Boxing Day Test: ಇಂಡೋ-ಆಸೀಸ್ ಬಾಕ್ಸಿಂಗ್ ಡೇ ಟೆಸ್ಟ್ ಯಾವಾಗ, ಹೀಗೆಂದರೇನು, ಏನಿದರ ಇತಿಹಾಸ? ದಿನಾಂಕ, ಸಮಯದ ವಿವರ ಇಲ್ಲಿದೆ
What is Boxing Day Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಳ್ಳುವುದು ಯಾವಾಗ? ಬಾಕ್ಸಿಂಗ್ ಡೇ ಟೆಸ್ಟ್ ಎಂದರೇನು, ಏನಿದರ ವಿಶೇಷತೆ? ಇಲ್ಲಿದೆ ವಿವರ.
ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಪ್ರಸಿದ್ಧ ಸಂಪ್ರದಾಯಗಳಲ್ಲಿ ಒಂದಾಗಿದೆ. ಇದು ತೀವ್ರ ಪೈಪೋಟಿಯ ಜೊತೆಗೆ ಹಬ್ಬದ ಮೆರಗನ್ನೂ ನೀಡಲಿದೆ. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಪ್ರತಿ ವರ್ಷ ಡಿಸೆಂಬರ್ 26 ರಂದು ನಡೆಯುವ ಪಂದ್ಯವು ರೋಮಾಂಚಕ ಎನ್‌ಕೌಂಟರ್, ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸಿದೆ. ಇದು ಕ್ರೀಡಾ ಶ್ರೇಷ್ಠತೆ-ಸಾಂಸ್ಕೃತಿಕ ಆಚರಣೆ ಎರಡನ್ನೂ ಸಂಕೇತಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26ರ 2024ರಂದು ಬೆಳಿಗ್ಗೆ 5 ಗಂಟೆಗೆ ಶುರುವಾಗಲಿದ್ದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸರಣಿ ಮುನ್ನಡೆ ಕಾಯ್ದುಕೊಳ್ಳಲು ಗೆಲುವು ದಾಖಲಿಸುವುದು ಅನಿವಾರ್ಯ.
ಬಾರ್ಡರ್ ಗವಾಸ್ಕರ್ ಟ್ರೋಫಿಯು ತೀವ್ರ ಕುತೂಹಲ ಕೆರಳಿಸಿದೆ. ಭಾರತ-ಆಸ್ಟ್ರೇಲಿಯಾ ತಲಾ ಒಂದು ಪಂದ್ಯವನ್ನು ಗೆದ್ದಿದ್ದು, ಒಂದು ಪಂದ್ಯ ಡ್ರಾ ಸಾಧಿಸಿವೆ. ಇದೀಗ ಉಭಯ ತಂಡಗಳು ನಾಲ್ಕನೇ ಪಂದ್ಯಕ್ಕೆ ಸಜ್ಜಾಗಿವೆ. ಡಿಸೆಂಬರ್ 26ರಂದೇ ಸೌತ್ ಆಫ್ರಿಕಾ vs ಪಾಕಿಸ್ತಾನ ತಂಡಗಳ ನಡುವೆಯೂ ಬಾಕ್ಸಿಂಗ್ ಟೆಸ್ಟ್ ಪಂದ್ಯ ನಡೆಯಲಿದೆ. ಪ್ರತಿ ವರ್ಷ ಡಿಸೆಂಬರ್ 26ರಂದು ಯಾವುದಾದರೂ 2 ದೇಶಗಳ ನಡುವೆ ಒಂದು ಟೆಸ್ಟ್ ಪಂದ್ಯ ನಡೆಯುತ್ತಿರುತ್ತದೆ. ಹಾಗಿದ್ದರೆ, ಬಾಕ್ಸಿಂಗ್ ಡೇ ಟೆಸ್ಟ್ ಎಂದರೇನು? ಪ್ರತಿ ವರ್ಷ ಡಿ 26ರಂದೇ ಬಾಕ್ಸಿಂಗ್ ಟೆಸ್ಟ್ ನಡೆಯುವುದೇಕೆ? ಇದರ ಇತಿಹಾಸವೇನು ಇಲ್ಲಿದೆ ವಿವರ.
ನೆನಪಿರಲಿ, ಬಾಕ್ಸಿಂಗ್ ಡೇ ಎಂದರೆ ಕ್ರೀಡೆಗೂ ಅಥವಾ ಕ್ರಿಕೆಟ್ಗೂ ಯಾವುದೇ ಸಂಬಂಧ ಇಲ್ಲ. ಬಾಕ್ಸಿಂಗ್ ಡೇ ಟೆಸ್ಟ್ ಎಂಬುದು ವಾರ್ಷಿಕವಾಗಿ ಕ್ರಿಸ್‌ಮಸ್‌ನ ಮರುದಿನ ಅಂದರೆ ಡಿಸೆಂಬರ್ 26 ರಂದು ನಡೆಯುವ ಟೆಸ್ಟ್ ಪಂದ್ಯವಾಗಿದೆ. ಡಿ 25ರ ಕ್ರಿಸ್ಮಸ್ ದಿನದಂದು ಯಾವುದೇ ರಜೆ ಇಲ್ಲದೆ ಕೆಲಸ ಮಾಡಿದವರಿಗೆ ಈ ದಿನವನ್ನು ಅರ್ಪಿಸಲಾಗಿದೆ. ಅಲ್ಲದೆ, ಕ್ರಿಸ್ಮಸ್ ದಿನ ಕೆಲಸ ಮಾಡಿದವರಿಗೆ ಕೃತಜ್ಞತೆ ತಿಳಿಸಲು ವಿಶೇಷ ಉಡುಗೊರೆ ನೀಡುವ ಸಂಪ್ರದಾಯ ಈ ಹಿಂದಿನಿಂದಲೂ ಇದೆ. ಆದರೆ ಕ್ರಿಸ್ಮಸ್ ದಿನದಂದು ನೀಡುವ ಉಡುಗೊರೆಯನ್ನು ಮರುದಿನ ಡಿಸೆಂಬರ್ 26ರಂದು ತೆರೆಯುವ ಕಾರಣ ಬಾಕ್ಸ್ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯುತ್ತಾರೆ. ಈ ಸಂಪ್ರದಾಯ ಹಲವು ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರ ಇತಿಹಾಸ ಹೀಗಿದೆ.
ಕ್ರಿಕೆಟ್ ಜೊತೆಗೆ ಎಲ್ಲಾ ಕ್ರೀಡೆಗಳಲ್ಲೂ ಇದೆ ಈ ಸಂಪ್ರದಾಯ
ಡಿಸೆಂಬರ್ 26ರ ಬಾಕ್ಸಿಂಗ್ ಡೇ ದಿನದಂದು ಕ್ರಿಕೆಟ್ ಪಂದ್ಯಗಳು ಮಾತ್ರವಲ್ಲ, ಎಲ್ಲಾ ಕ್ರೀಡೆಗಳ ಪಂದ್ಯಗಳೂ ನಡೆಯಲಿದೆ. ಬಾಕ್ಸಿಂಗ್ ಡೇ ಮೊದಲಿಗೆ ಪ್ರಾರಂಭವಾಗಿದ್ದು 1892ರಲ್ಲಿ. ರಗ್ಬಿ, ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಬಾಕ್ಸಿಂಗ್ ಡೇ ಪಂದ್ಯಗಳು ನಡೆಯಲಿವೆ. ಆದರೆ ಈ ಪದ್ಧತಿಯನ್ನು ಮೊದಲು ಆರಂಭಿಸಿದ್ದು ಆಸ್ಟ್ರೇಲಿಯಾ ದೇಶ. ಹಲವು ವರ್ಷಗಳ ನಂತರ ನ್ಯೂಜಿಲೆಂಡ್, ಸೌತ್ ಆಫ್ರಿಕಾ ಸೇರಿದಂತೆ ಉಳಿದ ದೇಶಗಳು ಈ ಸಂಪ್ರದಾಯ ಆರಂಭಿಸಿದವು.
ಬಾಕ್ಸಿಂಗ್ ಡೇ ಟೆಸ್ಟ್‌ಗಳ ಇತಿಹಾಸವೇನು?
ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದ ಯುನೈಟೆಡ್ ಕಿಂಗ್‌ಡಮ್ ಮತ್ತು ಇತರ ದೇಶಗಳಲ್ಲಿ ಈ ದಿನ ಆಚರಿಸಲಾಗುತ್ತದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ನೈಜೀರಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ದೇಶಗಳಲ್ಲಿ ಈ ಸಂಪ್ರದಾಯ ಇದೆ. 1800ರ ದಶಕದಲ್ಲಿ ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಕೆಳಮಟ್ಟದ ಬ್ರಿಟಿಷ್ ಸಮಾಜದ ಸೇವಕರು ಕ್ರಿಸ್ಮಸ್ ವೇಳೆ ತಮ್ಮ ಯಜಮಾನರ ಕೈಯಿಂದ ಆಯ್ಕೆ ಮಾಡಿದ ಉಡುಗೊರೆಗಳನ್ನು ಬಹುಮಾನವಾಗಿ ಪಡೆದರು ಎನ್ನಲಾಗುತ್ತದೆ. ಕೊಟ್ಟ ಉಡುಗೊರೆಗಳನ್ನು 'ಕ್ರಿಸ್ಮಸ್ ಬಾಕ್ಸ್' ಎನ್ನುತ್ತಾರೆ. ಮರುದಿನ ತೆರೆಯಲಾದ ಬಾಕ್ಸ್ಗಳನ್ನು ಬಡವರಿಗೆ ನೀಡಲಾಗಿತ್ತು. ಆ ದಿನವನ್ನು 'ಬಾಕ್ಸಿಂಗ್ ಡೇ' ಎಂದು ಕರೆದರು.
ಬಾಕ್ಸಿಂಗ್ ಡೇ ಕ್ರಿಕೆಟ್ ಆರಂಭವಾಗಿದ್ದು 1892ರಲ್ಲಿ. ಆ ವರ್ಷ ಎಂಸಿಜಿ ಶೆಫೀಲ್ಡ್ ಶೀಲ್ಡ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮೊದಲ ಅಂತಾರಾಷ್ಟ್ರೀಯ ಬಾಕ್ಸಿಂಗ್ ಡೇ ಟೆಸ್ಟ್ 1950ರಲ್ಲಿ ಆರಂಭಗೊಂಡಿದ್ದು ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ. ಆದಾಗ್ಯೂ, 1953 ಮತ್ತು 1967 ರ ನಡುವೆ, ಬಾಕ್ಸಿಂಗ್ ದಿನದಂದು ಯಾವುದೇ ಟೆಸ್ಟ್‌ಗಳು ನಡೆದಿರಲಿಲ್ಲ. 1974-75ರ ಆಶಸ್ ಸರಣಿಯಲ್ಲಿ ಮಹತ್ವದ ತಿರುವು ಬಂದಿದ್ದು, 6 ಟೆಸ್ಟ್‌ಗಳ ವೇಳಾಪಟ್ಟಿಯು ಬಾಕ್ಸಿಂಗ್ ಡೇ ಮತ್ತೆ ಆರಂಭಕ್ಕೆ ಕಾರವಾಯಿತು. 1980ರಿಂದ ಆಸ್ಟ್ರೇಲಿಯಾ ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಅನ್ನು ಡಿ 26 ರಿಂದ ಪ್ರಾರಂಭಿಸುತ್ತದೆ. ಕೇವಲ 3 ಬಾರಿ ಮಾತ್ರ ಕ್ರಿಸ್‌ಮಸ್‌ಗೆ ಮೊದಲು (ಡಿ 24) ಟೆಸ್ಟ್ ಪ್ರಾರಂಭವಾಗಿತ್ತು. 1984, 1988 ಮತ್ತು 1994ರಲ್ಲಿ ಡಿಸೆಂಬರ್ 22ರಂದು ಬಾಕ್ಸಿಂಗ್ ಡೇ ಪಂದ್ಯಗಳು ನಡೆದಿದ್ದವು.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತದ ರೆಕಾರ್ಡ್
ಭಾರತ ಇದುವರೆಗೂ 23 ಬಾಕ್ಸಿಂಗ್ ಡೇ ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಆದರೆ ಗೆದ್ದಿದ್ದು 3 ಮಾತ್ರ. 6 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಉಳಿದ 14 ಪಂದ್ಯಗಳಲ್ಲಿ ಸೋತಿದೆ.