದು ಸರ್ಕಾರಕ್ಕೆ ಸದಸ್ಯರ ನೇಮಕ ಮಾಡಲು ಅಧಿಕಾರ ನೀಡಲಾಗಿದೆ. ಇದರಿಂದ ಆಡಳಿತದಲ್ಲಿ ಚುರುಕು ಮೂಡಿಸಿ ಆಡಳಿತವನ್ನು ಸರಿದಾರಿಗೆ ತರುವುದು ಸರ್ಕಾರದ ಉದ್ದೇಶ.
ಹಗರಣದ ನಂತರ
ಈಗಾಗಲೇ ಜನರಿಗೆ ನಿವೇಶನ ನೀಡಲು ಹಿಂದೆ ಬಿದ್ದಿರುವ ಪ್ರಾಧಿಕಾರವು ಬದಲಿ ನಿವೇಶನದ ವಿಚಾರದಲ್ಲಿ ಭಾರೀ ಹಗರಣಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಎಲ್ಲಾ ಪಕ್ಷದವರೂ ಬದಲಿ ನಿವೇಶನ ಪಡೆದಿದ್ದಾರೆ ಎನ್ನುವುದು ದೂರಿನ ಹಿಂದಿರುವ ಮೂಲ. ಈಗಾಗಲೇ ಇಡೀ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಸೂಚನೆ ಮೇರೆಗೆ ಲೋಕಾಯುಕ್ತಕ್ಕೆ ವಹಿಸಲಾಗಿದೆ. ಲೋಕಾಯುಕ್ತವು ಎರಡು ತಿಂಗಳಿನಿಂದ ಲೋಕಾಯುಕ್ತ ವಿಚಾರಣೆ ನಡೆಸುತ್ತಿದೆ.
ಮತ್ತೊಂದು ಕಡೆ ಜಾರಿ ನಿರ್ದೇಶನಾಲಯವೂ ಕೂಡ ಸಿದ್ದರಾಮಯ್ಯ ಅವರ ವಿರುದ್ದದ ಆರೋಪಗಳ ಕುರಿತು ತನಿಖೆ ನಡೆಸುತ್ತಿದೆ. ಜಮೀನು ಖರೀದಿ, ಮಾರಾಟ ಸಹಿತ ಈ ವಹಿವಾಟಿನಲ್ಲಿ ಆಗಿರುವ ಹಣದ ಮೂಲದ ಕುರಿತು ಇಡಿ ಜಾಲಾಡುತ್ತಿದೆ. ಇದರ ಮಧ್ಯೆಯೇ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದೆ.
ಪಾರಂಪರಿಕ ಕಟ್ಟಡ ರಕ್ಷಣಾ ಸಮಿತಿ
ಮೈಸೂರು ಪಾರಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದ ಅಡಿ ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ರಚನೆ ಮಾಡಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಶಾಸಕರಾದ ತಮ್ಮಣ್ಣ, ಭೈರತಿ ಬಸವರಾಜ ಎಸ್.ಟಿ.ಸೋಮಶೇಖರ್,ಟಿ.ಎಸ್.ಶ್ರೀವತ್ಸ, ಜಿ.ಟಿ.ದೇವೇಗೌಡ, ವಿ.ಸುನಿಲ್ ಕುಮಾರ್, ಹೆಚ್.ಡಿ.ರೇವಣ್ಣ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವಿಧೇಯಕದ ಕುರಿತು ಚರ್ಚಿಸಿದರು.
ನಂತರ ವಿಧಾನ ಸಭೆಯಲ್ಲಿ ಧ್ವನಿ ಮತದ ಮೂಲಕ ಹಲವು ತಿದ್ದುಪ ಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಲಾಯಿತು. ವಿಧಾನಪರಿಷತ್ ನಲ್ಲು ಈ ವಿಧೇಯಕ ಮಂಡನೆಯಾಗಲಿದ್ದು. ಎರಡೂ ಸದನಗಳಲ್ಲಿ ಅನುಮತಿ ಸಿಕ್ಕ ಬಳಿಕ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ.