Vijayapura Heritage Run: ಗೋಲಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಓಡಬೇಕೇ, ಡಿಸೆಂಬರ್‌ನಲ್ಲಿದೆ ಬೃಹತ್‌ ವೃಕ್ಷೋತ್ಥಾನ್‌ ಹೆರಿಟೇಜ್‌ ರನ್‌
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Heritage Run: ಗೋಲಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಓಡಬೇಕೇ, ಡಿಸೆಂಬರ್‌ನಲ್ಲಿದೆ ಬೃಹತ್‌ ವೃಕ್ಷೋತ್ಥಾನ್‌ ಹೆರಿಟೇಜ್‌ ರನ್‌

Vijayapura Heritage Run: ಗೋಲಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಓಡಬೇಕೇ, ಡಿಸೆಂಬರ್‌ನಲ್ಲಿದೆ ಬೃಹತ್‌ ವೃಕ್ಷೋತ್ಥಾನ್‌ ಹೆರಿಟೇಜ್‌ ರನ್‌

ವಿಜಯಪುರ ನಗರದಲ್ಲಿ ಈ ಸಾಲಿನ ವೃಕ್ಷೋತ್ಥಾನ್‌ ಓಟದ ಚಟುವಟಿಕೆಗೆ ಭರ್ಜರಿ ತಯಾರಿ ನಡೆದಿದೆ. ಗಿಡ ನೆಟ್ಟು ಪೋಷಿಸಿ ಹಸಿರು ವಿಜಯಪುರಕ್ಕೆ ಒತ್ತು ನೀಡುತ್ತಿರುವ ಸಚಿವ ಎಂ.ಬಿ.ಪಾಟೀಲ್‌ ಅವರು ಈ ಓಟದ ಮಹಾ ಪೋಷಕರು.

ಹಸಿರು ವಿಜಯಪುರಕ್ಕೆ ಪಣತೊಟ್ಟು ಹಲವಾರು ಚಟುವಟಿಕೆ ರೂಪಿಸಿರುವ ಸಚಿವ ಎಂ.ಬಿ.ಪಾಟೀಲ್‌ ಅವರು ವೃಕ್ಷೋತ್ಥಾನ್‌ನಲ್ಲಿ ಖುದ್ದು ಓಡಿ ಉತ್ತೇಜಿಸುತ್ತಾರೆ
ಹಸಿರು ವಿಜಯಪುರಕ್ಕೆ ಪಣತೊಟ್ಟು ಹಲವಾರು ಚಟುವಟಿಕೆ ರೂಪಿಸಿರುವ ಸಚಿವ ಎಂ.ಬಿ.ಪಾಟೀಲ್‌ ಅವರು ವೃಕ್ಷೋತ್ಥಾನ್‌ನಲ್ಲಿ ಖುದ್ದು ಓಡಿ ಉತ್ತೇಜಿಸುತ್ತಾರೆ

ವಿಜಯಪುರ: ವಿಜಯಪುರ ನಗರ ಗೋಲಗುಮ್ಮಟ ಸಹಿತ ಹಲವು ಸ್ಮಾರಕಗಳಿಂದ ಪ್ರಖ್ಯಾತ. ಮಕ್ಕಳ ಸಾಹಿತಿಗಳ ತವರೂರು ಕೂಡ ಹೌದು. ಈಗ ವೃಕ್ಷೋತ್ಥಾನ್ ಹೆರಿಟೇಜ್ ರನ್ ನಿಂದಲೂ ಕರ್ನಾಟಕದ ಗಮನ ಸೆಳೆದಿದೆ. ಪರಿಸರ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮದ ಕುರಿತು ಜಾಗೃತಿಗಾಗಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2024(Vrukshathon Heritage Run 2024) ಓಟಕ್ಕೆ ಗುಮ್ಮಟ ನಗರಿ ಅಣಿಯಾಗುತ್ತಿದೆ. ಬಿಎಲ್‌ಡಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವ ಡಾ.ಎಂ.ಬಿ.ಪಾಟೀಲ್‌ ಅವರ ವಿಶೇಷ ಆಸಕ್ತಿಯ ಫಲವಾಗಿ ಇಂತಹದೊಂದು ವಿಶಿಷ್ಟ ಓಟ ಗಮನ ಸೆಳೆದಿದೆ. ಪ್ರತಿ ವರ್ಷಾಂತ್ಯದಲ್ಲಿ ಈ ಓಟಕ್ಕೆ ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದಲೂ ಆಸಕ್ತರು, ವೃತ್ತಿಪರ ಓಟಗಾರರು ಭಾಗವಹಿಸುತ್ತಾರೆ.

ಈ ವರ್ಷ ಯಾವಾಗ

ಸಚಿವ ಎಂ.ಬಿ.ಪಾಟೀಲ್‌ ಅವರು ಬರದ ನಾಡು ವಿಜಯಪುರವನ್ನು ನೀರಾವರಿ ಜಿಲ್ಲೆಯಾಗಿಸುವ ಜತೆಗೆ ಹಸಿರು ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಒಂದೂವರೆ ದಶಕದಿಂದಲೂ ಗಂಭೀರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.

ವೃಕ್ಷವನ್ನು ಬೆಳೆಸಿ ಆ ಕುರಿತು ಜಾಗೃತಿ ಮೂಡಿಸಲು ಆರು ವರ್ಷಗಳಿಂದ ವೃಕ್ಷೋತ್ಥಾನ್‌ ಕೂಡ ಆಯೋಜಿಸುತ್ತಾರೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಹೆರಿಟೇಜ್‌ ರನ್‌ ನಡೆಸಲಾಗುತ್ತದೆ. ಈ ವರ್ಷವೂ ವಿಜಯಪುರ ವೃಕ್ಷೋತ್ಥಾನ್ ಹೆರಿಟೇಜ್ ರನ್- 2024 ಡಿಸೆಂಬರ್‌ 22 ರಂದು ನಡೆಯಲಿದೆ.

ಈ ಓಟ ಆಯೋಜನೆಯಿಂದ ಜಿಲ್ಲೆಯ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳಿಗೆ ದೇಶಾದ್ಯಂತ ಪ್ರಚಾರ ಸಿಗುತ್ತಿದೆ. ವಿದೇಶಿ ಪ್ರವಾಸಿಗರು ಹೆಚ್ಚೆಚ್ಚು ಬರಲು ಆಕರ್ಷಿತರಾಗುತ್ತಿದ್ದಾರೆ. ಪ್ರವಾಸೋದ್ಯಮದ ಜೊತೆ ವ್ಯಾಪಾರ ವಹಿವಾಟು, ಆರ್ಥಿಕ ಅಭಿವೃದ್ಧಿಗೂ ಪೂರಕ ವಾತಾವರಣ ಸೃಷ್ಠಿಯಾಗಿದೆ.

ಹಸಿರು ಆಶಯ ದೊಡ್ಡದು

ಎಂಬಿ ಪಾಟೀಲರ ಕನಸಿನ ಕೂಸಾದ ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ವಿಜಯಪುರ ಜಿಲ್ಲೆಯಲ್ಲಿ ಸರಕಾರಿ, ಗೌಂಟಾಣ, ಅರಣ್ಯ ಇಲಾಖೆಯ ಜಾಗದಲ್ಲಿ ಗಿಡಗಳು ಬೆಳೆಯುತ್ತಿವೆ. ಕರಾಡದೊಡ್ಡಿಯಲ್ಲಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶ ಕೂಡ ಮಾದರಿಯಾಗಿ ರೂಪುಗೊಂಡಿದೆ. ಶೇ. 35 ರಷ್ಟು ಅರಣ್ಯವಿದ್ದರೆ ಉತ್ತಮ ಪರಿಸರದ ಜೊತೆಗೆ ಸದೃಢ ಆರೋಗ್ಯ ಹೊಂದಬಹುದು.
ಆದರೆ, ನಮ್ಮ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕೇವಲ ಶೇ. 0.17 ರಷ್ಟಿದೆ. ಶತಮಾನದ ದಾಖಲೆ ನೋಡಿದರೆ ಜಿಲ್ಲೆಯಲ್ಲಿ ಮಳೆ ಅತೀ ಕಡಿಮೆ ಆಗುತ್ತಿತ್ತುಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿರುವ 1500 ಎಕರೆ ಮೀಸಲು ಅರಣ್ಯಕ್ಕೆ ಸರಕಾರ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಿ ಗೌರವ ಸಲ್ಲಿಸಿದೆ.

ಕಳೆದ ಆರು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹೆರಿಟೇಜ್ ರನ್ ನಡೆಯುತ್ತಿದ್ದು, ಗಮನ ಸೆಳೆದಿದೆ. ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಓಟದಲ್ಲಿ ಪಾಲ್ಗೋಳ್ಳುವವರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಕಳೆದ ವರ್ಷ ನಡೆದ ಓಟದಲ್ಲಿ 9800 ಜನ ಪಾಲ್ಗೊಂಡಿದ್ದಾರೆ. ಸಚಿವ ಎಂ. ಬಿ. ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಹೆರಿಟೇಜ್ ರನ್ ಆಯೋಜಿಸಲಾಗುತ್ತಿದೆ. ಇದರಿಂದ ಜನರಲ್ಲಿ ಅರಣ್ಯೀಕರಣ, ಮಳೆ, ಬೆಳೆ ಕುರಿತು ಜಾಗೃತಿ ಮೂಡಿದೆ. ಈ ಬಾರಿಯೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆಯಿದೆ ಎನ್ನುತ್ತಾರೆ ಸಂಘಟಕರಲ್ಲೊಬ್ಬರಾದ ಡಾ. ಮಹಾಂತೇಶ ಬಿರಾದಾರ.

ನೋಂದಣಿ ಹೇಗೆ

ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ನೋಂದಣಿ ಸಮಿತಿಯ ವೀರೇಂದ್ರ ಗುಚ್ಚೆಟ್ಟಿ ಹೇಳುವಂತೆ, ಉತ್ತಮ ಆರೋಗ್ಯಕ್ಕೆ ದೈಹಿಕ ಕಸರತ್ತು ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರವರೆಗೆ ಬೆಳಗ್ಗಿನ ವಾಕಿಂಗ್, ದೈಹಿಕ ಕಸರತ್ತು ಕಡಿಮೆಯಾಗುತ್ತಿದೆ. ಎಲ್ಲರೂ ಬಹುತೇಕ ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ದೈಹಿಕ ಕಸರತ್ತು ಮುಖ್ಯವಾಗಿರುವುದರಿಂದ ಈ ಓಟದಲ್ಲಿ ಪಾಲ್ಗೋಳ್ಳಬೇಕು. 5 ಕಿ. ಮೀ., 10 ಕಿ. ಮೀ., 21 ಕಿ. ಮೀ. ವಿಭಾಗದಲ್ಲಿ ಓಟ ನಡೆಯಲಿದೆ. ಈ ಹೆರಿಟೇಜ್ ರನ್ ನಲ್ಲಿ ಪಾಲ್ಗೊಂಡು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪರಿಸರ ಪ್ರೀತಿಗೆ ಗೌರವ ನೀಡಬೇಕು. ದೇಶ- ವಿದೇಶಗಳಿಂದಲೂ ಓಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಅಥವಾ ಲಿಂಕ್ ಕ್ಲಿಕ್ ಮಾಡುವ ಮೂಲಕ ನೋಂದಣಿ ಮಾಡಬಹುದು. ನವೆಂಬರ್ 30 ನೋಂದಣಿಗೆ ಕೊನೆಯ ದಿನವಾಗಿದೆ ಎನ್ನುತ್ತಾರೆ.

ವಿಜಯಪುರದಲ್ಲಿ ಡಿಸೆಂಬರ್ 22 ರಂದು ಜರುಗಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಗೆ ನೋಂದಣಿ ಮಾಡಲು ನವೆಂಬರ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕೂಡಲೇ ಓಟದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬುದು ಕೋಟಿ ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ನೀಡುವ ವಿವರಣೆ.

ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು, ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುವ ವಿಜಯಪುರ ಹಸಿರಿನ ಹಬ್ಬ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತ ಜನ ಜಾಗೃತಿ ಓಟದಲ್ಲಿ 18 ವಯಸ್ಸಿನ ಮೇಲ್ಪಟ್ಟ ಯುವಕರಿಂದ ವೃದ್ಧರಾದಿಯಾಗಿ ಎಲ್ಲರೂ ನೋಂದಣಿ ಮಾಡಬಹುದಾಗಿದೆ. 5ಕಿ.ಮೀ, 10ಕಿ.ಮೀ, ಮತ್ತು 21ಕಿ.ಮೀ ಓಟದಲ್ಲಿ ಭಾಗವಹಿಸಲು ನೋಂದಣಿ ಮಾಡಬಹುದಾಗಿದೆ.

ಇಲ್ಲಿಗೆ ಕರೆ ಮಾಡಿ

ಈ ಓಟವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಮರ್ಪಿಸಲಾಗಿದ್ದು, ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಯುಳ್ಳ ಕಂಚಿನ ಪದಕ ನೀಡಲಾಗುವುದು. ಹಾಗೂ ಉತ್ತಮ ಗುಟಮಟ್ಟದ ಟಿ-ಶರ್ಟ್, ಓಟದ ಮಾರ್ಗದಲ್ಲಿ ಲಘು ಪಾನಿಯ ವ್ಯವಸ್ಥೆ ಮತ್ತು ಪೌಷ್ಟಿಕ ಉಪಹಾರದ ವ್ಯವಸ್ಥೆ ಇರುತ್ತದೆ. ಈ ಬಾರಿ 15 ಸಾವಿರ ಓಟಗಾರರು ಓಡುವ ನಿರೀಕ್ಷೆ ಇದ್ದು, ಕೊನೆಯ ಅವಕಾಶವನ್ನು ತಪ್ಪಿಸಿಕೊಳ್ಳದೇ https://vrukshathon.co.in/event/ ಲಿಂಕ್ ಮೂಲಕ ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಡಾ. ರಾಜು ಯಲಗೊಂಡ-8095190218, ವೀರೇಂದ್ರ ಗುಚ್ಚಟ್ಟಿ- 9886668498 ಸಂಪರ್ಕಿಸಿ.

Whats_app_banner